ಅನಾರೋಗ್ಯ, ಆರ್ಥಿಕ ಸಂಕಷ್ಟದಲ್ಲಿ ‘ಅವಳೇ ನನ್ ಹೆಂಡ್ತಿ’ ಚಿತ್ರದ ನಿರ್ದೇಶಕ ಉಮೇಶ್; ಸಹಾಯಕ್ಕಾಗಿ ಮನವಿ
ಕಳೆದ ವರ್ಷ ಕೊರೊನಾ ಸಮಯದಲ್ಲಿ ನನಗೆ ಒಂದು ಕಿಡ್ನಿ ಸಮಸ್ಯೆ ಆಯ್ತು. ಎಡ ಭಾಗದ ಕಿಡ್ನಿ ಸಂಪೂರ್ಣ ವಿಫಲವಾಗಿದೆ ಎಂದು ಎಸ್. ಉಮೇಶ್ ಕಷ್ಟ ತೋಡಿಕೊಂಡಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಹಲವು ವರ್ಷಗಳ ಕಾಲ ಸಕ್ರಿಯರಾಗಿದ್ದ ಹಿರಿಯ ನಿರ್ದೇಶಕ ಎಸ್. ಉಮೇಶ್ ಈಗ ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಆರೋಗ್ಯ ಸಮಸ್ಯೆ ಕೂಡ ಅವರನ್ನು ಕಾಡುತ್ತಿದ್ದು, ವಿಡಿಯೋ ಮೂಲಕ ತಮ್ಮ ನೋವನ್ನು ಹೇಳಿಕೊಂಡಿದ್ದಾರೆ. ಸಹಾಯಕ್ಕಾಗಿ ಎಲ್ಲರ ಬಳಿ ಮನವಿ ಮಾಡಿಕೊಂಡಿದ್ದಾರೆ. ಕಿಡ್ನಿ ಸಮಸ್ಯೆಯಿಂದ ಅವರು ಬಳಲುತ್ತಿದ್ದು, ಮನೆ ಬಾಡಿಗೆ ಕಟ್ಟಲು ಕೂಡ ಹಣವಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ಕಾಶಿನಾಥ್ ನಟನೆಯ ‘ಅವಳೇ ನನ್ ಹೆಂಡ್ತಿ’ ಚಿತ್ರಕ್ಕೆ ನಿರ್ದೇಶನ ಮಾಡಿ ಎಸ್. ಉಮೇಶ್ ಅವರು ಫೇಮಸ್ ಆಗಿದ್ದರು.
‘1973-74ರಲ್ಲಿ ನಾನು ಚಿತ್ರರಂಗ ಪ್ರವೇಶಿಸಿದೆ. ಅಲ್ಲಿಂದ 48 ವರ್ಷಗಳ ಕಾಲ ಸಿನಿಮಾ ಕ್ಷೇತ್ರದಲ್ಲಿ ತೊಡಗಿಕೊಂಡಿದ್ದೆ. ಮೊದಲು ಸಂಕಲನಕಾರ, ಸಹಾಯಕ ನಿರ್ದೇಶಕನಾಗಿದ್ದವನು 1988ರಲ್ಲಿ ಮೊದಲ ಬಾರಿಗೆ ‘ಅವಳೇ ನನ್ ಹೆಂಡ್ತಿ’ ಚಿತ್ರಕ್ಕೆ ನಿರ್ದೇಶನ ಮಾಡಿದ್ದೆ. ಕಾಶಿನಾಥ್ ನಟನೆಯ ಆ ಸಿನಿಮಾ ಕರ್ನಾಟಕದಾದ್ಯಂತ ಯಶಸ್ವಿಯಾಗಿ, ಬೇರೆ ಭಾಷೆಗಳಿಗೂ ರಿಮೇಕ್ ಆಯಿತು. ತಮಿಳಿಗೆ ನಾನೇ ನಿರ್ದೇಶನ ಮಾಡಿದೆ. ಬಳಿಕ 2 ತಮಿಳು ಚಿತ್ರಗಳನ್ನೂ ನಿರ್ದೇಶನ ಮಾಡಿದ್ದೆ’ ಎಂದು ಉಮೇಶ್ ಮಾತು ಆರಂಭಿಸಿದ್ದಾರೆ.
‘ತಮಿಳು ಚಿತ್ರರಂಗದಲ್ಲಿ ನನಗೆ ಒಳ್ಳೆಯ ಹೆಸರು ಸಿಕ್ಕಿತ್ತು. ಆದರೂ ನಾನೊಬ್ಬ ಕನ್ನಡಿಗನಾಗಿ, ಕರ್ನಾಟಕದಲ್ಲಿ ಉಳಿಯುವ ಪ್ರಯತ್ನ ಮಾಡಿ 1990ರಲ್ಲಿ ‘ಬನ್ನಿ ಒಂದ್ಸಲ ನೋಡಿ’ ಎಂಬ ಸ್ವಂತ ಸಿನಿಮಾ ಶುರು ಮಾಡಿದೆ. ಆ ಚಿತ್ರಕ್ಕಾಗಿ ಏಳೂವರೆ ಲಕ್ಷ ರೂ. ಸಾಲ ಮಾಡಿಕೊಂಡಿದ್ದೆ. ಆ ಚಿತ್ರವನ್ನು ಮಾರಾಟ ಮಾಡಲು ಕಷ್ಟ ಆಯಿತು. ಒಟ್ಟು ಮೂರು ಸಿನಿಮಾ ನಿರ್ಮಾಣ ಮಾಡಿ ನಷ್ಟ ಮಾಡಿಕೊಂಡೆ. ನಾನು ಎಲ್ಲರನ್ನೂ ನಂಬಿ ಯಾಮಾರಿದೆ’ ಎಂದು ಉಮೇಶ್ ಹೇಳಿದ್ದಾರೆ.
‘ಕಳೆದ ವರ್ಷ ಕೊರೊನಾ ಸಮಯದಲ್ಲಿ ನನಗೆ ಒಂದು ಕಿಡ್ನಿ ಸಮಸ್ಯೆ ಆಯ್ತು. ಎಡ ಭಾಗದ ಕಿಡ್ನಿ ಸಂಪೂರ್ಣ ವಿಫಲವಾಗಿದೆ. ಡಯಾಲಿಸಿಸ್ ಇಲ್ಲದೇ ಕೇವಲ ಮೆಡಿಸಿನ್ನಲ್ಲೇ ವೈದ್ಯರು ನನ್ನನ್ನು ಕಾಪಾಡಿದ್ದಾರೆ. ಡಯಾಲಿಸಿಸ್ ಶುರುವಾದರೆ ನನ್ನ ಪರಿಸ್ಥಿತಿ ಕಷ್ಟ ಆಗುತ್ತದೆ. ಈಗ ಕೆಲಸ ಕೂಡ ಇಲ್ಲ. ನನ್ನ ಮಗ ಎಸ್ಎಸ್ಎಲ್ಸಿ ಓದುತ್ತಿದ್ದಾನೆ. ಅವನ ಶಾಲೆಯ ಫೀಸ್ ಕಟ್ಟಲು ಸಾಧ್ಯವಾಗಿಲ್ಲ. ಯಾರಾದರೂ ದಾನಿಗಳು ನನಗೆ ಸಹಾಯ ಮಾಡುವುದಾದರೆ ನಾನು ಅದನ್ನು ಸ್ವೀಕರಿಸುತ್ತೇನೆ’ ಎಂದು ಉಮೇಶ್ ಮನವಿ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ:
ಸಂಕಷ್ಟದಲ್ಲಿರುವ ಸಿನಿಮಾ ಮಂದಿ ಸಹಾಯಕ್ಕೆ ನಿಂತ ಪುನೀತ್ ರಾಜ್ಕುಮಾರ್; 10 ಲಕ್ಷ ಪರಿಹಾರ ಘೋಷಣೆ
ಭುವನ್ ಪೊನ್ನಣ್ಣ ನಿಜವಾದ ಬಿಗ್ ಬಾಸ್; ಕೊವಿಡ್ ಸಂಕಷ್ಟದಲ್ಲಿ ಮಾಡಿದ ಸಹಾಯ ನೆನೆದು ಭಾವುಕರಾದ ಹಿರಿಯ ನಟ