Koli Esru Movie: ಕನ್ನಡದ ‘ಕೋಳಿ ಎಸ್ರು’ ಚಿತ್ರಕ್ಕೆ ಅಟ್ಟಾವಾ ಇಂಡಿಯನ್​ ಫಿಲ್ಮ್​ ಫೆಸ್ಟಿವಲ್​ನಲ್ಲಿ 2 ಪ್ರಮುಖ ಪ್ರಶಸ್ತಿ

Akshatha Pandavapura: ಕೆನಡಾದಲ್ಲಿ ‘ಕೋಳಿ ಎಸ್ರು’ ಸಿನಿಮಾಗೆ ವಿಶೇಷ ಮನ್ನಣೆ ದೊರೆದಿದೆ. ನಟಿ ಅಕ್ಷತಾ ಪಾಂಡವಪುರ ಹಾಗೂ ನಿರ್ದೇಶಕಿ ಚಂಪಾ ಶೆಟ್ಟಿ ಅವರು ಪ್ರಶಸ್ತಿ ಪಡೆದಿದ್ದಾರೆ.

Koli Esru Movie: ಕನ್ನಡದ ‘ಕೋಳಿ ಎಸ್ರು’ ಚಿತ್ರಕ್ಕೆ ಅಟ್ಟಾವಾ ಇಂಡಿಯನ್​ ಫಿಲ್ಮ್​ ಫೆಸ್ಟಿವಲ್​ನಲ್ಲಿ 2 ಪ್ರಮುಖ ಪ್ರಶಸ್ತಿ
ಅಕ್ಷತಾ ಪಾಂಡವಪುರ, ಚಂಪಾ ಶೆಟ್ಟಿ
Follow us
|

Updated on:Jun 18, 2023 | 10:36 AM

ಸ್ಯಾಂಡಲ್​ವುಡ್​ ಸಿನಿಮಾಗಳು ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿವೆ. ಕಮರ್ಷಿಯಲ್​ ದೃಷ್ಟಿಯಿಂದ ಮಾತ್ರವಲ್ಲದೇ ಕಥಾವಸ್ತುವಿನ ಕಾರಣದಿಂದಲೂ ಕನ್ನಡದ ಚಿತ್ರಗಳು ಗಮನ ಸೆಳೆಯುತ್ತಿವೆ. ಅದಕ್ಕೆ ಲೇಟೆಸ್ಟ್​ ಉದಾಹರಣೆ ಎಂದರೆ ‘ಕೋಳಿ ಎಸ್ರು’ (Koli Esru) ಸಿನಿಮಾ. ಈ ಚಿತ್ರಕ್ಕೆ ಕೆನಡಾದ ಅಟ್ಟಾವಾ ಇಂಡಿಯನ್​ ಫಿಲ್ಮ್​ ಫೆಸ್ಟಿವಲ್​ನಲ್ಲಿ ಎರಡು ಪ್ರಮುಖ ಪ್ರಶಸ್ತಿಗಳು ಸಿಕ್ಕಿವೆ. ನಿರ್ದೇಶಕಿ ಚಂಪಾ ಶೆಟ್ಟಿ (Champa Shetty) ಅವರು ‘ಅತ್ಯುತ್ತಮ ನಿರ್ದೇಶನ’ ಹಾಗೂ ಅಕ್ಷತಾ ಪಾಂಡವಪುರ (Akshatha Pandavapura) ಅವರು ‘ಅತ್ಯುತ್ತಮ ನಟಿ’ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಈಗಾಗಲೇ ಬೇರೆ ಬೇರೆ ಪ್ರಶಸ್ತಿಗಳನ್ನು ಪಡೆದುಕೊಂಡಿರುವ ಈ ಚಿತ್ರಕ್ಕೆ ಮತ್ತೊಂದು ಗರಿ ಸೇರ್ಪಡೆ ಆದಂತೆ ಆಗಿದೆ. ಚಿತ್ರತಂಡದವರು ಸೋಶಿಯಲ್​ ಮೀಡಿಯಾ ಮೂಲಕ ಈ ಬಗ್ಗೆ ಖುಷಿ ಹಂಚಿಕೊಂಡಿದ್ದಾರೆ. ಪೃಥ್ವಿ ಕೊಣನೂರು ಅವರ ‘ಹದಿನೇಳೆಂಟು’ ಚಿತ್ರಕ್ಕೆ ‘ಅತ್ಯುತ್ತಮ ಸಿನಿಮಾ’ ಪ್ರಶಸ್ತಿ ಸಿಕ್ಕಿದೆ.

