‘ಯಲಾಕುನ್ನಿ’ ಅನ್ನು ಕನ್ನಡ ಸಿನಿಮಾ ಪ್ರೇಮಿಗಳು ಮರೆಯುವಂತಿಲ್ಲ. ಕನ್ನಡ ಚಿತ್ರರಂಗದ ಈವರೆಗಿನ ಅತ್ಯುತ್ತಮ ವಿಲನ್, ದಿವಂಗತ ವಜ್ರಮುನಿ ಅವರ ಅತ್ಯಂತ ಜನಪ್ರಿಯ ಸಂಭಾಷಣೆ ಇದು. ಇದೀಗ ಈ ಡೈಲಾಗ್ ಅನ್ನೇ ಟೈಟಲ್ ಅನ್ನಾಗಿ ಇಟ್ಟುಕೊಂಡು ಸಿನಿಮಾ ಒಂದು ನಿರ್ಮಾಣವಾಗುತ್ತಿದೆ. ಸೌಂದರ್ಯ ಸಿನಿ ಕಂಬೈನ್ಸ್ ಹಾಗೂ ನರಸಿಂಹ ಸಿನಿಮಾಸ್ ಲಾಂಛನದಲ್ಲಿ ‘ಯಲಾಕುನ್ನಿ’ ಸಿನಿಮಾ ನಿರ್ಮಾಣವಾಗುತ್ತಿದೆ. ಸಿನಿಮಾಕ್ಕೆ ಅನುಸೂಯ ಕೋಮಲ್ ಕುಮಾರ್, ಸಹನ ಮೂರ್ತಿ ಅವರು ಬಂಡವಾಳ ಹೂಡಿದ್ದಾರೆ.
ಕೋಮಲ್ ಕುಮಾರ್ ನಾಯಕರಾಗಿ ನಟಿಸಿರುವ ಈ ಚಿತ್ರವನ್ನು ಹೊಸ ಪ್ರತಿಭೆ ಎನ್ಆರ್ ಪ್ರದೀಪ್ ನಿರ್ದೇಶನ ಮಾಡಿದ್ದಾರೆ. ಕತೆ ಚಿತ್ರಕಥೆ, ಸಂಭಾಷಣೆ ಸಹ ಅವರದ್ದೆ. ‘ಯಲಾಕುನ್ನಿ’ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದೆ. ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕಾರ್ಯ ಚಾಲ್ತಿಯಲ್ಲಿದೆ. ಸಿನಿಮಾದ ಪೋಸ್ಟರ್ ಬಿಡಗುಡೆ ಆಗಿದ್ದು, ಕೋಮಲ್, ವಜ್ರಮುನಿ ಗೆಟಪ್ನಲ್ಲಿ ಸಖತ್ ಆಗಿ ಕಾಣುತ್ತಿದ್ದಾರೆ. ಸಿನಿಮಾಕ್ಕೆ ಇಟ್ಟಿರುವ ಹೆಸರಿನ ಬಗ್ಗೆಯಂತೂ ಬಹಳ ಪ್ರಶಂಸೆಗಳು ವ್ಯಕ್ತವಾಗುತ್ತಿದೆ. ಸದ್ಯದಲ್ಲೇ ಪ್ರೇಕ್ಷಕರಿಗೆ ಮನೋರಂಜನೆಯ ರಸದೌತಣ ನೀಡಲು ಚಿತ್ರಮಂದಿರಗಳಿಗೆ ‘ಯಲಾಕುನ್ನಿ’ ಚಿತ್ರ ಬರಲಿದೆ. ಬೆಂಗಳೂರು, ಮೈಸೂರು ಹಾಗೂ ಶ್ರೀರಂಗಪಟ್ಟಣದಲ್ಲಿ ಚಿತ್ರೀಕರಣ ನಡೆದಿದೆ. ಶ್ರೀರಂಗಪಟ್ಟಣದಲ್ಲಿ ಚಿತ್ರಕ್ಕಾಗಿ ವಿಶೇಷ ಸೆಟ್ ಸಹ ಹಾಕಲಾಗಿತ್ತಂತೆ.
