‘ಕೌಸಲ್ಯ ಸುಪ್ರಜಾ ರಾಮ’ ಚಿತ್ರಕ್ಕೆ ಅನ್ಯಾಯ; ಪರಭಾಷೆಗೆ ಮಣೆ ಹಾಕಿದ ಮಲ್ಟಿಪ್ಲೆಕ್ಸ್​ ವಿರುದ್ಧ ಚಿತ್ರತಂಡದ ಆಕ್ರೋಶ

|

Updated on: Aug 07, 2023 | 7:21 PM

Kousalya Supraja Rama: ಆಗಸ್ಟ್​ 2ನೇ ವಾರದಲ್ಲಿ ತಮಿಳು ಮತ್ತು ತೆಲುಗಿನ ಸ್ಟಾರ್​ ಸಿನಿಮಾಗಳು ಬಿಡುಗಡೆ ಆಗಲಿವೆ. ಪರಭಾಷೆಯ ಈ ಚಿತ್ರಗಳಿಂದ ಕನ್ನಡದ ‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾಗೆ ಸೂಕ್ತ ರೀತಿಯಲ್ಲಿ ಶೋಗಳು ಸಿಗದೇ ತೊಂದರೆ ಆಗುವ ಸಾಧ್ಯತೆ ದಟ್ಟವಾಗಿದೆ. ಈ ಸಮಸ್ಯೆಗೆ ಪರಿಹಾರ ಕೋರಿ ವಾಣಿಜ್ಯ ಮಂಡಳಿಗೆ ಪತ್ರ ಬರೆಯಲಾಗಿದೆ.

‘ಕೌಸಲ್ಯ ಸುಪ್ರಜಾ ರಾಮ’ ಚಿತ್ರಕ್ಕೆ ಅನ್ಯಾಯ; ಪರಭಾಷೆಗೆ ಮಣೆ ಹಾಕಿದ ಮಲ್ಟಿಪ್ಲೆಕ್ಸ್​ ವಿರುದ್ಧ ಚಿತ್ರತಂಡದ ಆಕ್ರೋಶ
‘ಕೌಸಲ್ಯ ಸುಪ್ರಜಾ ರಾಮ’ ಪೋಸ್ಟರ್​, ನಿರ್ದೇಶಕ ಶಶಾಂಕ್​
Follow us on

ಕನ್ನಡದ ಸಿನಿಮಾಗಳಿಗೆ ಸರಿಯಾದ ರೀತಿಯಲ್ಲಿ ಚಿತ್ರಮಂದಿರಗಳು ಸಿಗುವುದಿಲ್ಲ ಎಂಬ ದೂರು ಮೊದಲಿನಿಂದಲೂ ಕೇಳಿಬರುತ್ತಲೇ ಇದೆ. ಇತ್ತೀಚೆಗೆ ಕನ್ನಡದ ‘ಕೌಸಲ್ಯ ಸುಪ್ರಜಾ ರಾಮ’ (Kousalya Supraja Rama), ‘ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ’, ‘ಆಚಾರ್​ ಆ್ಯಂಡ್​ ಕೋ’ ಸಿನಿಮಾಗಳು ಉತ್ತಮವಾಗಿ ಪ್ರದರ್ಶನ ಕಾಣುತ್ತಿವೆ. ಆದರೆ ಈಗ ಪರಭಾಷಾ ಸಿನಿಮಾಗಳ ಆಗಮನದಿಂದ ಈ ಚಿತ್ರಗಳಿಗೆ ಚಿತ್ರಮಂದಿರದ ಕೊರತೆ ಎದುರಾಗುವ ಸಾಧ್ಯತೆ ದಟ್ಟವಾಗಿದೆ. ಈ ಬಗ್ಗೆ ‘ಕೌಸಲ್ಯ ಸುಪ್ರಜಾ ರಾಮ’ ಚಿತ್ರತಂಡ ಧ್ವನಿ ಎತ್ತಿದೆ. ಕರ್ನಾಟಕದ ಮಲ್ಟಿಪ್ಲೆಕ್ಸ್​ಗಳಲ್ಲಿ ಕನ್ನಡದ ಸಿನಿಮಾಗಳ (Kannada Cinema) ಬದಲಿಗೆ ಪರಭಾಷೆಯ ಚಿತ್ರಗಳಿಗೆ ಮಣೆ ಹಾಕುವ ಕೆಲಸ ಆಗುತ್ತಿದೆ ಎಂದು ಆರೋಪಿಸಲಾಗಿದೆ. ಈ ಕುರಿತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ (Karnataka Film Chamber of Commerce) ‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾ ತಂಡ ಮತ್ತು ವಿತರಣಾ ಸಂಸ್ಥೆಯಾದ ‘ಕೆವಿಎನ್​ ಪ್ರೊಡಕ್ಷನ್ಸ್​’ ಕಡೆಯಿಂದ ಪತ್ರ ಬರೆಯಲಾಗಿದೆ.

