ನಟ ಕಿಚ್ಚ ಸುದೀಪ್ (Sudeep) ವಿರುದ್ಧ ಇತ್ತೀಚೆಗೆ ಇಬ್ಬರು ನಿರ್ಮಾಪಕರು ವಂಚನೆ ಆರೋಪವನ್ನು ಮಾಡಿದ್ದರು. ಸುದ್ದಿಗೋಷ್ಠಿ ನಡೆಸಿದ್ದ ನಿರ್ಮಾಪಕರಾದ (Producer) ಎಂಎನ್ ಸುರೇಶ್ (MN Suresh) ಮತ್ತು ಎಂಎನ್ ಕುಮಾರ್, ”ಸುದೀಪ್ ಸಿನಿಮಾ ಮಾಡಿಕೊಡುವುದಾಗಿ ಹೇಳಿ ಎಂಟು ಕೋಟಿ ಅಡ್ವಾನ್ಸ್ ಹಣ ಪಡೆದಿದ್ದಾರೆ. ಆದರೆ ಹಣ ಪಡೆದು ವರ್ಷಗಳಾದರೂ ಇನ್ನೂ ಡೇಟ್ಸ್ ನೀಡಿಲ್ಲ ಎಂದಿದ್ದರು. ಅಲ್ಲದೆ, ಸುದೀಪ್, ಆರ್ಆರ್ ನಗರದಲ್ಲಿ ಖರೀದಿಸಿದ ಮನೆಗೆ ತಾವು ಕೊಟ್ಟ ಹಣ ಬಳಕೆ ಮಾಡಿಕೊಂಡಿದ್ದಾರೆ. ವಿಕ್ರಾಂತ್ ರೋಣ ಸಿನಿಮಾವನ್ನು ನಾವು ನಿರ್ಮಿಸಬೇಕಿತ್ತು ಅದನ್ನು ಸಹ ತಪ್ಪಿಸಿದರು ಎಂದು ಆರೋಪಿಸಿದ್ದರು.
ನಿರ್ಮಾಪಕರುಗಳ ಆರೋಪಗಳಿಗೆ ನೇರ ಪ್ರತಿಕ್ರಿಯೆ ನೀಡದಿದ್ದ ಸುದೀಪ್, ಇದೀಗ ತಮ್ಮ ವಕೀಲರಿಂದ ನೊಟೀಸ್ ಕಳುಹಿಸಿದ್ದಾರೆ. ನಿರ್ಮಾಪಕ ದ್ವಯರು ಮಾಡಿರುವ ಎಲ್ಲ ಆರೋಪಗಳು ಆಧಾರರಹಿತ, ಸುಳ್ಳುಗಳಾಗಿದ್ದು ನೊಟೀಸ್ ಪಡೆದ ಮೂರು ದಿನಗಳ ಒಳಗಾಗಿ ಬೇಷರತ್ ಕ್ಷಮೆ ಕೋರದಿದ್ದರೆ 10 ಕೋಟಿ ಮಾನನಷ್ಟೆ ಮೊಕದ್ದಮೆ ಹೂಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ:Kichcha Sudeep: ಕ್ಯಾನ್ಸರ್ನಿಂದ ಬಳಲುತ್ತಿರುವ ಪುಟ್ಟ ಅಭಿಮಾನಿಯನ್ನು ಭೇಟಿಯಾಗಿ ಆಸೆ ಈಡೇರಿಸಿದ ಕಿಚ್ಚ ಸುದೀಪ್
