ಅಭಿಮಾನಿಗಳ ಅಬ್ಬರಕ್ಕೆ ‘ಕರಿಯ’ ಶೋ ರದ್ದು, ಜನ ಬಾರದೆ ‘ಶಾಸ್ತ್ರಿ’ ಶೋ ರದ್ದು
ದರ್ಶನ್ ನಟನೆಯ ‘ಕರಿಯ’ ಸಿನಿಮಾದ ಮರು ಬಿಡುಗಡೆ ಆಗಿತ್ತು, ಆದರೆ ಅಭಿಮಾನಿಗಳ ಗಲಾಟೆ ಮಿತಿ ಮೀರಿದ್ದರಿಂದ ಶೋಗಳನ್ನು ರದ್ದು ಮಾಡಲಾಗಿದೆ. ಇನ್ನು ಬಳ್ಳಾರಿಯಲ್ಲಿ ‘ಶಾಸ್ತ್ರಿ’ ಸಿನಿಮಾದ ಮರು ಬಿಡುಗಡೆ ಆಗಿತ್ತು, ಆದರೆ ಜನ ಬಾರದೆ ಇರುವ ಕಾರಣ ಅಲ್ಲಿಯೂ ಸಹ ಶೋ ರದ್ದಾಗಿದೆ.
ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಜೈಲು ಸೇರಿದ್ದಾರೆ. ಪರಪ್ಪನ ಅಗ್ರಹಾರದಿಂದ ಈಗ ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡಲಾಗಿದೆ. ದರ್ಶನ್ ಜೈಲಿಗೆ ಹೋಗಿರುವುದನ್ನೂ ಸಂಭ್ರಮಿಸುತ್ತಿರುವ ಅಭಿಮಾನಿಗಳಿಗೆ ಇಂದು (ಆಗಸ್ಟ್ 30) ಸಂಭ್ರಮಿಸಲು ಮತ್ತೊಂದು ಕಾರಣ ಸಿಕ್ಕಿತ್ತು. ದರ್ಶನ್ ನಟನೆಯ ಬ್ಲಾಕ್ ಬಸ್ಟರ್ ಸಿನಿಮಾ ‘ಕರಿಯ’ಮರು ಬಿಡುಗಡೆ ಆಗಿತ್ತು. ಆದರೆ ಅಭಿಮಾನಿಗಳು ಅತಿರೇಕದ ವರ್ತನೆಯಿಂದ ಸಿನಿಮಾದ ಶೋಗಳನ್ನು ರದ್ದು ಮಾಡಲಾಗಿದೆ.
ಪ್ರಸನ್ನ ಚಿತ್ರಮಂದಿರದಲ್ಲಿ ‘ಕರಿಯ’ ಸಿನಿಮಾವನ್ನು ಮರು ಬಿಡುಗಡೆ ಮಾಡಲಾಗಿತ್ತು. ಅಭಿಮಾನಿಗಳು ನಿನ್ನೆ ರಾತ್ರಿಯಿಂದಲೇ ಕಟೌಟ್ಗಳನ್ನು ಹಾಕಿ ಬ್ಯಾನರ್ಗಳನ್ನು ಹಾಕಿ ಸಂಭ್ರಮಿಸಿದ್ದರು. ಬ್ಯಾನರ್ಗಳಲ್ಲಿ ದರ್ಶನ್ರ ವಿಚಾರಣಾಧೀನ ಖೈದಿ ಸಂಖ್ಯೆ, ಪರಪ್ಪನ ಅಗ್ರಹಾರ ಜೈಲಿನಲ್ಲಿ ನಿಯಮಬಾಹಿರವಾಗಿ ಸಿಗರೇಟು ಸೇದುತ್ತಿರುವ ಚಿತ್ರಗಳ ಬ್ಯಾನರ್ಗಳನ್ನು ಕಟ್ಟಲಾಗಿತ್ತು. ಮಾತ್ರವಲ್ಲದೆ ಚಿತ್ರಮಂದಿರದ ಮುಂದೆ ಮಾಧ್ಯಮಗಳವರು, ಪೊಲೀಸರ ವಿರುದ್ಧ ಘೋಷಣೆಗಳನ್ನು ಕೂಗಿ ಗಲಾಟೆ ಎಬ್ಬಿಸಿದ್ದರು. ಪೊಲೀಸರು ಕೆಲವು ಬಾರಿ ಲಾಠಿ ಚಾರ್ಜ್ ಸಹ ಮಾಡಿದರು.
