
ಕನ್ನಡ ಹೀರೋನ (Sandalwood Hero) ಅಜಾಗರೂಕ ಚಾಲನೆಯಿಂದ ಬೆಂಗಳೂರಲ್ಲಿ ತಡರಾತ್ರಿ ಸರಣಿ ಅಪಘಾತ ನಡೆದಿದೆ. ಈ ರೀತಿ ಕಾರು ಚಲಾಯಿಸಿದ್ದು ನಟ ಮಯೂರ್ ಪಟೇಲ್. ಬೇಕಾಬಿಟ್ಟಿ ಕುಡಿದು ತಮ್ಮ ಫಾರ್ಚೂರನರ್ ಕಾರನ್ನು ವೇಗವಾಗಿ ಓಡಿಸಿದ್ದಾರೆ ಮಯೂರ್. ಈ ವೇಳೆ ನಿಂತಿದ್ದ ಕಾರುಗಳಿಗೆ ಡಿಕ್ಕಿ ಹೊಡೆದ್ದಾರೆ. ಈ ಸಂಬಂಧ ಮಯೂರ್ ಪಟೇಲ್ ಮೇಲೆ ಪ್ರಕರಣ ದಾಖಲಾಗಿದೆ. ಅವರ ವಿರುದ್ಧ ಆಕ್ರೋಶ ಕೇಳಿ ಬಂದಿದೆ.
2000ನೇ ಇಸ್ವಿಯಲ್ಲಿ ಬಂದ ‘ಆಂಧ್ರ ಹೆಂಡತಿ’ ಸಿನಿಮಾ ಮೂಲಕ ಮಯೂರ್ ಪಟೇಲ್ ಚಿತ್ರರಂಗಕ್ಕೆ ಕಾಲಿಟ್ಟರು. 2003ರಲ್ಲಿ ‘ಮಣಿ’ ಹೆಸರಿನ ಸಿನಿಮಾ ಮಾಡಿದರು. ಈ ಚಿತ್ರ ಕೊಂಚ ಗಮನ ಸೆಳೆಯಿತು. ನಂತರ ‘ಉಡೀಸ್’, ‘ಗುನ್ನ’ ಸೇರಿದಂತೆ ಹಲವು ಸಿನಿಮಾ ಮಾಡಿದರು. ಆದರೆ, ಯಾವ ಚಿತ್ರ ಕೂಡ ಹೆಚ್ಚು ಸದ್ದು ಮಾಡಿಲ್ಲ. ಇಷ್ಟು ದಿನ ಅವರ ಹೆಸರು ಹೆಚ್ಚು ಚರ್ಚೆಯಲ್ಲಿ ಇರಲಿಲ್ಲ. ಈಗ ಬೇಡದ ಕಾರಣಕ್ಕೆ ಮಯೂರ್ ಸುದ್ದಿ ಆಗುತ್ತಿದ್ದಾರೆ.
ಬೆಂಗಳೂರಿನ ದೊಮ್ಮಲೂರು ಬಳಿಯ ಕಮಾಂಡೋ ಆಸ್ಪತ್ರೆ ಬಳಿ ಸರಣಿ ಅಪಘಾತ ನಡೆದಿದೆ. ಮಯೂರ್ ಕುಡಿದು ಕಾರು ಓಡಿಸುತ್ತಿದ್ದರು. ಅವರ ಕಾರು ಗುದ್ದಿದ ರಭಸಕ್ಕೆ ಶ್ರೀನಿವಾಸ್, ಅಭಿಷೇಕ್ ಎಂಬುವರ ಕಾರುಗಳು ಹಾಗೂ ಸರ್ಕಾರಿ ವಾಹನ ಜಖಂ ಆಗಿದೆ. ಆಗ ಅಲ್ಲೇ ಇದ್ದವರು ಕಂಟ್ರೋಲ್ ರೂಮ್ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಹೊಯ್ಸಳ ಪೊಲೀಸರು ಮಯೂರ್ ಪಟೇಲ್ನನ್ನ ಠಾಣೆಗೆ ಕರೆದೊಯ್ದಿದ್ದಾರೆ. ತಪಾಸಣೆ ವೇಳೆ ಕುಡಿದು ವಾಹನ ಚಲಾಯಿಸಿರುವುದು ಸಾಬೀತಾಗಿದೆ.
ಅಪಘಾತದ ಕುರಿತು ಶ್ರೀನಿವಾಸ್ ದೂರು ನೀಡಿದ್ದಾರೆ. ಶ್ರೀನಿವಾಸ್ ನೀಡಿದ ದೂರಿನ ಮೇರೆಗೆ ಎಫ್‌ಐಆರ್ ದಾಖಲು ಮಾಡಲಾಗಿದೆ. ಹಲಸೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಮಯೂರ್ ಪಟೇಲ್ ಕಾರ್ ಸೀಜ್ ಮಾಡಲಾಗಿದೆ. ಅಪಘಾತದ ವೇಳೆ ಮಯೂರ್ ಪಟೇಲ್ ಕಾರಿಗೆ ಇನ್ಸೂರೆನ್ಸ್ ಇಲ್ಲದಿರುವುದು ಪತ್ತೆಯಾಗಿದೆ.
ಇದನ್ನೂ ಓದಿ: ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ? ಉತ್ತರಿಸಿದ ಹೀರೋ
ಅಪಘಾತ ಆಗುತ್ತಿದ್ದಂತೆ ಕಾರಿನಿಂದ ಇಳಿದ ಮಯೂರ್ ಪಟೇಲ್, ‘ಏನೇ ಇದ್ದರೂ ನಾನು ಮಾಡಿಸಿಕೊಡ್ತೀನಿ’ ಎಂದು ಹೇಳುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ.
(ವರದಿ : ವಿಕಾಸ್)
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 6:58 am, Thu, 29 January 26