ಕೋಟಾ ಶ್ರೀನಿವಾಸ್ ರಾವ್ ಕನ್ನಡದಲ್ಲಿ ನಟಿಸಿದ್ದ ಸಿನಿಮಾಗಳು ಯಾವುವು ಗೊತ್ತೆ?
Kota Srinivas Roa: ತೆಲುಗು ಚಿತ್ರರಂಗದ ಹಿರಿಯ ಮತ್ತು ದಂತಕತೆ ಎಂದೇ ಕರೆಯಲಾಗುವ ನಟ ಕೋಟಾ ಶ್ರೀನಿವಾಸ್ ರಾವ್ ನಿಧನ ಹೊಂದಿದ್ದಾರೆ. ಶ್ರೀನಿವಾಸ್ ರಾವ್ 750ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕೋಟಾ ಅವರು ಕನ್ನಡದ ಕೆಲ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಕೆಲವು ನೆನಪುಳಿಯುವ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕೋಟಾ ನಟಿಸಿದ್ದ ಕನ್ನಡ ಸಿನಿಮಾಗಳ ಪಟ್ಟಿ ಇಲ್ಲಿದೆ...

ಭಾರತ ಚಿತ್ರರಂಗದ ಖ್ಯಾತ ಪೋಷಕ ನಟರಲ್ಲಿ ಒಬ್ಬರೆನಿಸಿಕೊಂಡಿರುವ ಕೋಟಾ ಶ್ರೀನಿವಾಸ್ ರಾವ್ ಇಂದು (ಭಾನುವಾರ) ಮುಂಜಾನೆ ನಿಧನ ಹೊಂದಿದ್ದಾರೆ. ಅವರಿಗೆ 83 ವರ್ಷ ವಯಸ್ಸಾಗಿತ್ತು. ಕಳೆದ ಕೆಲವು ತಿಂಗಳುಗಳಿಂದಲೂ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಅವರ ದೇಹವೂ ಸಹ ಕೃಷವಾಗಿತ್ತು. ಅವರಿಗೆ ನಡೆಯಲು ಸಹ ಸಾಧ್ಯವಾಗುತ್ತಿರಲಿಲ್ಲ. ಕೋಟಾ ಶ್ರೀನಿವಾಸ್ ರಾವ್ (Kota Srinivas Rao) ತಮ್ಮ ಹೈದರಾಬಾದ್ ನಿವಾಸದಲ್ಲಿ ಕೊನೆ ಉಸಿರೆಳೆದಿದ್ದಾರೆ.
ಕೋಟಾ ಶ್ರೀನಿವಾಸ್ ರಾವ್ 750ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರಷ್ಟು ಹೆಚ್ಚು ಸಂಖ್ಯೆಯ ಸಿನಿಮಾಗಳಲ್ಲಿ ನಟಿಸಿರುವ ನಟರು ಭಾರತದಲ್ಲಿ ಸಿಗುವುದು ಅಪರೂಪದಲ್ಲಿ ಅಪರೂಪ. ತೆಲುಗು ನಟರಾದ ಕೋಟಾ ಶ್ರೀನಿವಾಸ್ ತೆಲುಗು ಮಾತ್ರವೇ ಅಲ್ಲದೆ ಭಾರತದ ಹಲವಾರು ಭಾಷೆಗಳಲ್ಲಿ ಸಿನಿಮಾಗಳಲ್ಲಿ ವಿಲನ್, ಪೋಷಕ ಪಾತ್ರ, ಹಾಸ್ಯ ಪಾತ್ರ ಹೀಗೆ ಇನ್ನೂ ಹಲವು ರೀತಿಯ ಪಾತ್ರಗಳಲ್ಲಿ ನಟಿಸಿದ್ದಾರೆ.
ತೆಲುಗಿನಲ್ಲಿ ಹಲವಾರು ನೆನಪುಳಿಯುವ ಪಾತ್ರಗಳಲ್ಲಿ ಕೋಟಾ ಶ್ರೀನಿವಾಸ್ ರಾವ್ ನಟಿಸಿದ್ದಾರೆ. ಕನ್ನಡದಲ್ಲಿಯೂ ಸಹ ಕೋಟಾ ಶ್ರೀನಿವಾಸ್ ರಾವ್ ಅವರು ಕೆಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕೋಟಾ ಶ್ರೀನಿವಾಸ್ ರಾವ್ ಅವರು ಕನ್ನಡದಲ್ಲಿ ಎಂಟು ಸಿನಿಮಾಗಳಲ್ಲಿ ನಟಿಸಿದ್ದಾರೆ. 1997 ರಿಂದ ತೀರಾ ಇತ್ತೀಚೆಗೆ ಅಂದರೆ 2023 ರ ವರೆಗೆ ಕೋಟಾ ಶ್ರೀನಿವಾಸ್ ರಾವ್ ಅವರು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಸಂಖ್ಯೆ ತುಸು ಕಡಿಮೆಯೇ.
