‘ಏಳು ಸಿನಿಮಾ ಕದ್ದು ಕಲಾಸಿಪಾಳ್ಯ ಮಾಡಿದ್ದೆ’; ಓಂ ಪ್ರಕಾಶ್ ರಾವ್ ಓಪನ್ ಹೇಳಿಕೆ

ಓಂ ಪ್ರಕಾಶ್ ರಾವ್ ಅವರು ತಮ್ಮ ಸೂಪರ್ ಹಿಟ್ ಸಿನಿಮಾ ‘ಕಲಾಸಿಪಾಳ್ಯ’ದ ಕಥೆ ಕದ್ದಿದ್ದು ಎಂಬುದನ್ನು ಒಪ್ಪಿಕೊಂಡಿದ್ದಾರೆ. ಬಿಡುಗಡೆಗೂ ಮೊದಲು ಈ ವಿಷಯವನ್ನು ಹಂಚಿಕೊಂಡಿದ್ದಾಗಿ ಅವರು ಹೇಳಿದ್ದಾರೆ. ಈ ಚಿತ್ರ ದರ್ಶನ್ ಮತ್ತು ರಕ್ಷಿತಾ ಅವರಿಗೆ ಖ್ಯಾತಿ ತಂದುಕೊಟ್ಟಿತ್ತು. 2004ರಲ್ಲಿ ಸಿನಿಮಾ ತೆರೆಗೆ ಬಂದಿತ್ತು.

‘ಏಳು ಸಿನಿಮಾ ಕದ್ದು ಕಲಾಸಿಪಾಳ್ಯ ಮಾಡಿದ್ದೆ’; ಓಂ ಪ್ರಕಾಶ್ ರಾವ್ ಓಪನ್ ಹೇಳಿಕೆ
ಓಂ ಪ್ರಕಾಶ್-ದರ್ಶನ್

Updated on: Sep 17, 2025 | 8:47 AM

‘ಕಲಾಸಿಪಾಳ್ಯ’ ಸಿನಿಮಾ 2004ರಲ್ಲಿ ರಿಲೀಸ್ ಆಗಿ ಸೂಪರ್ ಹಿಟ್ ಆಯಿತು. ದರ್ಶನ್ ಅವರು ಈ ಚಿತ್ರದಲ್ಲಿ ನಟಿಸಿದ್ದರು. ಅವರಿಗೆ ಸ್ಟಾರ್​ಡಂ ತಂದುಕೊಟ್ಟಿದ್ದು ಇದೇ ಚಿತ್ರ. ‘ಅಪ್ಪು’ ಸಿನಿಮಾ ಮೂಲಕ ಗಮನ ಸೆಳೆದಿದ್ದ ರಕ್ಷಿತಾ ಅವರು ಈ ಚಿತ್ರದಿಂದ ಮತ್ತಷ್ಟು ಬೇಡಿಕೆ ಹೆಚ್ಚಿಸಿಕೊಂಡರು. ಈ ಚಿತ್ರವನ್ನು ಓಂ ಪ್ರಕಾಶ್ ರಾವ್ (Om Prakash Ra0) ನಿರ್ದೇಶನ ಮಾಡಿದ್ದರು. ಈ ಚಿತ್ರದ ಬಗ್ಗೆ ಅವರೇ ಮಾತನಾಡಿದ್ದಾರೆ. ಬೇರೆ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಿದ್ದರಿಂದ ಅವರು ಕಥೆಯನ್ನು ಕದಿಯಬೇಕಾಯಿತಂತೆ.

