ದರ್ಬಾರ್ ಮೂಲಕ 23 ವರ್ಷದ ಬಳಿಕ ಮತ್ತೆ ನಿರ್ದೇಶಕನ ಟೋಪಿ ತೊಟ್ಟ ವಿ ಮನೋಹರ್

|

Updated on: May 29, 2023 | 12:08 AM

V Manohar: ಸಂಗೀತ ನಿರ್ದೇಶಕ ವಿ ಮನೋಹರ್ ಎರಡು ದಶಕಗಳ ಬಳಿಕ ಸಿನಿಮಾ ನಿರ್ದೇಶನಕ್ಕೆ ಕೈ ಹಾಕಿದ್ದಾರೆ.

ದರ್ಬಾರ್ ಮೂಲಕ 23 ವರ್ಷದ ಬಳಿಕ ಮತ್ತೆ ನಿರ್ದೇಶಕನ ಟೋಪಿ ತೊಟ್ಟ ವಿ ಮನೋಹರ್
ವಿ ಮನೋಹರ್
Follow us on

ಸಂಗೀತ ನಿರ್ದೇಶಕರು (Music Director) ಸಿನಿಮಾ ನಿರ್ದೇಶಕರಾಗುವುದು ಕನ್ನಡ ಚಿತ್ರರಂಗಕ್ಕೆ ಹೊಸದೇನೂ ಅಲ್ಲ. ಈ ಹಿಂದೆ ಕೆಲವು ಅತ್ಯುತ್ತಮ ಸಂಗೀತ ನಿರ್ದೇಶಕರು ಸಿನಿಮಾ ನಿರ್ದೇಶನವನ್ನೂ ಮಾಡಿ ಗಮನ ಸೆಳೆದಿದ್ದಾರೆ. ಇತ್ತೀಚೆಗೆ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ (Arjun Janya) ಸಹ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಇದೀಗ ಚಂದನವನದ ಮತ್ತೊಬ್ಬ ಯಶಸ್ವಿ, ಜನಪ್ರಿಯ ಸಂಗೀತ ನಿರ್ದೇಶಕ ವಿ.ಮನೋಹರ್ ಸಹ ಸಿನಿಮಾ ನಿರ್ದೇಶನಕ್ಕೆ ಕೈಹಾಕಿದ್ದಾರೆ ಆದರೆ ಇದು ಅವರ ಮೊದಲ ನಿರ್ದೇಶನದ ಪ್ರಯತ್ನವೇನೂ ಅಲ್ಲ. ಮನೋಹರ್ ಒಬ್ಬ ಒಳ್ಳೆಯ ಸಿನಿಮಾ ನಿರ್ದೇಶಕರೂ ಹೌದು ಎನ್ನುವುದು ಬಹಳಷ್ಟು ಜನರಿಗೆ ಗೊತ್ತಿಲ್ಲ.

ಎರಡು ದಶಕಗಳ ಬಳಿಕ ಮನೋಹರ್ ಅವರನ್ನು ಮತ್ತೆ ನಿರ್ದೇಶನಕ್ಕೆ ಕೈ ಹಾಕುವಂತೆ ಮಾಡಿದ್ದು ದರ್ಬಾರ್ ಚಿತ್ರದ ನಿರ್ಮಾಪಕ, ನಾಯಕ ಸತೀಶ್. ತಾವೇ ಕಥೆ ಬರೆದು ನಿರ್ದೇಶನದ ಜವಾಬ್ದಾರಿಯನ್ನು ವಿ.ಮನೋಹರ್ ಅವರಿಗೆ ಒಪ್ಪಿಸಿದ್ದಾರೆ ಸತೀಶ್. ಈ ಚಿತ್ರ ಜೂನ್ 9 ರಂದು ಬಿಡುಗಡೆಗೆ ಸಿದ್ಧವಾಗಿದೆ. ಚಿತ್ರದ ಪ್ರಚಾರಕ್ಕಾಗಿ ದರ್ಬಾರ್ ಚಿತ್ರತಂಡ ರಾಜ್ಯಾದ್ಯಂತ ಪ್ರವಾಸ ಹೊರಟಿದ್ದು, ಈ ಕುರಿತಂತೆ ಮಾಹಿತಿ ನೀಡಲು ಇತ್ತೀಚೆಗಷ್ಟೆ ಪತ್ರಿಕಾಗೋಷ್ಠಿ
ಆಯೋಜಿಸಲಾಗಿತ್ತು. ಚಿತ್ರದ ವಿಶೇಷತೆಗಳ ಕುರಿತಂತೆ ಚಿತ್ರತಂಡ ಕೆಲ ಮಾಹಿತಿಗಳನ್ನು ಹಂಚಿಕೊಂಡಿತು.

