
ಬಿಡುಗಡೆಗೆ ಸಜ್ಜಾಗುತ್ತಿರುವ ‘ಕೊರಗಜ್ಜ’ (Koragajja) ಸಿನಿಮಾದಿಂದ ಹೊಸ ಸಾಂಗ್ ಹೊರಬಂದಿದೆ. ‘ಜೀ ಮ್ಯೂಜಿಕ್’ ಮೂಲಕ ಈ ಹಾಡು ಬಿಡುಗಡೆ ಆಗಿದೆ. ತ್ರಿವಿಕ್ರಮ ಸಿನೆಮಾಸ್ ಹಾಗೂ ಸಕ್ಸಸ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಬಹುನಿರೀಕ್ಷಿತ ‘ಕೊರಗಜ್ಜ’ ಸಿನಿಮಾ ಸಿದ್ಧವಾಗುತ್ತಿದೆ. ಈ ಸಿನಿಮಾದಲ್ಲಿ ಮೂಡಿಬರುವ ಕರಾವಳಿಯ ಉಗ್ರಭಯಂಕರ, ರಕ್ತ ದಾಹದ ದೈವ ಗುಳಿಗನ ಕುರಿತಾದ ಹಾಡನ್ನು ನಿರ್ದೇಶಕ ಸುಧೀರ್ ಅತ್ತಾವರ್ ಅವರೇ ಬರೆದಿದ್ದಾರೆ. ‘ಗುಳಿಗ ಗುಳಿಗ ಘೋರ ಗುಳಿಗಾ’ ಎಂಬ ಈ ಹಾಡು (Guliga Song) ಈಗ ರಿಲೀಸ್ ಆಗಿ ಗಮನ ಸೆಳೆಯುತ್ತಿದೆ.
‘ನೆಲವುಲ್ಲ ಸಂಕೆಯ 24ನೇ ಮಗನಾಗಿ ಹುಟ್ಟಿದ ಗುಳಿಗ ಹುಟ್ಟುವಾಗಲೇ ಭಯಂಕರ ಹಸಿವಿನಿಂದಾಗಿ ಸಾವಿರ ಕೋಳಿ, ಸಾವಿರ ಕುದುರೆಯ ರಕ್ತ ಹೀರಿದರೂ ಹಸಿವು ನಿಲ್ಲದಿದ್ದಾಗ, ಶ್ರೀಮನ್ನಾರಾಯಣ ದೇವರ ಕಿರುಬೆರಳಿನಿಂದ ಅವರ ರಕ್ತವನ್ನೆಲ್ಲ ಹೀರಿದ ಎನ್ನುವ ಜನಪದ ಕಥೆ ಗುಳಿಗನ ಹುಟ್ಟಿನ ಕುರಿತಾಗಿ ಇದೆ. ಇಂತಹ ಘೋರ ಗುಳಿಗನ ಕೋಲ ಸೇವೆಯೂ ಘನ ಘೋರ ರೂಪದಲ್ಲಿ ತುಳುನಾಡಿನಾದ್ಯಂದ ಆಚರಿಸಲ್ಪಡುತ್ತಿದೆ’ ಎಂದು ಚಿತ್ರತಂಡ ಹೇಳಿದೆ.
‘ಈ ಘೋರ ಗುಳಿಗನ ರಕ್ತ ಹೀರುವ ರುದ್ರ ನರ್ತನವನ್ನು ನೋಡಲಾಗದೆ ಭಯಭೀತಿಯಿಂದ ಅನೇಕರು ಕಣ್ಣು ಮುಚ್ಚಿಕೊಳ್ಳುವುದೂ ಇದೆ. ರಕ್ತ ದಾಹದಿಂದ ಎಲ್ಲೆಂದೆಲ್ಲಿ ಓಡುವ ಗುಳಿಗನನ್ನು ಹಿಡಿಯಲು ಹರಸಾಹಸ ಮಾಡುವ ದ್ರಶ್ಯವಂತೂ ಮೈ ಝುಂ ಎನಿಸುತ್ತದೆ. ರುದ್ರಭಯಂಕರ ಗುಳಿಗದೈವ ಪಂಜುರ್ಲಿ ಜೊತೆ ಸೇರಿ ಕೊರಗಜ್ಜನನ್ನು ಭೇಟಿಯಾಗುವ ಸನ್ನಿವೇಶವು ಚಿತ್ರದಲ್ಲಿ ಮೂಡಿಬರಲಿದೆ’ ಎಂದು ಚಿತ್ರತಂಡ ಮಾಹಿತಿ ನೀಡಿದೆ.