ಇದನ್ನೂ ಓದಿ:ರಾಷ್ಟ್ರರಾಜಕಾರಣಕ್ಕೆ ಹೋಗಿರುವ ಕೋಟಾ ಶ್ರೀನಿವಾಸ್ ಪೂಜಾರಿಗೆ ಸಿಕ್ತು ಮಹತ್ವದ ಹುದ್ದೆ
1997 ರಲ್ಲಿ ಕೋಟಾ ಶ್ರೀನಿವಾಸ್ ರಾವ್ ಅವರು ‘ಲೇಡಿ ಕಮಿಷನರ್’ ಹೆಸರಿನ ಸಿನಿಮಾನಲ್ಲಿ ನಟಿಸಿದ್ದರು. ಅದಾದ ಬಳಿಕ 2003 ರಲ್ಲಿ ಬಿಡುಗಡೆ ಆದ ಉಪೇಂದ್ರ ನಟಿಸಿದ್ದ ‘ರಕ್ತ ಕಣ್ಣೀರು’ ಸಿನಿಮಾದ ಪ್ರಮುಖ ಪಾತ್ರದಲ್ಲಿ ಕೋಟಾ ನಟಿಸಿದ್ದರು. 2004 ರಲ್ಲಿ ತೆರೆಗೆ ಬಂದ ಆಗಿನ ಕಾಲದ ಭಾರಿ ಬಜೆಟ್ ಸಿನಿಮಾ ‘ಲವ್’ನಲ್ಲಿ ಕೋಟಾ ವಿಲನ್ ಆಗಿ ನಟಿಸಿದ್ದರು. 2005 ರಲ್ಲಿ ಬಂದ ಪುನೀತ್ ರಾಜ್ಕುಮಾರ್ ನಟನೆಯ ‘ನಮ್ಮ ಬಸವ’ ಸಿನಿಮಾನಲ್ಲಿ ಕೋಟಾ ಶ್ರೀನಿವಾಸ್ ಅವರ ಪಶುಪತಿ ಪಾತ್ರವನ್ನು ಮರೆಯುವುದುಂಟೆ. ಅದೇ ವರ್ಷ ಸುದೀಪ್ ನಟನೆಯ ‘ನಮ್ಮಣ್ಣ’ ಸಿನಿಮಾನಲ್ಲಿ ಕೋಟಾ ಶ್ರೀನಿವಾಸ್ ರಾವ್ ನಟಿಸಿದರು.
2007 ರಲ್ಲಿ ಉಪೇಂದ್ರ ಮತ್ತು ಜೆನ್ನಿಫರ್ ಕೊತ್ವಾಲ್ ನಟನೆಯ ‘ಮಸ್ತಿ’ ಸಿನಿಮಾನಲ್ಲಿ ನಟಿಸಿದರು. ಅದಾದ ಬಳಿಕ 2011 ರಲ್ಲಿ ಉಪೇಂದ್ರ ನಟಿಸಿದ್ದ ‘ಶ್ರೀಮತಿ’ ಮತ್ತು 2023 ರಲ್ಲಿ ಮತ್ತೆ ಉಪೇಂದ್ರ ನಟನೆಯ ‘ಕಬ್ಜ’ ಸಿನಿಮಾನಲ್ಲಿ ಕೋಟಾ ಶ್ರೀನಿವಾಸ ರಾವ್ ನಟಿಸಿದರು. ‘ಕಬ್ಜ’ ಕೋಟಾ ಕನ್ನಡದಲ್ಲಿ ನಟಿಸಿದ ಕೊನೆಯ ಸಿನಿಮಾ. ವಿಶೇಷವೆಂದರೆ ಕೋಟಾ ಅವರು ಎಂಟು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆ ಎಂಟರಲ್ಲಿ ನಾಲ್ಕು ಸಿನಿಮಾಗಳಲ್ಲಿ ಉಪೇಂದ್ರ ನಾಯಕ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




