ದೇಶದಲ್ಲಿ ಹೆಚ್ಚುತ್ತಿರುವ ಒಮಿಕ್ರಾನ್ ಪ್ರಕರಣಗಳ (Omicron Cases in India) ಕಾರಣದಿಂದ ಎಲ್ಲ ಉದ್ಯಮಗಳು ಆತಂಕಕ್ಕೆ ಒಳಗಾಗಿವೆ. ಚಿತ್ರರಂಗ ಕೂಡ ಅನಿಶ್ಚಿತತೆಯಲ್ಲಿ ಕಾಲ ಕಳೆಯುವಂತಾಗಿದೆ. ದೊಡ್ಡ ದೊಡ್ಡ ಸಿನಿಮಾಗಳು ಕೂಡ ಬಿಡುಗಡೆ ದಿನಾಂಕವನ್ನು ಮುಂದೂಡಿಕೊಳ್ಳುತ್ತಿವೆ. ತೆಲುಗಿನಲ್ಲಿ ‘ಆರ್ಆರ್ಆರ್’ ಹಾಗೂ ‘ರಾಧೆ ಶ್ಯಾಮ್’ ಚಿತ್ರಗಳ ರಿಲೀಸ್ ಡೇಟ್ ಈಗಾಗಲೇ ಪೋಸ್ಟ್ಪೋನ್ ಆಗಿದೆ. ಕನ್ನಡದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾದ ‘ವಿಕ್ರಾಂತ್ ರೋಣ’ (Vikrant Rona Movie) ಮೇಲೆ ಎಲ್ಲರ ಗಮನ ನೆಟ್ಟಿದೆ. ಸುದೀಪ್ (Kichcha Sudeep) ಅಭಿನಯದ ಈ ಸಿನಿಮಾ ಬಗ್ಗೆ ಕೆಲವು ಇಂಟರೆಸ್ಟಿಂಗ್ ವಿಚಾರಗಳು ಕೇಳಿಬರುತ್ತಿವೆ. ಈ ಚಿತ್ರತಂಡ ಕೂಡ ಕೆಲವು ಪ್ಲ್ಯಾನ್ಗಳನ್ನು ಬದಲಾಯಿಸಿಕೊಳ್ಳುತ್ತಿದೆ ಎಂಬ ಮಾಹಿತಿ ಸಿಕ್ಕಿದೆ. ಒಟಿಟಿ ಪ್ಲಾಟ್ಫಾರ್ಮ್ಗಳಿಂದ ‘ವಿಕ್ರಾಂತ್ ರೋಣ’ ಚಿತ್ರಕ್ಕೆ ಭರ್ಜರಿ ಬೇಡಿಕೆ ಬಂದಿದೆ ಎಂಬ ಮಾತು ಕೇಳಿಬಂದಿದೆ.
‘ರಂಗಿತರಂಗ’ ಖ್ಯಾತಿಯ ಅನೂಪ್ ಭಂಡಾರಿ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಶಾಲಿನಿ ಮಂಜುನಾಥ್ ಮತ್ತು ಅಲಂಕಾರ್ ಪಾಂಡಿಯನ್ ಬಂಡವಾಳ ಹೂಡಿದ್ದಾರೆ. ಮುಖ್ಯಪಾತ್ರದಲ್ಲಿ ಕಿಚ್ಚ ಸುದೀಪ್, ನೀತಾ ಅಶೋಕ್, ನಿರೂಪ್ ಭಂಡಾರಿ, ಜಾಕ್ವೆಲಿನ್ ಫರ್ನಾಂಡಿಸ್ ಮುಂತಾದವರು ನಟಿಸಿದ್ದಾರೆ. ಫೆ.3ರಂದು ವಿಶ್ವಾದ್ಯಂತ ಅನೇಕ ಚಿತ್ರಮಂದಿರಗಳಲ್ಲಿ ಈ ಸಿನಿಮಾದ ಟೀಸರ್ ಬಿಡುಗಡೆ ಮಾಡಲು ಸಿದ್ಧತೆ ನಡೆಯುತ್ತಿತ್ತು. ಆದರೆ ಕೊವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳ ಆಗುತ್ತಿರುವುದರಿಂದ ತಂಡದ ಪ್ಲ್ಯಾನ್ ಬದಲಾಗಿದೆ ಎಂಬ ಸುದ್ದಿ ಕೇಳಿಬಂದಿದೆ.