ಈ ಸಂದರ್ಭದಲ್ಲಿ ಮಾತನಾಡಿದ ಮನೋಹರ್, ”ಸುಮಾರು 23 ವರ್ಷಗಳ ನಂತರ ನಾನು ನಿರ್ದೇಶನಕ್ಕೆ ಕೈ ಹಾಕಿದ್ದೇನೆ. ಅದಕ್ಕೆ ಸತೀಶ್ ಅವರೇ ಕಾರಣ. ನಾನು ಓ ಮಲ್ಲಿಗೆ ಚಿತ್ರ ನಿರ್ದೇಶನ ಮಾಡಿದಾಗ ಎಲ್ಲರೂ ನನ್ನನ್ನು ಇವನ ಕೈಲೇನಾಗುತ್ತೆ ಅನ್ನೋರೀತಿ ನೋಡಿದ್ದರು. ನನ್ನ ಮೇಲೆ ಸಂಶಯಪಟ್ಟವರಿಗೆ ಈ ಚಿತ್ರವೇ ಉತ್ತರ. ಎಲ್ಲರೂ ನೋಡಿರುವ ಹಾಸ್ಯ, ನಾವು ಎಲ್ಲೇ ಹೋದರೂ ಇದು ಪರಿಶುದ್ದ ಹಾಸ್ಯಚಿತ್ರನಾ ಎಂದೇ ಕೇಳುತ್ತಾರೆ. ಈಗ ಹಾಸ್ಯ ಅಂದ್ರೆ ಡಬಲ್ ಮೀನಿಂಗ್ ಅನ್ನುವಂತಾಗಿದೆ. ಮೊದಲ ಪ್ರದರ್ಶನಕ್ಕೆ ಬಂದವರು ಮೆಚ್ಚುವ ಎಲ್ಲ ಅಂಶಗಳು ಚಿತ್ರದಲ್ಲಿವೆ. ಹೀರೋ ಕೆಟ್ಟದ್ದನ್ನು, ಸೋಮಾರಿಗಳನ್ನು ಕಂಡರೆ ಸಹಿಸಲ್ಲ, ಉದಾಹರಣೆಗೆ ಜೂಜಾಡುವುದು, ಅರಳಿಕಟ್ಟೆಯಲ್ಲಿ ಕೂತು ಹರಟೆ ಹೊಡೆಯುವುದು, ಈತನ ಈ ಗುಣ ಕೆಲವರಿಗೆ ಇಷ್ಟ ಆಗಲ್ಲ, ಇವನನ್ನು ಪಂಚಾಯ್ತಿ ಎಲೆಕ್ಷನ್ ನಲ್ಲಿ ಸೋಲಿಸಬೇಕು ಎಂದು ಪ್ರಯತ್ನಿಸುತ್ತಾರೆ” ಎಂದು ಕತೆಯ ಎಳೆ ಬಿಟ್ಟುಕೊಟ್ಟರು.