ಜುಲೈ 28ರಂದು ‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾ ಬಿಡುಗಡೆ ಆಯಿತು. ಈ ಸಿನಿಮಾದಲ್ಲಿ ಡಾರ್ಲಿಂಗ್​ ಕೃಷ್ಣ, ಬೃಂದಾ ಆಚಾರ್ಯ, ಮಿಲನಾ ನಾಗರಾಜ್​ ಅವರು ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ರಂಗಾಯಣ ರಘು, ಸುಧಾ ಬೆಳವಾಡಿ, ನಾಗಭೂಷಣ, ಅಚ್ಯುತ್​ ಕುಮಾರ್​, ಸುಜಿತ್​ ಮುಂತಾದವರು ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಶಶಾಂಕ್​ ಅವರ ನಿರ್ದೇಶನದ ಈ ಸಿನಿಮಾಗೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗಿದೆ. ವಿಶೇಷವಾಗಿ ಕೌಟುಂಬಿಕ ಪ್ರೇಕ್ಷಕರು ಮನಸೋತಿದ್ದಾರೆ. ಆದರೆ ಬಿಡುಗಡೆಯಾಗಿ ಕೆಲವೇ ದಿನ ಕಳೆಯುವುದರೊಳಗೆ ಮಲ್ಟಿಪ್ಲೆಕ್ಸ್​ಗಳಲ್ಲಿ ಸರಿಯಾಗಿ ಶೋ ಸಿಗುತ್ತಿಲ್ಲ ಎಂದು ಚಿತ್ರತಂಡದವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ‘ಕೌಸಲ್ಯ ಸುಪ್ರಜಾ ರಾಮ’ ಸೂಪರ್​ ಹಿಟ್​; ಗೆದ್ದ ಖುಷಿಯಲ್ಲಿ ಏನ್​ ಹೇಳ್ತಾರೆ ಚಿತ್ರತಂಡದವರು?

ಆಗಸ್ಟ್​ ಎರಡನೇ ವಾರದಲ್ಲಿ ತಮಿಳು ಮತ್ತು ತೆಲುಗಿನಲ್ಲಿ ಸ್ಟಾರ್​ ಸಿನಿಮಾಗಳು ಬಿಡುಗಡೆ ಆಗಲಿವೆ. ಆಗಸ್ಟ್​ 10ರಂದು ರಜನಿಕಾಂತ್​ ನಟನೆಯ ‘ಜೈಲರ್​’ ಸಿನಿಮಾ ತೆರೆಕಾಣಲಿದೆ. ತಮಿಳಿನ ಈ ಸಿನಿಮಾಗೆ ನೆಲ್ಸನ್​ ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಬುಕಿಂಗ್​ ಓಪನ್​ ಆಗಿದೆ. ಆಗಸ್ಟ್​ 11ರಂದು ತೆಲುಗಿನ ‘ಭೋಲಾ ಶಂಕರ್​’ ಚಿತ್ರ ರಿಲೀಸ್​ ಆಗಲಿದೆ. ಈ ಸಿನಿಮಾದಲ್ಲಿ ‘ಮೆಗಾ ಸ್ಟಾರ್’​ ಚಿರಂಜೀವಿ ನಟಿಸಿದ್ದಾರೆ. ಪರಭಾಷೆಯ ಈ ಚಿತ್ರಗಳಿಂದ ಕನ್ನಡದ ‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾಗೆ ಶೋ ಸಿಗದೇ ತೊಂದರೆ ಆಗುವ ಸಾಧ್ಯತೆ ದಟ್ಟವಾಗಿದೆ. ಇದಕ್ಕೆ ಪರಿಹಾರ ಕೋರಿ ವಾಣಿಜ್ಯ ಮಂಡಳಿಗೆ ಪತ್ರ ಬರೆಯಲಾಗಿದೆ.

ಇದನ್ನೂ ಓದಿ: ‘ಕೌಸಲ್ಯ ಸುಪ್ರಜಾ ರಾಮ’ ಚಿತ್ರಕ್ಕೆ ಟಿಎನ್​ ಸೀತಾರಾಮ್​ ಮೆಚ್ಚುಗೆ; ಸಾಹಿತಿಗಳಿಗೆ ಇಷ್ಟವಾಯ್ತು ಶಶಾಂಕ್​ ಸಿನಿಮಾ

‘ಈ ಪರಭಾಷಾ ಧೋರಣೆಯ ವಿರುದ್ಧ ಮಲ್ಟಿಪ್ಲೆಕ್ಸ್​ ಆಡಳಿತ ಮಂಡಳಿಯೊಂದಿಗೆ ಮಾತನಾಡಿ, ಕನ್ನಡದಲ್ಲಿ ಕನ್ನಡ ಚಿತ್ರಗಳಿಗೆ ಮೊದಲ ಆದ್ಯತೆ ಎಂಬ ವಿಷಯವನ್ನು ಅವರಿಗೆ ಮನವರಿಕೆ ಮಾಡಿಕೊಟ್ಟು ನಮ್ಮ ಚಿತ್ರಕ್ಕೆ ನ್ಯಾಯ ಕೊಡಿಸುವಂತೆ ಈ ಮೂಲಕ ನಿಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇವೆ’ ಎಂದು ‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾ ತಂಡದವರು ಫಿಲ್ಮ್​ ಚೇಂಬರ್​ಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.