ಗುಳಿಗ ದೈವದ ರಣ ಭಯಂಕರ ನರ್ತನವನ್ನು ಖ್ಯಾತ ಡಾನ್ಸರ್, ಕೊರಿಯೋಗ್ರಾಫರ್ ಸಂದೀಪ್ ಸೋಪರ್ಕರ್ ನಿರ್ವಹಿಸಿದ್ದಾರೆ. ಗುಳಿಗ ದೈವದ ರುದ್ರನರ್ತನದ ಕೊರಿಯೋಗ್ರಫಿಯನ್ನು ಸ್ವತಃ ಸೋಪರ್ಕರ್ ಮಾಡಿದ್ದಾರೆ. ಪಂಜುರ್ಲಿಯಾಗಿ ಸರ್ದಾರ್ ಸತ್ಯ ಅಭಿನಯಿಸಿದ್ದಾರೆ. ಈ ಸನ್ನಿವೇಶವನ್ನು ಮಂಗಳೂರಿನ ಸೋಮೇಶ್ವರ ಕಡಲಕಿನಾರೆಯಲ್ಲಿ ನೂರು ಅಡಿಯ ಎರಡು ಕ್ರೇನ್ ಸಹಾಯದಿಂದ 5 ಕ್ಯಾಮೆರಾಗಳ ಮುಖಾಂತರ ಚಿತ್ರೀಕರಿಸಲಾಯಿತು.
‘ಶೂಟಿಂಗ್ ವೇಳೆ ರೌಡಿಗಳ ಗ್ಯಾಂಗ್ ಎರಡು ದಿನ ದಾಳಿ ಮಾಡಿ ಚಿತ್ರತಂಡಕ್ಕೆ ಅಪಾರವಾದ ನಷ್ಟ ಉಂಟುಮಾಡಿತ್ತು. 2ನೇ ದಿನ ನಿರ್ಮಾಪಕ ತ್ರಿವಿಕ್ರಮ ಅವರು ಸುಮಾರು 25 ಜನ ಬೌನ್ಸರ್ಗಳನ್ನು ನೇಮಿಸಿದ್ದರು. ಆದರೆ ಚಿತ್ರೀಕರಣ ಆರಂಭವಾದ ಕೆಲವೇ ನಿಮಿಷಗಳಲ್ಲಿ ಬೆದರಿಕೆಯ ಕರೆಯಿಂದಾಗಿ ಬೌನ್ಸರ್ಗಳೇ ಓಡಿಹೋಗಿ ಮಂಗಳೂರಿನ ಬೌನ್ಸರ್ಗಳು ತಮ್ಮ ಕರ್ತವ್ಯಕ್ಕೆ ಮಸಿಬಳಿದುಕೊಂಡರು’ ಎಂದಿದೆ ಚಿತ್ರತಂಡ.
ಇದನ್ನೂ ಓದಿ: ‘ಕೊರಗಜ್ಜ’ದಲ್ಲಿ 800 ವರ್ಷ ಹಿಂದಿನ ಕಥೆ; 96ನೇ ವಯಸ್ಸಿನಲ್ಲೂ ಸತ್ಯು ಮಾರ್ಗದರ್ಶನ
‘ಕಾರ್ಯಕಾರಿ ನಿರ್ಮಾಪಕ ವಿದ್ಯಾಧರ್ ಶೆಟ್ಟಿ ಅವರು ಪರಿಪರಿಯಾಗಿ ರೌಡಿಗಳ ಮನ ಒಲಿಸಿದರೂ ಕೇಳದ ಗೂಂಡಗಳು ಶೂಟಿಂಗ್ ಸ್ಥಗಿತಗೊಳಿಸಿ ವಿಕೃತಿ ಮೆರೆದಿದ್ದರು. ಆದರೆ ನಿರ್ಮಾಪಕ ತ್ರಿವಿಕ್ರಮ ಸಪಲ್ಯ ಎದೆಗುಂದದೆ, ಪೊಲೀಸರ ಸರ್ಪಗಾವಲಿನಲ್ಲಿ ಮೂರನೇ ಭಾರಿ ಮತ್ತೆ ಅದೇ ಸೋಮೇಶ್ವರ ಕಡಲ ಕಿನಾರೆಯಲ್ಲಿ ಗುಳಿಗ ಹಾಡಿನ ಚಿತ್ರೀಕರಣ ಮುಗಿಸುವಲ್ಲಿ ಯಶಸ್ವಿಯಾದರು’ ಎಂದು ‘ಕೊರಗಜ್ಜ’ ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.