ರಾಜಕೀಯ, ಸಮುದಾಯದ ಬಗ್ಗೆ ಕಿಚ್ಚ ಸುದೀಪ್ಗೆ ಕಿವಿಮಾತು ಹೇಳಿದ್ದೇನೆ: ಸಚಿವ ಕೆ.ಎನ್.ರಾಜಣ್ಣ
Sudeep: ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಮಾಡಿದ್ದ ಸುದೀಪ್ಗೆ ರಾಜಕೀಯ ಹಾಗೂ ಸಮುದಾಯದ ಕುರಿತಾಗಿ ಕಿವಿಮಾತು ಹೇಳಿರುವುದಾಗಿ ಸಚಿವ ಕೆ.ಎನ್.ರಾಜಣ್ಣ ಹೇಳಿದ್ದಾರೆ.
ನಟ ಕಿಚ್ಚ ಸುದೀಪ್ (Sudeep) ಈ ಬಾರಿ ಸಿನಿಮಾ ಹೊರತಾಗಿ ರಾಜಕಾರಣದ (Politics) ಕಾರಣಕ್ಕೆ ಅತಿಹೆಚ್ಚು ಸುದಿಯಲ್ಲಿದ್ದ ನಟ. ಈ ಬಾರಿ ಬಿಜೆಪಿಗೆ ಬಂಬಲ ಘೋಷಿಸಿದ್ದ ನಟ ಕಿಚ್ಚ ಸುದೀಪ್ ಹಲವಾರು ಬಿಜೆಪಿ ಅಭ್ಯರ್ಥಿಗಳ ಪರವಾಗಿ ವಿಧಾನಸಭೆ ಚುನಾವಣೆಯಲ್ಲಿ ಪ್ರಚಾರ ಮಾಡಿದ್ದರು. ನರೇಂದ್ರ ಮೋದಿಯವರನ್ನು (Narendra Modi) ಕೊಂಡಾಡಿದ್ದರು. ಆದರೆ ಅವರ ಪ್ರಚಾರದಿಂದ ಬಿಜೆಪಿಗೆ ದೊಡ್ಡ ಲಾಭವೇನೂ ಆಗಲಿಲ್ಲ. ಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋತಿತು. ಇದೀಗ ಸಚಿವ, ವಾಲ್ಮೀಕಿ ಸಮುದಾಯದ ಮುಖಂಡ ಕೆ.ಎನ್.ರಾಜಣ್ಣ (KN Rajanna), ತಾವು ಸಮುದಾಯ ಹಾಗೂ ರಾಜಕೀಯದ ಬಗ್ಗೆ ಸುದೀಪ್ಗೆ ಕಿವಿಮಾತು ಹೇಳಿರುವುದಾಗಿ ಹೇಳಿದ್ದಾರೆ.
ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಪೀಠದಲ್ಲಿ ಸುದ್ದಿಗಾರರೊಟ್ಟಿಗೆ ಮಾತನಾಡಿದ ಸಚಿವ ಕೆ.ಎನ್.ರಾಜಣ್ಣ, ”ಕಿಚ್ಚ ಸುದೀಪ್ ನಮ್ಮ ಸಮುದಾಯದ ಮೇರುನಟ. ಡಾ.ರಾಜ್ ರಾಜಕೀಯಕ್ಕೆ ಬಂದು ಏನು ಬೇಕಾದರೂ ಆಗಬಹುದಿತ್ತು, ರಾಜಕೀಯದಿಂದ ದೂರ ಇದ್ದಿದ್ದಕ್ಕೆ ದೇವತಾಮನುಷ್ಯ ಎಂದು ಹೇಳುತ್ತಾರೆ. ದೇವತಾ ಮನುಷ್ಯ ಎಂದು ಎಲ್ಲಾ ಸಮುದಾಯದವರು ಗುರುತಿಸುತ್ತಾರೆ. ಸಿನಿಮಾ ನಟರು ರಾಜಕೀಯಕ್ಕೆ ಬಂದರೆ ಗೌರವ ಕಡಿಮೆಯಾಗುತ್ತದೆ” ಎಂದರು.