ಇದನ್ನೂ ಓದಿ:ಜೈಲಲ್ಲಿ ದರ್ಶನ್ಗೆ ರಾಜಾತಿಥ್ಯ; ಸಿಎಂ ಸಿದ್ದರಾಮಯ್ಯ ಹೇಳಿದ್ದಿಷ್ಟು?
ಆದರೆ ಅಭಿಮಾನಿಗಳ ಹುಚ್ಚಾಟ ಮೇರೆ ಮೀರಿದ ಕಾರಣ ಕೊನೆಗೆ ‘ಕರಿಯ’ ಸಿನಿಮಾದ ಶೋಗಳನ್ನು ರದ್ದು ಮಾಡಲಾಗಿದೆ. ಪೊಲೀಸರ ಮನವಿ ಮೇರೆಗೆ ಚಿತ್ರಮಂದಿರದವರು ‘ಕರಿಯ’ ಸಿನಿಮಾದ ಸಂಜೆ ಮತ್ತು ರಾತ್ರಿಯ ಶೋ ರದ್ದು ಮಾಡಲಾಗಿದೆ. ಮತ್ತು ನಾಳೆ (ಆಗಸ್ಟ್ 31) ಸಹ ಕೇವಲ ಒಂದು ಶೋ ಮಾತ್ರ ‘ಕರಿಯ’ ಸಿನಿಮಾ ಪ್ರದರ್ಶನಗೊಳ್ಳಲಿದೆ. ಕುಡಿದು ಬರುವ ಅಭಿಮಾನಿಗಳಿಂದ ಅಚಾತುರ್ಯ ನಡೆವ ಸಂಭವ ಇದೆ ಹಾಗೂ ಅವರ ನಿಯಂತ್ರಣವೂ ಸಮಸ್ಯೆ ಆಗಬಹುದೆಂಬ ಕಾರಣಕ್ಕೆ ಸಿನಿಮಾ ಶೋ ಅನ್ನು ರದ್ದು ಮಾಡಿಸಲಾಗಿದೆ. ನಾಳೆ ಪ್ರಸನ್ನ ಚಿತ್ರಮಂದಿರದಲ್ಲಿ ಮೂರು ಶೋ ‘ಕೃಷ್ಣಂ ಪ್ರಣಯ ಸಖಿ’ ಮತ್ತು ಒಂದು ಶೋ ‘ಕರಿಯ’ ಸಿನಿಮಾ ಪ್ರದರ್ಶನ ಕಾಣಲಿದೆ.
ಇನ್ನು ಬಳ್ಳಾರಿಯಲ್ಲಿ ‘ಶಾಸ್ತ್ರಿ’ ಸಿನಿಮಾದ ಮರು ಬಿಡುಗಡೆ ಮಾಡಲಾಗಿತ್ತು. ಆದರೆ ಜನ ಬರದೇ ಇರುವ ಕಾರಣಕ್ಕೆ ಶೋ ರದ್ದು ಮಾಡಲಾಗಿದೆ. ಬಳ್ಳಾರಿಯ ರಾಘವೇಂದ್ರ ಚಿತ್ರಮಂದಿರದಲ್ಲಿ ದರ್ಶನ್ ನಟನೆಯ ‘ಶಾಸ್ತ್ರಿ’ ಸಿನಿಮಾ ಮರು ಬಿಡುಗಡೆ ಮಾಡಲಾಗಿತ್ತು. ಆದರೆ ಬೆಳಿಗಿನ ಶೋಗೆ ಕೇವಲ ನಾಲ್ಕು ಟಿಕೆಟ್ಗಳು ಮಾತ್ರವೇ ಸೇಲ್ ಆಗಿದ್ದವು. ಹಾಗಾಗಿ ಆ ಶೋ ಸೇರಿದಂತೆ ‘ಶಾಸ್ತ್ರಿ’ ಸಿನಿಮಾದ ಇತರೆ ಶೋಗಳನ್ನು ಸಹ ರದ್ದು ಮಾಡಲಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