ಡಾಲಿ ಧನಂಜಯ ನಟನೆಯ ‘ಕೋಟಿ’ ಸಿನಿಮಾ ಬಿಡುಗಡೆ ಮಾಡಲಿರುವ ‘ಕೆಆರ್​ಜಿ’

|

Updated on: May 31, 2024 | 7:23 PM

ಭಿನ್ನ ಕಥಾಹಂದರ ಇರುವ ‘ಕೋಟಿ’ ಸಿನಿಮಾವನ್ನು ‘ಕೆಆರ್​ಜಿ’ ತಂಡದವರು ವೀಕ್ಷಿಸಿದ್ದಾರೆ. 250ಕ್ಕೂ ಅಧಿಕ ಕಡೆಗಳಲ್ಲಿ ತೆರೆಕಾಣಿಸಲು ಸಿದ್ಧತೆ ನಡೆದಿದೆ. ಡಾಲಿ ಧನಂಜಯ, ಮೋಕ್ಷಾ ಕುಶಾಲ್​, ರಂಗಾಯಣ ರಘು, ರಮೇಶ್​ ಇಂದಿರಾ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದು, ಪರಮ್​ ನಿರ್ದೇಶನ ಮಾಡಿದ್ದಾರೆ. ಜೂ.14ಕ್ಕೆ ‘ಕೋಟಿ’ ರಿಲೀಸ್​ ಆಗುತ್ತಿದೆ.

ಡಾಲಿ ಧನಂಜಯ ನಟನೆಯ ‘ಕೋಟಿ’ ಸಿನಿಮಾ ಬಿಡುಗಡೆ ಮಾಡಲಿರುವ ‘ಕೆಆರ್​ಜಿ’
ಡಾಲಿ ಧನಂಜಯ
Follow us on

ಖ್ಯಾತ ನಟ ಡಾಲಿ ಧನಂಜಯ್​ (Daali Dhananjaya) ಅಭಿನಯದ ‘ಕೋಟಿ’ ಸಿನಿಮಾ (Kotee Movie) ಬಿಡುಗಡೆಗೆ ಸಜ್ಜಾಗಿದೆ. ಸಿನಿಮಾದ ರಿಲೀಸ್​ಗೆ ಇನ್ನು ಕೆಲವೇ ದಿನಗಳು ಬಾಕಿ ಇದೆ ಎನ್ನವಾಗ ಕ್ರೇಜ್ ಹೆಚ್ಚಾಗಿದೆ. ಇದರ ಜೊತೆಗೆ ‘ಕೋಟಿ’ ಚಿತ್ರತಂಡದವರು ಪ್ರತಿ ದಿನ ಒಂದಿಲ್ಲೊಂದು ಇಂಟರೆಸ್ಟಿಂಗ್​ ಸುದ್ದಿಗಳನ್ನು ನೀಡುತ್ತಿದ್ದಾರೆ. ಈಗ ಇನ್ನೊಂದು ನ್ಯೂಸ್​ ಹೊರಬಿದ್ದಿದೆ. ‘ಕೋಟಿ’ ಸಿನಿಮಾದ ವಿತರಣಾ ಹಕ್ಕುಗಳನ್ನು ‘ಕೆಆರ್​ಜಿ ಸ್ಟುಡಿಯೋಸ್​’ (KRG Studios) ಪಡೆದುಕೊಂಡಿದೆ. ಈ ಸಿನಿಮಾಗೆ ಪರಮ್​ ನಿರ್ದೇಶನ ಮಾಡಿದ್ದಾರೆ. ಜೂನ್​ 14ರಂದು ಈ ಸಿನಿಮಾ ಬಿಡುಗಡೆ ಆಗಲಿದೆ.

ಸ್ಯಾಂಡಲ್​ವುಡ್​ನಲ್ಲಿ ಸಿನಿಮಾಗಳ ನಿರ್ಮಾಣ ಮತ್ತು ವಿತರಣೆಯಲ್ಲಿ ‘ಕೆಆರ್​ಜಿ’ ಸಂಸ್ಥೆ ಖ್ಯಾತಿ ಗಳಿಸಿದೆ. ‘ಕೆಜಿಎಫ್: ಚಾಪ್ಟರ್​ 1’, ‘ಕೆಜಿಎಫ್: ಚಾಪ್ಟರ್​ 2’, ‘ಕಾಂತಾರ’, ‘ಪೈಲ್ವಾನ್’, ‘ಚಾರ್ಲಿ 777’, ‘ಬಡವ ರಾಸ್ಕಲ್’, ‘12th ಫೇಲ್’, ‘ಹನುಮಾನ್’ ಮುಂತಾದ ಸೂಪರ್ ಹಿಟ್ ಸಿನಿಮಾಗಳನ್ನು ವಿತರಣೆ ಮಾಡಿದ್ದು ಇದೇ ಸಂಸ್ಥೆ. ಈವರೆಗೆ 100ಕ್ಕೂ ಅಧಿಕ ಸಿನಿಮಾಗಳನ್ನು ‘ಕೆಆರ್​ಜಿ’ ಬಿಡುಗಡೆ ಮಾಡಿದೆ.