”ಒಂದು ಸಮುದಾಯದ ಅಭ್ಯರ್ಥಿ ಪರ, ವಿರುದ್ಧ ಸಿನಿಮಾ ನಟರು ಪ್ರಚಾರ ಮಾಡಿದರೆ, ಆ ಸಮುದಾಯದವರು ಆ ನಟನ ಪರ ಅಥವಾ ವಿರುದ್ಧ ಆಗುತ್ತಾರೆ. ಸಿನಿಮಾ ನಟರಿಗೆ ಅದು ಒಳ್ಳೆಯದಲ್ಲ. ಅದಕ್ಕೆ ಅವಕಾಶ ಕೊಡಬೇಡಿ ಎಂದು ಕಿವಿಮಾತು ಹೇಳಿದ್ದೇನೆ” ಎಂದು ರಾಜಣ್ಣ ಹೇಳಿದ್ದಾರೆ.
ಇದನ್ನೂ ಓದಿ:ಅಕ್ಕನ ಮಗನನ್ನು ಚಿತ್ರರಂಗಕ್ಕೆ ಪರಿಚಯಿಸುತ್ತಿರುವ ಕಿಚ್ಚ ಸುದೀಪ್: ಇಲ್ಲಿವೆ ಹೊಸ ಹೀರೋ ಚಿತ್ರಗಳು
ಕಿಚ್ಚ ಸುದೀಪ್ ಅವರು ಈ ಬಾರಿ ತಾವು ಬಸವರಾಜ ಬೊಮ್ಮಾಯಿ ಅವರಿಗೆ ಬೆಂಬಲ ಘೋಷಿಸುತ್ತಿರುವುದಾಗಿ ಹೇಳಿದ್ದರು. ಪ್ರಧಾನಿ ನರೇಂದ್ರ ಮೋದಿಯವರನ್ನು ಸಹ ಕೊಂಡಾಡಿದ್ದರು. ಅಂತೆಯೇ ರಾಜ್ಯದಾದ್ಯಂತ ಸಂಚರಿಸಿ ಬಿಜೆಪಿ ಪಕ್ಷ ಹೇಳಿದ ಹಲವಾರು ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಿದರು. ಕರಾವಳಿ ಭಾಗ ಹಾಗೂ ಬೆಂಗಳೂರಿನ ಕೆಲವು ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದ ಬಹುತೇಕ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಸುದೀಪ್ ಪ್ರಚಾರ ಮಾಡಿದ್ದರು. ಆದರೆ ಸುದೀಪ್ ಪ್ರಚಾರದಿಂದ ಬಿಜೆಪಿಗೆ ಯಾವುದೇ ಲಾಭವಾಗಲಿಲ್ಲ. ಚುನಾವಣೆ ಬಳಿಕ ಬಿಜೆಪಿ ಪರ ಪ್ರಚಾರ ಮಾಡಿದ್ದಕ್ಕೆ ಸುದೀಪ್ ಟೀಕೆಗಳನ್ನು ಸಹ ಎದುರಿಸಬೇಕಾಯ್ತು.
ಈ ಬಾರಿ ಚುನಾವಣೆಯಲ್ಲಿ ಸುದೀಪ್ ಮಾತ್ರವೇ ಅಲ್ಲದೆ ಇನ್ನೂ ಹಲವು ನಟರು ವಿವಿಧ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಿದರು. ಶಿವರಾಜ್ ಕುಮಾರ್, ದುನಿಯಾ ವಿಜಯ್, ಲೂಸ್ ಮಾದ ಯೋಗಿ, ಧ್ರುವ ಸರ್ಜಾ, ಸಾಧುಕೋಕಿಲ, ನಟಿಯರಾದ ಹರ್ಷಿಕಾ ಪೂಣಚ್ಚ, ಶ್ರುತಿ, ರಮ್ಯಾ ಇನ್ನೂ ಕೆಲವರು ಪ್ರಚಾರ ಮಾಡಿದ್ದರು. ಆದರೆ ಹೆಚ್ಚು ಚರ್ಚೆಯಾಗಿದ್ದು ನಟ ಸುದೀಪ್ ವಿಚಾರ ಮಾತ್ರ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