ಜೂ ಎನ್​​ಟಿಆರ್-ಪ್ರಶಾಂತ್ ನೀಲ್ ಸಿನಿಮಾ ಬಗ್ಗೆ ರವಿ ಬಸ್ರೂರು ಹೇಳಿದ್ದೇನು?

Jr NTR and Prashanth Neel: ಜೂ ಎನ್​ಟಿಆರ್ ಸಿನಿಮಾವನ್ನು ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದ ಹೊಸ ಅಪ್​​ಡೇಟ್ ಇತ್ತೀಚೆಗೆ ಹೊರಬಿದ್ದಿರಲಿಲ್ಲ. ಈ ಸಿನಿಮಾಕ್ಕೆ ರವಿ ಬಸ್ರೂರು ಅವರು ಸಂಗೀತ ನೀಡುತ್ತಿದ್ದಾರೆ. ಜೂ ಎನ್​ಟಿಆರ್ ಮತ್ತು ಪ್ರಶಾಂತ್ ನೀಲ್ ಅವರ ಸಿನಿಮಾದ ಬಗ್ಗೆ ಇದೀಗ ರವಿ ಬಸ್ರೂರು ಅವರು ಮಾತನಾಡಿದ್ದಾರೆ. ಈ ಸಿನಿಮಾ ಅದ್ಧೂರಿಯಾಗಿರುವ ಜೊತೆಗೆ ಭಾವನಾತ್ಮಕತೆಯನ್ನು ಒಳಗೊಂಡಿರಲಿದೆಯಂತೆ.

ಜೂ ಎನ್​​ಟಿಆರ್-ಪ್ರಶಾಂತ್ ನೀಲ್ ಸಿನಿಮಾ ಬಗ್ಗೆ ರವಿ ಬಸ್ರೂರು ಹೇಳಿದ್ದೇನು?
Ravi Basrur

Updated on: Nov 18, 2025 | 5:30 PM

ರವಿ ಬಸ್ರೂರು (Ravi Basruru) ಕನ್ನಡ ಚಿತ್ರರಂಗದ ಜನಪ್ರಿಯ ಸಂಗೀತ ನಿರ್ದೇಶಕ. ‘ಕೆಜಿಎಫ್’ ಸಿನಿಮಾಗಳ ಬಳಿಕ ಈಗ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬ್ಯುಸಿಯಾಗಿದ್ದಾರೆ. ಸಲ್ಮಾನ್ ಖಾನ್ ಅಂಥ ಸ್ಟಾರ್ ನಟರುಗಳಿಗೂ ಸಹ ರವಿ ಬಸ್ರೂರು ಸಂಗೀತವೇ ಬೇಕಾಗಿದೆ. ಇದೀಗ ರವಿ ಬಸ್ರೂರು ಕನ್ನಡ ಸೇರಿದಂತೆ ಹಲವು ಭಾಷೆಯ ಸಿನಿಮಾಗಳಿಗಾಗಿ ಕೆಲಸ ಮಾಡುತ್ತಿದ್ದಾರೆ. ಇವುಗಳ ಜೊತೆಗೆ ಪ್ರಶಾಂತ್ ನೀಲ್ ನಿರ್ದೇಶಿಸಿ ಜೂ ಎನ್​​ಟಿಆರ್ ನಟಿಸುತ್ತಿರುವ ಹೊಸ ಸಿನಿಮಾಕ್ಕೂ ರವಿ ಬಸ್ರೂರು ಅವರದ್ದೇ ಸಂಗೀತ. ಈ ಸಿನಿಮಾದ ಬಗ್ಗೆ ಕೆಲ ಗುಟ್ಟಿನ ವಿಷಯಗಳನ್ನು ರವಿ ಬಸ್ರೂರು ಹಂಚಿಕೊಂಡಿದ್ದಾರೆ.

ಜೂ ಎನ್​​ಟಿಆರ್-ಪ್ರಶಾಂತ್ ನೀಲ್ ಸಿನಿಮಾಕ್ಕೆ ಯಾವ ರೀತಿಯ ಸಂಗೀತ ಇರಲಿದೆ ಎಂಬುದನ್ನು ರವಿ ಬಸ್ರೂರು ಹೇಳಿದ್ದಾರೆ. ‘ಜೂ ಎನ್​​ಟಿಆರ್-ನೀಲ್ ಸಿನಿಮಾ ಭಾರಿ ಬೃಹತ್ ಸಿನಿಮಾ ಆಗಿರಲಿದೆ. ಸಂಗೀತ ಮತ್ತು ದೃಶ್ಯ ಎರಡೂ ವಿಭಾಗಗಳಲ್ಲಿಯೂ ಸಹ ಈ ಸಿನಿಮಾ ಅದ್ಧೂರಿಯಾಗಿಯೇ ಇರಲಿದೆ. ಈ ಸಿನಿಮಾ ಅದ್ಧೂರಿ ಆಗಿರುವ ಜೊತೆಗೆ ನೆಲದ ಕತೆಯನ್ನೂ ಸಹ ಹೊಂದಿರಲಿದೆ. ಇದೊಂದು ಹಲವು ಶೇಡ್​​ಗಳು ಇರುವ ಕತೆಯಾಗಿದೆ’ ಎಂದಿದ್ದಾರೆ ರವಿ ಬಸ್ರೂರು.

