ದರ್ಶನ್ ವಿರುದ್ಧ ದೂರು ದಾಖಲಿಸಿದ ಲಾಯರ್ ಜಗದೀಶ್, ಕಾರಣವೇನು?

|

Updated on: Nov 06, 2024 | 12:07 PM

ರೇಣುಕಾ ಸ್ವಾಮಿ ಕೊಲೆ ಆರೋಪಿ ದರ್ಶನ್, ಪ್ರಸ್ತುತ ಮಧ್ಯಂತರ ಜಾಮೀನು ಪಡೆದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದರ ನಡುವೆ ದರ್ಶನ್ ವಿರುದ್ಧ ಹೊಸದೊಂದು ದೂರು ದಾಖಲಾಗಿದೆ. ದೂರು ದಾಖಲಿಸಿರುವುದು ಬಿಗ್​ಬಾಸ್​ನಿಂದ ಹೊರಬಂದ ಲಾಯರ್ ಜಗದೀಶ್.

ದರ್ಶನ್ ವಿರುದ್ಧ ದೂರು ದಾಖಲಿಸಿದ ಲಾಯರ್ ಜಗದೀಶ್, ಕಾರಣವೇನು?
Follow us on

ರೇಣುಕಾ ಸ್ವಾಮಿ ಕೊಲೆ ಆರೋಪಿ ದರ್ಶನ್​ಗೆ ಮಧ್ಯಂತರ ಜಾಮೀನು ದೊರೆತಿದೆ. ಆರು ವಾರಗಳ ಕಾಲ ಅವರಿಗೆ ಜೈಲುವಾಸದಿಂದ ತಾತ್ಕಾಲಿಕ ಮುಕ್ತಿ ಸಿಕ್ಕಿದೆ. ಆದರೆ ಮಧ್ಯಂತರ ಜಾಮೀನು ದೊರೆತ ಬೆನ್ನಲ್ಲೆ ಬೇರೆ ಕೆಲವು ಸಂಕಷ್ಟಗಳು ಒಂದರ ಹಿಂದೊಂದು ಸುತ್ತಿಕೊಳ್ಳುತ್ತಿವೆ. ಪೊಲೀಸರು ಮಧ್ಯಂತರ ಜಾಮೀನಿಗೆ ಆಕ್ಷೇಪಣೆ ಸಲ್ಲಿಸಲು ಸಿದ್ದವಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇದರ ಬೆನ್ನಲ್ಲೆ ಇದೀಗ ದರ್ಶನ್ ವಿರುದ್ಧ ಮತ್ತು ಅವರ ಅಭಿಮಾನಿಗಳ ವಿರುದ್ಧ ಬೆಂಗಳೂರಿನಲ್ಲಿ ಹೊಸದೊಂದು ದೂರು ದಾಖಲಾಗಿದೆ. ದೂರು ದಾಖಲಿಸಿರುವುದು ಇತ್ತೀಚೆಗಷ್ಟೆ ಬಿಗ್​ಬಾಸ್​ನಿಂದ ಹೊರಬಂದಿರುವ ಲಾಯರ್ ಜಗದೀಶ್.

ಬಿಗ್​ಬಾಸ್​ನಲ್ಲಿ ಅಲ್ಲೋಲ ಕಲ್ಲೋಲ ಎಬ್ಬಿಸಿ ಹೊರದಬ್ಬಿಸಿಕೊಂಡ ಲಾಯರ್ ಜಗದೀಶ್ ಅವರು ಹೊರಗೆ ಬಂದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಬಹಳ ಸಕ್ರಿಯರಾಗಿದ್ದಾರೆ. ಬಿಗ್​ಬಾಸ್​ನಿಂದ ಹೊರಗೆ ಬಂದ ಬಳಿಕ ಕೆಲ ರಿಯಾಲಿಟಿ ಶೋಗಳಲ್ಲಿಯೂ ಭಾಗಿಯಾಗಿದ್ದ ಜಗದೀಶ್, ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ವಿಡಿಯೋಗಳನ್ನು ಮಾಡಿ ಕೆಲವು ಘಟನೆಗಳ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದರು. ನಟ ದರ್ಶನ್ ಪ್ರಕರಣದ ಬಗ್ಗೆಯೂ ಸಹ ಲಾಯರ್ ಜಗದೀಶ್ ಮಾತನಾಡಿದ್ದರು.

