
ಕಳೆದ ಕೆಲ ವರ್ಷಗಳಲ್ಲಿ ದಕ್ಷಿಣ ಭಾರತ ಚಿತ್ರರಂಗ (Movie Industry) ಬಹು ಎತ್ತರಕ್ಕೇರಿದೆ. ವಿಶೇಷವಾಗಿ ತೆಲುಗು ಚಿತ್ರರಂಗ ಕೆಲವು ಅಸಾಮಾನ್ಯ ಬಾಕ್ಸ್ ಆಫೀಸ್ ದಾಖಲೆಗಳನ್ನು ಮಾಡುವ ಜೊತೆಗೆ ಚಿತ್ರ ನಿರ್ಮಾಣದಲ್ಲಿಯೂ ಸಹ ಹೊಸ ಎತ್ತರಗಳನ್ನು ಏರಿದೆ. ನೆರೆಯ ಮಲಯಾಳಂ ಚಿತ್ರರಂಗವಂತೂ ಒಂದು ಸೀಮಿತ ಬಜೆಟ್ನ ಚಿತ್ರರಂಗ ಕೇವಲ ಕಂಟೆಂಟ್ನಿಂದ ಹೇಗೆ ವಿಶ್ವ ಸಿನಿಮಾ ರಂಗದಲ್ಲಿ ಗುರುತಿಸಿಕೊಳ್ಳಬಹುದು ಎಂಬುದನ್ನು ತೋರಿಸುತ್ತಿದೆ. ತಮಿಳು ಚಿತ್ರರಂಗವೂ ಸಹ ಹಿಂದೆ ಬಿದ್ದಿಲ್ಲ, ಸೂಪರ್ ಸ್ಟಾರ್ಗಳ ನೆರವಿನಿಂದ ಅದ್ಭುತ ಸಿನಿಮಾಗಳನ್ನು ನೀಡುತ್ತಿದೆ. ಆದರೆ ಕನ್ನಡ ಚಿತ್ರರಂಗ ಎಂದರೆ ‘ಕೆಜಿಎಫ್’, ‘ಕಾಂತಾರ’ದ ಮುಂದೆ ಮಾತೇ ಹೋಗುವುದಿಲ್ಲ. ಆದರೆ ಒಂದು ಕಾಲವಿತ್ತು, ಕನ್ನಡ ಸಿನಿಮಾ, ಕನ್ನಡ ಹಾಡುಗಳು ನೆರೆಯ ಚಿತ್ರರಂಗಗಳಿಗೆ ಸ್ಪೂರ್ತಿ ತುಂಬುತ್ತಿದ್ದವು.
ಇತ್ತೀಚೆಗೆ ಯೂಟ್ಯೂಬ್ ಸಂದರ್ಶನವೊಂದರಲ್ಲಿ ತೆಲುಗು ಚಿತ್ರರಂಗಕ್ಕೆ ಸಂಬಂಧಿಸಿದ ವ್ಯಕ್ತಿಯೊಬ್ಬರು, ಖ್ಯಾತ ಸಂಗೀತ ನಿರ್ದೇಶಕ ಜೋಡಿಯಾದ ರಾಜನ್-ನಾಗೇಂದ್ರ ಅವರ ಬಗ್ಗೆ ಮಾತನಾಡುತ್ತಾ, ‘ಹಲವಾರು ಅದ್ಭುತ ಹಾಡುಗಳನ್ನು ನೀಡಿದ ಅವರು, ತಮ್ಮ ಸಮಕಾಲೀನರು ಮತ್ತು ಈಗಿನ ಹಲವು ಸಂಗೀತ ನಿರ್ದೇಶಕರುಗಳಷ್ಟು ಪ್ರಚಾರವನ್ನು ಪಡೆಯಲಿಲ್ಲ’ ಎಂದರು. ಅದೇ ಸಂದರ್ಶನದಲ್ಲಿ, ತೆಲುಗಿನಲ್ಲಿ ಸೂಪರ್ ಹಿಟ್ ಆಗಿರುವ ಹಲವು ಕನ್ನಡ ಸಿನಿಮಾ ಹಾಡುಗಳನ್ನು ಸಹ ಹೆಸರಿಸಿದ್ದಾರೆ.
