ಶೀರ್ಷಿಕೆಯ ಕಾರಣದಿಂದಲೇ ‘ಲೇಡಿಸ್ ಬಾರ್’ (Ladies Bar) ಸಿನಿಮಾ ಗಮನ ಸೆಳೆಯುತ್ತಿದೆ. ಈ ಸಿನಿಮಾಗೆ ‘ಡಿ.ಎಂ.ಸಿ. ಪ್ರೊಡಕ್ಷನ್ಸ್’ ಮೂಲಕ ಟಿ.ಎಂ. ಸೋಮರಾಜು ಅವರು ಬಂಡವಾಳ ಹೂಡಿದ್ದಾರೆ. ಮುತ್ತು ಎ.ಎನ್. ಅವರು ಕಥೆ, ಚಿತ್ರಕಥೆ ಬರೆದು ಡೈರೆಕ್ಷನ್ ಮಾಡಿದ್ದಾರೆ. ಇತ್ತೀಚೆಗೆ ‘ಲೇಡಿಸ್ ಬಾರ್’ ಸಿನಿಮಾದ ಟ್ರೇಲರ್ (Ladies Bar Trailer) ಅನಾವರಣ ಮಾಡಲಾಗಿದೆ. ಕನ್ನಡ ಚಿತ್ರರಂಗದ ಹಿರಿಯ ನಟ ಧರ್ಮ ಕೀರ್ತಿರಾಜ್ ಮತ್ತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್.ಎಂ. ಸುರೇಶ್ (NM Suresh) ಅವರು ಈ ಸಿನಿಮಾದ ಟ್ರೇಲರ್ ರಿಲೀಸ್ ಮಾಡಿದ್ದಾರೆ. ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಮತ್ತು ನಿರ್ಮಾಪಕ ಶಿಲ್ಪಾ ಶ್ರೀನಿವಾಸ್ ಅವರು ಈ ಕಾರ್ಯಕ್ರಮದಲ್ಲಿ ಹಾಜರಿದ್ದು, ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಈ ಸಿನಿಮಾ ಫೆಬ್ರವರಿ 16ರಂದು ಬಿಡುಗಡೆ ಆಗಲಿದೆ.
‘ಲೇಡಿಸ್ ಬಾರ್’ನಲ್ಲಿ ಏನೆಲ್ಲ ಕಿರಿಕ್ ಆಗಲಿದೆ ಎಂಬುದರ ಝಲಕ್ ಈ ಟ್ರೇಲರ್ನಲ್ಲಿ ಕಾಣಿಸಿದೆ. ಧರ್ಮ ಕೀರ್ತಿರಾಜ್ ಅವರಿಗೆ ಟ್ರೇಲರ್ ಇಷ್ಟ ಆಗಿದೆ. ‘ಡೈರೆಕ್ಟರ್ ಮುತ್ತು ಅವರು ನಮ್ಮ ‘ರೋನಿ’ ಚಿತ್ರಕ್ಕೆ ಸಹ-ನಿರ್ದೇಶಕ ಆಗಿದ್ದರು. ಈಗ ಸಮಾಜಕ್ಕೆ ಒಂದು ಸಂದೇಶ ನೀಡುವಂತಹ ಒಂದೊಳ್ಳೆ ಚಿತ್ರವನ್ನು ಮಾಡಿದ್ದಾರೆ’ ಎಂದು ಧರ್ಮ ಕೀರ್ತಿರಾಜ್ ಹೇಳಿದ್ದಾರೆ. ಸೋಮರಾಜು, ಶಿವಾನಿ, ಹರೀಶ್ ರಾಜ್, ಮೀನಾಕ್ಷಿ, ಗಣೇಶ್ ರಾವ್, ಡಾ. ರಾಜಶೇಖರ್ ಎಸ್.ಎನ್., ಆರಾಧ್ಯ, ಚೈತ್ರಾ, ಪ್ರೇರಣಾ, ಕೆಂಪೇಗೌಡ, ಎಸ್ಕಾರ್ಟ್ ಶ್ರೀನಿವಾಸ್ ಸೇರಿದಂತೆ ಅನೇಕರು ಈ ಸಿನಿಮಾದಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ: ಕಿರಣ್ ರಾಜ್ ಹೊಸ ಸಿನಿಮಾ ‘ಮೇಘಾ’; ಟೀಸರ್ ಬಿಡುಗಡೆ ಮಾಡಿದ ನಾಗೇಂದ್ರ ಪ್ರಸಾದ್