‘ನ್ಯೂಸೋ ನ್ಯೂಸು’ ಯೂಟ್ಯೂಬ್ ಚಾನೆಲ್​ಗೆ ನೀಡಿದ ಸಂದರ್ಶನದಲ್ಲಿ ಓಂ ಪ್ರಕಾಶ್ ರಾವ್ ಮಾತನಾಡಿದ್ದಾರೆ. ‘ಜನರು, ಮಾಧ್ಯಮದವರ ಎದುರು ಸುಳ್ಳು ಹೇಳಲ್ಲ. ಸಿನಿಮಾ ಫ್ಲಾಪ್ ಆದರೆ ಫ್ಲಾಪ್ ಅಂತ ಒಪ್ಪಿಕೊಳ್ಳುತ್ತೇನೆ. ಕೆಲವು ಸಿನಿಮಾಗಳು ರಿಲೀಸ್ ಆಗುವ ಮೊದಲೇ ಫ್ಲಾಪ್ ಆಗುವ ಸೂಚನೆ ಸಿಕ್ಕರೆ ನಾನು ಅದನ್ನು ಮೊದಲೇ ಹೇಳುತ್ತಿದ್ದೆ’ ಎಂದಿದ್ದಾರೆ ಅವರು.

‘ಕಲಾಸಿಪಾಳ್ಯ ಏಳು ಸಿನಿಮಾದ ಕಥೆ ಕದ್ದು ಮಾಡಿದ್ದೆ. ಆಗ ನಾನು ಸಾಹುಕಾರ ಸಿನಿಮಾ ಶೂಟಿಂಗ್ ಮಾಡುತ್ತಾ ಇದ್ದಿದ್ದರಿಂದ ಸಮಯ ಇರಲಿಲ್ಲ. ನಾನು ಸಿನಿಮಾ ರಿಲೀಸ್​ಗೂ ಮೊದಲೇ ಈ ವಿಚಾರ ಹೇಳಿಕೊಂಡೆ. ಯಾರು ಇದನ್ನು ಒಪ್ಪಿಕೊಳ್ಳುತ್ತಾರೆ ನೀವೇ ಹೇಳಿ’ ಎಂದು ಓಂ ಪ್ರಕಾಶ್ ರಾವ್ ಪ್ರಶ್ನೆ ಮಾಡಿದ್ದಾರೆ.

‘ಬೆರಕೆ ಸೊಪ್ಪಿನ ಸಾರು, ಜನರಿಗೆ ಇಷ್ಟ ಆಗುತ್ತದೆ ಎಂದು ಹೇಳಿದ್ದೆ. ಹಾಗೆಯೇ ಆಯ್ತು. ಸಿನಿಮಾ ಬ್ಲಾಕ್​​ಬಸ್ಟರ್ ಆಯ್ತು. ದರ್ಶನ್​ಗೆ, ರಕ್ಷಿತಾ ಸ್ಟಾರ್​​ಡಂ ತಂದುಕೊಟ್ಟ ಚಿತ್ರ ಇದು. ನಾನು ಜೀವನದಲ್ಲಿ ಸಣ್ಣ ಪುಟ್ಟ ಸುಳ್ಳು ಹೇಳಿರಬಹುದು, ಆದರೆ, ದೊಡ್ಡ ಸುಳ್ಳುಗಳನ್ನು ಪ್ರೇಕ್ಷಕರಿಗೆ ಹೇಳೋದಿಲ್ಲ’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: 6 ಸಿನಿಮಾ ಮಾಡಿದರೂ ದರ್ಶನ್ ನನ್ನ ಬಳಿ ಕಥೆ ಕೇಳಿಲ್ಲ: ಓಂ ಪ್ರಕಾಶ್ ರಾವ್

ಓಂ ಪ್ರಕಾಶ್ ರಾವ್ ಅವರು ಇತ್ತೀಚೆಗೆ ‘ಸಂಜು ವೆಡ್ಸ್ ಗೀತಾ 2’ ಸಿನಿಮಾ ಮಾಡಿದರು. ಈ ಚಿತ್ರ ಹೇಳಿಕೊಳ್ಳುವಂತಹ ಯಶಸ್ಸು ಕಂಡಿಲ್ಲ. ಅವರು ಕೆಲ ವರ್ಷ ಕನ್ನಡ ಚಿತ್ರರಂಗದಿಂದ ದೂರ ಇದ್ದರು. ಈಗ ಅವರು ಮತ್ತೆ ಆಗಮಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.