70-80ರ ದಶಕದಲ್ಲಿ ಕನ್ನಡ ಚಿತ್ರರಂಗ ಬಹಳ ಉಚ್ರಾಯ ಸ್ಥಿತಿಯಲ್ಲಿತ್ತು. ಕನ್ನಡದಲ್ಲಿ ಎಲ್ಲ ರೀತಿಯ ಹೊಸ ಪ್ರಯೋಗಗಳು ನಡೆಯುತ್ತಿದ್ದವು. ಐತಿಹಾಸಿಕ, ಪೌರಾಣಿಕ, ಸಾಮಾಜಿಕ, ಸೂಕ್ಷ್ಮ ಕತೆಗಳನ್ನು ಸಹ ಸಿನಿಮಾಕ್ಕೆ ತರಲಾಗುತ್ತಿತ್ತು. ಆ ಸಮಯದಲ್ಲಿ ಕನ್ನಡದ ಹಲವು ಸಿನಿಮಾಗಳು ನೆರೆ-ಹೊರೆಯ ಭಾಷೆಗಳಿಗೆ ರೀಮೇಕ್ ಸಹ ಆದವು. ಆಗಿನ ಕನ್ನಡ ಹಾಡುಗಳಂತೂ ತೆಲುಗು, ತಮಿಳಿಗೆ ಹೇರಳವಾಗಿ ಆಮದಾಯ್ತು.
ಇದನ್ನೂ ಓದಿ:45ನೇ ವಯಸ್ಸಿಗೆ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ ಕಪೂರ್ ಕುಟುಂಬದ ಕುಡಿ
‘ಎಂದೆಂದೂ ನಿನ್ನನು ಅಗಲಿ’ ಹಾಡು ‘ಪೂಜಾ’ ಹೆಸರಿನ ತೆಲುಗು ಸಿನಿಮಾನಲ್ಲಿ ತೆಲುಗಿನಲ್ಲಿದೆ. ಯೂಟ್ಯೂಬ್ ಸಂದರ್ಶನದಲ್ಲಿ ಹಿರಿಯ ಸಿನಿಮಾ ಕರ್ಮಿ ಹೇಳಿರುವಂತೆ, ಈಗಲೂ ಸಹ ಆ ಹಾಡನ್ನು ತೆಲುಗು ಜನರ ಮದುವೆಗಳಲ್ಲಿ ಆರ್ಕೆಸ್ಟ್ರಾದವರು ಬಾರಿಸುತ್ತಾರಂತೆ. 1977 ರಲ್ಲಿ ಬಿಡುಗಡೆ ಆದ ‘ಪಂತುಲಮ್ಮ’ ಸಿನಿಮಾದ ‘ಮಾನಸ ವೀಣಾ ಮಧುಗೀತಂ’ ಹಾಡು ಸಹ ಕನ್ನಡದಿಂದ ತೆಲುಗಿಗೆ ಹೋಗಿದ್ದೆ. ಕನ್ನಡದ ‘ಬಾನಲ್ಲು ನೀನೆ, ಭುವಿಯಲ್ಲೂ ನೀನೆ’ ಹಾಡು ತೆಲುಗಿನಲ್ಲಿ ‘ಸಿರಿಮಲ್ಲೆ ನೂವೆ, ವರದಲ್ಲೆ ನೂವೆ’ ಎಂದಾಗಿದೆ. ಕಮಲ್ ನಟನೆಯ ‘ಸೊಮ್ಮೊಕ್ಕಡದಿ ಸೋಗೊಕ್ಕಡದಿ’ ಸಿನಿಮಾನಲ್ಲೂ ಹಲವು ಕನ್ನಡ ಹಾಡುಗಳನ್ನು ತೆಲುಗಿನಲ್ಲಿ ಬಳಸಲಾಗಿದೆ.
