‘ನಮ್ಮದು ರಾಮಜನ್ಮ ಭೂಮಿ, ಕೆಲವರಿಂದ ಭಾರತಕ್ಕೆ ಕೆಟ್ಟ ಹೆಸರು’: ರೇಪ್ ಬಗ್ಗೆ ಧ್ರುವ ಸರ್ಜಾ ಗರಂ

|

Updated on: Aug 19, 2024 | 5:31 PM

ಕೊಲ್ಕತ್ತಾದಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ನಡೆದ ಭೀಕರ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಧ್ರುವ ಸರ್ಜಾ ಅವರು ಪ್ರತಿಕ್ರಿಯೆ ನೀಡಿದ್ದಾರೆ. ‘ಮಾರ್ಟಿನ್​’ ಸಿನಿಮಾದ ಪ್ರಚಾರದಲ್ಲಿ ಬ್ಯುಸಿ ಆಗಿರುವ ಅವರು ಈ ಗಂಭೀರ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಅಪರಾಧಿಗಳಿಗೆ ತೀವ್ರ ಶಿಕ್ಷೆ ಆಗಬೇಕು ಎಂದು ಧ್ರುವ ಸರ್ಜಾ ಒತ್ತಾಯಿಸಿದ್ದಾರೆ.

‘ನಮ್ಮದು ರಾಮಜನ್ಮ ಭೂಮಿ, ಕೆಲವರಿಂದ ಭಾರತಕ್ಕೆ ಕೆಟ್ಟ ಹೆಸರು’: ರೇಪ್ ಬಗ್ಗೆ ಧ್ರುವ ಸರ್ಜಾ ಗರಂ
ಧ್ರುವ ಸರ್ಜಾ
Follow us on

ಇಡೀ ದೇಶದಲ್ಲಿ ಅತ್ಯಾಚಾರ ಪ್ರಕರಣಗಳ ವಿರುದ್ಧ ತೀವ್ರ ಖಂಡನೆ ವ್ಯಕ್ತವಾಗುತ್ತಿದೆ. ಹಲವು ಸೆಲೆಬ್ರಿಟಿಗಳು ಈ ಕುರಿತು ಮಾತನಾಡುತ್ತಿದ್ದಾರೆ. ಮಹಿಳೆಯರ ಸುರಕ್ಷತೆ ಬಗ್ಗೆ ಚಿಂತೆ ಮಾಡಬೇಕಾದ ಪರಿಸ್ಥಿತಿ ಕುರಿತಂತೆ ಅನೇಕರು ಮೌನ ಮುರಿದಿದ್ದಾರೆ. ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ಕೊಲ್ಕತ್ತಾದಲ್ಲಿ ನಡೆದ ರೇಪ್​ ಬಗ್ಗೆ ನಟ ಧ್ರುವ ಸರ್ಜಾ ಕೂಡ ಪ್ರತಿಕ್ರಿಯಿಸಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಅವರು ಈ ಬಗ್ಗೆ ವಿಡಿಯೋ ಹಂಚಿಕೊಂಡಿದ್ದಾರೆ. ‘ಮಾರ್ಟಿನ್​’ ಸಿನಿಮಾದ ಬಿಡುಗಡೆಯ ತಯಾರಿಯಲ್ಲಿರುವ ಅವರು ಅತ್ಯಾಚಾರದ ಕೇಸ್​​ಗಳ ಕುರಿತು ವಿಷಾದ ವ್ಯಕ್ತಪಡಿಸಿದ್ದಾರೆ.

‘ಎಲ್ಲರಿಗೂ ನಮಸ್ಕಾರ. ನಾನು ಮಾರ್ಟಿನ್​ ಸಿನಿಮಾದ ಪ್ರಚಾರದಲ್ಲಿ ಇದ್ದೇನೆ ಎಂಬುದು ಹೌದು. ಮಾರ್ಟಿನ್​ ಸಿನಿಮಾವನ್ನು ಒಂದು ನಿಮಿಷ ಪಕ್ಕಕ್ಕೆ ಇಟ್ಟುಬಿಡೋಣ. ಇವತ್ತು ವಿಡಿಯೋ ಮಾಡುತ್ತಿರುವ ಉದ್ದೇಶ, 2024ರ ಆಗಸ್ಟ್​ 14ರ ಅಂಕಿ-ಅಂಶಗಳ ಪ್ರಕಾರ, ಭಾರತದಲ್ಲಿ ಪ್ರತಿ 16 ನಿಮಿಷಕ್ಕೆ ಒಂದು ಹೆಣ್ಮಗು ಮೇಲೆ ಅತ್ಯಾಚಾರ ನಡೆಯುತ್ತಿದೆ. ಎಲ್ಲಿ ಹೆಣ್ಣುಮಕ್ಕಳಿಗೆ ಮರ್ಯಾದೆ, ಗೌರವ ಇರುವುದಿಲ್ಲವೋ ಅಲ್ಲಿ ಭಗವಂತನೇ ಇರುವುದಿಲ್ಲ’ ಎಂದು ಧ್ರುವ ಸರ್ಜಾ ಹೇಳಿದ್ದಾರೆ.

‘ನಮ್ಮದು ರಾಮಜನ್ಮ ಭೂಮಿ. ಕೆಲವರು ಮಾಡುವ ಕೃತ್ಯದಿಂದ ನಮ್ಮ ಭಾರತಕ್ಕೆ ಕೆಟ್ಟ ಹೆಸರು. ಹೆಣ್ಮಕ್ಕಳಿಗೆ ಮಾತ್ರ ಹೀಗಿರಿ, ಹಾಗಿರಿ, ಹೀಗೆಯೇ ಬಟ್ಟೆ ಹಾಕಬೇಕು, ಇದನ್ನೇ ಮಾಡಬೇಕು, ಅದನ್ನೇ ಮಾಡಬೇಕು ಅಂತ ಹೇಳುವುದಕ್ಕಿಂತ ಒಬ್ಬ ಹುಡುಗನನ್ನು ಬೆಳೆಸುವಾಗ ಮೂರು ವಿಷಯ ಕಡ್ಡಾಯವಾಗಿ ಪ್ರತಿಯೊಬ್ಬರ ಮನೆಯಲ್ಲಿ ಹೇಳಿಕೊಡಬೇಕು. ಹೆಣ್ಮಕ್ಕಳನ್ನು ಹೇಗೆ ರಕ್ಷಿಸಬೇಕು, ಹೇಗೆ ಬೆಂಬಲಿಸಬೇಕು, ಹೇಗೆ ಗೌರವಿಸಬೇಕು ಎಂಬುದನ್ನು ಹೇಳಿಕೊಡಲೇಬೇಕು’ ಎಂದಿದ್ದಾರೆ ಧ್ರುವ ಸರ್ಜಾ.

ಇದನ್ನೂ ಓದಿ: 11 ವರ್ಷ ಹಿಂದಿನ ರೇಪ್‌ ಆ್ಯಂಡ್ ಮರ್ಡರ್ ಪ್ರಕರಣ ಭೇದಿಸಿದ ಸಿಐಡಿ: ಮೂವರ ಬಂಧನ

‘ಇಂಥ ರೇಪಿಸ್ಟ್​ಗಳು ಸಿಕ್ಕಿ, ಕಾನೂನಿನ ಪ್ರಕಾರ ಶಿಕ್ಷೆ ಆಗಲಿ ಅಂತ ಆ ಭಗವಂತನಲ್ಲಿ ಕೇಳಿಕೊಳ್ಳುತ್ತೇವೆ. ಅವರಿಗೆ ಎಂಥ ಶಿಕ್ಷೆ ಕೊಟ್ಟರೂ ಸಮಾಧಾನ ಆಗಲ್ಲ. ಇಂಥ ನನ್ಮಕ್ಕಳನ್ನು ನಡುರಸ್ತೆಯಲ್ಲಿ ನಿಲ್ಲಿಸಿ ಜೀವಂತವಾಗಿ ಸುಟ್ಟುಹಾಕಿದರೂ ಸಮಾಧಾನ ಆಗಲ್ಲ. ಆ ಭಗವಂತ ಇಂಥವರಿಗೆ ಒಳ್ಳೆಯದು ಮಾಡದೇ ಇರಲಿ ಅಂತ ಮನಸಾರೆ ಕೇಳಿಕೊಳ್ಳುತ್ತೇನೆ. ನನಗೂ ಹೆಣ್ಣು ಮಗಳು ಇದ್ದಾಳೆ. ಯಾರಿಗೋ ಅನ್ಯಾಯ ಆಗಿದೆ ಎಂದಾಗ ಅವರ ಜೊತೆ ನಾವು ಇರಬೇಕು. ದಯವಿಟ್ಟು ಧ್ವನಿಯೆತ್ತಿ. ಎಲ್ಲರೂ ನ್ಯಾಯ ಕೇಳೋಣ. ಇದು ಭಾರತವನ್ನು ಬದಲಾಯಿಸುವ ಸಮಯ. ನಾವೆಲ್ಲರೂ ಒಂದಾಗಬೇಕು’ ಎಂದು ಧ್ರುವ ಸರ್ಜಾ ವಿಡಿಯೋ ಹಂಚಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 3:27 pm, Mon, 19 August 24