ಜಗ್ಗೇಶ್ ಚಿತ್ರರಂಗಕ್ಕೆ ಕಾಲಿಟ್ಟು ಕಳೆಯಿತು 45 ವರ್ಷ; ನೆನಪಿನ ಪುಟ ತೆರೆದ ನವರಸ ನಾಯಕ
ಯಾವುದೇ ಹಿನ್ನೆಲೆ ಇಲ್ಲದೇ ಬಂದ ನಟ ಜಗ್ಗೇಶ್ ಅವರು ಕನ್ನಡ ಚಿತ್ರರಂಗದಲ್ಲಿ ಸಾಧನೆ ಮಾಡಿದರು. ಅವರು ಬಣ್ಣದ ಲೋಕಕ್ಕೆ ಎಂಟ್ರಿ ನೀಡಿ ಇಂದಿಗೆ (ನವೆಂಬರ್ 17) 45 ವರ್ಷಗಳನ್ನು ಪೂರೈಸಿದ್ದಾರೆ. ಈ ಪ್ರಯುಕ್ತ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಸಿನಿಜರ್ನಿಯ ನೆನಪು ಮೆಲುಕು ಹಾಕಿದ್ದಾರೆ.

ಖ್ಯಾತ ನಟ ಜಗ್ಗೇಶ್ (Jaggesh) ಅವರು ಚಿತ್ರರಂಗದಲ್ಲಿ ನಾಲ್ಕೂವರೆ ದಶಕಗಳ ಅನುಭವ ಹೊಂದಿದ್ದಾರೆ. ಅನೇಕ ಏಳು-ಬೀಳುಗಳನ್ನು ಅವರು ನೋಡಿದ್ದಾರೆ. ಇಂದಿಗೆ (ನವೆಂಬರ್ 17) ‘ನವರಸ ನಾಯಕ’ ಜಗ್ಗೇಶ್ ಅವರು ಚಿತ್ರರಂಗಕ್ಕೆ (Kannada Film Industry) ಕಾಲಿಟ್ಟು ಬರೋಬ್ಬರಿ 45 ವರ್ಷಗಳು ಕಳೆದಿವೆ. ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡುವ ಮೂಲಕ ಅವರು ಜನರನ್ನು ರಂಜಿಸಿದ್ದಾರೆ. ಸ್ಟಾರ್ ನಟನಾಗಿ ಯಶಸ್ಸು ಕಂಡಿದ್ದಾರೆ. ಎಷ್ಟೇ ಸಾಧನೆ ಮಾಡಿದರೂ ಕೂಡ ಅವರು ತಮಗೆ ಅವಕಾಶ ಕೊಟ್ಟವರನ್ನು ಇಂದಿಗೂ ಮರೆತಿಲ್ಲ. ಸೋಶಿಯಲ್ ಮೀಡಿಯಾ ಮೂಲಕ ಅವರು ಎಲ್ಲವನ್ನೂ ನೆನಪು ಮಾಡಿಕೊಂಡಿದ್ದಾರೆ. ಅವರ ಪೋಸ್ಟ್ ಇಲ್ಲಿದೆ..
‘1980 ನವಂಬರ್ 17ನೇ ತಾರೀಖು. ಆಗ ನನಗೆ 18 ವರ್ಷ ವಯಸ್ಸು. ನಾನು ಬಣ್ಣಹಚ್ಚಿ ನಟಿಸಿದ ಚಿತ್ರ ‘ಕನ್ನಡತಿ ಮಾನವತಿ’. ಸ್ಥಳ ಗುಬ್ಬಿ ಚನ್ನಬಸವೇಶ್ವರ ಆಲಯ. ಬಣ್ಣ ಹಚ್ಚಿದವರು ಅಂಬರೀಶ್ ಅವರ ಮೇಕಪ್ ಮಾಡುತ್ತಿದ್ದ ರಾಮಕೃಷ್ಣ ಹಾಗೂ ಅವರ ಶಿಷ್ಯ ಕೃಷ್ಣ. ಪಾತ್ರ ಕೊಡಿಸಿದವ ನನ್ನ ಮಿತ್ರ ಶಂಭು’ ಎಂದು ಜಗ್ಗೇಶ್ ಅವರು ಆ ದಿನಗಳ ಪುಟ ತೆರೆದಿದ್ದಾರೆ.
