ಕಿಚ್ಚ ಸುದೀಪ್ (Kichcha Sudeep) ಎಂದರೆ ತಿಳಿಯದ ಕನ್ನಡಿಗರಿಲ್ಲ. ಸುದೀಪ್ ಹೆಸರಿನ ಜೊತೆಗೆ ಜನ್ಮ ನಾಮವೇನೋ ಎಂಬಂತೆ ‘ಕಿಚ್ಚ’ ಎಂಬುದು ಸಹ ಸೇರಿಕೊಂಡು ಬಿಟ್ಟಿದೆ. ಸುದೀಪ್ ಅನ್ನು ಕಿಚ್ಚ ಸುದೀಪ್ ಮಾಡಿದ, ಕನ್ನಡ ಚಿತ್ರರಂಗದ ಮಾಸ್-ಕ್ಲಾಸ್ ಎರಡಕ್ಕೂ ಒಗ್ಗುವ ನಟ ಎಂಬಂತೆ ಮಾಡಿದ ಸಿನಿಮಾ ಇದೀಗ ಮರು ಬಿಡುಗಡೆ ಆಗುತ್ತಿದೆ ಅದೂ ಅತ್ಯಾಧುನಿಕ ತಂತ್ರಜ್ಞಾನದ ಮೂಲಕ.
ಹೀರೋ ಆಗಿ ನೆಲೆ ನಿಲ್ಲುವ ಪ್ರಯತ್ನದಲ್ಲಿದ್ದಾಗ ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ಆಗಿ ಬೆಳೆಯಲು ಬುನಾದಿ ಹಾಕಿಕೊಟ್ಟ ಸಿನಿಮಾ ‘ಹುಚ್ಚ’. 2001ರಲ್ಲಿ ಬಿಡುಗಡೆ ಆದ ಈ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗುವ ಮೂಲಕ ಸುದೀಪ್ ಅವರನ್ನು ಕನ್ನಡ ಚಿತ್ರರಂಗದ ಆಸ್ತಿಯನ್ನಾಗಿ ಮಾಡಿತು. ಈ ಸಿನಿಮಾದಲ್ಲಿ ಸುದೀಪ್, ಸಚ್ಚಿದಾನಂದ ಅಲಿಯಾಸ್ ಕಿಚ್ಚ ಹೆಸರಿನ ಪಾತ್ರದಲ್ಲಿ ನಟಿಸಿದ್ದರು. ಈ ಸಿನಿಮಾದ ಮೂಲಕ ಸುದೀಪ್ಗೆ ಕಿಚ್ಚ ಎನ್ನುವ ಅನ್ವರ್ಥ ನಾಮ ಸೇರಿಕೊಂಡಿತು.
ಸುದೀಪ್ಗೆ ಗುರುತು ತಂದುಕೊಟ್ಟ ‘ಹುಚ್ಚ’ ಸಿನಿಮಾ ಮರು ಬಿಡುಗಡೆ ಆಗುತ್ತಿದೆ. ಅದೂ ಅತ್ಯಾಧುನಿಕ ತಂತ್ರಜ್ಞಾನದ ಮೂಲಕ. ಆದರೆ ಈ ಸಿನಿಮಾವನ್ನು ನೋಡಬೇಕೇ ಬೇಡವೆ ಎಂಬ ಬಗ್ಗೆ ಕಿಚ್ಚು ಸುದೀಪ್ ಅಭಿಮಾನಿಗಳು ಭಿನ್ನ ನಿಲವು ಹೊಂದಿದ್ದಾರೆ. ಕೆಲವರು ನೋಡಬೇಕು ಎಂದರೆ ಕೆಲವರು ನೋಡಬಾರದು ಎಂದಿದ್ದಾರೆ. ಇದಕ್ಕೆ ಕಾರಣವೂ ಇದೆ.
ಇದನ್ನೂ ಓದಿ:ಕಿಚ್ಚ ಸುದೀಪ್ ಬಿಡುಗಡೆ ಮಾಡಿದ ‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾದ ಟೀಸರ್
‘ಹುಚ್ಚ’ ಸಿನಿಮಾವನ್ನು ನಿರ್ಮಾಣ ಮಾಡಿದ್ದು ನಿರ್ಮಾಪಕ ರೆಹಮಾನ್. ಆಗಿನ ಸೂಪರ್ ಬ್ಲಾಕ್ಬಸ್ಟರ್ ಸಿನಿಮಾ ಇದು. ಈ ಸಿನಿಮಾದಿಂದಾಗಿ ಭಾರಿ ದೊಡ್ಡ ಮೊತ್ತವನ್ನೇ ಆಗಿನ ಕಾಲಕ್ಕೆ ರೆಹಮಾನ್ ಗಳಿಸಿದ್ದರು. ಆದರೆ ಇತ್ತೀಚೆಗೆ ಸುದೀಪ್ ವಿರುದ್ಧ ನಿರ್ಮಾಪಕ ಕುಮಾರ್ ವಂಚನೆ ಆರೋಪ ಮಾಡಿದಾಗ ಅವರ ತಂಡ ಸೇರಿಕೊಂಡು ರೆಹಮಾನ್ ಸಹ ಸುದೀಪ್ ವಿರುದ್ಧ ಮಾತನಾಡಿದ್ದರು. ಹಣ ನೀಡುವಂತೆ ಬೇಡಿಕೆ ಇಟ್ಟಿದ್ದರು.
ದೊಡ್ಡ ಮೊತ್ತದ ಹಣ ಮಾಡಿಕೊಟ್ಟ ಸುದೀಪ್ ವಿರುದ್ಧವೇ ಮಾತನಾಡಿದ ರೆಹಮಾನ್ ನಿರ್ಮಾಣ ಮಾಡಿರುವ ಸಿನಿಮಾವನ್ನು ನೋಡಬಾರದು ಎಂದು ಕೆಲವು ಸುದೀಪ್ ಅಭಿಮಾನಿಗಳು ವಾದವಾಗಿದ್ದರೆ, ಇನ್ನು ಕೆಲವರು ‘ಹುಚ್ಚ’ ಕನ್ನಡದ ಕಲ್ಟ್ ಸಿನಿಮಾಗಳಲ್ಲಿ ಒಂದು ಅಂಥಹಾ ಚಿತ್ರವನ್ನು, ಸಿನಿಮಾ ಪ್ರೇಮಿಯಾಗಿ ನೋಡಬೇಕು ಎಂದು ವಾದಿಸಿದ್ದಾರೆ.
ಕಿಚ್ಚ ಸುದೀಪ್ ಪ್ರಸ್ತುತ ‘ಮ್ಯಾಕ್ಸ್’ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ. ಅದರ ಜೊತೆಗೆ ಬಿಗ್ಬಾಸ್ ನಿರೂಪಣೆಯನ್ನೂ ಮಾಡುತ್ತಿದ್ದಾರೆ. ಇವೆರಡರ ಬಳಿಕ ತಮ್ಮ 47ನೇ ಸಿನಿಮಾದ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ. ಆ ಸಿನಿಮಾವನ್ನು ತಮಿಳಿನ ನಟ, ನಿರ್ದೇಶಕ ಚೇರನ್ ನಿರ್ದೇಶನ ಮಾಡಲಿದ್ದಾರೆ. ಈ ಎರಡೂ ಸಿನಿಮಾಗಳ ಬಳಿಕ ರಕ್ಷಿತ್ ಶೆಟ್ಟಿ ನಿರ್ದೇಶನದ ಸಿನಿಮಾದಲ್ಲಿ ಸುದೀಪ್ ನಟಿಸುವ ಸಾಧ್ಯತೆ ಇದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