ಕುತೂಹಲ ಮೂಡಿಸಿದ ‘ಮೇಡ್ ಇನ್ ಬೆಂಗಳೂರು’ ಟೀಸರ್; ಹೊಸಬರ ಪ್ರಯತ್ನಕ್ಕೆ ಅನಂತ್‌ನಾಗ್, ಸಾಯಿಕುಮಾರ್ ಸಾಥ್

Made In Bengaluru: ​ಅನಂತ್​​ನಾಗ್, ಸಾಯಿಕುಮಾರ್ ಹಾಗೂ ಪ್ರಕಾಶ್ ಬೆಳವಾಡಿ ಸೇರಿದಂತೆ ದೊಡ್ಡ ತಾರಾಗಣವಿರುವ ಹೊಸಬರ ಚಿತ್ರವೊಂದು ಸದ್ದು ಮಾಡುತ್ತಿದೆ. ‘ಮೇಡ್ ಇನ್ ಬೆಂಗಳೂರು’ ಎಂದು ಚಿತ್ರಕ್ಕೆ ಹೆಸರಿಡಲಾಗಿದ್ದು, ಚಿತ್ರತಂಡ ಟೀಸರ್ ಬಿಡುಗಡೆ ಮಾಡಿದೆ.

ಕುತೂಹಲ ಮೂಡಿಸಿದ ‘ಮೇಡ್ ಇನ್ ಬೆಂಗಳೂರು’ ಟೀಸರ್; ಹೊಸಬರ ಪ್ರಯತ್ನಕ್ಕೆ ಅನಂತ್‌ನಾಗ್, ಸಾಯಿಕುಮಾರ್ ಸಾಥ್
ಪ್ರಕಾಶ್ ಬೆಳವಾಡಿ, ಅನಂತ್ ನಾಗ್, ಸಾಯಿಕುಮಾರ್ (ಸಾಂದರ್ಭಿಕ ಚಿತ್ರ)
TV9kannada Web Team

| Edited By: shivaprasad.hs

Aug 21, 2021 | 1:55 PM


ಚಂದನವನದಲ್ಲಿ ಹೊಸ ಚಿತ್ರತಂಡಗಳು ವಿನೂತನ ವಿಷಯವನ್ನಿಟ್ಟುಕೊಂಡು ಪ್ರಯೋಗಗಳನ್ನು ನಡೆಸುತ್ತಿವೆ. ಬದಲಾದ ಜೀವನ ಕ್ರಮದಲ್ಲಿ ಹುಟ್ಟಿಕೊಂಡ ಹೊಸ ವ್ಯವಸ್ಥೆಗಳನ್ನು, ಹೊಸ ಸಮಸ್ಯೆಗಳನ್ನು ತಮ್ಮ ಚಿತ್ರಗಳ ಮುಖಾಂತರ ತೆರೆದಿಡಲು ಅವರು ಪ್ರಯತ್ನಿಸುತ್ತಿದ್ದಾರೆ. ಇದೇ ಮಾದರಿಯಲ್ಲಿ ಹೊಸ ಚಿತ್ರತಂಡವೊಂದು ಬೆಂಗಳೂರಿಗೆ ಕನಸುಗಳನ್ನು ಕಟ್ಟಿಕೊಂಡು ಬರುವ ಯುವಕರ ಕತೆಗಳನ್ನು ಹೇಳಲು ಹೊರಟಿದೆ. ಚಿತ್ರಕ್ಕೆ ‘ಮೇಡ್ ಇನ್ ಬೆಂಗಳೂರು’(Made In Bengaluru) ಎಂಬ ಹೆಸರನ್ನಿಡಲಾಗಿದ್ದು, ಅನಂತ್ ನಾಗ್(Ananth Nag), ಸಾಯಿ ಕುಮಾರ್, ಪ್ರಕಾಶ್ ಬೆಳವಾಡಿ ಮೊದಲಾದ ತಾರೆಯರು ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರೀಕರಣ ಮುಗಿಸಿಕೊಂಡಿರುವ ತಂಡವು, ಇದೀಗ ಚಿತ್ರದ ಟೈಟಲ್ ಟೀಸರ್ ಬಿಡುಗಡೆ ಮಾಡಿದೆ.

‘ರಜನಿ ಥರ್ಸ್ಡೆ ಸ್ಟೋರೀಸ್’ ಬ್ಯಾನರ್​ನಲ್ಲಿ ಬಾಲಕೃಷ್ಣ ಬಿ.ಎಸ್. ನಿರ್ಮಾಣ ಮಾಡುತ್ತಿರುವ ‘ಮೇಡ್ ಇನ್ ಬೆಂಗಳೂರು’ ಚಿತ್ರದ ಕತೆ, ಚಿತ್ರಕತೆ ಹಾಗೂ ನಿರ್ದೇಶವನ್ನು ಪ್ರದೀಪ್ ಶಾಸ್ತ್ರಿ ಮಾಡಿದ್ದಾರೆ. ಈ ಚಿತ್ರದ ಮುಖಾಂತರ ಮಧುಸೂದನ್ ಗೋವಿಂದ್, ಪುನೀತ್ ಮಾಂಜ, ವಂಶಿಧರ್ ಹಾಗೂ ಹಿಮಾಂಶಿ ವರ್ಮಾ ಸ್ಯಾಂಡಲ್​ವುಡ್​ಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಚಿತ್ರಕ್ಕೆ ಅಶ್ವಿನ್.ಪಿ.ಕುಮಾರ್ ಸಂಗೀತ ನೀಡಿದ್ದು, ಭಜರಂಗ್ ಕೊಣತಮ್ ಛಾಯಾಗ್ರಹಣ ಮಾಡಿದ್ದಾರೆ.