‘ಈ ಸಿನಿಮಾಕ್ಕಾಗಿ ಭಿನ್ನ ರೀತಿಯ ಸಂಗೀತವನ್ನು ನೀಡತ್ತಿದ್ದೇನೆ. ಈ ಹಿಂದೆ ‘ಕೆಜಿಎಫ್’, ‘ಸಲಾರ್’ ಸಿನಿಮಾಗಳ ರೀತಿಯಲ್ಲಿ ಅಲ್ಲದೆ, ಸಂಪೂರ್ಣ ಭಿನ್ನವಾಗಿರುವ ಸಂಗೀತವನ್ನು ಬಳಸಲಿದ್ದೇನೆ. ಹಿಂದೆ ನಾನು ಎಂದೂ ಬಳಸದೇ ಇದ್ದ ವಾದ್ಯಗಳನ್ನು ಸಹ ಈ ಸಿನಿಮಾಕ್ಕಾಗಿ ಬಳಸುತ್ತಿದ್ದೇನೆ. ಈ ಸಿನಿಮಾನಲ್ಲಿ ಸಂಗೀತ ಅದ್ಧೂರಿ ಆಗಿರುವ ಜೊತೆಗೆ ಭಾವನಾತ್ಮಕವಾಗಿಯೂ ಪ್ರೇಕ್ಷಕರನ್ನು ಸೆಳೆಯಲಿದೆ’ ಎಂದಿದ್ದಾರೆ.

ಇದನ್ನೂ ಓದಿ:ಕಪ್ಪು-ಕಪ್ಪು ಸಿನಿಮಾಗಳಿಂದ ಕಗ್ಗತ್ತಲ ಸಿನಿಮಾಗಳ ಕಡೆ ಹೊರಳಿದ ಪ್ರಶಾಂತ್ ನೀಲ್

ಪ್ರಶಾಂತ್ ನೀಲ್ ಅವರ ಈ ವರೆಗಿನ ಎಲ್ಲ ಸಿನಿಮಾಗಳಿಗೂ ರವಿ ಬಸ್ರೂರು ಅವರೇ ಸಂಗೀತ ನೀಡಿದ್ದಾರೆ. ಈಗ ಜೂ ಎನ್​​ಟಿಆರ್ ನಟಿಸುತ್ತಿರುವ ಹೊಸ ಸಿನಿಮಾಕ್ಕೂ ಅವರದ್ದೇ ಸಂಗೀತ. ಸಿನಿಮಾನಲ್ಲಿ ಜೂ ಎನ್​​ಟಿಆರ್ ದ್ವಿಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದ್ದು, ಇದೇ ಕಾರಣಕ್ಕೆ ರವಿ ಬಸ್ರೂರು ಸಹ ಎರಡು ಥೀಮ್ ಸಂಗೀತವನ್ನು ಸಿನಿಮಾಕ್ಕೆ ನೀಡಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಜೂ ಎನ್​​ಟಿಆರ್-ಪ್ರಶಾಂತ್ ನೀಲ್ ಸಿನಿಮಾನಲ್ಲಿ ರುಕ್ಮಿಣಿ ವಸಂತ್ ನಾಯಕಿಯಾಗಿ ನಟಿಸಿದ್ದಾರೆ. ಸಿನಿಮಾದ ಚಿತ್ರೀಕರಣ ಕರ್ನಾಟಕದ ಕರಾವಳಿ ಭಾಗ ಹಾಗೂ ಹೈದರಾಬಾದ್​​ನಲ್ಲಿ ಚಿತ್ರೀಕರಣ ಮಾಡಲಾಗಿದೆ. ಸಿನಿಮಾದ ಚಿತ್ರೀಕರಣ ಕೊನೆಯ ಹಂತದಲ್ಲಿದ್ದು, ಮುಂದಿನ ವರ್ಷ ಸಿನಿಮಾ ತೆರೆಗೆ ಬರಲಿದೆ. ಸಿನಿಮಾಕ್ಕೆ ಮೈತ್ರಿ ಮೂವಿ ಮೇಕರ್ಸ್ ಬಂಡವಾಳ ಹೂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:02 pm, Tue, 18 November 25