ಡಿಫರೆಂಟ್​ ಕಥಾಹಂದರ ಹೊಂದಿರುವ ‘ಕೋಟಿ’ ಚಿತ್ರವನ್ನು ‘ಕೆಆರ್​ಜಿ’ ತಂಡದವರು ವೀಕ್ಷಿಸಿದ್ದಾರೆ. ‘ಎಮೋಷನಲ್​ ಎಳೆ ಇರುವ ಈ ಸಿನಿಮಾ ಐಪಿಎಲ್ ಮತ್ತು ಲೋಕಸಭಾ ಚುನಾವಣೆಯ ಬಳಿಕ ಇಡೀ ಕೌಟುಂಬಿಕ ಪ್ರೇಕ್ಷಕರಿಗೆ ಸೂಕ್ತ ಆಗುವಂತಹ ಮನರಂಜನೆ ನೀಡಲಿದೆ’ ಎಂದು ತಂಡದವರು ಅಭಿಪ್ರಾಯಪಟ್ಟಿದ್ದಾರೆ. 250ಕ್ಕೂ ಅಧಿಕ ಕಡೆಗಳಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ.

‘ಕೋಟಿ’ ರಿಲೀಸ್​ ಬಗ್ಗೆ ‘ಕೆಆರ್‌ಜಿ ಸ್ಟುಡಿಯೋಸ್‌’ ಸಂಸ್ಥಾಪಕ ಕಾರ್ತಿಕ್ ಗೌಡ ಮಾತನಾಡಿದ್ದಾರೆ. ‘ನಟ ಧನಂಜಯ ಅವರ ಜೊತೆ ನಮ್ಮ ಸಂಬಂಧವು ಈ ಸಿನಿಮಾದ ಮೂಲಕ ಇನ್ನಷ್ಟು ವಿಸ್ತರಿಸಿದೆ. ನಾನು ಸಿನಿಮಾ ನೋಡಿದ್ದೇನೆ. ಪರಮೇಶ್ವರ್ ಗುಂಡ್ಕಲ್ ಅವರ ಬರವಣಿಗೆ ಮತ್ತು ಚಿತ್ರಕಥೆ ಹೆಣೆದಿರುವ ಸೊಗಸನ್ನು ನೋಡಿ ಥ್ರಿಲ್ ಆಗಿದ್ದೇನೆ. ಈ ಸಿನಿಮಾವನ್ನು ಪ್ರೇಕ್ಷಕರಿಗೆ ಪ್ರಸ್ತುತಪಡಿಸಲು ನಾವು ತುಂಬ ಉತ್ಸುಕರಾಗಿದ್ದೇವೆ. 250ಕ್ಕೂ ಅಧಿಕ ಕೇಂದ್ರಗಳಲ್ಲಿ ಸಿನಿಮಾವನ್ನು ರಿಲೀಸ್​ ಮಾಡುವ ಗುರಿ ಹೊಂದಿದ್ದೇವೆ. ಈ ಅವಕಾಶ ನೀಡಿದ ಜಿಯೋ ಸ್ಟುಡಿಯೋಸ್‌ನ ಜ್ಯೋತಿ ದೇಶಪಾಂಡೆ ಅವರಿಗೆ ಧನ್ಯವಾದಗಳು’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಐತಿಹಾಸಿಕ ಸಿನಿಮಾನಲ್ಲಿ ನಟಿಸಲಿದ್ದಾರೆ ನಟ ಡಾಲಿ ಧನಂಜಯ್

ಕನ್ನಡದಲ್ಲಿ ‘ಜಿಯೋ ಸ್ಟುಡಿಯೋಸ್’ ನಿರ್ಮಾಣ ಮಾಡಿದ ಮೊದಲ ಸಿನಿಮಾ ‘ಕೋಟಿ’ ಎಂಬುದು ವಿಶೇಷ. ನಿರ್ದೇಶಕ ಪರಮ್ ಅವರು ಆ್ಯಕ್ಷನ್​-ಕಟ್​ ಹೇಳಿದ ಮೊದಲ ಸಿನಿಮಾ ಇದು. ಡಾಲಿ ಧನಂಜಯ್​ ಅವರ ಜೊತೆ ಮೋಕ್ಷಾ ಕುಶಾಲ್, ರಮೇಶ್ ಇಂದಿರಾ, ತಾರಾ, ರಂಗಾಯಣ ರಘು ಮುಂತಾದ ಕಲಾವಿದರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಸಿನಿಮಾದ ಟೀಸರ್ ಹಾಗೂ ಹಾಡುಗಳು ಗಮನ ಸೆಳೆದಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.