ಹೊಂಬಿಸಿಲು ಸಿನಿಮಾದ ‘ಜೀವ ವೀಣೆ ನೀಡು ಮಿಡಿತದ ಸಂಗೀತ’ ಹಾಡು ತೆಲುಗಿನ ‘ಇಂಟಿಂಟಿ ರಾಮಾಯಣಂ’ ಸಿನಿಮಾನಲ್ಲಿ ಬಳಕೆ ಆಗಿದೆ. ‘ನಾಗಮಲ್ಲಿ’ ಹೆಸರಿನ ತೆಲುಗು ಸಿನಿಮಾನಲ್ಲಿನ ಎಲ್ಲ ಹಾಡುಗಳು ಕನ್ನಡದ ಬೇರೆ ಬೇರೆ ಸಿನಿಮಾಗಳಿಂದ ತೆಗೆದುಕೊಂಡು ಹೋಗಿ ಬಳಸಿಕೊಳ್ಳಲಾಗಿದೆ. ಕನ್ನಡದ ‘ಕನಸಲೂ ನೀನೆ, ಮನಸಲೂ ನೀನೆ’ ಹಾಡು, ತೆಲುಗಿನಲ್ಲಿ ‘ಚಿನಕುಲುಗಾ ರಾಲಿ’ ಎಂದಾಗಿದೆ. ಮೆಗಾಸ್ಟಾರ್ ಚಿರಂಜೀವಿ ಅವರ ಆರಂಭದ ಕೆಲ ಸಿನಿಮಾಗಳಲ್ಲಿಯೂ ಸಹ ಕನ್ನಡ ಹಾಡುಗಳನ್ನು ತೆಲುಗಿನಲ್ಲಿ ರೀಮೇಕ್ ಮಾಡಿದ್ದಿದೆ. ವಿಶೇಷವೆಂದರೆ ರಾಜನ್ ನಾಗೇಂದ್ರ ಅವರೇ ಹಲವಾರು ಕನ್ನಡ ಹಾಡುಗಳನ್ನು ತೆಲುಗಿಗೆ ತೆಗೆದುಕೊಂಡು ಹೋಗಿದ್ದರು.
ಹಾಡುಗಳ ಈ ವರ್ಗಾ-ವರ್ಗಿ ಹೊಸತೂ ಅಲ್ಲ, ನಿಲ್ಲುವುದೂ ಇಲ್ಲ. ತೀರ ಇತ್ತೀಚೆಗಿನ ವರೆಗೂ ಸಹ ಬೇರೆ ಭಾಷೆಗಳಲ್ಲಿ ಸೂಪರ್ ಹಿಟ್ ಆದ ಹಾಡುಗಳನ್ನು ಬೇರೊಂದು ಭಾಷೆಯ ಸಿನಿಮಾಗಳಲ್ಲಿ ಬಳಸಲಾಗುತ್ತದೆ. ಆದರೆ ಇತ್ತೀಚೆಗೆ ಟ್ರೆಂಡ್ ಬದಲಾಗಿದ್ದು, ಅದೇ ಭಾಷೆಯ ಹಳೆಯ ಹಾಡುಗಳನ್ನು ರೀಮಿಕ್ಸ್ ಮೂಲಕ ಬಳಸಲಾಗುತ್ತಿದೆ. ಮಾತ್ರವಲ್ಲದೆ, ಒಟ್ಟಾರೆಯಾಗಿ ಸಿನಿಮಾ ಸಂಗೀತದ ಗುಣಮಟ್ಟವೂ ಕಡಿಮೆ ಆಗಿದೆ ಎಂಬ ದೂರು ಸಹ ಇದೆ. ಇತ್ತೀಚೆಗೆ ಸಿನಿಮಾ ಸಂಗೀತದಲ್ಲಿ ಮಾಧುರ್ಯ ಹೋಗಿ ಅಬ್ಬರ ಬಂದಿದೆ ಎಂಬ ದೂರಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:54 pm, Wed, 29 April 26