ಕನ್ನಡದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದೆನಿಸಿಕೊಂಡಿದೆ ‘ಕೆರೆ ಬೇಟೆ’ (Kerebete). ಸಿನಿಮಾದ ಹೆಸರು, ಪೋಸ್ಟರ್, ಟೀಸರ್ಗಳಿಂದಲೇ ಸಾಕಷ್ಟು ಗಮನವನ್ನು ಈ ಚಿತ್ರ ಸೆಳೆದಿದೆ. ಸಿನಿಮಾದ ಟ್ರೈಲರ್ ಇತ್ತೀಚೆಗಷ್ಟೆ ಬಿಡುಗಡೆ ಆಗಿದ್ದು ಸಖತ್ ಟ್ರೆಂಡ್ ಆಗಿದೆ. ಬಹಳ ಭಿನ್ನವಾದ ಕತೆ, ನಿರೂಪಣೆಯನ್ನು ಈ ಸಿನಿಮಾ ಹೊಂದಿರುವುದನ್ನು ‘ಕೆರೆ ಬೇಟೆ’ ಟ್ರೈಲರ್ ಸಾರಿ ಹೇಳುತ್ತಿದೆ. ‘ಕೆರೆ ಬೇಟೆ’ ಸಿನಿಮಾದ ಟ್ರೈಲರ್ಗೆ ಹಲವು ಸೆಲೆಬ್ರಿಟಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೆ ನಟ ಕಿಚ್ಚ ಸುದೀಪ್, ‘ಕೆರೆ ಬೇಟೆ’ ಚಿತ್ರತಂಡದ ಬಳಿ ಕ್ಷಮೆ ಕೇಳಿದ್ದಾರೆ. ಅದಕ್ಕೆ ಕಾರಣವೂ ಇದೆ.
ವಿಡಿಯೋ ಮೂಲಕ ಮಾತನಾಡಿರುವ ನಟ ಕಿಚ್ಚ ಸುದೀಪ್, ‘ಕೆರೆ ಬೇಟೆ’ ಸಿನಿಮಾದ ಟ್ರೈಲರ್ ನೋಡಿದೆ ನಾನು. ನಮ್ಮ ದಿನಕರ್ ತೂಗುದೀಪ್ ಅವರ ಅರ್ಪಿಸುತ್ತಿರುವ, ಗೌರಿಶಂಕರ್ ನಟರಾಗಿ, ಜಯಶಂಕರ್ ನಿರ್ಮಾಣದ, ಜಯಣ್ಣ ಪಿಕ್ಚರ್ಸ್ ವಿತರಣೆ ಮಾಡಿ ರಾಜ್ಗುರು ನಿರ್ದೇಶನ ಮಾಡಿರುವ ಈ ‘ಕೆರೆ ಬೇಟೆ’ ಸಿನಿಮಾವನ್ನು ತೆಗೆದಿರುವ ಶೈಲಿ ನನಗೆ ಬಹಳ ಇಷ್ಟವಾಯ್ತು. ಸಿನಿಮಾದ ಕತೆ, ಈ ಸಿನಿಮಾದ ಟ್ರೈಲರ್ ನೋಡುತ್ತಿದ್ದಂತೆ ಒಂದು ನಿರೀಕ್ಷೆ ಹುಟ್ಟುತ್ತದೆ ಆ ಅಂಶ ನನಗೆ ಬಹಳ ಹಿಡಿಸಿತು’ ಎಂದಿದ್ದಾರೆ.