ಹರ್ಷ ಕಾಗೋಡ್ ಅವರು ‘ಲೇಡಿಸ್ ಬಾರ್’ ಸಿನಿಮಾಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ವೀನಸ್ ಮೂರ್ತಿ ಅವರ ಛಾಯಾಗ್ರಹಣ ಮತ್ತು ಜಗ್ಗು ಮಾಸ್ಟರ್ ಅವರ ಕೊರಿಯೋಗ್ರಫಿ ಈ ಸಿನಿಮಾಗಿದೆ. ಡಾ. ಸುಭಾಷಿಣಿ ಆರ್.ಎಸ್. ಅವರು ಈ ಸಿನಿಮಾದ ಸಹ-ನಿರ್ಮಾಪಕರು. ‘ನಾನು ಈ ಚಿತ್ರದಲ್ಲಿ ಶಿಳ್ಳೆ ಎಂಬ ಪಾತ್ರ ಮಾಡಿದ್ದೇನೆ’ ಎಂದು ಹರೀಶ್ ರಾಜ್ ಹೇಳಿದ್ದಾರೆ. ‘ನಾನು ಈವರೆಗೂ ಅನೇಕ ಸಿನಿಮಾಗಳಲ್ಲಿ ತಾಯಿ ಪಾತ್ರ ಮಾಡಿದ್ದೇನೆ. ಆದರೆ ಈ ಸಿನಿಮಾದಲ್ಲಿ ನನ್ನದು ಡಿಫರೆಂಟ್ ಪಾತ್ರ’ ಎಂದಿದ್ದಾರೆ ನಟಿ ಮೀನಾಕ್ಷಿ.
ಕಥೆಯೇ ಈ ಸಿನಿಮಾದ ಹೀರೋ ಎಂದು ನಿರ್ದೇಶಕ ಮುತ್ತು ಹೇಳಿದ್ದಾರೆ. ‘ಸಿರಿ ಮ್ಯೂಸಿಕ್ ಮೂಲಕ ರಿಲೀಸ್ ಆಗಿರುವ ಈ ಸಿನಿಮಾದ ಟೀಸರ್ ಈಗಾಗಲೇ ಜನಮೆಚ್ಚುಗೆ ಗಳಿಸಿತ್ತು. ಸಖತ್ ಮನರಂಜನೆ ನಮ್ಮ ಸಿನಿಮಾದಲ್ಲಿದೆ. ಮಹಿಳೆಯರು ಬಾರ್‌ಗೆ ಹೋದರೆ ಏನೆಲ್ಲ ಆಗುತ್ತದೆ ಎಂಬುದನ್ನು ‘ಲೇಡಿಸ್‌ಬಾರ್’ ಸಿನಿಮಾದಲ್ಲಿ ತೋರಿಸಿದ್ದೇವೆ. ಹಾಗಂತ ಚಿತ್ರದಲ್ಲಿ ಕೇವಲ ಕುಡಿತವನ್ನು ತೋರಿಸಿಲ್ಲ. ಸಮಾಜಕ್ಕೆ ಉತ್ತಮ ಸಂದೇಶವನ್ನೂ ನೀಡುವ ಪ್ರಯತ್ನ ಮಾಡುದ್ದೇವೆ’ ಎಂದು ಅವರು ಹೇಳಿದ್ದಾರೆ.
‘ಈ ಟ್ರೇಲರ್ ನೋಡಿದರೆ ಏನೋ ವಿಶೇಷತೆ ಕಾಣುತ್ತದೆ. ಹೊಸಬರು ಸಿನಿಮಾ ಮಾಡಿದರೆ ನಾವೆಲ್ಲ ಬೆಂಬಲ ನೀಡಬೇಕು. ಈ ತಂಡದಲ್ಲಿ ಶ್ರದ್ಧೆ, ಪ್ರಾಮಾಣಿಕತೆ ಇದ್ದರೆ ಖಂಡಿತಾ ಗೆಲುವು ಸಿಗಲಿದೆ’ ಎಂದು ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್.ಎಂ. ಸುರೇಶ್ ಹೇಳಿದ್ದಾರೆ. ‘ಬಾರ್‌ನಿಂದ ಆಗುವ ಅನುಕೂಲ, ಅನಾನುಕೂಲ ಏನು ಎಂಬುದನ್ನು ಈ ಸಿನಿಮಾದಲ್ಲಿ ತೋರಿಸಿದ್ದಾರೆ’ ಎಂದು ಪೊಲೀಸ್ ಪಾತ್ರ ಮಾಡಿರುವ ನಟ ಗಣೇಶ್ ರಾವ್ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