ನಟ ಕಿಚ್ಚ ಸುದೀಪ್ (Kichcha Sudeep) ಅವರು ಯಾವಾಗಲೂ ವಿವಾದಗಳಿಂದ ದೂರ ಇರಲು ಬಯಸುತ್ತಾರೆ. ಆದರೆ ಕೆಲವೊಮ್ಮೆ ಅನಗತ್ಯವಾಗಿ ಕಿರಿಕ್ಗಳು ಎದುರಾಗಿಬಿಡುತ್ತವೆ. ಇನ್ನು, ಸೋಶಿಯಲ್ ಮೀಡಿಯಾದಲ್ಲೂ ಅವರು ಅನವಶ್ಯಕವಾಗಿ ಯಾರ ಬಗ್ಗೆಯೂ ಕಮೆಂಟ್ ಮಾಡುವುದಿಲ್ಲ. ಆದರೆ ಈ ನಡುವೆ ಅವರು ಮಾಡಿರುವ ಒಂದು ಪೋಸ್ಟ್ ಗಮನ ಸೆಳೆಯುತ್ತಿದೆ. ತಮ್ಮ ಒಳ್ಳೆಯತನವನ್ನು ದುರುಪಯೋಗ ಮಾಡಿಕೊಳ್ಳಬೇಕು ಎಂದುಕೊಂಡವರಿಗೆ ಕಿಚ್ಚ ಸುದೀಪ್ (Sudeep) ಅವರು ಖಡಕ್ ಆಗಿ ಎಚ್ಚರಿಕೆ ನೀಡಿದಂತಿದೆ. ಆ ರೀತಿಯಲ್ಲಿ ಅವರು ಟ್ವೀಟ್ (Sudeep Tweet) ಮಾಡಿದ್ದಾರೆ. ಇದು ಯಾರನ್ನು ಉದ್ದೇಶಿಸಿ ಮಾಡಿದ ಟ್ವೀಟ್ ಎಂಬುದು ಸದ್ಯಕ್ಕೆ ಸ್ಪಷ್ಟವಾಗಿಲ್ಲ. ಆದರೆ ಅದರಲ್ಲಿನ ಸಾಲುಗಳು ಖಡಕ್ ಆಗಿವೆ.
‘ಈ ಸಾಲನ್ನು ಓದಿ. ಇದು ತುಂಬ ಚೆನ್ನಾಗಿದೆ’ ಎಂಬ ಕ್ಯಾಪ್ಷನ್ ಜೊತೆಯಲ್ಲಿ ಸುದೀಪ್ ಅವರು ಟ್ವೀಟ್ ಮಾಡಿದ್ದಾರೆ. ‘ಇದು ತಿಳಿದಿರಲಿ: ದುರುಪಯೋಗಕ್ಕೆ ಅಥವಾ ವಂಚನೆಗೆ ನನ್ನ ಒಳ್ಳೆಯತನ ಒಂದು ಸಾಧನ ಅಲ್ಲ. ಸತ್ಯವಾಗಿದ್ದಾಗ ಅದು ಪ್ರಜ್ವಲಿಸುತ್ತದೆ. ದುರಹಂಕಾರದಿಂದ ಅದರ ಕಾಂತಿ ಕಳೆಗುಂದಲು ನಾನು ಬಿಡುವುದಿಲ್ಲ. ವಿನಯದಿಂದಿರಿ, ಸತ್ಯವಂತರಾಗಿರಿ’ ಎಂಬ ಸಾಲನ್ನು ಸುದೀಪ್ ಅವರು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.
Read this quote,,, a very good one.??#GoodnessUncompromised#k46 pic.twitter.com/cOIQ38q00L
— Kichcha Sudeepa (@KicchaSudeep) July 4, 2023
‘ರಾಜಿಯಾಗದ ಒಳ್ಳೆಯತನ’ ಎಂದು ಸುದೀಪ್ ಅವರು ಹ್ಯಾಶ್ ಟ್ಯಾಗ್ ಬಳಸಿದ್ದಾರೆ. ಅದರ ಜೊತೆ #k46 ಹ್ಯಾಶ್ ಟ್ಯಾಗ್ ಕೂಡ ಇದೆ. ಹಾಗಾಗಿ ಇದು ಸಿನಿಮಾಗೆ ಸಂಬಂಧಿಸಿದಂತೆ ಹೇಳಿದ್ದೋ ಅಥವಾ ಯಾವುದಾದರೂ ವ್ಯಕ್ತಿಗೆ ಸಂಬಂಧಿಸಿ ಹೇಳಿದ್ದೋ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ. ತಮ್ಮ 46ನೇ ಸಿನಿಮಾದ ಟೀಸರ್ ಬಿಡುಗಡೆಯಾದ ಬೆನ್ನಲ್ಲೇ ಅವರು ಈ ರೀತಿ ಟ್ವೀಟ್ ಮಾಡಿರುವುದು ಅಚ್ಚರಿ ಮೂಡಿಸಿದೆ.
ಇದನ್ನೂ ಓದಿ: Kiccha 46 Teaser: ‘ನಾನು ಮನುಷ್ಯ ಅಲ್ಲ, ರಾಕ್ಷಸ’: ‘ಕಿಚ್ಚ 46’ ಟೀಸರ್ನಲ್ಲಿ ಸುದೀಪ್ ಆರ್ಭಟ
ಇತ್ತೀಚೆಗೆ ನಿರ್ಮಾಪಕ ಎನ್. ಕುಮಾರ್ ಅವರು ಸುದೀಪ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸುದೀಪ್ ಅವರು ಅಡ್ವಾನ್ಸ್ ಪಡೆದುಕೊಂಡು ಅನೇಕ ವರ್ಷಗಳು ಕಳೆದಿದ್ದರೂ ಕಾಲ್ಶೀಟ್ ನೀಡುತ್ತಿಲ್ಲ ಎಂದು ಅವರು ದೂರು ನೀಡಿದ್ದಾರೆ. ಇದಕ್ಕೆ ಸುದೀಪ್ ಅವರು ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಟ್ವಿಟರ್ನಲ್ಲಿ ಅವರು ಈ ರೀತಿ ಪೋಸ್ಟ್ ಮಾಡಿರುವುದು ಅಚ್ಚರಿ ಮೂಡಿಸಿದೆ. ಸಿನಿಮಾ ವಿಚಾರಕ್ಕೆ ಬರೋದಾದರೆ, ಸುದೀಪ್ ನಟನೆಯ 46ನೇ ಸಿನಿಮಾ ಸೆಟ್ಟೇರಿದೆ. ಈ ಚಿತ್ರವನ್ನು ‘ವಿ ಕ್ರಿಯೇಷನ್ಸ್’ ಬ್ಯಾನರ್ ಮೂಲಕ ಕಲೈಪುಲಿ ಎಸ್. ಧಾನು ಅವರು ನಿರ್ಮಾಣ ಮಾಡುತ್ತಿದ್ದಾರೆ. ವಿಜಯ್ ಕಾರ್ತಿಕೇಯ ನಿರ್ದೇಶನ ಮಾಡುತ್ತಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.