ಕೊಲೆ ಕೇಸ್​ನಲ್ಲಿ ದರ್ಶನ್​ಗೆ ಹೆಚ್ಚಿದ ಸಂಕಷ್ಟ; A2ನಿಂದ A1 ಮಾಡಿ ಚಾರ್ಜ್​ಶೀಟ್​ ಸಲ್ಲಿಕೆಗೆ ಸಿದ್ಧತೆ

ರೇಣುಕಾ ಸ್ವಾಮಿ ಕೊಲೆ ಕೇಸ್​ನಲ್ಲಿ ದರ್ಶನ್​ಗೆ ಸಂಕಷ್ಟ ಜಾಸ್ತಿ ಆಗಿದೆ. ಅವರನ್ನು ಎ1 ಮಾಡಿ ಜಾರ್ಜ್​ಶೀಟ್​ ಸಲ್ಲಿಸಲು ಪೊಲೀಸರು ಸಜ್ಜಾಗಿದ್ದಾರೆ. ಕೊಲೆಯ ಪ್ರಮುಖ ಸೂತ್ರಧಾರ ದರ್ಶನ್​ ಎಂಬುದು ಖಚಿತವಾದರೆ ಶಿಕ್ಷೆಯ ಪ್ರಮಾಣ ಹೆಚ್ಚಲಿದೆ. ಈಗಾಗಲೇ ತನಿಖೆ ಅಂತಿಮ ಹಂತಕ್ಕೆ ಬಂದಿದೆ. ಎಫ್​ಎಸ್​ಎಲ್​ ವರದಿಯಲ್ಲಿ ನಟನ ವಿರುದ್ಧ ಪ್ರಮುಖ ಸಾಕ್ಷಿಗಳು ಸಿಕ್ಕಿವೆ.

ಕೊಲೆ ಕೇಸ್​ನಲ್ಲಿ ದರ್ಶನ್​ಗೆ ಹೆಚ್ಚಿದ ಸಂಕಷ್ಟ; A2ನಿಂದ A1 ಮಾಡಿ ಚಾರ್ಜ್​ಶೀಟ್​ ಸಲ್ಲಿಕೆಗೆ ಸಿದ್ಧತೆ
ರೇಣುಕಾ ಸ್ವಾಮಿ, ದರ್ಶನ್​
Follow us
ರಾಚಪ್ಪಾಜಿ ನಾಯ್ಕ್
| Updated By: ಮದನ್​ ಕುಮಾರ್​

Updated on: Aug 21, 2024 | 8:32 PM

ನಟ ದರ್ಶನ್​ ಅವರು ಕೊಲೆ ಆರೋಪದಲ್ಲಿ ಜೈಲು ಸೇರಿದ್ದು, ದಿನದಿಂದ ದಿನಕ್ಕೆ ಅವರಿಗೆ ಸಂಕಷ್ಟ ಹೆಚ್ಚಾಗುತ್ತಿದೆ. ರೇಣುಕಾ ಸ್ವಾಮಿ ಮರ್ಡರ್​ ಕೇಸ್​ನಲ್ಲಿ ಈವರೆಗೂ ದರ್ಶನ್​ ಎರಡನೇ ಆರೋಪಿ (ಎ2) ಆಗಿದ್ದರು. ನಟಿ ಪವಿತ್ರಾ ಗೌಡ ಎ1 ಆಗಿದ್ದರು. ಆದರೆ ಈಗ ಬೆಂಗಳೂರು ಪೊಲೀಸರು ಚಾರ್ಜ್​ಶೀಟ್​ ಸಲ್ಲಿಸಲು ಮುಂದಾಗಿದ್ದು, ದರ್ಶನ್​ ಅವರನ್ನು ಎ1 ಮಾಡುವುದು ಬಹುತೇಕ ಖಚಿತ ಎಂಬ ಮಾಹಿತಿ ಸಿಕ್ಕಿದೆ. ಇದರಿಂದ ದರ್ಶನ್​ ಅವರಿಗೆ ಸಂಕಷ್ಟ ಜಾಸ್ತಿ ಆಗಲಿದೆ. ರೇಣುಕಾಸ್ವಾಮಿ ಕೊಲೆ ಕೇಸ್​ನ ತನಿಖೆ ಈಗ ಕೊನೇ ಹಂತಕ್ಕೆ ಬಂದು ನಿಂತಿದೆ.

