ಮರಾಠಿ ಕಲಿತು ‘ಆಪರೇಷನ್ ಲಂಡನ್ ಕೆಫೆ’ ಸಿನಿಮಾದಲ್ಲಿ ನಟಿಸಿದ ಮೇಘಾ ಶೆಟ್ಟಿ, ಕವೀಶ್ ಶೆಟ್ಟಿ

|

Updated on: Aug 21, 2024 | 10:39 PM

ಕನ್ನಡದಲ್ಲಿ ಉತ್ತಮ ಕಾಂಟೆಂಟ್​ ಇರುವ ಸಿನಿಮಾಗಳು ಬರುತ್ತಿವೆ. ಟೀಸರ್​ ಮೂಲಕ ‘ಆಪರೇಷನ್ ಲಂಡನ್ ಕೆಫೆ’ ಸಿನಿಮಾ ಸದ್ದು ಮಾಡುತ್ತಿದೆ. ಈ ಚಿತ್ರದಲ್ಲಿ ಕವೀಶ್​ ಶೆಟ್ಟಿ ಮತ್ತು ಮೇಘಾ ಶೆಟ್ಟಿ ಅವರು ಮುಖ್ಯ ಪಾತ್ರಗಳನ್ನು ನಿಭಾಯಿಸಿದ್ದಾರೆ. ಬಹುಭಾಷೆಯಲ್ಲಿ ರಿಲೀಸ್​ ಆಗಲಿರುವ ಈ ಚಿತ್ರಕ್ಕಾಗಿ ಕಲಾವಿದರು ಮರಾಠಿ ಕಲಿತು ಅಭಿನಯಿಸಿದ್ದಾರೆ.

ಮರಾಠಿ ಕಲಿತು ‘ಆಪರೇಷನ್ ಲಂಡನ್ ಕೆಫೆ’ ಸಿನಿಮಾದಲ್ಲಿ ನಟಿಸಿದ ಮೇಘಾ ಶೆಟ್ಟಿ, ಕವೀಶ್ ಶೆಟ್ಟಿ
ಮೇಘಾ ಶೆಟ್ಟಿ, ಕವೀಶ್​ ಶೆಟ್ಟಿ
Follow us on

ಕಿರುತೆರೆಯಿಂದ ಬಂದ ನಟಿ ಮೇಘಾ ಶೆಟ್ಟಿ ಅವರಿಗೆ ಈಗ ಸಿನಿಮಾಗಳ ಅವಕಾಶಗಳು ಹೇರಳವಾಗಿ ಸಿಗುತ್ತಿವೆ. ಕವೀಶ್​ ಶೆಟ್ಟಿ ಜೊತೆ ಮೇಘಾ ಶೆಟ್ಟಿ ನಟಿಸಿರುವ ‘ಆಪರೇಷನ್​ ಲಂಡನ್​ ಕೆಫೆ’ ಸಿನಿಮಾದ ಟೀಸರ್​ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಒಂದು ಗಂಭೀರವಾದ ಕಹಾನಿ ಇದೆ. ಇದು ಕನ್ನಡ ಮತ್ತು ಮರಾಠಿಯಲ್ಲಿ ಏಕಕಾಲಕ್ಕೆ ನಿರ್ಮಾಣ ಆಗಿರುವ ಸಿನಿಮಾ. ಹಾಗಾಗಿ ಕನ್ನಡದ ಕಲಾವಿದರು ಮರಾಠಿ ಕಲಿತು ನಟಿಸಿದ್ದಾರೆ. ಹಾಗೆಯೇ, ಮರಾಠಿ ಕಲಾವಿದರು ಕನ್ನಡ ಕಲಿತು ಅಭಿನಯಿಸಿದ್ದಾರೆ. ಇತ್ತೀಚೆಗೆ ಈ ಸಿನಿಮಾದ ಟೀಸರ್​ ರಿಲೀಸ್​ ಕಾರ್ಯಕ್ರಮ ನಡೆಯಿತು