ದರ್ಶನ್ ಬಗ್ಗೆ ಮಾತನಾಡುವಾಗ ತಮ್ಮ ಎಂದಿನ ಶೈಲಿಯಲ್ಲಿ ಏಕವಚನದಲ್ಲಿಯೇ ಮಾತನಾಡಿ, ಟೀಕೆ ಮಾಡಿದ್ದರು ಜಗದೀಶ್, ಇದಕ್ಕೆ ದರ್ಶನ್ ಅಭಿಮಾನಿಗಳು ವಿರೋಧ ವ್ಯಕ್ತಪಡಿಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ಜಗದೀಶ್ ವಿರುದ್ಧ ಹಲವು ದರ್ಶನ್ ಅಭಿಮಾನಿಗಳು ನಿಂದನಾತ್ಮಕ ಪೋಸ್ಟ್​ಗಳನ್ನು ಹಂಚಿಕೊಂಡಿದ್ದರು. ಕೆಲವರು ಬೆದರಿಕೆ ಸಹ ಹಾಕಿದ್ದರು. ಇದೇ ವಿಷಯವಾಗಿ ಲಾಯರ್ ಜಗದೀಶ್, ದರ್ಶನ್ ಹಾಗೂ ಅವರ ಅಭಿಮಾನಿಗಳ ವಿರುದ್ಧ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ:ದರ್ಶನ್ ಮಧ್ಯಂತರ ಜಾಮೀನಿಗೆ ಆಕ್ಷೇಪಣೆ: ಕಡತ ಸಿದ್ಧ, ಅಂತಿಮ ಒಪ್ಪಿಗೆಗೆ ನಿರೀಕ್ಷೆ

ನಿನ್ನೆ (ಮಂಗಳವಾರ) ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿರುವ ಲಾಯರ್ ಜಗದೀಶ್, ‘ದರ್ಶನ್​ಗೆ ನಾನು ಏಕವಚನದಲ್ಲಿ ಮಾತನಾಡಿದ್ದೇನೆ ಎಂದು ದರ್ಶನ್ ಅಭಿಮಾನಿಗಳು ನನಗೆ ಬೆದರಿಕೆ ಹಾಕಿದ್ದಾರೆ. ಎರಡು ದಿನದಲ್ಲಿ ಸಾವಿರಕ್ಕೂ ಹೆಚ್ಚು ಕರೆಗಳನ್ನು ದರ್ಶನ್​ರ ಕೆಲ ಅಭಿಮಾನಿಗಳು ನನಗೆ ಮಾಡಿದ್ದಾರೆ. ದರ್ಶನ್ ಅಭಿಮಾನಿ ರಿಷಿ ಎಂಬಾತ ಹಲವು ಬಾರಿ ಕರೆ ಮಾಡಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಇದನ್ನೆಲ್ಲ ದರ್ಶನ್​ ಮಾಡಿಸಿದ್ದಾರೆ’ ಎಂದು ಜಗದೀಶ್ ದೂರು ದಾಖಲಿಸಿದ್ದಾರೆ.

ದರ್ಶನ್​ಗೆ ರಾಜ್ಯದಾದ್ಯಂತ ಅಭಿಮಾನಿಗಳಿದ್ದು, ಅವರಿಂದ ನನಗೆ ಹಾಗೂ ನನ್ನ ಕುಟುಂಬಕ್ಕೆ ರಕ್ಷಣೆ ಬೇಕಾಗಿದೆ. ನಮಗೆ ರಕ್ಷಣೆ ಕೊಡುವ ಜೊತೆಗೆ ದರ್ಶನ್​ ಹಾಗೂ ರಿಷಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಲಾಯರ್ ಜಗದೀಶ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