
ನಟ ಕಿಚ್ಚ ಸುದೀಪ್ (Kichcha Sudeep), ಸಿನಿಮಾ ಪ್ರೇಮಿ. ಒಳ್ಳೆಯ ಸಿನಿಮಾಗಳನ್ನು ನೀಡಬೇಕೆಂಬ ಹಂಬಲದ ಜೊತೆಗೆ ಒಳ್ಳೆಯ ಸಿನಿಮಾಗಳನ್ನು ನೋಡುತ್ತಾರೆ, ಮೆಚ್ಚಿಕೊಳ್ಳುತ್ತಾರೆ. ಒಳ್ಳೆಯ ಸಿನಿಮಾ ಮಾಡಿದ ಪ್ರತಿಭಾವಂತರನ್ನು ಬೆಂಬಲಿಸುತ್ತಾ ಬರುತ್ತಾರೆ. ಒಳ್ಳೆಯ ಸಿನಿಮಾ ವಿಷಯಕ್ಕೆ ಬಂದಾಗ ಸುದೀಪ್ಗೆ ಭಾಷೆಯ ಹಂಗಿಲ್ಲ. ಯಾವುದೇ ಭಾಷೆಯದ್ದಾದರೂ ಸಿನಿಮಾ ಚೆನ್ನಾಗಿದೆಯೆಂದರೆ ಮೆಚ್ಚುಗೆ ಸೂಚಿಸದೇ ಇರುವುದಿಲ್ಲ. ಇತ್ತೀಚೆಗೆ ಬಿಡುಗಡೆ ಆದ ತಮಿಳಿನ ಒಂದು ಸದಭಿರುಚಿಯ ಸಿನಿಮಾ ಸುದೀಪ್ ಗಮನ ಸೆಳೆದಿದ್ದು, ಸಿನಿಮಾ ಬಗ್ಗೆ ಒಳ್ಳೆಯ ಮಾತುಗಳನ್ನು ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ.
ತಮಿಳಿನಲ್ಲಿ ‘ಟೂರಿಸ್ಟ್ ಫ್ಯಾಮಿಲಿ’ ಹೆಸರಿನ ಸಣ್ಣ ಬಜೆಟ್ ಸಿನಿಮಾ ಒಂದು ಇತ್ತೀಚೆಗೆ ಬಿಡುಗಡೆ ಆಗಿದೆ. ಸಿನಿಮಾ ಈಗ ಒಟಿಟಿಯಲ್ಲಿಯೂ ಲಭ್ಯವಿದೆ. ಸಿಮ್ರನ್, ಸಸಿಕುಮಾರ್, ಯೋಗಿಬಾಬು ಮುಖ್ಯ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾ ತಮಿಳು ಮಾತ್ರವಲ್ಲದೆ ತೆಲುಗು ಪ್ರೇಕ್ಷಕರ ಮನಸ್ಸು ಗೆದ್ದಿದೆ. ಕೇವಲ ಎಂಟು ಕೋಟಿ ಬಜೆಟ್ನಲ್ಲಿ ನಿರ್ಮಾಣವಾಗಿದ್ದ ಈ ಸಿನಿಮಾ ಮೇ 1 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ಸಿನಿಮಾದಲ್ಲಿನ ಹಾಸ್ಯ, ಮಾನವೀಯ ಅಂಶಗಳ ಕಾರಣದಿಂದಾಗಿ ಸಾಮಾನ್ಯ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ.