ವಕೀಲ ಸಿವಿ ನಾಗೇಶ್ ಅವರ ಕಚೇರಿಯಿಂದ ನೊಟೀಸ್ ಕಳುಹಿಸಲಾಗಿದ್ದು, ”ನಮ್ಮ ಕಕ್ಷಿಧಾರ ಸುದೀಪ್ ಗೌರವಾನ್ವಿತ ನಟರಾಗಿದ್ದು ಅವರ ವಿರುದ್ಧ ಆಧಾರರಹಿತ ಆರೋಪಗಳನ್ನು ಮಾಡಿ ಮಾನಹಾನಿಗೆ ಯತ್ನಿಸಿದ್ದೀರ. ನಿಮ್ಮ ವಿರುದ್ಧ ಐಪಿಸಿ ಸೆಕ್ಷನ್ 499 ಹಾಗೂ 500ರ ಅಡಿಯಲ್ಲಿ ಕ್ರಿಮಿನಲ್ ಹಾಗೂ ಸಿವಿಲ್ ಮೊಕದ್ದಮೆಗಳನ್ನು ಹೂಡಲಾಗುವುದು. ನೊಟೀಸ್ ತಲುಪಿದ ಮೂರು ದಿನಗಳ ಒಳಗಾಗಿ ಉತ್ತರ ನೀಡಬೇಕು, ಅಲ್ಲದೆ ಎಲ್ಲ ಮಾಧ್ಯಮಗಳಲ್ಲಿಯೂ ಪ್ರಸಾರವಾಗುವಂತೆ ಬೇಷರತ್ ಕ್ಷಮೆ ಕೇಳಬೇಕು” ಎಂದು ನೊಟೀಸ್ನಲ್ಲಿ ಉಲ್ಲೇಖಿಸಲಾಗಿದೆ.
ಈ ಹಿಂದೆ ನಿರ್ಮಾಪಕರಾದ ಎಂಎನ್ ಸುರೇಶ್ ಮತ್ತು ಎಂಎನ್ ಕುಮಾರ್ ಅವರುಗಳು ಇದೇ ವಿಷಯವಾಗಿ ವಾಣಿಜ್ಯ ಮಂಡಳಿಗೆ ಪತ್ರ ಬರೆದಾಗಲೂ ತಾವು ನೊಟೀಸ್ ನೀಡಿದ್ದರ ಬಗ್ಗೆಯೂ ಹೊಸ ನೊಟೀಸ್ನಲ್ಲಿ ಉಲ್ಲೇಖಿಸಲಾಗಿದ್ದು, ತಾವು ಅವರ ಕೆಲವು ಸಿನಿಮಾಗಳಲ್ಲಿ ನಟಿಸಿದ್ದರ ದುರ್ಲಾಭ ಪಡೆದುಕೊಂಡು ಅವರು ಹೀಗೆ ಮಾಡುತ್ತಿದ್ದಾರೆಂದು ಹೇಳಿದ್ದಾರೆ ಸುದೀಪ್.
ನಿರ್ಮಾಪಕರುಗಳು ಸುದೀಪ್ ವಿರುದ್ಧ ಆರೋಪ ಮಾಡಿದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡು ಪರೋಕ್ಷವಾಗಿ ಪ್ರತಿಕ್ರಿಯೆ ನೀಡಿದ್ದರು ಸುದೀಪ್, ”ದುರುಪಯೋಗಕ್ಕೆ ಅಥವಾ ವಂಚನೆಗೆ ನನ್ನ ಒಳ್ಳೆಯತನ ಒಂದು ಸಾಧನ ಅಲ್ಲ. ಸತ್ಯವಾಗಿದ್ದಾಗ ಅದು ಪ್ರಜ್ವಲಿಸುತ್ತದೆ. ದುರಹಂಕಾರದಿಂದ ಅದರ ಕಾಂತಿ ಕಳೆಗುಂದಲು ನಾನು ಬಿಡುವುದಿಲ್ಲ. ವಿನಯದಿಂದಿರಿ, ಸತ್ಯವಂತರಾಗಿರಿ, ಇದು ತಿಳಿದಿರಲಿ’ ಎಂಬ ಸಾಲನ್ನು ಸುದೀಪ್ ಅವರು ಟ್ವಿಟರ್ನಲ್ಲಿ ಹಂಚಿಕೊಂಡಿದ್ದರು.
ಸುದೀಪ್ ಈಗ ಕಳಿಸಿರುವ ನೊಟೀಸ್ಗೆ ನಿರ್ಮಾಪಕರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