ನಂದಿ ಫಿಲಂ ಅವಾರ್ಡ್ಸ್: ಹಲವು ತಾರೆಯರು ಭಾಗಿ
Nandi Film Awards: ಮೊದಲ ನಂದಿ ಫಿಲಂ ಅವಾರ್ಡ್ಸ್ ಕಾರ್ಯಕ್ರಮ ನಡೆಯುತ್ತಿದೆ. ನಟ ರವಿಚಂದ್ರನ್, ಧ್ರುವ ಸರ್ಜಾ ಸೇರಿದಂತೆ ಚಿತ್ರರಂಗದ ಹಲವು ಪ್ರಮುಖ ನಟ-ನಟಿಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.
ತೆಲುಗು ಚಿತ್ರರಂಗದಲ್ಲಿ (Tollywood) ನಂದಿ ಅವಾರ್ಡ್ಸ್ (Nandi Award) ಪ್ರತಿಷ್ಠಿತ ಪ್ರಶಸ್ತಿ, ಅದೇ ಹೆಸರಿನ ಪ್ರಶಸ್ತಿ ಕನ್ನಡದಲ್ಲಿಯೂ ಪ್ರಾರಂಭವಾಗಿದ್ದು, ಇಂದು (ಡಿಸೆಂಬರ್ 06) ಪ್ರಶಸ್ತಿ ಪ್ರದಾನ ಸಮಾರಂಭ ಅದ್ಧೂರಿಯಾಗಿ ನಡೆಯುತ್ತಿದೆ. ಕಾರ್ಯಕ್ರಮದಲ್ಲಿ ಚಿತ್ರರಂಗದ ಹಲವು ಗಣ್ಯರು ಭಾಗಿಯಾಗಿದ್ದಾರೆ. ಕನ್ನಡದ ಈ ವರ್ಷದ ಅತ್ಯುತ್ತಮ ಸಿನಿಮಾಗಳಿಗೆ ಪ್ರಶಸ್ತಿಗಳನ್ನು ನೀಡುವುದು, ಕನ್ನಡ ಚಿತ್ರರಂಗದ ಅತ್ಯುತ್ತಮ ಪ್ರತಿಭೆಗಳನ್ನು ಗುರುತಿಸುವುದು ಈ ಪ್ರಶಸ್ತಿಯ ಉದ್ದೇಶ.
ಅತ್ಯುತ್ತಮ ನಟ, ಅತ್ಯುತ್ತಮ ನಟಿ, ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ಕಥೆ, ಸಂಗೀತ ನಿರ್ದೇಶನ, ಸಂಕಲನ, ಪೋಷಕ ಪಾತ್ರಗಳು ಹೀಗೆ ನಾನಾ ವಿಭಾಗಗಳಿಗೆ ಪ್ರಶಸ್ತಿ ಪ್ರದಾನವನ್ನು ಮಾಡಲಾಗುತ್ತದೆ. ಜೊತೆಗೆ ವೇದಿಕೆ ಮೇಲೆ ಕೆಲವು ಮನೊರಂಜನಾ ಕಾರ್ಯಕ್ರಮಗಳು ಸಹ ನಡೆಯಲಿವೆ.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ನಟ ರವಿಚಂದ್ರನ್, ರಿಷಬ್ ಶೆಟ್ಟಿ, ಧ್ರುವ ಸರ್ಜಾ ಇನ್ನೂ ಹಲವು ತಾರೆಯರು ಭಾಗಿಯಾಗಿದ್ದಾರೆ. ಜೊತೆಗೆ ಹಿರಿಯ ನಟ ಶ್ರೀನಾಥ್, ನಟಿ ಪ್ರೇಮ, ವಿನೋದ್ ರಾಜ್, ಅನುಪ್ರಭಾಕರ್, ಉಮಾಶ್ರೀ ಇನ್ನೂ ಹಲವು ನಟ-ನಟಿಯರು ಸಹ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಇದು ಮೊದಲ ನಂದಿ ಫಿಲಂ ಅವಾರ್ಡ್ ಆಗಿದ್ದು ಅದ್ಧೂರಿಯಾಗಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.
ಇದನ್ನೂ ಓದಿ:‘ಸಂತೋಷ್ ಅವಾರ್ಡ್ಸ್’ನಲ್ಲಿ ಕನ್ನಡ ಸ್ಟಾರ್ಗಳಿಗೆ ಅಪಮಾನ, ರಮೇಶ್ ಅರವಿಂದ್ ಹೇಳಿದ್ದು ಹೀಗೆ
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗಿಯಾಗಿದ್ದ ನಟ ರವಿಚಂದ್ರನ್ ಮಾತನಾಡಿ, ‘ನಂದಿ ಪ್ರಶಸ್ತಿ ನೀಡುತ್ತಿರುವುದು ಬಹಳ ಖುಷಿಯಾಗಿದೆ. ಪ್ರಶಸ್ತಿ ಬಹಳ ಭಾರವಾಗಿದೆ ಅದು ನನಗೆ ಖುಷಿ ಕೊಟ್ಟಿತು, ನನ್ನಂಥಹಾ ಶಿವ ಭಕ್ತನಿಂದ ನಂದಿ ಪ್ರಶಸ್ತಿ ಕೊಡಿಸುತ್ತಿದ್ದೀರ. ಎಲ್ಲರ ಮನೆಗಳಿಗೂ ನಂದಿ ಸೇರುತ್ತದೆ ಎಂಬುದು ನನಗೆ ಖುಷಿ’ ಎಂದರು. ನಟ ಶ್ರೀನಾಥ್ ಅವರಿಗೆ ಜೀವನಮಾನ ಸಾಧನೆಗೆ ಲೈಫ್ ಟೈಮ್ ಅಚೀವ್ಮೆಂಟ್ ಅವಾರ್ಡ್ ನೀಡಲಾಯ್ತು.
