ನಟ ಕಿಚ್ಚ ಸುದೀಪ್ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು 25 ವರ್ಷ ಕಳೆದಿದೆ. ಭಿನ್ನ ಸಿನಿಮಾಗಳಲ್ಲಿ ನಟಿಸಿ ಸುದೀಪ್ ಅಭಿಮಾನಿಗಳನ್ನು ರಂಜಿಸಿದ್ದಾರೆ. ಈ ಸಂದರ್ಭದಲ್ಲಿ ಕಿಚ್ಚ ಸುದೀಪ್ ಅವರನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸನ್ಮಾನ ಮಾಡಿದ್ದಾರೆ. ನಂತರ ಮಾತನಾಡಿದ ಸುದೀಪ್, ಅಭಿಮಾನಿಗಳು ಹಾಗೂ ಚಿತ್ರರಂಗ ಕೊಟ್ಟ ಪ್ರೀತಿ ಎದುರಿಗೆ ಬಾಕ್ಸ್ ಆಫೀಸ್ ಗಳಿಕೆ ಏನು ಅಲ್ಲ ಎಂದಿದ್ದಾರೆ.
ಸನ್ಮಾನ ಪಡೆದ ನಂತರ ಮಾತನಾಡಿದ ಸುದೀಪ್, ನಾನು ಚಿತ್ರರಂಗಕ್ಕೆ ಬಂದು 25 ವರ್ಷ ಆಯ್ತು ಎನಿಸಲೇ ಇಲ್ಲ. ಹಾಗೆ ಅನಿಸೋಕೆ ನೀವು ಬಿಟ್ಟಿಲ್ಲ. ನಾವು ಎಷ್ಟು ಸಿನಿಮಾ ಮಾಡಿದ್ದೇವೆ ಎನ್ನುವುದು ಒಂದು ಲೆಕ್ಕ ಆದರೆ, ಬಾಕ್ಸ್ ಆಫೀಸ್ನಲ್ಲಿ ಒಳ್ಳೆ ಕಲೆಕ್ಷನ್ ಮಾಡಿದ ಸಿನಿಮಾಗಳೆಷ್ಟು ಎನ್ನುವುದು ಮತ್ತೊಂದು ಲೆಕ್ಕ. ಸಿನಿಮಾ ರಂಗ ಹಾಗೂ ಅಭಿಮಾನಿಗಳು ಕೊಟ್ಟ ಪ್ರೀತಿ ಎದುರಿಗೆ ಬಾಕ್ಸ್ ಆಫೀಸ್ ಗಳಿಕೆ ಏನು ಅಲ್ಲ ಎಂದರು.
ಕ್ರೇಜಿಸ್ಟಾರ್ ರವಿಚಂದ್ರನ್, ಸೆಂಚ್ಯುರಿ ಸ್ಟಾರ್ ಶಿವರಾಜ್ ಕುಮಾರ್, ರವಿಶಂಕರ್ ಸೇರಿದಂತೆ ಬಹುತೇಕ ಗಣ್ಯರು ಕಾರ್ಯಕ್ರಮದಲ್ಲಿ ಹಾಜರಿದ್ದರು. ಇವರ ಬಗ್ಗೆ ಮಾತನಾಡಿದ ಸುದೀಪ್, ನಮಗೆ ಇನ್ನೂ ಹಿರಿಯರಿದ್ದಾರೆ. ನಮಗೆ ಇನ್ನೂ ತಪ್ಪುಮಾಡುವ ಅವಕಾಶವಿದೆ. ಶಿವಣ್ಣ-ರವಿಶಂಕರ್ ನೀವಿರುವ ತನಕ ನಾನು ತಪ್ಪು ಮಾಡುತ್ತೇನೆ. ಏಕೆಂದರೆ, ನೀವು ಅದನ್ನು ತಿದ್ದುತ್ತೀರಿ ಎನ್ನುವ ವಿಶ್ವಾಸವಿದೆ ಎಂದರು ಸುದೀಪ್.
ನಾನು ಎಷ್ಟೋ ವೇದಿಕೆ ಹತ್ತಿದ್ದೇನೆ. ಇದೇ ಮೊದಲ ಬಾರಿಗೆ ನರ್ವಸ್ ಆಗಿದ್ದೇನೆ. ಕನ್ನಡ ಚಿತ್ರರಂಗದಲ್ಲಿ ನನಗೊಂದು ಸ್ಥಾನ ಸಿಕ್ಕಿದೆ. ಕನ್ನಡ ಚಿತ್ರರಂಗದ ಪುಟದಲ್ಲಿ ನನಗೊಂದು ಹಾಳೆಯಿರುವ ಬಗ್ಗೆ ಎನ್ನುವ ಖುಷಿ ಇದೆ. ಕನ್ನಡ ಚಿತ್ರರಂಗದ ಬಗ್ಗೆ ಪುಸ್ತಕ ಬರೆದರೆ ಒಂದು ಹಾಳೆ ನನಗೆ ಸಿಗುತ್ತದೆ ಎನ್ನುವುದಕ್ಕಿಂತ ಖುಷಿಯ ವಿಚಾರ ಮತ್ತೊಂದಿಲ್ಲ ಎಂದರು.
1997ರಲ್ಲಿ ತೆರೆಕಂಡ ‘ತಾಯವ್ವ’ ಸಿನಿಮಾ ಮೂಲಕ ಸುದೀಪ್ ಸ್ಯಾಂಡಲ್ವುಡ್ಗೆ ಕಾಲಿಟ್ಟರು. ನಂತರ ಅವರು ಸಾಲು ಸಾಲು ಚಿತ್ರಗಳಲ್ಲಿ ನಟಿಸಲು ಆರಂಭಿಸಿದರು. ಅವರ ನಟನೆಯನ್ನು ನೋಡಿ ಪರಭಾಷೆಯವರು ಕೂಡ ಸುದೀಪ್ಗೆ ಆಹ್ವಾನ ನೀಡಿದ್ದರು. ಸದ್ಯ ಸುದೀಪ್ ಕೋಟಿಗೊಬ್ಬ 3, ವಿಕ್ರಾಂತ್ ರೋಣ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಉಪೇಂದ್ರ ನಟನೆಯ ಕಬ್ಜಾ ಚಿತ್ರದಲ್ಲಿ ಸುದೀಪ್ ವಿಶೇಷ ಪಾತ್ರ ನಿರ್ವಹಿಸುತ್ತಿದ್ದಾರೆ. ಕಿಚ್ಚ ಸುದೀಪ್ ನಟನೆಯ ಕೋಟಿಗೊಬ್ಬ 3 ಸಿನಿಮಾ ಶೀಘ್ರವೇ ತೆರೆಗೆ ಬರುತ್ತಿದೆ. ಮಡೋನಾ ಸೆಬಾಸ್ಟಿಯನ್ ಹಾಗೂ ಶ್ರದ್ಧಾ ದಾಸ್ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಅರ್ಜುನ್ ಜನ್ಯಾ ಸಿನಿಮಾಗೆ ಸಂಗೀತ ನೀಡಿದ್ದಾರೆ.
ಇದನ್ನೂ ಓದಿ: ಕಿಚ್ಚ ಸುದೀಪ್ ಚಿತ್ರರಂಗದ ಪಯಣಕ್ಕೆ 25 ವರ್ಷ; ಶಾಲು ಹೊದಿಸಿ ಸನ್ಮಾನಿಸಿದ ಮುಖ್ಯಮಂತ್ರಿ ಯಡಿಯೂರಪ್ಪ
Published On - 8:52 pm, Mon, 15 March 21