‘ನನಗೆ ಮೀಸೆ ಬರೆದವರು ಹಾಸ್ಯನಟ ರನ್ನಾಕರ್. ಚಿತ್ರದ ನಾಯಕ ರಾಮಕೃಷ್ಣ. ನಾಯಕಿ ಪ್ರಮೀಳ ಜೋಯ್ಸ್. ನನ್ನ ಜೊತೆ ನಟಿಸಿದ ನಟಿ ಸಿಹಿಕಹಿ ಗೀತಾ ಅಕ್ಕ. ಚಿತ್ರ ಬಿಡುಗಡೆ ಆಗಲಿಲ್ಲ. ನನ್ನ ಅದೃಷ್ಟ ನಿರ್ದೇಶಕ ಸಿದ್ದಲಿಂಗಯ್ಯ ಅವರ ಮಗ ಮುರಳಿ ಅವರ ಚಿತ್ರ ‘ಬಿಳಿ ಗುಲಾಬಿ’ ಸಿಗಲು ಕಾರಣವಾದರು ಪುಟ್ಟಣ್ಣ ಕಣಗಲ್ ಅವರ ಸಹಾಯಕ ನಿರ್ದೇಶಕ ದಿವಂಗತ ಅರಕಲಗೂಡು ನಂಜುಂಡ’ ಎಂದಿದ್ದಾರೆ ಜಗ್ಗೇಶ್.
View this post on Instagram
‘ನಂತರ ಕೆ.ವಿ. ಜಯರಾಂ ಅವರ ಕೃಪೆಯಿಂದ ಅವರ ‘ಇಬ್ಬನಿ ಕರಗಿತು’ ಸಿನಿಮಾದಲ್ಲಿ ಮುಂದುವರಿದು, 1984ರಲ್ಲಿ ‘ಶ್ವೇತ ಗುಲಾಬಿ’ ಚಿತ್ರದ ಅವಕಾಶ ಸಿಕ್ಕು ನಂತರ ಪರಿಮಳ ನಾನು ಮದುವೆಯಾಗಿ ಸ್ಟೇಷನ್ ಸುಪ್ರೀಮ್ ಕೋರ್ಟು ಅವಾಂತರ ಮುಗಿಸಿ ನಂತರ ಹಿಂದೆ ನೋಡದೇ ರಾಯರ ಕೃಪೆಯಿಂದ ಅಂದಿನ ಕನ್ನಡ ಪ್ರೇಕ್ಷಕರ ಪ್ರೀತಿ ಚಪ್ಪಾಳೆಯಿಂದ ವಿವಿಧ ಪಾತ್ರ ಮಾಡುತ್ತ ಬೆಳೆದುನಿಂತೆ’ ಎಂದು ಜಗ್ಗೇಶ್ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಆರ್ಟ್ ಆಫ್ ಲಿವಿಂಗ್ ಗೋಶಾಲೆಯಲ್ಲಿ ಕಾಲ ಕಳೆದ ನಟ ಜಗ್ಗೇಶ್
‘ಇಂದಿಗೆ ನನ್ನ ಸಿನಿಮಾ ಪ್ರಯಾಣಕ್ಕೆ 45 ವರ್ಷ ಆಯುಷ್ಯ. ನಡೆದು ಬಂದ ದಾರಿ ನೆನಪಿನ ಬುತ್ತಿ. ಮುಂದೆಯೂ ನಿಮ್ಮ ಪ್ರೀತಿ ನನ್ನ ಮೇಲಿರಲಿ ಹಾಗೂ ನನ್ನಂತೆ ಮುಂದೆ ಚಿತ್ರರಂಗಕ್ಕೆ ಬರುವ ಹೊಸ ಕಲಾವಿದರ ಹರಸಿ ಬೆಳೆಸಿ. ಶುಭಸಂಜೆ’ ಎಂದು ಜಗ್ಗೇಶ್ ಅವರು ಪೋಸ್ಟ್ ಮಾಡಿದ್ದಾರೆ. ಚಿತ್ರರಂಗದಲ್ಲಿ ಖ್ಯಾತಿ ಪಡೆದ ಅವರು ರಾಜಕೀಯದಲ್ಲೂ ಯಶಸ್ಸು ಕಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