‘ಓಹ್​ ಮೈ ಗಾಡ್​… ನಿಜವಾಗಿಯೂ? ಕೋಳಿ ಎಸ್ರು ಚಿತ್ರದ ಅಭಿನಯಕ್ಕಾಗಿ ಮತ್ತೊಂದು ಪ್ರಶಸ್ತಿ. ನನ್ನ ಗುರು ಆದಿಲ್​ ಹುಸೇನ್​ ಅವರ ಜೊತೆ ಈ ಪ್ರಶಸ್ತಿ ಪಡೆಯುತ್ತಿರುವುದಕ್ಕೆ ಹೆಮ್ಮೆ ಎನಿಸುತ್ತಿದೆ. ಅತ್ಯುತ್ತಮ ನಿರ್ದೇಶಕಿ ಪ್ರಶಸ್ತಿ ಪಡೆದ ಚಂಪಾ ಶೆಟ್ಟಿ ಅವರಿಗೆ ಅಭಿನಂದನೆಗಳು. ‘ಹದಿನೇಳೆಂಟು’ ಚಿತ್ರಕ್ಕೆ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಪಡೆದ ಪೃಥ್ವಿ ಕೊಣನೂರು ಅವರಿಗೂ ಅಭಿನಂದನೆ. ಇದು ನನ್ನ ಎರಡನೇ ಪ್ರಶಸ್ತಿ’ ಎಂದು ಅಕ್ಷತಾ ಪಾಂಡವಪುರ ಅವರು ಫೇಸ್​ಬುಕ್​ನಲ್ಲಿ ಬರೆದುಕೊಂಡಿದ್ದಾರೆ. ಅವರಿಗೆ ಎಲ್ಲರೂ ಅಭಿನಂದನೆ ತಿಳಿಸುತ್ತಿದ್ದಾರೆ.

‘ಓಹ್ಹೋ! ಖುಷಿ ಖುಷಿ ಖುಷಿ.. ಕೆನಡಾದ ಪ್ರತಿಷ್ಠಿತ ಅಟ್ಟಾವಾ ಇಂಡಿಯನ್​ ಫಿಲ್ಮ್​ ಫೆಸ್ಟಿವಲ್​ನಲ್ಲಿ ನನಗೆ ಬೆಸ್ಟ್​ ಡೈರೆಕ್ಟರ್​ ಅವಾರ್ಡ್​​ ಸಿಕ್ಕಿರುವುದು ನಮ್ಮ ಇಡೀ ತಂಡಕ್ಕೆ ಸಿಕ್ಕ ಗರಿ. ಜೊತೆಗೆ ಅಕ್ಷತಾಗೆ ಅತ್ಯುತ್ತಮ ನಟಿ ಪ್ರಶಸ್ತಿ ಸಿಕ್ಕಿರುವುದು ಮತ್ತೂ ಖುಷಿ. ಕಾರಣರಾದ ಎಲ್ಲರಿಗೂ ಮತ್ತು ಎಲ್ಲ ಹಿತೈಶಿಗಳಿಗೂ ರಾಶಿ ರಾಶಿ ಪ್ರೀತಿಯ ಧನ್ಯವಾದಗಳು’ ಎಂದು ಚಂಪಾ ಶೆಟ್ಟಿ ಅವರು ಪೋಸ್ಟ್​ ಮಾಡಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಅಕ್ಷತಾ ಪಾಂಡವಪುರ ಅವರು ಭರವಸೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಅವರು ನಟಿಸಿದ ‘ಪಿಂಕಿ ಎಲ್ಲಿ’ ಸಿನಿಮಾ ಕೂಡ ಹಲವಾರು ಸಿನಿಮೋತ್ಸವಗಳಲ್ಲಿ ಪ್ರದರ್ಶನಗೊಂಡು ಪ್ರಶಸ್ತಿ ಪಡೆದಿದೆ. ಈಗ ಅವರು ‘ಕೋಳಿ ಎಸ್ರು’ ಸಿನಿಮಾ ಮೂಲಕವೂ ಗಮನ ಸೆಳೆಯುತ್ತಿದ್ದಾರೆ. ಅದೇ ರೀತಿ ನಿರ್ದೇಶಕಿ ಚಂಪಾ ಶೆಟ್ಟಿ ಅವರು ‘ಅಮ್ಮಚ್ಚಿ ಎಂಬ ನೆನಪು’ ಸಿನಿಮಾವನ್ನು ನಿರ್ದೇಶಿಸಿ ಗುರುತಿಸಿಕೊಂಡಿದ್ದರು. ‘ಪಿಂಕಿ ಎಲ್ಲಿ’ ಸಿನಿಮಾದ ನಿರ್ದೇಶನದಿಂದ ಪೃಥ್ವಿ ಕೊಣನೂರು ಅವರು ಮೆಚ್ಚುಗೆ ಪಡೆದರು. ಈ ಮೂವರೂ ಈಗ ‘ಅಟ್ಟಾವಾ ಇಂಡಿಯನ್​ ಫಿಲ್ಮ್​ ಫೆಸ್ಟಿವಲ್​’ನಲ್ಲಿ ಕನ್ನಡದ ಸಿನಿಮಾಗಳಿಗೆ ಗರಿಮೆ ಹೆಚ್ಚಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 10:32 am, Sun, 18 June 23