‘ಆಪರೇಷನ್​ ಲಂಡನ್​ ಕೆಫೆ’ ಸಿನಿಮಾ ಕನ್ನಡ, ಮರಾಠಿ, ತೆಲುಗು, ಹಿಂದಿ, ತಮಿಳು, ಮಲಯಾಳಂ ಭಾಷೆಯಲ್ಲಿ ತೆರೆಕಾಣಲಿದೆ. ಈಗಾಗಲೇ ಈ ಸಿನಿಮಾದ ಶೂಟಿಂಗ್​ ಪೂರ್ಣಗೊಂಡಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಟೀಸರ್​ ನೋಡಿದ ಪ್ರೇಕ್ಷಕರಿಂದ ಪಾಸಿಟಿವ್​ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದರಿಂದ ಸಿನಿಮಾ ತಂಡದವರ ಆತ್ಮವಿಶ್ವಾಸ ಹೆಚ್ಚಾಗಿದೆ. ಚಿತ್ರದ ಬಗ್ಗೆ ಮೇಘಾ ಶೆಟ್ಟಿ, ಕವೀಶ್​ ಶೆಟ್ಟಿ ಮುಂತಾದವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಈ ಸಿನಿಮಾಗೆ ಸಡಗರ ರಾಘವೇಂದ್ರ ಅವರು ನಿರ್ದೇಶನ ಮಾಡಿದ್ದಾರೆ. ಇದು ಅವರ ಮೊದಲ ಸಿನಿಮಾ. ‘ಕವೀಶ್ ಶೆಟ್ಟಿ ಅವರು ಈ ಅವಕಾಶವನ್ನು ನನಗೆ ಕಲ್ಪಿಸಿಕೊಟ್ಟರು. ನಕ್ಸಲಿಸಂ ಕೇಂದ್ರವಾಗಿಟ್ಟುಕೊಂಡು ಮಾಡಿದೆ ಸಿನಿಮಾ ಇದು. ಆದರೂ ಇದರಲ್ಲಿ ನಕ್ಸಲಿಸಂ ವೈಭವೀಕರಣ ಮಾಡಿಲ್ಲ. ಯಾವುದೇ ಓರ್ವ ವ್ಯಕ್ತಿಯ ಕುರಿತಾದ ಸಿನಿಮಾ ಕೂಡ ಇದಲ್ಲ’ ಎಂದು ನಿರ್ದೇಶಕರು ಹೇಳಿದ್ದಾರೆ.

ಅಂದಹಾಗೆ, ‘ಆಫ್ಟರ್ ಆಪರೇಷನ್ ಲಂಡನ್ ಕೆಫೆ’ ಎಂಬುದು ಇದರ ಪೂರ್ಣ ಶೀರ್ಷಿಕೆ. ‘ಪ್ರೇಕ್ಷಕರು ಮೊದಲು ನೋಡುವುದು ಪ್ರೀಕ್ವೆಲ್. ಆನಂತರ ಮೊದಲ ಭಾಗ ಬರಲಿದೆ. ಮೊದಲ ಭಾಗದ ಕೆಲಸ ಈಗಾಗಲೇ ಆರಂಭವಾಗಿದೆ’ ಎಂದು ನಿರ್ದೇಶಕ ಸಡಗರ ರಾಘವೇಂದ್ರ ಮಾಹಿತಿ ನೀಡಿದ್ದಾರೆ. ಸಿನಿಮಾಗೆ ಸಹಕಾರ ನೀಡಿದ ಎಲ್ಲರಿಗೂ ನಟ ಕವೀಶ್​ ಶೆಟ್ಟಿ ಅವರು ಧನ್ಯವಾದ ಅರ್ಪಿಸಿದರು.

‘ನಾವು ಈ ಚಿತ್ರಕ್ಕಾಗಿ ಮರಾಠಿ ಕಲಿತೆವು. ಅದೇ ರೀತಿ, ಮರಾಠಿ ಕಲಾವಿದರು ತುಂಬ ಚೆನ್ನಾಗಿ ಕನ್ನಡ ಕಲಿತು ನಮ್ಮ ಜೊತೆ ಮಾತನಾಡಿದರು. ಅದು ನಮಗೆ ಖುಷಿ ಆಯಿತು. ಮರಾಠಿ ಕಲಿಯಬೇಕು ಎಂದಾಗ ನನಗೆ ಭಯ ಆಗಿತ್ತು. ಯಾಕೆಂದರೆ ಆ ಭಾಷೆಯನ್ನು ನಾನು ಎಂದಿಗೂ ಮಾತನಾಡಿರಲಿಲ್ಲ. ಮರಾಠಿ ಕಲಾವಿದರ ಜೊತೆ ಹೇಗೆ ನಟಿಸುವುದು ಎಂಬ ಭಯವಿತ್ತು. ಮರಾಠಿ ಟೀಚರ್​ ನೇಮಿಸಿಕೊಂಡು ಕಲಿತೆವು’ ಎಂದು ಮೇಘಾ ಶೆಟ್ಟಿ ಹೇಳಿದ್ದಾರೆ.

ಇದನ್ನೂ ಓದಿ: ಮಸ್ತ್​ ಆಗಿವೆ ನೋಡಿ ನಟಿ ಮೇಘಾ ಶೆಟ್ಟಿಯ ಹೊಸ ಫೋಟೋಗಳು..

‘ಇಂಡಿಯನ್ ಫಿಲ್ಮ್ ಫ್ಯಾಕ್ಟರಿ’ ಮತ್ತು ‘ದೀಪಕ್ ರಾಣೆ ಫಿಲ್ಮ್’ ಬ್ಯಾನರ್​ ಮೂಲಕ ವಿಜಯ್ ಕುಮಾರ್ ಶೆಟ್ಟಿ, ಹವರಾಲ್, ದೀಪಕ್ ರಾಣೆ, ರಮೇಶ್ ಕೊಠಾರಿ ಅವರು ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಎನ್.ಡಿ. ನಾಗಾರ್ಜುನ್ ಛಾಯಾಗ್ರಹಣ ಮಾಡಿದ್ದಾರೆ. ಮಾಸ್ ಮಾದ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. ಅರ್ಜುನ್ ಕಾಪಿಕ್ಕಾಡ್, ವಿರಾಟ್ ಮಡಕೆ ಮುಂತಾದವರು ಕೂಡ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.