
‘ವಿಕ್ರಾಂತ್ ರೋಣ’ ತೆರೆಕಂಡ ಬಳಿಕ ಕಿಚ್ಚ ಸುದೀಪ್ (Kichcha Sudeep) ಅವರು ದೀರ್ಘ ಗ್ಯಾಪ್ ಮಾಡಿದರು. ಸುದೀಪ್ ಅಭಿನಯದ 46ನೇ ಸಿನಿಮಾ (Kichcha46) ಕುರಿತು ಮಾಹಿತಿ ತಿಳಿಯಲು ಫ್ಯಾನ್ಸ್ ಕಾದಿದ್ದರು. ಅವರಿಗೆಲ್ಲ ಖುಷಿ ಸುದ್ದಿ ಸಿಕ್ಕಿದೆ. ಸುದೀಪ್ ಅವರ ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಸಿಕ್ಕಿದೆ. ಇಂದು (ಮೇ 24) ಹೊಸ ಮಾಹಿತಿ ಬಿಟ್ಟುಕೊಡಲಾಗಿದೆ. ತಮಿಳಿನ ಖ್ಯಾತ ನಿರ್ಮಾಣ ಸಂಸ್ಥೆ ಜೊತೆ ಸುದೀಪ್ ಕೈ ಜೋಡಿಸಿದ್ದಾರೆ. ‘ವಿ ಕ್ರಿಯೇಷನ್ಸ್’ ಮೂಲಕ ಅವರ ಹೊಸ ಸಿನಿಮಾ ನಿರ್ಮಾಣ ಆಗಲಿದೆ. ಈ ಚಿತ್ರಕ್ಕೆ ಕಲೈಪುಲಿ ಎಸ್. ಧಾನು (Kalaipuli S Thanu) ಅವರು ಬಂಡವಾಳ ಹೂಡಲಿದ್ದಾರೆ. ತಮಿಳಿನಲ್ಲಿ ‘ಕಬಾಲಿ’, ‘ತುಪಾಕಿ’, ‘ಅಸುರನ್’ ಮುಂತಾದ ಸಿನಿಮಾಗಳನ್ನು ನಿರ್ಮಾಣ ಮಾಡಿದ ಖ್ಯಾತಿ ‘ವಿ ಕ್ರಿಯೇಷನ್ಸ್’ ಸಂಸ್ಥೆಗೆ ಇದೆ. ಈ ಬ್ಯಾನರ್ ಜೊತೆ ಸುದೀಪ್ ಅವರು ಸಿನಿಮಾ ಮಾಡಲಿರುವುದು ವಿಶೇಷ.
ಇತ್ತೀಚೆಗಷ್ಟೇ ಕಿಚ್ಚ ಸುದೀಪ್ ಅವರ ಹೊಸ ಸಿನಿಮಾಗೆ ಪ್ರೋಮೋ ಚಿತ್ರೀಕರಣ ನಡೆದಿತ್ತು. ಅವರು ಮೂರು ಸಿನಿಮಾಗಳಿಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಆ ಚಿತ್ರಗಳು ಒಂದರ ನಂತರ ಒಂದು ಸೆಟ್ಟೇರಲಿವೆ. ಜೂನ್ 1ರಂದು ಹೊಸ ಸಿನಿಮಾ ಲಾಂಚ್ ಆಗಲಿದೆ. ಶೀಘ್ರದಲ್ಲೇ ಟೀಸರ್ ಬಿಡುಗಡೆ ಮಾಡಲಿರುವುದಾಗಿ ಈಗ ಮಾಹಿತಿ ಹಂಚಿಕೊಳ್ಳಲಾಗಿದೆ.
‘ವಿಕ್ರಾಂತ್ ರೋಣ’ ಬಳಿಕ ಸುದೀಪ್ ಅವರು ಹೊಸ ಸಿನಿಮಾ ಒಪ್ಪಿಕೊಳ್ಳಲು ಅವಸರ ತೋರಲಿಲ್ಲ. ಸಿಸಿಎಲ್ ಮತ್ತು ಕೆಸಿಸಿ ಪಂದ್ಯಗಳಲ್ಲಿ ಅವರು ತೊಡಗಿಕೊಂಡಿದ್ದರು. ಕ್ರಿಕೆಟ್ ಬಗ್ಗೆ ಅವರು ವಿಶೇಷ ಪ್ರೀತಿ ಇದೆ. ಹಾಗಾಗಿ ಅವರು ಸಿನಿಮಾ ಕೆಲಸಗಳ ನಡುವೆ ಬಿಡುವು ಮಾಡಿಕೊಂಡು ಕ್ರಿಕೆಟ್ ಆಡಿದರು. ಆ ಬಳಿಕ ಚುನಾವಣೆಯ ಕಾವು ಹೆಚ್ಚಿತು. ಬಿಜೆಪಿ ಪರವಾಗಿ ಅವರು ರಾಜ್ಯಾದ್ಯಂತ ಕ್ಯಾಂಪೇನ್ ಮಾಡಿದರು. ಈಗ ಮತ್ತೆ ಸಿನಿಮಾ ಕೆಲಸಗಳಿಗೆ ಅವರು ಮರಳಿದ್ದಾರೆ. ಇದು ಅಭಿಮಾನಿಗಳಿಗೆ ಖುಷಿ ನೀಡಿದೆ.
ಇದನ್ನೂ ಓದಿ: Kichcha Sudeep: ರಾಜಕೀಯ ಪ್ರಚಾರದ ನಡುವೆಯೂ ಅಭಿಮಾನಿಗಳ ಪ್ರೀತಿ ಕಡೆಗೆ ಗಮನ ಹರಿಸಿದ ಸುದೀಪ್
ಬಿಗ್ ಬಜೆಟ್ ಸಿನಿಮಾಗಳನ್ನು ನಿರ್ಮಿಸಿರುವ ‘ವಿ ಕ್ರಿಯೇಷನ್ಸ್’ ಜೊತೆ ಸುದೀಪ್ ಕೈ ಜೋಡಿಸಿರುವುದರಿಂದ ಸಹಜವಾಗಿಯೇ ಕೌತಕ ಹೆಚ್ಚಾಗಿದೆ. ಈ ಸಿನಿಮಾಗೆ ಯಾರು ನಿರ್ದೇಶನ ಮಾಡುತ್ತಾರೆ ಎಂಬುದು ಇನ್ನೂ ಬಹಿರಂಗ ಆಗಿಲ್ಲ. ಶೀಘ್ರದಲ್ಲೇ ಬಿಡುಗಡೆ ಆಗಲಿರುವ ಟೀಸರ್ ಮೂಲಕ ಈ ಪ್ರಶ್ನೆಗೆ ಉತ್ತರ ಸಿಗಲಿದೆ. ಇದು ಯಾವ ಪ್ರಕಾರದ ಸಿನಿಮಾ ಎಂಬುದನ್ನು ತಿಳಿಯಲು ಫ್ಯಾನ್ಸ್ ಕಾದಿದ್ದಾರೆ. ಸುದೀಪ್ ಜೊತೆ ಯಾರೆಲ್ಲ ನಟಿಸಲಿದ್ದಾರೆ ಎಂಬ ಮಾಹಿತಿ ಕೂಡ ಇನ್ನಷ್ಟೇ ಬಹಿರಂಗ ಆಗಬೇಕಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:03 pm, Wed, 24 May 23