‘ಸು ಫ್ರಮ್ ಸೋ’ ನಿರ್ದೇಶಕರ ಜೊತೆ ಸುದೀಪ್ ಸಿನಿಮಾ ಮಾತುಕತೆ ನಡೆದಿದೆಯಾ?

ಸಣ್ಣ ಬಜೆಟ್​​​ನಲ್ಲಿ ಸಿದ್ಧವಾದ ‘ಸು ಫ್ರಮ್ ಸೋ’ ಸಿನಿಮಾ ಸೂಪರ್ ಹಿಟ್ ಆಗಿದ್ದು ಗೊತ್ತೇ ಇದೆ. ಈ ಸಿನಿಮಾದ ಸಕ್ಸಸ್ ಬಗ್ಗೆ ಈಗ ಸುದ್ದಿಗೋಷ್ಠಿಯಲ್ಲಿ ಕಿಚ್ಚ ಸುದೀಪ್ ಅವರು ಮಾತನಾಡಿದ್ದಾರೆ. ನಿರ್ದೇಶಕ ಜೆ.ಪಿ. ತುಮಿನಾಡು ಅವರನ್ನು ತಾವು ಭೇಟಿ ಆಗಿದ್ದು ಯಾಕೆ ಎಂಬುದನ್ನು ಅವರು ತಿಳಿಸಿದ್ದಾರೆ.

‘ಸು ಫ್ರಮ್ ಸೋ’ ನಿರ್ದೇಶಕರ ಜೊತೆ ಸುದೀಪ್ ಸಿನಿಮಾ ಮಾತುಕತೆ ನಡೆದಿದೆಯಾ?
Jp Thuminad, Kichcha Sudeep

Updated on: Sep 01, 2025 | 4:35 PM

ಜೆ.ಪಿ. ತುಮಿನಾಡು ನಿರ್ದೇಶನದ ‘ಸು ಫ್ರಮ್ ಸೋ’ (Su From So) ಸಿನಿಮಾ ಸೂಪರ್ ಹಿಟ್ ಆಗಿದೆ. ಆ ಚಿತ್ರತಂಡದವರನ್ನು ಇತ್ತೀಚೆಗೆ ಕಿಚ್ಚ ಸುದೀಪ್ (Kichcha Sudeep) ಅವರು ಭೇಟಿ ಆದರು. ಆ ಬಗ್ಗೆ ಇಂದು (ಸೆಪ್ಟೆಂಬರ್ 1) ಸುದ್ದಿಗೋಷ್ಠಿಯಲ್ಲಿ ಸುದೀಪ್ ಅವರು ಮಾತನಾಡಿದರು. ‘ಸು ಫ್ರಮ್ ಸೋ’ ರೀತಿಯ ಸಿನಿಮಾಗಳ ಗೆಲುವು ಚಿತ್ರರಂಗಕ್ಕೆ ತುಂಬ ಮುಖ್ಯ ಎಂದು ಅವರು ಹೇಳಿದರು. ನಿರ್ದೇಶಕ ಜೆ.ಪಿ. ತುಮಿನಾಡು (JP Thuminad) ಜೊತೆ ನಡೆದ ಮಾತುಕತೆ ಏನು? ಒಟ್ಟಿಗೆ ಸಿನಿಮಾ ಮಾಡುವ ಉದ್ದೇಶ ಇದೆಯಾ ಎಂಬ ಪ್ರಶ್ನೆಗೂ ಸುದೀಪ್ ಅವರು ಉತ್ತರ ನೀಡಿದರು.

‘ಸು ಫ್ರಮ್ ಸೋ ಸಿನಿಮಾದ ಗೆಲುವು ತುಂಬ ಬ್ಯೂಟಿಫುಲ್ ಆಗಿದೆ. ನಮ್ಮ ಚಿತ್ರರಂಗದಲ್ಲಿ ಈ ರೀತಿ ನಡೆಯುತ್ತಾ ಇರಬೇಕು. ಆವಾಗಲೇ ಒಳ್ಳೆಯದಾಗೋದು. ಇಲ್ಲಿ ಕಲಾವಿದರಿಲ್ಲ, ಸಿನಿಮಾ ಮಾಡೋಕೆ ಬರಲ್ಲ, ಸಿನಿಮಾ ಓಡುತ್ತಿಲ್ಲ ಅಂತ ಹೇಳುವವರಿಗೆಲ್ಲ ಒಂದು ಪಾಠ ಇದು. ಚಿತ್ರರಂಗದಲ್ಲಿ ಕಲಾವಿದರು ಇಲ್ಲವಾ? ಈಗ ಯಾರಿದ್ದಾರೆ ಎಂದು ಕೆಲವರು ಸಂದರ್ಶನದಲ್ಲಿ ಹೇಳುತ್ತಾರೆ. ಏನು ಮಾಡುತ್ತಿದ್ದೀರಿ? ರಿಷಬ್ ಶೆಟ್ಟಿ, ಗಣೇಶ್, ಧ್ರುವ ಸರ್ಜಾ, ದುನಿಯಾ ವಿಜಿ, ಶಿವಣ್ಣ, ಉಪೇಂದ್ರ, ರಕ್ಷಿತ್ ಶೆಟ್ಟಿ ಇವರೆಲ್ಲ ಹೀರೋಗಳಲ್ಲವಾ?’ ಎಂದಿದ್ದಾರೆ ಸುದೀಪ್.

