ಗುಣಮಟ್ಟದ ಭಿನ್ನ ಕತೆಗಳಿಗಾಗಿ ಟಿವಿಎಫ್ ಜೊತೆ ಕೆಆರ್‌ಜಿ ಸಹಭಾಗಿತ್ವ
KRG-TVF: ಉತ್ತಮ ಕತೆ, ಸಿನಿಮಾ, ವೆಬ್ ಸರಣಿಗಳನ್ನು ನಿರ್ಮಿಸುವ ಉಮೇದಿನಿಂದ ಕೆಆರ್‌ಜಿ ಸ್ಟುಡಿಯೋಸ್, ಟಿವಿಎಫ್ ಜೊತೆ ಕೈಜೋಡಿಸಿದೆ.

ಕಾರ್ತಿಕ್ ಗೌಡ (Karthik Gowda) ಹಾಗೂ ಯೋಗಿ ಜಿ ಗೌಡ (Yogi G Gowda) ನೇತೃತ್ವದ ಕೆಆರ್‌ಜಿ (KRG) ಕಡಿಮೆ ಅವಧಿಯಲ್ಲಿಯೇ ಸಿನಿಮಾ ನಿರ್ಮಾಣ ಹಾಗೂ ಸಿನಿಮಾ ವಿತರಣೆ ವಿಭಾಗದಲ್ಲಿ ಹೆಸರುಗಳಿಸಿಕೊಂಡಿದೆ. ಭಿನ್ನ, ಗುಣಮಟ್ಟದ ಸಿನಿಮಾಗಳನ್ನು ಕನ್ನಡದಲ್ಲಿ ನಿರ್ಮಿಸಬೇಕೆಂಬ ತುಡಿತ ಹೊಂದಿರುವ ಕೆಆರ್‌ಜಿ ಇದೀಗ ಈಗಾಗಲೇ ತಮ್ಮ ಕಂಟೆಂಟ್ನಿಂದ ಸದ್ದು ಮಾಡುತ್ತಿರುವ ಟಿವಿಎಫ್ ಜೊತೆಗೆ ಕೈಜೋಡಿಸಿದ್ದು, ಹೊಸ ಸಾಧ್ಯತೆಗಳ ಬಗ್ಗೆ ಕುತೂಹಲ ಮೂಡುವಂತೆ ಮಾಡಿದೆ.
ಪ್ರಾದೇಶಿಕ ಭಾಷೆಗಳಲ್ಲಿ ಮನೊರಂಜನಾ ಕಂಟೆಂಟ್ ಕ್ರಿಯೇಟ್ ಮಾಡುವ ಉಮೇದಿನಲ್ಲಿರುವ ಟಿವಿಎಫ್ ಮೋಷನ್ ಪಿಕ್ಚರ್ಸ್‌ನೊಂದಿಗೆ ಕೆಆರ್ ಜಿ ಸ್ಟುಡಿಯೋಸ್ ಕೈ ಜೋಡಿಸಿದೆ. ಎರಡೂ ಸಂಸ್ಥೆಗಳು ಒಟ್ಟಿಗೆ ಕೆಲಸ ಮಾಡುತ್ತಾ ಮುಂದಕ್ಕೆ ಗುಣಮಟ್ಟದ ಕಥೆಗಳನ್ನು ಸಿನಿಮಾಗಳನ್ನು ಪ್ರೇಕ್ಷಕರಿಗೆ ಒದಗಿಸಲು ತಯಾರಾಗಿವೆ. ಸಿನಿಮಾ ರಂಗದಲ್ಲಿ ಹೊಸ ಧ್ವನಿ, ತಾಜಾತನ ಹಾಗೂ ಭಿನ್ನ ರೀತಿಯಲ್ಲಿ ಕಥೆ ಪ್ರಸ್ತುತ ಪಡಿಸುವಿಕೆ ಎರಡೂ ಸಂಸ್ಥೆಗಳ ಗುರಿ ಆಗಿದೆ.
