‘ಮೆಜೆಸ್ಟಿಕ್’ ಸಿನಿಮಾ ಬಗ್ಗೆ ಎಲ್ಲರಿಗೂ ಗೊತ್ತು. ಅಷ್ಟೇ ಅಲ್ಲದೇ, ‘ಮೆಜೆಸ್ಟಿಕ್ 2’ ಸಿನಿಮಾ ಕೂಡ ಬರುತ್ತಿದೆ. ಈ ಚಿತ್ರಕ್ಕೆ ಭರತ್ ಕುಮಾರ್ ಹೀರೋ ಆಗಿದ್ದಾರೆ. ‘ಮೆಜೆಸ್ಟಿಕ್ 2’ ಸಿನಿಮಾದ ಚಿತ್ರೀಕರಣ ಇನ್ನೂ ಮುಕ್ತಾಯ ಆಗಿಲ್ಲ. ಅದರ ಶೂಟಿಂಗ್ ಮುಗಿಯುವುದಕ್ಕೂ ಮುನ್ನವೇ ಭರತ್ ಅವರ ಇನ್ನೊಂದು ಸಿನಿಮಾ ಸೆಟ್ಟೇರಿದೆ. ಈ ಸಿನಿಮಾಗೆ ‘ಲವ್ ಈಸ್ ಲೈಫ್’ ಎಂದು ಶೀರ್ಷಿಕೆ ಇಡಲಾಗಿದೆ. ಭರತ್ ಕುಮಾರ್ ಮತ್ತು ಮಿಷಲ್ ಅವರು ಈ ಸಿನಿಮಾದಲ್ಲಿ ಜೋಡಿಯಾಗಿ ನಟಿಸುತ್ತಿದ್ದಾರೆ. ಬೆಂಗಳೂರಿನ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ‘ಲವ್ ಈಸ್ ಲೈಫ್’ ಚಿತ್ರಕ್ಕೆ ಮುಹೂರ್ತ ಮಾಡಲಾಯಿತು.
ಜಿ.ಡಿ. ಸಂತೋಷ್ ಕುಮಾರ್ ಮತ್ತು ಎನ್. ಹನುಮಂತಪ್ಪ ಅವರು ಅಂಬಿಗಾ ಕ್ರಿಯೇಶನ್ಸ್ ಮೂಲಕ ‘ಲವ್ ಈಸ್ ಲೈಫ್’ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಜಿ. ಶಿವರಾಜ್ ಅವರ ನಿರ್ದೇಶನ ಮಾಡುತ್ತಿದ್ದಾರೆ. ಕಥೆ ಮತ್ತು ಚಿತ್ರಕಥೆಯನ್ನೂ ಅವರೇ ಬರೆದಿದ್ದಾರೆ. ‘ಹೀರೋ ಪಾತ್ರಕ್ಕೆ ಭರತ್ ಅವರೇ ಸೂಕ್ತ ಎನಿಸಿತು. ಅವರಲ್ಲಿ ಇರುವ ಪ್ರತಿಭೆಯನ್ನು ಹೊರತೆಗೆಯುವ ಪ್ರಯತ್ನವನ್ನು ಮಾಡುತ್ತೇನೆ. ಇದನ್ನು ಸವಾಲಾಗಿ ತೆಗೆದುಕೊಂಡಿದ್ದು, ಸಾಬೀತು ಮಾಡಿ ತೋರಿಸ್ತೀನಿ’ ಎಂದು ನಿರ್ದೇಶಕರು ಹೇಳಿದ್ದಾರೆ.