”ಗಿಚ್ಚಿ ಗಿಲಿಗಿಲಿ ಕಾರ್ತೀಕ್ ಬೇರೆ ಥರದ ರೋಲ್ ಮಾಡಿದ್ದಾರೆ. ಸಂತು ಹೀರೋ ಜೊತೆನೇ ಇದ್ದು ಆಗಾಗ ಕಾಲೆಳೆಯುವ ಪಾತ್ರ ಮಾಡಿದ್ದಾರೆ. ಸಾಧು ಕೋಕಿಲ, ನವೀನ್ ಪಡೀಲ್ ಜೋಡಿ ನೋಡುಗರನ್ನು ರಂಜಿಸುತ್ತದೆ. ಇನ್ನು ನಾಯಕಿಗೆ ಹೀರೋ ಕಂಡರೆ ಆಗ್ತಿರಲ್ಲ, ಒಂದು ಘಟನೆ ನಂತರ ಆತನಜೊತೆ ಸೇರ್ತಾಳೆ. ಚಿತ್ರದಲ್ಲಿ ಮಂಡ್ಯ, ಮದ್ದೂರು ಭಾಗದ ರಂಗಭೂಮಿ ಕಲಾವಿದರನ್ನೇ ಹೆಚ್ಚಾಗಿ ಬಳಸಿಕೊಳಡಿದ್ದೇವೆ. ಈ ಸಿನಿಮಾ ರಿಲೀಸಾದ ನಂತರ ಸಾಕಷ್ಟು ಜನ ಬೆಳಕಿಗೆ ಬರ್ತಾರೆ. ಉಪೇಂದ್ರ ಎಲೆಕ್ಷನ್ ಸಾಂಗ್, ಡ್ಯುಯೆಟ್ ಸಾಂಗ್ ಜನ ಇಷ್ಟಪಟ್ಟಿದ್ದಾರೆ. ಚಂದನ್ ಶೆಟ್ಟಿ ಹಾಡನ್ನು ರಿಲೀಸ್ ಮಾಡಬೇಕಿದೆ. ಸತೀಶ್ ಖರ್ಚಿನ ಬಗ್ಗೆ ಯೋಚಿಸದೆ ಕ್ವಾಲಿಟಿ ಸಿನಿಮಾ ಮಾಡಲು ಟ್ರೈ ಮಾಡಿದ್ದಾರೆ. ಇಡೀ ಚಿತ್ರವನ್ನು ಮಾರದೇವನಹಳ್ಲಿ ಎಂಬಲ್ಲಿ ಚಿತ್ರೀಕರಿಸಿದ್ದೇವೆ. ಆ ಊರ ಜನರೂ ಅಷ್ಟೇ ಚೆನ್ನಾಗಿ ಸಹಕರಿಸಿದರು ಅಲ್ಲದೆ ಸತೀಶ್ ನನಗೆ ಹಿಂದೆ ದಿಲ್ದಾರ್ ಚಿತ್ರದ ಸಮಯದಲ್ಲಿ ಸ್ನೇಹಿತರಾಗಿದ್ದರು. ಇವತ್ತಿನ ರಾಜಕೀಯವನ್ನು ವ್ಯಂಗ್ಯವಾಗಿ ಹೇಳುವ ಸಬ್ಜೆಕ್ಟನ್ನು ಅವರು ತುಂಬಾ ಚೆನ್ನಾಗಿ ಮಾಡಿಕೊಂಡಿದ್ದರು ಎಂದು ವಿವರಿಸಿದರು.

ಚಿತ್ರದ ನಾಯಕ, ನಿರ್ಮಾಪಕ, ಸತೀಶ್ ಮಾತನಾಡಿ, ”ಆರಂಭದಲ್ಲಿ ಏನೋ ಒಂದು ಬಜೆಟ್ ಅಂದುಕೊಂಡಿದ್ದೆವು. ಕ್ವಾಲಿಟಿ ನೋಡುತ್ತ ಹೋದಂತೆ ಜಾಸ್ತೀನೇ ಅಯ್ತು. ಮೊನ್ನೆ ಚಿತ್ರದ ಪ್ರೀ ವ್ಯೂ ನೋಡಿದೆವು. ಒಂದೊಳ್ಳೆ ಸಿನಿಮಾ ಮಾಡಿದ್ದೇವೆಂಬ ನಂಬಿಕೆಯಿದೆ. ಒಬ್ಬರು ಬಂದು ಸಿನಿಮಾ ನೋಡಿದರೆ ಖಂಡಿತ 10 ಜನಕ್ಕೆ ಹೇಳ್ತಾರೆ ಎಂದು ಹೇಳಿದರು.

ನಾಯಕಿ ಜಾಹ್ನವಿ ಮಾತನಾಡಿ ಇದು ನನ್ನ ಮೊದಲ ಚಿತ್ರ. ತುಂಬಾ ಚೆನ್ನಾಗಿ ಬಂದಿದೆ. ಈ ಚಿತ್ರದಲ್ಲಿ ನಾನು ಸೈಕಾಲಜಿ ಸ್ಟೂಡೆಂಟ್, ರಜೆಗೆಂದು ಊರಿಗೆ ಬಂದಾಗ ನಾಯಕನ ಪರಿಚಯವಾಗುತ್ತದೆ. ನಂತರ ಆತನಿಗೆ ಸಪೋರ್ಟ್ ಮಾಡುತ್ತೇನೆ. ಒಂದು ಹಳ್ಳಿಯಲ್ಲಿ ನಾವೇ ಇರುವಂತೆ, ನಮ್ಮ ಸುತ್ತಲೂ ಘಟನೆಗಳು ನಡೆಯುತ್ತಿರುವಂತೆ ನಮಗನಿಸುತ್ತದೆ ಎಂದು ಹೇಳಿದರು. ಛಾಯಾಗ್ರಾಹಕ ಸಾಮ್ರಾಟ್ ಎಸ್. ಚಿತ್ರದ ಕುರಿತಂತೆ ಮಾತನಾಡಿದರು. ವಿ.ಮನೋಹರ್ ಅವರು ಆಕ್ಷನ್ ಕಟ್ ಹೇಳುವ ಜೊತೆಗೆ ಸಂಗೀತ ನಿರ್ದೇಶನ ಕೂಡ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:34 pm, Sun, 28 May 23