ಕನ್ನಡ ಚಿತ್ರರಂಗದಲ್ಲಿ (Sandalwood) ಹೊಸ ಪ್ರಯತ್ನಗಳನ್ನು ಮಾಡುತ್ತಿರುವ ನಿರ್ಮಾಣ ಸಂಸ್ಥೆ ಕೆಆರ್ಜಿ ಸ್ಟುಡಿಯೋಸ್. ಸಿನಿಮಾ ನಿರ್ಮಾಣದ ಜೊತೆಗೆ ಸಿನಿಮಾ ವಿತರಣೆಯನ್ನೂ ಮಾಡುತ್ತಿರುವ ಈ ಸಂಸ್ಥೆ ಈಗಾಗಲೇ ಕೆಲವು ಒಳ್ಳೆಯ ಸಿನಿಮಾಗಳನ್ನು ಕನ್ನಡಕ್ಕೆ ನೀಡಿದೆ, ನೀಡುವ ಹಾದಿಯಲ್ಲಿದೆ. ಇದೀಗ ಕೆಆರ್ಜಿ ಸ್ಟುಡಿಯೋಸ್ ಪರಭಾಷೆಗೂ ಕಾಲಿಟ್ಟಿದ್ದು, ಪರಭಾಷೆಯ ಸಿನಿಮಾ ಒಂದರ ಮೇಲೆ ಬಂಡವಾಳ ತೊಡಗಿಸುತ್ತಿದೆ.
‘ಸೂಫಿಯುಂ ಸುಜಾತಯುಂ‘, ‘ಹೋಮ್‘, ‘ಅಂಗಮಲೇ ಬಾಯ್ಸ್‘ ನಂತಹ ಯಶಸ್ವಿ ಮಲಯಾಳಂ ಚಿತ್ರಗಳನ್ನು ನೀಡಿರುವ ಫ್ರೈಡೇ ಫಿಲಂ ಹೌಸ್ ಜೊತೆಗೆ ಕೈ ಜೋಡಿಸಿರುವ ಕೆಆರ್ಜಿ ‘ಪಡಕ್ಕಲಂ’ ಎಂಬ ಮಲಯಾಳಂ ಸಿನಿಮಾ ನಿರ್ಮಾಣ ಮಾಡುತ್ತಿದೆ. ಈ ಸಿನಿಮಾಕ್ಕೆ ಚಿತ್ರಕತೆಯನ್ನು ಮನು ಸ್ವರಾಜ್ ಬರೆದಿದ್ದು ನಿರ್ದೇಶನವನ್ನೂ ಅವರೇ ಮಾಡುತ್ತಿದ್ದಾರೆ. ಬಾಸಿಲ್ ಜೋಸೆಫ್ ಅಂಥಹಾ ಖ್ಯಾತ ನಿರ್ದೇಶಕರ ಬಳಿ ಸಹಾಯಕ ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿರುವ ಖ್ಯಾತಿ ಮನು ಸ್ವರಾಜ್ ಅವರಿಗಿದೆ.