ನವೆಂಬರ್ 19ರಂದು ‘ನಂದಿ ಫಿಲಂ ಅವಾರ್ಡ್ಸ್’ನ ಉದ್ಘಾಟನೆ ಮಾಡಲಾಗಿತ್ತು. ನಟ ಕಿಚ್ಚ ಸುದೀಪ್ ಅಂದು ಅವಾರ್ಡ್ಸ್ಗೆ ಚಾಲನೆ ನೀಡಿದ್ದರು. ‘ಪ್ರಶಸ್ತಿಯ ಸಂಸ್ಥಾಪಕರಿಗೆ ಒಳ್ಳೆದಾಗಲಿ. ನನ್ನ ಮನವಿ ಎಂದರೆ, ಪ್ರಶಸ್ತಿ ಯಾರಿಗೆ ಹೋಗಬೇಕು ಅವರಿಗೆ ಹೋಗಲಿ. ಮಿಕ್ಕಿದವರೆಲ್ಲಾ ದುಡ್ಡು ಮಾಡುತ್ತಿದ್ದಾರೆ. ಅವಾರ್ಡ್, ದುಡ್ಡು ಅಂತಾ ನೋಡಿದಾಗ ಪ್ರಶಸ್ತಿ ಬಿಟ್ಟು ದುಡ್ಡಿಗೆ ಕೈ ಹಾಕುವವರು ಇದ್ದಾರೆ. ಪ್ರಶಸ್ತಿಗೆ ಗೌರವ ಕೊಟ್ಟು ಅದಕ್ಕಾಗಿ ಬಾಳಿ ಬದುಕುವವರಿಗೆ ನೀಡಿ. ನಂದಿ ಬಹಳ ಶ್ರೇಷ್ಠ. ಅದರ ಹೆಸರಲ್ಲಿ ನಡೆಸುತ್ತೀರಾ ಎಂದರೆ ಅಷ್ಟೇ ಶುದ್ಧವಾಗಿ ಇರಲಿ. ಕರ್ನಾಟಕದಲ್ಲಿ ಅವಾರ್ಡ್ಸ್ ಪ್ರೋಗ್ರಾಂ ನಡೆಸಲು ಬಹಳ ಕೊರತೆ ಇದೆ. ತಲೆ ಎತ್ತಿ ನೋಡುವ ಅವಾರ್ಡ್ಸ್ ಪ್ರೋಗ್ರಾಂ ಇಲ್ಲ. ಅಂತಹ ಪ್ರಶಸ್ತಿ ಕಾರ್ಯಕ್ರಮ ನಂದಿ ಆಗಲಿ ಎಂದು ಶುಭ ಹಾರೈಸಿದ್ದರು.
ನೆರೆಯ ಆಂಧ್ರಪ್ರದೇಶ ಮನರಂಜನಾ ಕ್ಷೇತ್ರದ ಸಾಧಕರಿಗೆ ಕೊಡುವ ರಾಜ್ಯ ಪ್ರಶಸ್ತಿಗೂ ನಂದಿ ಅವಾರ್ಡ್ಸ್ ಎಂದೇ ಹೆಸರಿದೆ. ಆದರೆ, ಆ ಪ್ರಶಸ್ತಿಗೂ ಈ ಪ್ರಶಸ್ತಿಗೂ ಸಮಬಂಧವಿಲ್ಲ. ಎರಡು ಬೇರೆ ಬೇರೆ. ಆಂಧ್ರಪ್ರದೇಶದಂತೆ ಕನ್ನಡದ ಪ್ರಶಸ್ತಿಗೂ ನಂದಿ ಅವಾರ್ಡ್ ಎಂದೇ ಕರೆಯಲಾಗುತ್ತಿದೆ. ಇದಕ್ಕೆ ಕಾರಣವೂ ಇದೆ. ನಂದಿ ಎನ್ನುವುದು ಕನ್ನಡದ ಪಾಲಿಗೂ ಒಂದು ಪವರ್ಫುಲ್ ಇಮೇಜ್ ಎನಿಸುವ ಲಾಂಛನ. ಆ ಕಾರಣದಿಂದಲೇ ‘ನಂದಿ’ ಎಂಬ ಹೆಸರನ್ನೇ ಕನ್ನಡದ ಪ್ರಶಸ್ತಿಗೂ ಇಡಲಾಗಿದೆ ಎಂದು ಅಂದಿನ ಕಾರ್ಯಕ್ರಮದಲ್ಲಿ ಭಾಮಾ ಹರೀಶ್ ಹೇಳಿದ್ದರು.
ನಂದಿ ಅವಾರ್ಡ್ಸ್ನಲ್ಲಿ ಕನ್ನಡ ಸಿನಿಮಾಗಳನ್ನು ಮಾತ್ರವೇ ಅಲ್ಲದೆ, ತುಳು, ಕೊಂಕಣಿ, ಬ್ಯಾರಿ ಭಾಷೆಯ ಸಿನಿಮಾಗಳನ್ನು ಸಹ ಪರಿಗಣನೆಗೆ ತೆಗೆದುಕೊಳ್ಳುವುದಾಗಿ ಹೇಳಿದ್ದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