ಸ್ಥಳೀಯರ ಜೊತೆ ಕೈ ಕೈ ಮಿಲಾಯಿಸಿದ ಜಗದೀಶ್; ಹಲ್ಲೆ ನಡೆದಿದ್ದು ಏಕೆ?
ಬಿಗ್ ಬಾಸ್ ಕನ್ನಡದಿಂದ ಖ್ಯಾತಿ ಪಡೆದ ವಕೀಲ ಜಗದೀಶ್ ಅವರ ಮೇಲೆ ಕೊಡಿಗೇಹಳ್ಳಿಯಲ್ಲಿ ಹಲ್ಲೆ ಯತ್ನ ನಡೆದಿದೆ. ಪೆಂಡಾಲ್ ಹಾಕಲು ಅವರು ವಿರೋಧ ವ್ಯಕ್ತಪಡಿಸಿದ್ದೇ ಇದಕ್ಕೆ ಕಾರಣ. ಸ್ಥಳೀಯರೊಂದಿಗೆ ಜಗಳವಾಡಿದ ಜಗದೀಶ್ ಅವರ ಮೇಲೆ 40ಕ್ಕೂ ಹೆಚ್ಚು ಜನರು ಹಲ್ಲೆಗೆ ಯತ್ನಿಸಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವಕೀಲ ಜಗದೀಶ್ ಅವರು ಬಿಗ್ ಬಾಸ್ಗೆ ಬಂದು ಫೇಮಸ್ ಆದವರು. ಅವರು ಹೋದಲ್ಲೆಲ್ಲ ಕಿರಿಕ್ ಮಾಡಿಕೊಳ್ಳುತ್ತಾರೆ. ಹಲವು ವಿಚಾರಗಳಿಗೆ ಅವರು ಪ್ರಶ್ನೆ ಮಾಡುತ್ತಾರೆ. ಇದರಿಂದ ಅವರಿಗೆ ಸಾಕಷ್ಟು ಸಮಸ್ಯೆ ಆಗಿದ್ದೂ ಇದೆ. ಹೀಗಿರುವಾಗಲೇ ಜಗದೀಶ್ ಅವರ ಮೇಲೆ ಹಲ್ಲೆಯ ಪ್ರಯತ್ನ ನಡೆದಿದೆ. ಬೆಂಗಳೂರಿನ ಕೊಡಿಗೇಹಳ್ಳಿಯ ವಿರೂಪಾಕ್ಷ ನಗರದಲ್ಲಿ ಈ ಘಟನೆ ನಡೆದಿದೆ. ಈ ಸಂಬಂಧ ಕೊಡಿಗೇಹಳ್ಳಿಯಲ್ಲಿ ದೂರು ದಾಖಲಾಗಿದೆ.
ಆಗಿದ್ದೇನು?
ಕೊಡಿಗೇಹಳ್ಳಿಯಲ್ಲಿ ಜಗದೀಶ್ ಅವರಿಗೆ ಸೇರಿದ ಕಾಂಪ್ಲೆಕ್ಸ್ ಒಂದು ಇದೆ. ಇದೇ ರಸ್ತೆಯಲ್ಲಿ ಸ್ಥಳೀಯರು ಅಣ್ಣಮ್ಮ ದೇವಿಯನ್ನು ಕೂರಿಸಲು ಪ್ಲ್ಯಾನ್ ಮಾಡಿದ್ದರು. ಇದಕ್ಕೆ ಜಗದೀಶ್ ಅವರು ಆಕ್ಷೇಪ ತೆಗೆದಿದ್ದಾರೆ. ಅಲ್ಲದೆ ಠಾಣೆಗೆ ದೂರು ನೀಡಿದ್ದಾರೆ. ವಿಚಾರ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಜನರ ಜೊತೆ ಚರ್ಚಿಸಿದ್ದಾರೆ. ಪೆಂಡಾಲ್ ಹಾಕಿದ್ದರಿಂದ ಸಾರ್ವಜನಿಕರ ಓಡಾಟಕ್ಕೆ ತೊಂದರೆ ಆಗುತ್ತದೆ ಎಂಬುದು ಜಗದೀಶ್ ಅವರ ವಾದ ಆಗಿತ್ತು. ಆದರೆ, ಪೆಂಡಾಲ್ ತೆಗೆಯಲು ಸ್ಥಳಿಯರು ಒಪ್ಪಿಲ್ಲ.
Lawyer jagadish clarifies about his video viral on social media,, 🥱#lawyerjagadish #jaggu #bbk11 pic.twitter.com/2iWFa4aFgJ
— ಶಿಷ್ಯ ಕೋಟಿ a.k.a MAX (@aarogance_24) January 23, 2025
ಹಲ್ಲೆಗೆ ಯತ್ನ
ಜಗದೀಶ್ ಅವರ ವಿರುದ್ಧ 40ಕ್ಕೂ ಅಧಿಕ ಸ್ಥಳೀಯರು ಬಂದು ಪ್ರಶ್ನಿಸಿದ್ದಾರೆ ಎನ್ನಲಾಗಿದೆ. ಅವರ ಮೇಲೆ ಹಲ್ಲೆಗೂ ಯತ್ನ ನಡೆದಿದೆ. ಈ ಸಂದರ್ಭದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡಲಾಗುತ್ತಿದೆ. ಟ್ರೋಲ್ ಪೇಜ್ಗಳಲ್ಲಿ ಈ ವಿಡಿಯೋನ ಹರಿಬಿಡಲಾಗಿದೆ. ಇದಕ್ಕೆ ಅನೇಕರು ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಕೆಲವರು ಜಗದೀಶ್ ಅವರು ಮಾಡಿದ್ದು ಸರಿ ಎಂದರೆ, ಇನ್ನೂ ಕೆಲವರು ‘ಸುಖಾಸುಮ್ಮನೆ ಕಿರಿಕ್ ಮಾಡಿದರೆ ಹೀಗೆ ಆಗೋದು’ ಎಂದು ಕೆಲವರು ಹೇಳಿದ್ದಾರೆ.
ರಿಯಾಲಿಟಿ ಶೋ
‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಜಗದೀಶ್ ಅವರು ಸಾಕಷ್ಟು ಜನಪ್ರಿಯತೆ ಪಡೆದರು. ಆದರೆ, ಅವಾಚ್ಯ ಶಬ್ದ ಬಳಕೆಯ ಕಾರಣದಿಂದ ಅವರು ಕೆಲವೇ ವಾರಗಳಲ್ಲಿ ಬಿಗ್ ಬಾಸ್ ಮನೆಯಿಂದ ಔಟ್ ಆದರು. ಸದ್ಯ ಕಲರ್ಸ್ನಲ್ಲಿ ‘ಬಾಯ್ಸ್ vs ಗರ್ಲ್ಸ್’ ರಿಯಾಲಿಟಿ ಶೋ ಪ್ರಸಾರ ಕಾಣುತ್ತಿದ್ದು, ಇದರಲ್ಲಿ ಜಗದೀಶ್ ಅವರು ಭಾಗವಹಿಸುತ್ತಿದ್ದಾರೆ.