ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಎಸ್. ಉಮೇಶ್ ಅವರಿಗೆ ಅನಾರೋಗ್ಯ ಕಾಡಿದೆ. ಆದರೆ, ಆರ್ಥಿಕ ಸಂಕಷ್ಟದಿಂದ ಚಿಕಿತ್ಸೆ ಪಡೆಯಲೂ ಅವರ ಬಳಿ ಸಾಧ್ಯವಾಗುತ್ತಿಲ್ಲ. ಹೀಗಾಗಿ, ಅವರು ಸಹಾಯ ಮಾಡುವಂತೆ ಮನವಿ ಮಾಡಿಕೊಂಡಿದ್ದರು. ಈಗ ಲಹರಿ ಸಂಸ್ಥೆ ಇವರಿಗೆ ಸಹಾಯ ಮಾಡಿದೆ.
ಕಾಶಿನಾಥ್ ನಟನೆಯ ‘ಅವಳೇ ನನ್ ಹೆಂಡ್ತಿ’ ಚಿತ್ರಕ್ಕೆ ನಿರ್ದೇಶನ ಮಾಡಿ ಎಸ್. ಉಮೇಶ್ ಅವರು ಫೇಮಸ್ ಆಗಿದ್ದರು. ಈಗ ಅವರಿಗೆ ಕಿಡ್ನಿ ಸಮಸ್ಯೆ ಕಾಡುತ್ತಿದೆ. ಚಿಕಿತ್ಸೆಗೆ ಹಣವಿಲ್ಲದ ಕಾರಣ ಸಹಾಯಕ್ಕೆ ಮನವಿ ಮಾಡಿದ್ದರು. ಉಮೇಶ್ ನೆರವಿಗೆ ಲಹರಿ ಮ್ಯೂಸಿಕ್ ಸಂಸ್ಥೆ ಬಂದಿದೆ. ಇದರ ಮಾಲೀಕರಾದ ಮನೋಹರ್ ನಾಯ್ಡು ಅವರು ಉಮೇಶ್ ಅವರಿಗೆ ಒಂದು ಲಕ್ಷ ರೂಪಾಯಿ ನೀಡುವಂತೆ ಸಹೋದರ ಲಹರಿ ವೇಲುಗೆ ಹೇಳಿದ್ದಾರೆ.
‘ಅವಳೇ ನನ್ನ ಹೆಂಡತಿ ಚಿತ್ರ ಇನ್ನೂ ಡಬ್ಬಿಂಗ್ ಸಹ ಆಗಿರಲಿಲ್ಲ. ಆಗಲೇ ನಿರ್ಮಾಪಕ ಪ್ರಭಾಕರ್ ಹಾಗೂ ನಿರ್ದೇಶಕ ಎಸ್. ಉಮೇಶ್ ಅವರು ನನಗೆ ಆ ಚಿತ್ರ ತೋರಿಸಿ, ಕಥೆ ಹೇಳಿದ್ದರು. ಆ ಚಿತ್ರದ ಕಥೆ ಕೇಳಿದ ನಾನು ಇದೊಂದು ಸೂಪರ್ ಹಿಟ್ ಚಿತ್ರ ಆಗುತ್ತದೆ ಎಂದಿದ್ದೆ. ಆಗಿನಿಂದಲೂ ಎಸ್. ಉಮೇಶ್ ನಮ್ಮ ಲಹರಿ ಸಂಸ್ಥೆಯೊಂದಿಗೆ ಒಡನಾಟ ಹೊಂದಿದ್ದಾರೆ. ಅವರ ಕಷ್ಟಕ್ಕೆ ನೆರವಾಗುವುದು ನಮ್ಮ ಕರ್ತವ್ಯ’ ಎಂದು ಮನೋಹರ್ ನಾಯ್ಡು ಹೇಳಿದ್ದಾರೆ. ಸಂಕಷ್ಟದಲ್ಲಿರುವ ಸಂಗೀತಗಾರರಿಗೆ ಲಹರಿ ಸಂಸ್ಥೆ ಹತ್ತು ಲಕ್ಷ ರೂಪಾಯಿ ನೀಡಿತ್ತು.
ಇತ್ತೀಚೆಗೆ ವಿಡಿಯೋ ಮೂಲಕ ತಮ್ಮ ನೋವನ್ನು ಹೇಳಿಕೊಂಡಿದ್ದ ಉಮೇಶ್, ಸಹಾಯಕ್ಕಾಗಿ ಎಲ್ಲರ ಬಳಿ ಮನವಿ ಮಾಡಿಕೊಂಡಿದ್ದರು. ‘ಕಳೆದ ವರ್ಷ ಕೊರೊನಾ ಸಮಯದಲ್ಲಿ ನನಗೆ ಒಂದು ಕಿಡ್ನಿ ಸಮಸ್ಯೆ ಆಯ್ತು. ಎಡ ಭಾಗದ ಕಿಡ್ನಿ ಸಂಪೂರ್ಣ ವಿಫಲವಾಗಿದೆ. ಡಯಾಲಿಸಿಸ್ ಇಲ್ಲದೇ ಕೇವಲ ಮೆಡಿಸಿನ್ನಲ್ಲೇ ವೈದ್ಯರು ನನ್ನನ್ನು ಕಾಪಾಡಿದ್ದಾರೆ. ಡಯಾಲಿಸಿಸ್ ಶುರುವಾದರೆ ನನ್ನ ಪರಿಸ್ಥಿತಿ ಕಷ್ಟ ಆಗುತ್ತದೆ. ಈಗ ಕೆಲಸ ಕೂಡ ಇಲ್ಲ. ನನ್ನ ಮಗ ಎಸ್ಎಸ್ಎಲ್ಸಿ ಓದುತ್ತಿದ್ದಾನೆ. ಅವನ ಶಾಲೆಯ ಫೀಸ್ ಕಟ್ಟಲು ಸಾಧ್ಯವಾಗಿಲ್ಲ. ಯಾರಾದರೂ ದಾನಿಗಳು ನನಗೆ ಸಹಾಯ ಮಾಡುವುದಾದರೆ ನಾನು ಅದನ್ನು ಸ್ವೀಕರಿಸುತ್ತೇನೆ’ ಎಂದು ಉಮೇಶ್ ಅವರು ಕೋರಿದ್ದರು.
ಇದನ್ನೂ ಓದಿ:
ಅನಾರೋಗ್ಯ, ಆರ್ಥಿಕ ಸಂಕಷ್ಟದಲ್ಲಿ ‘ಅವಳೇ ನನ್ ಹೆಂಡ್ತಿ’ ಚಿತ್ರದ ನಿರ್ದೇಶಕ ಉಮೇಶ್; ಸಹಾಯಕ್ಕಾಗಿ ಮನವಿ