ಈ ಸಹಭಾಗಿತ್ವದ ಬಗ್ಗೆ ಮಾತನಾಡಿರುವ ಕೆಆರ್‌ಜಿ ಸ್ಟುಡಿಯೋಸ್‌ನ ಕಾರ್ತಿಕ್ ಗೌಡ “ಕನ್ನಡ ಮತ್ತು ಇತರ ಪ್ರಾದೇಶಿಕ ಭಾಷೆಯ ಚಿತ್ರರಂಗಗಳಿಗೆ ಮೌಲ್ಯಯುತವಾದ ಕೊಡುಗೆ ಕೊಡುವ ಉದ್ದೇಶದಿಂದ ಕೆಆರ್‌ಜಿಯನ್ನು 6 ವರ್ಷಗಳ ಹಿಂದೆ ನಾವು ಪ್ರಾರಂಭಿಸಿದೆವು. ವ್ಯಾಪಕ ವಿತರಣೆ, ಉತ್ತಮವಾದ ಕತೆಗಳ ಕಡೆಗೆ ನಿರಂತರವಾಗಿ ನಾವು ಗಮನ ನೀಡುತ್ತಾ ಬಂದಿದ್ದೇವೆ. ಭಿನ್ನ ರೀತಿಯ ಕಥೆಗಳು ಮತ್ತು ಕಥೆಗಾರರನ್ನು ಪ್ರೋತ್ಸಾಹಿಸುವುದನ್ನು ನಮ್ಮ ಸಂಸ್ಥೆ ಮಾಡುತ್ತಾ ಬಂದಿದೆ. TVF ನೊಂದಿಗೆ ನಮ್ಮ ಈ ಸಹಭಾಗಿತ್ವವು ಬಲವಾದ ಮತ್ತು ವಿಶಿಷ್ಟವಾದ ಗುಣಮಟ್ಟದ ಕಥೆ ಪ್ರಸ್ತುತ ಪಡಿಸುವ ಗುರಿಯನ್ನು ಹೊಂದಿದೆ. ಮೀಡಿಯಾ ಮತ್ತು ಮನೊರಂಜನಾ ಕ್ಷೇತ್ರದಲ್ಲಿ ಅನುಭವಿ ಆಗಿರುವ ವಿಜಯ್ ಸುಬ್ರಮಣ್ಯಂ ಅವರು ನಮ್ಮ ಈ ಉದ್ದೇಶವನ್ನು ಬೆಂಬಲಿಸಿ ನಮ್ಮೊಂದಿಗೆ ಕೈಜೋಡಿಸಿದರು” ಎಂದಿದ್ದಾರೆ.
ಇದನ್ನೂ ಓದಿ:‘ಕೆಜಿಎಫ್ 3’ ಸದ್ಯಕ್ಕಿಲ್ಲ: ಸ್ಪಷ್ಟನೆ ನೀಡಿದ ಹೊಂಬಾಳೆ ಫಿಲ್ಮ್ಸ್ನ ಕಾರ್ತಿಕ್ ಗೌಡ; ಅಂತೆ-ಕಂತೆಗಳಿಗೆ ಬ್ರೇಕ್
ಟಿವಿಎಫ್ ಸಂಸ್ಥಾಪಕರಾದ ಅರುಣಭ್ ಕುಮಾರ್ ಮಾತನಾಡಿ, “ಭಾರತದಾದ್ಯಂತ ಪ್ರಾದೇಶಿಕ ಭಾಷೆಗಳಲ್ಲಿ ಭಿನ್ನ ಕತೆಗಳನ್ನು ಹೇಳುವ ಉತ್ಸಾಹದೊಂದಿದೆ ಕೆ ಆರ್ ಜಿ ಜೊತೆ ಕೈ ಜೋಡಿಸಿದ್ದೇವೆ. ರತ್ನನ್ ಪ್ರಪಂಚ, ಗುರುದೇವ್ ಹೊಯ್ಸಳ ದಂತಹ ಸೂಪರ್ ಹಿಟ್ ಚಿತ್ರಗಳೊಂದಿಗೆ ಒಳ್ಳೆಯ ಸಂದೇಶಗಳನ್ನು ಕೊಟ್ಟ ಸ್ಟುಡಿಯೋ ಜೊತೆಗೆ ಸಹಭಾಗಿಗಳಾಗಲು ಖುಷಿ ಇದೆ. ಕನ್ನಡ, ತಮಿಳು, ಮಲಯಾಳಂ ಭಾಷೆಗಳಲ್ಲಿ ಒಳ್ಳೊಳ್ಳೆ ಚಲನಚಿತ್ರಗಳನ್ನು ಮಾಡಲು ಮತ್ತು ಹೆಚ್ಚು ವೈವಿಧ್ಯಮಯ ಕಥೆಗಳನ್ನು ಹೇಳಲು ನಾವು ಸದಾ ಪ್ರಯತ್ನಿಸುತ್ತೇವೆ. ಲೈಟ್ಸ್, ಕ್ಯಾಮೆರಾ, ಎಕ್ಸ್ಪೆರಿಮೆಂಟ್ ನಮ್ಮ ಧ್ಯೇಯ” ಎಂದಿದ್ದಾರೆ.
ಟಿವಿಎಫ್ ಅಧ್ಯಕ್ಷ ವಿಜಯ್ ಕೋಶಿ, “ಟಿವಿಎಫ್ ಆರಂಭದಿಂದಲೂ ಪ್ರೇಕ್ಷಕರ ಮನ ಮುಟ್ಟುವ ನಿಜ ಕಥೆಗಳನ್ನು ಹೇಳುತ್ತಾ ಬಂದಿದೆ. ನಮ್ಮಂತೆಯೇ ಜನರ ಸದಭಿರುಚಿ ಅರಿತು ಇದುವರೆಗೂ ಒಳ್ಳೆಯ ಸಂದೇಶ ಹೊಂದಿರುವ ಸಿನೆಮಾಗಳನ್ನು ಕೆಆರ್‌ಜಿ ಸ್ಟುಡಿಯೋಸ್ ಮಾಡಿಕೊಂಡು ಬಂದಿದ್ದು ಅದರೊಟ್ಟಿಗೆ ಕೈ ಜೋಡಿಸಲು ಖುಷಿ ಇದೆ” ಎಂದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