ಬಾಲಿವುಡ್​ಗೆ ಹೊರಟ ಮತ್ತೊಬ್ಬ ಕನ್ನಡದ ನಿರ್ದೇಶಕ

Manso Re Hindi movie: ತೆಲುಗು ಮತ್ತು ತಮಿಳಿನ ಕೆಲ ನಿರ್ದೇಶಕರುಗಳು ಈಗಾಗಲೇ ಹಿಂದಿಯಲ್ಲಿ ಸಿನಿಮಾ ನಿರ್ದೇಶಿಸಿದ್ದಾರೆ. ಕನ್ನಡದ ಹರ್ಷ ಸಹ ಟೈಗರ್ ಶ್ರಾಫ್ ಅವರಿಗೆ ಸಿನಿಮಾ ನಿರ್ದೇಶಿಸಿ ಬಂದಿದ್ದಾರೆ. ಲೂಸಿಯಾ ಪವನ್ ಸಹ ಹಿಂದಿ ಸಿನಿಮಾ ನಿರ್ದೇಶಿಸಲು ಮುಂದಾಗಿದ್ದಾರೆ. ಇದೀಗ ಕನ್ನಡದ ಮತ್ತೊಬ್ಬ ನಿರ್ದೇಶಕ ಬಾಲಿವುಡ್ ಕಡೆ ಮುಖ ಮಾಡಿದ್ದಾರೆ. ಯಾರದು? ಯಾವ ಸಿನಿಮಾ ನಿರ್ದೇಶಿಸಲಿದ್ದಾರೆ?

ಬಾಲಿವುಡ್​ಗೆ ಹೊರಟ ಮತ್ತೊಬ್ಬ ಕನ್ನಡದ ನಿರ್ದೇಶಕ
Manso Re

Updated on: Dec 16, 2025 | 4:09 PM

ದಕ್ಷಿಣ ಭಾರತ ಚಿತ್ರರಂಗದ ನಿರ್ದೇಶಕರುಗಳು ಒಬ್ಬೊಬ್ಬರಾಗಿ ಬಾಲಿವುಡ್ (Bollywood)​ ಕಡೆ ಮುಖ ಮಾಡಿದ್ದಾರೆ. ದಕ್ಷಿಣದ ಸಿನಿಮಾಗಳು ಹಿಂದಿ ಭಾಷಿಕ ಪ್ರದೇಶದಲ್ಲಿ ದೊಡ್ಡ ಹಿಟ್ ಆಗುತ್ತಿರುವ ಕಾರಣ, ಬಾಲಿವುಡ್ ಸ್ಟಾರ್ ನಟರುಗಳು ದಕ್ಷಿಣದ ನಿರ್ದೇಶಕರುಗಳನ್ನು ಕರೆದು, ಸಿನಿಮಾ ನಿರ್ದೇಶನಕ್ಕೆ ಅವಕಾಶ ನೀಡುತ್ತಿದ್ದಾರೆ. ತೆಲುಗು ಮತ್ತು ತಮಿಳಿನ ಕೆಲ ನಿರ್ದೇಶಕರುಗಳು ಈಗಾಗಲೇ ಹಿಂದಿಯಲ್ಲಿ ಸಿನಿಮಾ ನಿರ್ದೇಶಿಸಿದ್ದಾರೆ. ಕನ್ನಡದ ಹರ್ಷ ಸಹ ಟೈಗರ್ ಶ್ರಾಫ್ ಅವರಿಗೆ ಸಿನಿಮಾ ನಿರ್ದೇಶಿಸಿ ಬಂದಿದ್ದಾರೆ. ಲೂಸಿಯಾ ಪವನ್ ಸಹ ಹಿಂದಿ ಸಿನಿಮಾ ನಿರ್ದೇಶಿಸಲು ಮುಂದಾಗಿದ್ದಾರೆ. ಇದೀಗ ಕನ್ನಡದ ಮತ್ತೊಬ್ಬ ನಿರ್ದೇಶಕ ಬಾಲಿವುಡ್ ಕಡೆ ಮುಖ ಮಾಡಿದ್ದಾರೆ.