ರೇಣುಕಾಸ್ವಾಮಿ ಹತ್ಯೆ ಕೇಸ್ ಬೆಳಕಿಗೆ ಬಂದು, ಪೊಲೀಸರು ತನಿಖೆ ಆರಂಭಿಸಿದಾಗ ದರ್ಶನ್​ ಅವರನ್ನು ಎ2 ಎಂದು ಪರಿಗಣಿಸಲಾಗಿತ್ತು. ಪವಿತ್ರಾ ಗೌಡ ಅವರ ಕಾರಣದಿಂದಲೇ ಕೊಲೆ ನಡೆದಿರುವ ಶಂಕೆ ಇರುವುದರಿಂದ ಆಕೆ ಎ1 ಆಗಿದ್ದರು. ಆದರೆ ತನಿಖೆ ವೇಳೆ ನಟನ ವಿರುದ್ಧ ಹಲವು ಪ್ರಮುಖ ಸಾಕ್ಷಿಗಳು ಸಿಕ್ಕವು. ದರ್ಶನ್ ಅಣತಿಯಂತೆ ಅಪಹರಣ ನಡೆಸಿ, ನಂತರ ಹಲ್ಲೆ ಮಾಡಿ ಹತ್ಯೆ ನಡೆಸಿದ್ದಕ್ಕೆ ಸಾಕ್ಷಿಗಳು ಸಿಕ್ಕಿವೆ. ಹತ್ಯೆ ಬಳಿಕ ಶವ ವಿಲೇವಾರಿಗೆ ದರ್ಶನ್ ಹಣ ಕೊಟ್ಟಿದ್ದು ಕೂಡ ತಿಳಿದು ಬಂದಿದೆ.

ಈ ಎಲ್ಲ ಪ್ರಮುಖ ಸಾಕ್ಷಿಗಳು ದರ್ಶನ್​ ವಿರುದ್ಧವಾಗಿ ಇರುವುದರಿಂದ ಅವರೇ ಈ ಕೇಸ್​ನಲ್ಲಿ ಎ1 ಆಗುವ ಸಾಧ್ಯತೆ ದಟ್ಟವಾಗಿದೆ. A2ನಿಂದ A1 ಮಾಡಿ ಚಾರ್ಜ್​ಶೀಟ್​ ಸಲ್ಲಿಕೆ ಮಾಡಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಒಂದು ವೇಳೆ ಇದು ಖಚಿತವಾದರೆ ರೇಣುಕಾಸ್ವಾಮಿ ಕೊಲೆಗೆ ದರ್ಶನ್​ ಅವರೇ ಸೂತ್ರಧಾರ ಎಂಬುದು ಖಚಿತವಾಗಲಿದೆ. ಇದರಿಂದ ನಟನಿಗೆ ಶಿಕ್ಷೆಯ ಪ್ರಮಾಣ ಹೆಚ್ಚಾಗಲಿದೆ.

ಇದನ್ನೂ ಓದಿ: ಜೈಲಿನಲ್ಲಿ ರಾಖಿ ಕಟ್ಟಿಸಿಕೊಳ್ಳದೇ ಧಿಮಾಕು ತೋರಿದ ದರ್ಶನ್​ ಸ್ನೇಹಿತೆ ಪವಿತ್ರಾ ಗೌಡ

ಹೈಪ್ರೊಫೈಲ್​ ಕೇಸ್​ ಆದ್ದರಿಂದ ತುಂಬ ಗಂಭೀರವಾಗಿ ತನಿಖೆ ನಡೆದಿದೆ. ಹಲವು ಬಗೆಯ ಸಾಕ್ಷಿಗಳನ್ನು ಕಲೆ ಹಾಕಲಾಗಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಗಳ ಮೊಬೈಲ್ ರಿಟ್ರೀವ್​ ಮಾಡಲಾಗಿದೆ. ಇದರಲ್ಲಿ ರೇಣುಕಾ ಸ್ವಾಮಿಯ ನಾಲ್ಕು ಫೋಟೋಗಳು ಲಭ್ಯವಾಗಿವೆ. ಸಾಯುವುದಕ್ಕೂ ಮುನ್ನ ರಕ್ತಸಿಕ್ತವಾಗಿದ್ದ ಆತ ಕೈ ಮುಗಿದು ಬೇಡಿಕೊಳ್ಳುತ್ತಿರುವ ಫೋಟೋ ಕೂಡ ಪೊಲೀಸರಿಗೆ ಸಿಕ್ಕಿದೆ. ಆರೋಪಿಗಳಾದ ಪ್ರದೋಶ್ ಮತ್ತು ಇನ್ನೊಬ್ಬನ ಮೊಬೈಲ್​ನಿಂದ ಈ ಫೋಟೋ ರಿಟ್ರೀವ್ ಆಗಿದೆ. ಇದು ಪ್ರಮುಖ ಸಾಕ್ಷಿ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.