ಇದನ್ನೂ ಓದಿ:ಗುಣಮಟ್ಟದ ಭಿನ್ನ ಕತೆಗಳಿಗಾಗಿ ಟಿವಿಎಫ್ ಜೊತೆ ಕೆಆರ್ಜಿ ಸಹಭಾಗಿತ್ವ
ಕೆ ಆರ್ ಜಿ ಸ್ಟುಡಿಯೋಸ್ ಮತ್ತು ಫ್ರೈಡೇ ಫಿಲಮ್ ಹೌಸ್ ಸಹಯೋಗದಲ್ಲಿ ಈಗಾಗಲೇ ಮೂಡಿ ಬಂದಿರುವ ‘ಅಬ್ಬಬ್ಬ’ ಹಾಸ್ಯಭರಿತ ಕನ್ನಡ ಚಿತ್ರ, ‘ವಾಲಟಿ’ ಎಂಬ ಮಲಯಾಳಂ ಚಿತ್ರದ ಕನ್ನಡ ಡಬ್ಬಿಂಗ್ ಹಾಗೂ ಬಿಡುಗಡೆ ಎಲ್ಲೆಡೆ ಸದ್ದು ಮಾಡಿತ್ತು. ಇನ್ನು ಹೆಸರಾಂತ ಹಿಂದಿ ಚಿತ್ರ ನಿರ್ಮಾಣ ಸಂಸ್ಥೆಯಾದ ಟಿ.ವಿ.ಎಫ್ ಜೊತೆಗೆ ಕೈಜೋಡಿಸಿರುವ ಕೆಆರ್ಜಿ ‘ಪೌಡರ್’ ಎಂಬ ಕನ್ನಡ ಸಿನಿಮಾವನ್ನು ನಿರ್ಮಿಸುತ್ತಿದ್ದು ಶೀಘ್ರವೇ ಆ ಸಿನಿಮಾ ಸಹ ಬಿಡುಗಡೆ ಆಗಲಿದೆ. ‘ಪೌಡರ್’ ಸಿನಿಮಾದಲ್ಲಿ ದಿಗಂತ್ ಮಂಚಾಲೆ ನಾಯಕರಾಗಿ ನಟಿಸುತ್ತಿದ್ದಾರೆ. ಅಷ್ಟೇ ಅಲ್ಲದೆ, ‘ಬ್ಯಾಂಗಳೂರು ಡೇಸ್’, ‘ಉಸ್ತಾದ್ ಹೊಟೇಲ್’ ಸಿನಿಮಾಗಳನ್ನು ನಿರ್ದೇಶಿಸಿರುವ ಅಂಜಲಿ ಮೆನನ್ ನಿರ್ದೇಶನದಲ್ಲಿ ತಮಿಳು ಚಿತ್ರವೊಂದನ್ನು ನಿರ್ಮಿಸುವ ಮೂಲಕ ತಮಿಳು ಚಿತ್ರರಂಗಕ್ಕೂ ಕಾಲಿಡಲಿದೆ ಕೆಆರ್ಜಿ.
ಇನ್ನು ಇಂತಹ ಅನೇಕ ಹೊಸ ಕಥಾ ವಸ್ತುವನ್ನು ಚಿತ್ರರಂಗಕ್ಕೆ ಪರಿಚಯಿಸುವ ಪ್ರಯತ್ನವನ್ನು ಕೆಆರ್ಜಿ ಸ್ಟುಡಿಯೋಸ್ ಮಾಡುತ್ತಿದೆ. ಅಲ್ಲದೆ ಪರಭಾಷೆಯ ಹಾಗೂ ಕನ್ನಡದ ಕೆಲವು ಪ್ರತಿಭಾವಂತ ಬರಹಗಾರರನ್ನು, ತಂತ್ರಜ್ಞರನ್ನು ಒಟ್ಟಿಗೆ ಸೇರಿಸುವ ಕೆಲಸವನ್ನು ಸಹ ಕೆಆರ್ಜಿ ಮಾಡುತ್ತಿದೆ. ಈ ಮೂಲಕ ಕನ್ನಡ ಚಿತ್ರಗಳ ಮಾರ್ಕೆಟಿಂಗ್ ವ್ಯಾಪ್ತಿಯನ್ನು ಹೊರ ರಾಜ್ಯಗಳಲ್ಲಿ ವಿಸ್ತರಿಸುವ ಪ್ರಯತ್ನ ಮಾಡುತ್ತಿದೆ. ಸದ್ಯಕ್ಕೆ ಕೆಆರ್ ಜಿ ಬ್ಯಾನರ್ ನಲ್ಲಿ ‘ಪೌಡರ್’, ‘ಉತ್ತರಕಾಂಡ’, ‘ಕಿರಿಕೆಟ್ 11’, ‘ಕೆ.ಕೆ’ ಮುಂತಾದ ಸಿನಿಮಾಗಳು ತಯಾರಾಗುತ್ತಿವೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