‘ಈಗ ಸು ಫ್ರಮ್ ಸೋ ಸಿನಿಮಾದಲ್ಲಿ ಇರುವವರು ಯಾರು ಎಂಬುದೇ ಗೊತ್ತಿಲ್ಲ. ಇಷ್ಟೆಲ್ಲ ಕಲಾವಿದರು ಇರುವಂತಹ ಚಿತ್ರರಂಗ ನಮ್ಮದು. ಹಾಗಾಗಿ ಮಾತಿನ ಬಗ್ಗೆ ಕೆಲವರು ಹುಷಾರಾಗಿ ಇರಬೇಕು. ಮಾತಾಡೋಕೆ ಬರುತ್ತೆ ಅಂತ ಯಾರಿಗೋ ನೋವು ಮಾಡೋದಲ್ಲ. ಯಶ್ ಎಂತೆಂಥ ಸಿನಿಮಾ ಮಾಡುತ್ತಿದ್ದಾರೆ. ಹೀಗಿರುವಾಗ ಚಿತ್ರರಂಗ ಮುಚ್ಚಿಹೋಗುತ್ತೆ ಎನ್ನುವ ಸಮಯದಲ್ಲಿ ಸು ಫ್ರಮ್ ಸೋ ರೀತಿಯ ಸಿನಿಮಾ ಸಕ್ಸಸ್ ಆದಾಗ ಹೊಸಬರಿಗೆ ಧೈರ್ಯ ಬಂದಿದೆ. ಈ ರೀತಿಯ ಭರವಸೆ ನಮಗೆ ಬೇಕು’ ಎಂದು ಸುದೀಪ್ ಅವರು ಹೇಳಿದ್ದಾರೆ.

‘ಸು ಫ್ರಮ್ ಸೋ ಸಿನಿಮಾದ ನಿರ್ದೇಶಕರು ಹಲವು ವರ್ಷಗಳ ಹಿಂದೆಯೇ ನನ್ನನ್ನು ಭೇಟಿ ಆಗಿದ್ದರು. ಒಂದು ತುಳು ಸಿನಿಮಾದ ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ಕರೆದಿದ್ದರು. ನಾನು ಹೋಗಿದ್ದೆ, ತುಂಬ ಜನ ಇದ್ದರು. ಅದನ್ನು ಅವರು ಈಗ ನೆನಪಿಸಿದರು. ಹೀಗೆ ನೀವು ಯಾರಿಗಾದರೂ ಒಳ್ಳೆಯದು ಮಾಡಿದರೆ ಅದು ವಾಪಸ್ ಬರುತ್ತದೆ. ಈಗ ಅವರು ತುಂಬಾ ಒಳ್ಳೆಯ ಸಿನಿಮಾ ಮಾಡಿದ್ದಾರೆ.’ ಎಂದರು ಸುದೀಪ್.

ಇದನ್ನೂ ಓದಿ: ರಾಜಕೀಯದ ಎಂಟ್ರಿ ಪ್ಲ್ಯಾನ್ ಬಗ್ಗೆ ಮೌನ ಮುರಿದ ನಟ ಕಿಚ್ಚ ಸುದೀಪ್

‘ಈಗ ಜೆಪಿ ತುಮಿನಾಡು ಅವರ ಸಿನಿಮಾ ಹಿಟ್ ಆಗಿದೆ ಎಂಬ ಕಾರಣಕ್ಕೆ ಅವರನ್ನು ಕರೆದು ನನಗೆ ಒಂದು ಸಿನಿಮಾ ಮಾಡಿ ಎಂದು ಹೇಳಿದರೆ ಅದು ತುಂಬ ಸ್ವಾರ್ಥ ಆಗುತ್ತದೆ. ಸಿನಿಮಾ ಮಾಡೋಕೆ ನಾನು ಖಂಡಿತಾ ಅವರನ್ನು ಕರೆದಿಲ್ಲ. ಅವರ ಕೆಲಸಕ್ಕೆ ಮೆಚ್ಚುಗೆ ಸೂಚಿಸಬೇಕಿತ್ತು. ಜೊತೆಯಾಗಿ ಕುಳಿತು ಮಾತನಾಡಿದೆವು. ಸಿನಿಮಾ ಮಾಡುವ ಬಗ್ಗೆ ಏನೂ ಮಾತು ಬರಲಿಲ್ಲ. ಕೇವಲ ಯಶಸ್ವಿ ನಿರ್ದೇಶಕರ ಕಥೆ ಕೇಳುತ್ತೇನೆ ಎಂದರೆ ತಪ್ಪಾಗುತ್ತದೆ. ಮ್ಯಾಕ್ಸ್ ಕಥೆ ತೆಗೆದುಕೊಂಡು ಬಂದಾಗ ವಿಜಯ್ ಯಾರು ಎಂಬುದೇ ಗೊತ್ತಿರಲಿಲ್ಲ. ನಾಳೆ ಜೆ.ಪಿ. ತುಮಿನಾಡು ಅವರು ಒಂದು ಕಥೆ ತೆಗೆದುಕೊಂಡು ಬಂದರೆ ನಾನು ಖಂಡಿತಾ ಕೇಳುತ್ತೇನೆ’ ಎಂದು ಸುದೀಪ್ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.