ಇದನ್ನೂ ಓದಿ:ಕಿಚ್ಚ ಸುದೀಪ್-ರಾಜೇಶ್ ಕೃಷ್ಣನ್ ಹಾಡಿನ್ ಜುಗಲ್ಬಂದಿ; ಅಪರೂಪದ ವಿಡಿಯೋ
ಸಿನಿಮಾ ಇತ್ತೀಚೆಗಷ್ಟೆ ಜಿಯೋ ಹಾಟ್ಸ್ಟಾರ್ನಲ್ಲಿ ಬಿಡುಗಡೆ ಆಗಿದ್ದು, ಸಿನಿಮಾ ಒಟಿಟಿಗೆ ಬಂದ ಬಳಿಕ ವೀಕ್ಷಿಸಿದಂತಿರುವ ಸುದೀಪ್ ಟ್ವೀಟ್ ಮಾಡಿದ್ದು, ‘ಇತ್ತೀಚೆಗೆ ಬಂದ ಸಿನಿಮಾಗಳಲ್ಲಿಯೇ ಅದ್ಭುತ ಬರವಣಿಗೆ ಮತ್ತು ಎಕ್ಸಿಕ್ಯೂಷನ್ ‘ಟೂರಿಸ್ಟ್ ಫ್ಯಾಮಿಲಿ’ ಸಿನಿಮಾದ್ದು. ಈ ಸಿನಿಮಾದ ಕತೆ ಹೇಳಿದ ವಿಧಾನ ಅದ್ಭುತವಾಗಿದ್ದು, ನನ್ನನ್ನು ಕದಲದೆ ಸೀಟಿನಲ್ಲಿ ಕುಳಿತಿರುವಂತೆ ಮಾಡಿತು. ಸಿನಿಮಾದಲ್ಲಿನ ಪ್ರತಿ ಪಾತ್ರಕ್ಕೂ ಅದರದ್ದೇ ಆದ ಮಹತ್ವ ಮತ್ತು ಪ್ರಧಾನತೆ ಇದೆ. ಎಲ್ಲ ಪಾತ್ರಗಳನ್ನು ನಟರು ಅದ್ಭುತವಾಗಿ ನಿರ್ವಹಿಸಿದ್ದಾರೆ. ಸಂಗೀತವಂತೂ ಸಿನಿಮಾದ ಆಸ್ತಿಯೇ ಆಗಿದೆ. ನನ್ನ ಗೆಳೆಯ ನಿರ್ದೇಶಕ ಅಭಿಷಾನ್ ಜೀವಿಂತ್ ಹಾಗೂ ಅವರ ತಂಡಕ್ಕೆ ಅಭಿನಂದನೆಗಳು’ ಎಂದಿದ್ದಾರೆ ಕಿಚ್ಚ ಸುದೀಪ್. ತಮ್ಮ ಟ್ವೀಟ್ನಲ್ಲಿ ನಟ ಸಸಿಕುಮಾರ್, ಸಿಮ್ರನ್, ಯೋಗಿಬಾಬು ಇನ್ನೂ ಹಲವರನ್ನು ಟ್ಯಾಗ್ ಮಾಡಿದ್ದಾರೆ.
One of the finest writing and execution in recent times.#TouristFamily surely is a landmark story telling which kept me glued to my seat. Each character has it’s own moments and space,,and every character flawlessly portrayed by actors. Fantabulous casting.
Music is another…— Kichcha Sudeepa (@KicchaSudeep) June 7, 2025
ಈ ಸಿನಿಮಾವನ್ನು ಮೆಚ್ಚಿ ಖ್ಯಾತ ನಿರ್ದೇಶಕ ಎಸ್ಎಸ್ ರಾಜಮೌಳಿ ಸಹ ಟ್ವೀಟ್ ಮಾಡಿದ್ದರು. ಅವರಿಗೂ ಸಹ ಈ ಸಿನಿಮಾ ಬಹುವಾಗಿ ಮೆಚ್ಚುಗೆಯಾಗಿತ್ತು. ಸಿನಿಮಾ ಅನ್ನು ತಮಿಳಿನ ಸ್ಟಾರ್ ನಟ ಸೂರ್ಯ ಸಹ ಮೆಚ್ಚಿಕೊಂಡಿದ್ದರು. ಅವರು ನಿರ್ದೇಶಕನ ಮನೆಗೆ ಕರೆಸಿ ಅಭಿನಂದನೆ ಸಲ್ಲಿಸಿದ್ದರು.
ಅಂದಹಾಗೆ ನಟ ಕಿಚ್ಚ ಸುದೀಪ್, ತಾವು ಮೆಚ್ಚಿದ ಸಿನಿಮಾ ಬಗ್ಗೆ ಬರೆಯುತ್ತಿರುವುದು ಇದು ಮೊದಲೇನಲ್ಲ. ಕನ್ನಡದ ಕೆಲ ಸಿನಿಮಾಗಳ ಬಗ್ಗೆಯೂ ಈ ಹಿಂದೆ ಹೀಗೆಯೇ ಟ್ವೀಟ್ ಮಾಡಿದ್ದಾರೆ. ‘ಗರುಡ ಗಮನ ವೃಷಭ ವಾಹನ’ ಸಿನಿಮಾ ಅನ್ನು ಮೆಚ್ಚಿ ಪುಟಗಟ್ಟಲೆ ವಿಮರ್ಶೆಯನ್ನು ಕಿಚ್ಚ ಸುದೀಪ್ ಬರೆದಿದ್ದರು. ಸಿನಿಮಾಗಳ ಟ್ರೈಲರ್ ಮೆಚ್ಚುಗೆ ಆದರೂ ಸಹ ಸುದೀಪ್ ಹೀಗೆಯೇ ಟ್ವೀಟ್ ಮಾಡಿದ್ದುಂಟು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:00 pm, Sat, 7 June 25