ಸದ್ಯಕ್ಕೆ ‘ವಿಕ್ರಾಂತ್ ರೋಣ’ ಟೀಸರ್ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ ಎನ್ನಲಾಗಿದೆ. ಅದ್ದೂರಿ ಬಜೆಟ್ನಲ್ಲಿ ನಿರ್ಮಾಣ ಆಗಿರುವ ಈ ಸಿನಿಮಾದ ಪ್ರಸಾರ ಹಕ್ಕುಗಳನ್ನು ಖರೀದಿಸಲು ದೊಡ್ಡ ದೊಡ್ಡ ಒಟಿಟಿ ಸಂಸ್ಥೆಗಳು ಮುಂದೆ ಬಂದಿವೆ. ಒಳ್ಳೆಯ ಮೊತ್ತಕ್ಕೆ ಆಫರ್ ಮಾಡಲಾಗುತ್ತಿದೆಯಂತೆ. ಆದರೆ ಈ ಬಗ್ಗೆ ಚಿತ್ರತಂಡ ಇನ್ನೂ ಅಂತಿಮ ತೀರ್ಮಾನ ಕೈಗೊಂಡಿಲ್ಲ. ಈ ಮೊದಲಿನ ಪ್ಲ್ಯಾನ್ ಪ್ರಕಾರವೇ ನಡೆದರೆ ಫೆ.24ರಂದು ‘ವಿಕ್ರಾಂತ್ ರೋಣ’ ಚಿತ್ರ ಅದ್ದೂರಿಯಾಗಿ ಬಿಡುಗಡೆ ಆಗಲಿದೆ.
ಬೃಹತ್ ಸೆಟ್ಗಳನ್ನು ನಿರ್ಮಿಸಿ ‘ವಿಕ್ರಾಂತ್ ರೋಣ’ ಚಿತ್ರೀಕರಣ ಮಾಡಲಾಗಿದೆ. ಈ ಚಿತ್ರ 3ಡಿ ವರ್ಷನ್ನಲ್ಲಿಯೂ ಮೂಡಿಬರುತ್ತಿದೆ. ಹಾಗಾಗಿ ಥಿಯೇಟರ್ನಲ್ಲಿ ರಿಲೀಸ್ ಮಾಡುವುದೇ ಚಿತ್ರತಂಡದ ಮೊದಲ ಆದ್ಯತೆ ಆಗಿರಲಿದೆ. ಸುದೀಪ್ ಕೂಡ ಈ ಸಿನಿಮಾ ಬಗ್ಗೆ ವಿಶೇಷ ಆಸಕ್ತಿ ವಹಿಸುತ್ತಿದ್ದಾರೆ. ಈಗಾಗಲೇ ಪೋಸ್ಟರ್ಗಳು ಗಮನ ಸೆಳೆದಿವೆ. ಬುರ್ಜ್ ಖಲೀಫಾ ಕಟ್ಟಡದ ಮೇಲೆ ಟೈಟಲ್ ಲಾಂಚ್ ಮಾಡಿದ್ದು ಈ ಸಿನಿಮಾದ ವಿಶೇಷವಾಗಿತ್ತು.
ಇದನ್ನೂ ಓದಿ:
ಸುದೀಪ್ ಬಾಡಿಗಾರ್ಡ್ಗೆ ವಿಡಿಯೋ ಕಾಲ್ ಮಾಡಿ ಕನ್ನಡದಲ್ಲಿ ಮಾತಾಡಿದ ದೀಪಿಕಾ; ಇದಕ್ಕಿದೆ ವಿಶೇಷ ಕಾರಣ
ಪ್ರೇಕ್ಷಕರಿಗೆ 10 ಕೋಟಿ ರೂ. ವಾಪಸ್ ನೀಡಬೇಕು ಆರ್ಆರ್ಆರ್ ನಿರ್ಮಾಪಕರು; ಹೀಗಾದ್ರೆ ಚಿತ್ರದ ಭವಿಷ್ಯ ಏನು?