ರಾಷ್ಟ್ರಪ್ರಶಸ್ತಿ ವಿಜೇತ ಸಿನಿಮಾ ನಿರ್ದೇಶಕ ಮಂಸೋರೆ ಅವರು ಇದೀಗ ಹಿಂದಿ ಸಿನಿಮಾ ಒಂದನ್ನು ನಿರ್ದೇಶಿಸಲಿದ್ದಾರೆ. ಕನ್ನಡದಲ್ಲಿ ‘ನಾತಿಚರಾಮಿ’, ‘ಹರಿವು’, ‘ಆಕ್ಟ್ 1978’, ‘19.20.21’ ಇತ್ತೀಚೆಗಷ್ಟೆ ಬಿಡುಗಡೆ ಆದ ‘ದೂರ ತೀರ ಯಾನ’ ಸಿನಿಮಾಗಳನ್ನು ನಿರ್ದೇಶಿಸಿರುವ ಮಂಸೋರೆ ಇದೀಗ ಬಾಲಿವುಡ್ ಸಿನಿಮಾ ನಿರ್ದೇಶಿಸಲು ತಯಾರಾಗಿದ್ದಾರೆ. ಸಿನಿಮಾದ ಹೆಸರು ‘ಜೂಲಿಯೆಟ್’.

ಇದನ್ನೂ ಓದಿ:ಬಾಲಿವುಡ್​​ಗೆ ಎಂಟ್ರಿ ಕೊಡಲಿರುವ ರುಕ್ಮಿಣಿ ವಸಂತ್, ನಟಿ ಹೇಳಿದ್ದೇನು?

ಮುಖೇಶ್ ಗುಪ್ತಾ ಮತ್ತು ರೋಹಿತ್ ಕೆ ಹಾಗೂ ನೀರಜ್ ತಿವಾರಿ ಒಡೆತನದ ಆಗಾಜ್ ಎಂಟರ್‌ಟೈನ್‌ಮೆಂಟ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ‘ಜೂಲಿಯೆಟ್’ ಸಿನಿಮಾದ ನಿರ್ಮಾಣ ಮಾಡುತ್ತಿದೆ. ವಕೀಲ್ ಶರ್ಮಾ ಮತ್ತು ಕವಿತಾ ಶಿಬಾಗ್ ಕಪೂರ್ ಅವರುಗಳು ಈ ಸಿನಿಮಾದ ಸಹ-ನಿರ್ಮಾಪಕರುಗಳಾಗಿದ್ದಾರೆ. ಹೆಸರೇ ಹೇಳುತ್ತಿರುವಂತೆ ಇದೊಂದು ಪ್ರೇಮಕಥಾ ಸಿನಿಮಾ ಆಗಿದ್ದು, ಸಿನಿಮಾದ ಪೋಸ್ಟರ್ ಅನ್ನು ಇತ್ತೀಚೆಗಷ್ಟೆ ಬಿಡುಗಡೆ ಮಾಡಲಾಗಿದೆ.

ಮಾನವ ಸಂಬಂಧಗಳ ಬಗ್ಗೆ, ಸಾಮಾಜಿಕ ವಿಷಯಗಳ ಬಗ್ಗೆ, ಸಂಬಂಧಗಳ ಸಂಕೀರ್ಣತೆಗಳ ಬಗ್ಗೆ ಸಿನಿಮಾಗಳನ್ನು ಮಾಡುತ್ತಾ ಬಂದಿರುವ ಮಂಸೋರೆ ಇದೀಗ ‘ಜೂಲಿಯೆಟ್’ ಸಿನಿಮಾ ಮೂಲಕ ಪ್ರೇಮಕತೆಯೊಂದನ್ನು ಹೇಳಲು ಮುಂದಾಗಿದ್ದಾರೆ. ಸಿನಿಮಾದ ಪೋಸ್ಟರ್ ನೋಡಿದರೆ ಇದೊಂದು ಪೀರಿಯಡ್ ಸಿನಿಮಾ ಇರಬಹುದೆಂಬ ಅನುಮಾನವೂ ಮೂಡುತ್ತಿದೆ. ಜೊತೆಗೆ ಸಂಗೀತಕ್ಕೂ ಹೆಚ್ಚಿನ ಆದ್ಯತೆ ಕತೆಯಲ್ಲಿ ಇರುವಂತೆ ತೋರುತ್ತಿದೆ. ಸಿನಿಮಾದ ಮುಖ್ಯ ಪಾತ್ರಗಳಲ್ಲಿ ಯಾರ್ಯಾರು ನಟಿಸಲಿದ್ದಾರೆ ಎಂಬುದು ಇನ್ನೂ ಖಾತ್ರಿ ಆಗಿಲ್ಲ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