ಇದನ್ನೂ ಓದಿ:ಕೆರೆ ಬೇಟೆ: ಮಲೆನಾಡ ಗೊಂಬೆಗೆ ಮನಸೋತ ಮನೆಹಾಳನಿಗೆ ಭೇಷ್ ಎಂದ ರಿಯಲ್ ಸ್ಟಾರ್ ಉಪ್ಪಿ
‘ನನ್ನ ಪ್ರಕಾರ ಟ್ರೈಲರ್ ಒಂದು ಈ ಹಂತಕ್ಕೆ ನಿರೀಕ್ಷೆಯನ್ನು ಮೂಡಿಸುತ್ತಿದೆ, ಭರವಸೆ ನೀಡುತ್ತಿದೆ ಎಂದರೆ ಆ ಸಿನಿಮಾ ಚೆನ್ನಾಗಿಯೇ ಇರುತ್ತದೆ. ಈ ಟ್ರೈಲರ್ ಅನ್ನು ನಾನು ಲಾಂಚ್ ಮಾಡಬೇಕಿತ್ತು. ಆದರೆ ನನಗೆ ಆರೋಗ್ಯ ಸರಿಯಿಲ್ಲದ ಕಾರಣಕ್ಕೆ ನನಗೆ ಬರಲಾಗಲಿಲ್ಲ. ಈ ಕುರಿತು ಇಡೀ ತಂಡಕ್ಕೆ ನಾನು ಕ್ಷಮೆ ಕೇಳುತ್ತೇನೆ. ಈ ಸಿನಿಮಾ ತುಂಬಾ ಚೆನ್ನಾಗಿ ಪ್ರದರ್ಶನ ಕಾಣಲಿ, ದಿನಕರ್, ಜಯಣ್ಣ ನಿಮಗೆಲ್ಲ ಈ ಸಿನಿಮಾ ಲಾಭ ತಂದುಕೊಡಲಿ. ನಟರಾದ ಗೌರಿಶಂಕರ್, ನಿರ್ದೇಶಕ ರಾಜ್ಗುರು ನಿಮಗೆಲ್ಲ ಈ ಸಿನಿಮಾ ದೊಡ್ಡ ಮಟ್ಟಿಗಿನ ಯಶಸ್ಸು ತಂದುಕೊಡಲಿ ಎಂದು ಹಾರೈಸುತ್ತೇನೆ. ‘ಗೌರಿ ಶಂಕರ್ ಅವರು ಚೆನ್ನಾಗಿ ನಟಿಸಿದ್ದಾರೆ. ಸ್ಕ್ರೀನ್ ಮೇಲೆ ಚೆನ್ನಾಗಿ ಕಾಣುತ್ತಿದ್ದಾರೆ. ಇಡೀ ಚಿತ್ರತಂಡ ಬಹಳ ಚೆನ್ನಾಗಿ ಕೆಲಸ ಮಾಡಿರುವುದು ಟ್ರೈಲರ್ನಲ್ಲಿ ಕಾಣುತ್ತಿದೆ. ಎಲ್ಲರಿಗೂ ಒಳ್ಳೆಯದಾಗಲಿ, ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಗಳಿಸಲಿ’ ಎಂದು ಸುದೀಪ್ ಶುಭ ಹಾರೈಸಿದ್ದಾರೆ.
‘ಕೆರೆ ಬೇಟೆ’ ಸಿನಿಮಾ ತನ್ನ ಭಿನ್ನ ಕತೆ, ಭಿನ್ನ ನಿರೂಪಣೆ ಹಾಗೂ ಚಿತ್ರೀಕರಿಸಿರುವ ರೀತಿಯಿಂದ ಈಗಾಗಲೇ ಗಮನ ಸೆಳೆಯುತ್ತಿದೆ. ಮಲೆನಾಡ ಹಳ್ಳಿಯೊಂದರಲ್ಲಿ ನಡೆಯುವ ಕತೆ ಸಿನಿಮಾದಲ್ಲಿದೆ. ಒರಟು ನಾಯಕ, ಪ್ರೇಮಕಥೆ, ಮೇಲು-ಕೀಳು ಜಾತಿ ಸಂಘರ್ಷ, ಕಾಡಿನಲ್ಲಿ ನಡೆವ ಅಕ್ರಮಗಳು ಇನ್ನೂ ಹಲವು ವಿಷಯಗಳ ಮೇಲೆ ಈ ಸಿನಿಮಾ ಬೆಳಕು ಚೆಲ್ಲುತ್ತಿದೆ. ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