ಚಿತ್ರತಂಡ ಬಿಡುಗಡೆ ಮಾಡಿರುವ ಟೀಸರ್ ಇಲ್ಲಿದೆ:

ಚಿತ್ರದಲ್ಲಿ ತಮ್ಮ ಪಾತ್ರದ ಕುರಿತು ಮಾತನಾಡಿದ ಅನಂತ್​ನಾಗ್, ‘‘ಈ ಚಿತ್ರದಲ್ಲಿ ನನ್ನದು ವಿಭಿನ್ನವಾದ ಪಾತ್ರವಾಗಿದ್ದು, ಸಿಂಧಿ ವ್ಯಾಪಾರಿಯಾಗಿ ಕಾಣಿಸಿಕೊಳ್ಳುತ್ತಿದ್ದೇನೆ. ಖ್ಯಾತ ನಿರ್ಮಾಪಕ, ವಿತರಕ ಪಾಲ್ ಚಂದಾನಿ ಅವರನ್ನು ಹತ್ತಿರದಿಂದ ನೋಡಿದ್ದೆನಾದ್ದರಿಂದ ಅವರ ಕೆಲವು ಮ್ಯಾನರಿಸಂಗಳನ್ನು ನಿರ್ದೇಶಕರೊಂದಿಗೆ ಚರ್ಚಿಸಿ ಬಳಸಿಕೊಂಡಿದ್ದೇನೆ’’ ಎಂದಿದ್ದಾರೆ. ನಟ ಸಾಯಿಕುಮಾರ್ ಮಾತನಾಡಿ, ಅನಂತ್ ನಾಗ್ ಹಾಗೂ ಪ್ರಕಾಶ್ ಬೆಳವಾಡಿಯವರೊಂದಿಗೆ ಚಿತ್ರದಲ್ಲಿ ನಟಿಸಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ‘‘ನಾವೆಲ್ಲರೂ ಒಟ್ಟಿಗೆ ಕಾಣಿಸಿಕೊಳ್ಳದೇ ಇದ್ದರೂ, ಒಂದೇ ಚಿತ್ರದಲ್ಲಿ ನಟಿಸಿರುವುದು ಸಂತಸದ ವಿಷಯ’’ ಎಂದು ಅವರು ಹೇಳಿದ್ದಾರೆ.

ಚಿತ್ರದ ಕತೆಯ ಕುರಿತು ಕಿರುಪರಿಚಯವನ್ನು ನೀಡಿರುವ ಚಿತ್ರತಂಡ, ಈ ಚಿತ್ರ ಹೊಸದನ್ನೇನಾದರೂ ಮಾಡಬೇಕು ಎಂದು ಕನಸನ್ನು ಕಟ್ಟಿಕೊಂಡ ಯುವಕರ ಕತೆ. ಎಷ್ಟೇ ಕಷ್ಟಗಳು ಎದುರಾದರೂ ಛಲ ಬಿಡದೇ ಗುರಿಯತ್ತ ಸಾಗಬೇಕು ಎಂಬ ಹಠವಿರುವ ಮಧ್ಯಮವರ್ಗದ ಯುವಕರ ಕತೆ. ಮುಖ್ಯವಾಗಿ ಬೆಂಗಳೂರಿನ ಸ್ಟಾರ್ಟಪ್ ವ್ಯವಸ್ಥೆಯ ಕುರಿತು ಚಿತ್ರ ಬೆಳಕು ಚೆಲ್ಲುತ್ತದೆ ಎಂದಿದೆ. ಕಾರ್ಯಕ್ರಮದಲ್ಲಿ ನಟ ಪ್ರಕಾಶ್ ಬೆಳವಾಡಿ, ಪತ್ರಕರ್ತ ಜೋಗಿ ಹಾಗೂ ಚಿತ್ರತಂಡದ ಸದಸ್ಯರು ಉಪಸ್ಥಿತರಿದ್ದರು.

ಇದನ್ನೂ ಓದಿ:

ಯಶ್- ರಾಧಿಕಾ ಮನೆಯಲ್ಲಿ ಹಬ್ಬದ ಸಡಗರ ಜೋರು; ಪುಟಾಣಿ ಆಯ್ರಾ ಹಾಗೂ ಯಥರ್ವ್ ಸಂಭ್ರಮ ನೋಡಿ

ಹುಟ್ಟುಹಬ್ಬದ ಹೊಸ್ತಿಲಲ್ಲಿ ಮೆಗಾ ಸ್ಟಾರ್​ ಚಿರಂಜೀವಿಗೆ ನಿರ್ದೇಶಕರ ಮೇಲೆ ಅಸಮಾಧಾನ; ಇದಕ್ಕೆ ಕಾರಣ ಏನು?

(New Kannada Movie Made in Bengaluru teaser launched starring Anant Nag Sai Kumar and Prakash Belwadi)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada