ಜೀ ಮ್ಯೂಸಿಕ್ ಪಾಲಾಯ್ತು ‘ಕೊರಗಜ್ಜ’ ಸಿನಿಮಾದ ಆಡಿಯೋ ಹಕ್ಕುಗಳು
ಪ್ಯಾನ್ ಇಂಡಿಯಾ ಮಟ್ಟದಲ್ಲಿ ‘ಕೊರಗಜ್ಜ’ ಸಿನಿಮಾದ ಪ್ರಚಾರ ಕಾರ್ಯವನ್ನು ಈಗಾಗಲೇ ಮಾಡಲಾಗುತ್ತಿದೆ. ಇತ್ತೀಚೆಗೆ ಅದ್ದೂರಿಯಾಗಿ ಹಾಗೂ ವಿಭಿನ್ನವಾಗಿ ಈ ಸಿನಿಮಾದ ಆಡಿಯೋ ಬಿಡುಗಡೆ ಕಾರ್ಯಕ್ರಮ ನಡೆದಿದೆ. ಮಂಗಳೂರಿನಲ್ಲಿ ನಡೆದ ‘ಕೊರಗಜ್ಜ’ ಸಿನಿಮಾದ ಆಡಿಯೋ ರಿಲೀಸ್ ಇವೆಂಟ್ನ ಪ್ರಮುಖ ವಿವರ ಇಲ್ಲಿದೆ ಓದಿ.

ನಿರೀಕ್ಷೆ ಮೂಡಿಸಿರುವ ‘ಕೊರಗಜ್ಜ’ ಸಿನಿಮಾದ ಆಡಿಯೋ ಬಿಡುಗಡೆ ಮಾಡಲಾಗಿದೆ. ಸುಧೀರ್ ಅತ್ತಾವರ್ ಅವರು ನಿರ್ದೇಶನ ಮಾಡಿರುವ ಈ ಸಿನಿಮಾದ ಆಡಿಯೋ ಹಕ್ಕುಗಳನ್ನು ‘ಜೀ ಮ್ಯೂಸಿಕ್’ (Zee Music) ಸಂಸ್ಥೆ ಪಡೆದುಕೊಂಡಿದೆ. ತ್ರಿವಿಕ್ರಮ ಸಾಪಲ್ಯ ಅವರ ‘ಸಕ್ಸಸ್ ಫಿಲ್ಮ್ಸ್ ’ ಹಾಗೂ ‘ತ್ರಿವಿಕ್ರಮ ಸಿನಿಮಾಸ್’ ಮೂಲಕ ಈ ಚಿತ್ರ ನಿರ್ಮಾಣ ಆಗಿದೆ. ‘ಜೀ ಮ್ಯೂಸಿಕ್’ ಸಂಸ್ಥೆಯು ಕೊರಗಜ್ಜ (Koragajja Movie) ಸಿನಿಮಾದ ಎಲ್ಲಾ ಭಾಷೆಗಳ ಒಟ್ಟು 31 ಹಾಡುಗಳ ರೈಟ್ಸ್ ಪಡೆದುಕೊಂಡಿರುವುದು ವಿಶೇಷ. ಮಂಗಳೂರಿನಲ್ಲಿ ಭಿನ್ನವಾಗಿ ಆಡಿಯೋ ಬಿಡುಗಡೆ ಕಾರ್ಯಕ್ರಮ ಮಾಡಲಾಯಿತು. ಬೇರೆ ಬೇರೆ ರಾಜ್ಯಗಳಿಂದ ಕೂಡ ಮಾಧ್ಯಮದವರು ಆಗಮಿಸಿದ್ದರು.
ಇಡೀ ಚಿತ್ರತಂಡ ಇದರಲ್ಲಿ ಭಾಗಿ ಆಗಿತ್ತು. ಯಕ್ಷಗಾನದ ಥೀಮ್ನಲ್ಲಿ ಕಾರ್ಯಕ್ರಮ ನಡೆಯಿತು. ಗೋಪಿ ಸುಂದರ್ ಸಂಗೀತಕ್ಕೆ ಸುಧೀರ್ ಅತ್ತಾವರ್ ಸಾಹಿತ್ಯ ಒದಗಿಸಿದ್ದಾರೆ. ಹಾಡುಗಳನ್ನು ಕೇಳಿ ಎಲ್ಲರೂ ಮೆಚ್ಚಿಕೊಂಡರು. ಗುಳಿಗ ಪಾತ್ರ ನಿರ್ವಹಿಸಿದ ಹಾಲಿವುಡ್, ಬಾಲಿವುಡ್, ಫ್ರೆಂಚ್ ಸಿನಿಮಾಗಳ ನಟ ಮತ್ತು ಬಾಲ್ ರೂಮ್ ಡಾನ್ಸರ್ ಆಗಿರುವ ಸಂದೀಪ್ ಸೋಪಾರ್ಕರ್ ಅವರು ಈ ವೇಳೆ ಮಾತಾಡಿದರು.
ಶೂಟಿಂಗ್ ಸಮಯದಲ್ಲಿ ತಮ್ಮ ಮೇಲೆ ಆವೇಶ ಬಂದಂತಹ ಅನುಭವ ಆಗಿದ್ದನ್ನು ಅವರು ತೆರೆದಿಟ್ಟರು. ದೆಹಲಿ, ಮುಂಬೈ, ಹೈದರಾಬಾದ್, ಚಂಡೀಗಡ್, ಕೊಚ್ಚಿ, ಬೆಂಗಳೂರು, ಮಂಗಳೂರಿನ ಸುಮಾರು 150ಕ್ಕೂ ಅಧಿಕ ಪತ್ರಕರ್ತರು ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು. ಆ ಮೂಲಕ ಈ ಸಿನಿಮಾಗೆ ದೇಶಾದ್ಯಂತ ಪ್ರಚಾರ ನೀಡಲಾಗುತ್ತಿದೆ. ಎರಡು ಗಂಟೆಗಳಿಗೂ ಅಧಿಕ ಕಾಲ ಸಂವಾದ ನಡೆಯಿತು.
ದೈವಾರಾಧನೆಯ ಮೂಲ ಷಮನಿಸಂ ಎನ್ನುವುದನ್ನು ಪ್ರತಿಪಾದಿಸುತ್ತಾ, ಸೈಬೀರಿಯಾ ದೇಶದಿಂದ ಆರಂಭವಾಗಿರುವ ಷಮನಿಸಂ ಕರಾವಳಿಯ ನಲಿಕೆ ಜನಾಂಗದ ರೀತಿಯಲ್ಲೇ ಸೆಮಿ ಭಾಷೆ ಮಾತನಾಡುವ ಸೆಮಿನೋಯ್ಡ್ಸ್ ಜನಾಂಗದವರು ಆವೇಶಗೊಂಡು, ಮಖಕ್ಕೆ ಹಳದಿ ಬಣ್ಣ, ಬೆನ್ನಿಗೆ ಅಣಿ,(ದೊಡ್ಡ ಕಿರೀಟ) ಧರಿಸಿ ಟ್ರಾನ್ಸ್ ಸ್ಥಿತಿಯಲ್ಲಿ ಭೂತ-ಭವಿಷ್ಯಗಳ ವಿಚಾರ ತಿಳಿಸುವ ಮಾದರಿಯಲ್ಲೇ ಭೂತಕೋಲ ಮತ್ತು ಕೇರಳದ ತೈಯಂ ವಿಕಸನಹೊಂದಿರುವುದಾಗಿ ನಿರ್ದೇಶಕರು ತಿಳಿಸಿದರು.
ಇದನ್ನೂ ಓದಿ: ಕೊರಗಜ್ಜನ ಕಾರ್ಣಿಕಕ್ಕೆ ತಲೆ ಬಾಗಿದ ನಟಿ ಶ್ರುತಿ
ಈ ಕಾರ್ಯಕ್ರಮದ ಶುರುವಿನಲ್ಲಿ ಜೈ ಜಗದೀಶ್ ಹಾಗೂ ವಿಜಯಲಕ್ಷ್ಮಿ ದಂಪತಿಯನ್ನು ಗೌರವಿಸಲಾಯಿತು. ನಿರ್ಮಾಪಕ ತ್ರಿವಿಕ್ರಮ ಅವರು ಮಾತನಾಡಿ, ‘ಇತ್ತೀಚೆಗೆ ಬಿಡುಗಡೆ ಮಾಡಿರುವ 3ಡಿ ಮೋಷನ್ ಪೋಸ್ಟರ್ ಲಕ್ಷಾಂತರ ವ್ಯೂಸ್ ಪಡೆದುಕೊಂಡಿದೆ’ ಎಂದು ಸಂತಸ ವ್ಯಕ್ತಪಡಿಸಿದರು. ಹಿರಿಯ ನಟಿಯರಾದ ಭವ್ಯಾ, ಶ್ರುತಿ ಸೇರಿದಂತೆ ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