ಇದನ್ನೂ ಓದಿ:ಸಿನಿಮಾ ನಿರ್ಮಾಣಕ್ಕಿಳಿದ ಬೆಂಕಿ ತನಿಷಾ ಕುಪ್ಪಂಡ, ಕೋಮಲ್ ನಾಯಕ
ಸಿನಿಮಾದಲ್ಲಿ ಕೋಮಲ್ ದ್ವಿಪಾತ್ರದಲ್ಲಿ ನಟಿಸಿದ್ದಾರೆ. ಇದು ಅವರಿಗೆ ಮೊದಲ ಪ್ರಯತ್ನ. ಕೋಮಲ್ ಜೊತೆಗೆ ದತ್ತಣ್ಣ , ಸಾಧು ಕೋಕಿಲ , ಮಿತ್ರ, ಸುಚೇಂದ್ರ ಪ್ರಸಾದ್ , ಶಿವರಾಜ್ ಕೆ ಆರ್ ಪೇಟೆ , ತಬಲಾ ನಾಣಿ, ರಾಜು ತಾಳಿ ಕೋಟೆ, ಸುಮನ್ ನಗರ ಕರ್, ಮಾನಸಿ ಸುಧೀರ್(ಕಾಂತಾರ) , ಜಗ್ಗೇಶ್ ಅವರ ದ್ವಿತಿಯ ಪುತ್ರ ಯತಿರಾಜ್ ಜಗ್ಗೇಶ್, ಜಯಸಿಂಹ ಮುಸುರಿ , ರಘು ರಾಮನಕೊಪ್ಪ ,ಮಹಾಂತೇಶ್, ಬೌಬೌ ಜಯರಾಮ್ , ನಿರ್ದೇಶಕ ಸಹನ ಮೂರ್ತಿ , ಭಜರಂಗಿ ಪ್ರಸನ್ನ , ತಿಥಿ ತಮ್ಮಣ್ಣ, ಪ್ರದೀಪ್ ಪೂಜಾರಿ, ತೇಜಸ್, ಉಮೇಶ್ ಸಕ್ಕರೆ ನಾಡು ಮಂತಾದರವರ ತಾರಾಬಳಗವಿರುವ ಈ ಚಿತ್ರದ ನಾಯಕಿಯರಾಗಿ ನಿಸರ್ಗ ಅಪ್ಪಣ್ಣ ಮತ್ತು ಗಿಚ್ಚಿಗಿಲಿಯ ಅಮೃತಾ ಬಣ್ಣ ಹಚ್ಚಿದ್ದಾರೆ. ಭಾರಿ ದೊಡ್ಡ ತಾರಾಗಣವೇ ಈ ಸಿನಿಮಾದಲ್ಲಿದೆ.
ವಿಶೇಷವಾಗಿ ವಜ್ರಮುನಿ ಯವರ ಮೊಮ್ಮೊಗ ಆಕರ್ಶ್ ಈ ಚಿತ್ರದ ಮೂಲಕ ಮೊದಲ ಬಾರಿಗೆ ಬಣ್ಣದ ಲೋಕ ಪ್ರವೇಶಿಸುತ್ತಿದ್ದಾರೆ. ಮಯೂರ್ ಪಟೇಲ್ ಅವರು ಖಳ ನಾಯಕನಾಗಿ ನಟಿಸಿದ್ದಾರೆ. ಸಂಪೂರ್ಣ ಹಳ್ಳಿ ಸೊಗಡಿನಲ್ಲಿ ಮೂಡಿಬಂದಿರುವ ‘ಯಲಾಕುನ್ನಿ’ ಸಿನಿಮಾಕ್ಕೆ ರಥಾವರ ಖ್ಯಾತಿಯ ಧರ್ಮ ವಿಶ್ ಸಂಗೀತ ನಿರ್ದೇಶನ, ದೀಪು ಎಸ್ ಕುಮಾರ್ ಸಂಕಲನ ಹಾಗೂ ಹಾಲೇಶ್ ಭದ್ರಾವತಿ ಅವರ ಛಾಯಾಗ್ರಹಣವಿದೆ. ಮುರಳಿ ಮಾಸ್ಟರ್ ನೃತ್ಯ ಸಂಯೋಜನೆ ಮಾಡಿರುವ ಈ ಚಿತ್ರಕ್ಕೆ ನರಸಿಂಹ ಮಾಸ್ಟರ್ ಸಾಹಸ ಸಂಯೋಜನೆ ಮಾಡಿದ್ದಾರೆ. ‘ಯಲಾಕುನ್ನಿ’ ಚಿತ್ರಕ್ಕೆ ‘ಮೇರಾ ನಾಮ್ ವಜ್ರಮುನಿ’ ಎಂಬ ಅಡಿಬರಹವಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