ಜಿ. ಶಿವರಾಜ್ ಅವರು 14 ವರ್ಷಗಳಿಂದ ಸಿನಿಮಾ ರಂಗದಲ್ಲಿ ಸಕ್ರಿಯರಾಗಿದ್ದಾರೆ. ‘ಎಲ್ಲ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ನನಗಿದೆ. 3 ತಿಂಗಳು ಸಮಯ ತೆಗೆದುಕೊಂಡು ಸ್ಕ್ರಿಪ್ಟ್ ಸಿದ್ಧ ಮಾಡಿಕೊಂಡಿದ್ದೇನೆ. ಇದು ಡಿಫರೆಂಟ್ ಲವ್ ಸ್ಟೋರಿ. ಈ ರೀತಿಯೂ ಲವ್ ಮಾಡಬಹುದಾ ಎಂದು ಅನಿಸುವ ಸಿನಿಮಾವಿದು. ಶೃಂಗೇರಿಯಲ್ಲಿ ಸೆಪ್ಟೆಂಬರ್ 9ರಿಂದ ಶೂಟಿಂಗ್ ಶುರು ಮಾಡಿ, ಒಂದೇ ಹಂತದಲ್ಲಿ ಪೂರ್ಣಗೊಳಿಸುವ ಐಡಿಯಾ ಇದೆ. ಒಂದು ಒಂಟಿ ಮನೆಯ ಹುಡುಕಾಟ ನಡೆದಿದೆ’ ಎಂದು ಜಿ. ಶಿವರಾಜ್ ಹೇಳಿದ್ದಾರೆ.
ಇದನ್ನೂ ಓದಿ: ದರ್ಶನ್ ಮೊದಲ ಸಿನಿಮಾ ‘ಮೆಜೆಸ್ಟಿಕ್’ನ ನಿರ್ಮಾಪಕರು ಹೇಳಿದ್ದು ಒಂದೇ ಮಾತು
‘ನಾನು ಈ ಸಿನಿಮಾದಲ್ಲಿ ಲವರ್‌ಬಾರ್ ಆಗಿ ಕಾಣಿಸಿಕೊಳ್ಳುತ್ತಿದ್ದೇನೆ. ನನ್ನ ನಟನೆ ತೋರಿಸಲು ಈ ಸಿನಿಮಾದಲ್ಲಿ ಅವಕಾಶ ಇದೆ. ನನ್ನ ಪಾತ್ರ ಬಹಳ ಹೈಲೈಟ್ ಆಗುತ್ತದೆ. ಒಂದು ಟ್ವಿಸ್ಟ್ ಕೂಡ ಇದೆ’ ಎಂದು ನಟ ಭರತ್ ಕುಮಾರ್ ಹೇಳಿದರು. ನಿರ್ಮಾಪಕ ಸಂತೋಷ್ ಕುಮಾರ್ ಮಾತನಾಡಿ, ‘ಮೊದಲಿಂದಲೂ ನನಗೆ ಸಿನಿಮಾ ಮೇಲೆ ಆಸಕ್ತಿ. ನಿರ್ದೇಶಕರು ಹೇಳಿದ ಕಥೆ ಬಹಳ ಇಷ್ಟವಾಯ್ತು’ ಎಂದರು. ನಾಗೇಂದ್ರ ಅರಸ್, ಅಮಿತ್, ಪೂಜಾ ಗೌಡ ಕೂಡ ಪಾತ್ರವರ್ಗದಲ್ಲಿ ಇದ್ದಾರೆ.
ನಟಿ ಮಿಷಲ್ ಅವರಿಗೆ ಇದು ಮೊದಲ ಸಿನಿಮಾ. ಇದರಲ್ಲಿ ಅವರು ಶ್ರೀಮಂತ ಹುಡುಗಿಯ ಪಾತ್ರ ಮಾಡುತ್ತಿದ್ದಾರೆ. ಇಂಥ ಪಾತ್ರ ಸಿಕ್ಕಿದ್ದಕ್ಕೆ ಬಹಳ ಖುಷಿ ಆಯಿತು’ ಎಂದು ಅವರು ಹೇಳಿದ್ದಾರೆ. ಎ.ಟಿ. ರವೀಶ್ ಅವರು ಈ ಸಿನಿಮಾಗೆ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾದಲ್ಲಿ 5 ಹಾಡುಗಳು ಇರಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಎಂ.ಬಿ. ಅಳ್ಳೀಕಟ್ಟಿ ಅವರು ಕ್ಯಾಮೆರಾ ಕೆಲಸ ವಹಿಸಿಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.