ವರನಟ ಡಾ. ರಾಜ್ಕುಮಾರ್ (Dr Rajkumar) ಹಾಗೂ ಜಗ್ಗೇಶ್ ಕುಟುಂಬದ ನಡುವೆ ಒಳ್ಳೆಯ ಬಾಂಧವ್ಯ ಇದೆ. ರಾಜ್ಕುಮಾರ್ ಜೊತೆ ಜಗ್ಗೇಶ್ ಒಳ್ಳೆಯ ಒಡನಾಟ ಹೊಂದಿದ್ದರು. ಪುನೀತ್ ರಾಜ್ಕುಮಾರ್ ಜೊತೆಯೂ ಅವರಿಗೆ ಉತ್ತಮ ಬಾಂಧವ್ಯ ಇತ್ತು. ಅಣ್ಣಾವ್ರ ಜನ್ಮದಿನ ಹಿನ್ನೆಲೆಯಲ್ಲಿ ಜಗ್ಗೇಶ್ ಕಂಠೀರವ ಸ್ಟುಡಿಯೋಗೆ ಭೇಟಿ ನೀಡಿದ್ದಾರೆ. ಅಣ್ಣಾವ್ರ ಸಮಾಧಿಗೆ ಅವರು ನಮಿಸಿದ್ದಾರೆ. ಆ ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಜಗ್ಗೇಶ್ ಹಳೆಯ ಘಟನೆ ಒಂದನ್ನು ನೆನಪಿಸಿಕೊಂಡಿದ್ದಾರೆ.
ಜಗ್ಗೇಶ್ ಅವರು ಹಾಸ್ಯ ಕಲಾವಿದರಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದರು. 1992ರಲ್ಲಿ ರಿಲೀಸ್ ಆದ ‘ತರ್ಲೆ ನನ್ಮಗ’ ಸಿನಿಮಾ ಮೂಲಕ ಅವರು ಹೀರೋ ಆದರು. ಆ ಬಳಿಕ ಹಲವು ಸಿನಿಮಾಗಳಲ್ಲಿ ನಟಿಸಿದರು. 1994ರ ಸಮಯದಲ್ಲಿ ಅವರ ಸಿನಿಮಾಗಳು ಫ್ಲಾಪ್ ಆದವು. ಇದರಿಂದ ಬೇಸರಗೊಂಡ ಜಗ್ಗೇಶ್ ಆತ್ಮಹತ್ಯೆಗೆ ಪ್ರಯತ್ನ ಮಾಡಿದ್ದರು. ಆ ವೇಳೆ ಅವರಿಗೆ ಆತ್ಮಸ್ಥೈರ್ಯ ತುಂಬಿದ್ದು ಅಣ್ಣಾವ್ರು.
‘ನಾನು ಆತ್ಮಹತ್ಯೆಗೆ ಪ್ರಯತ್ನ ಮಾಡಿದ್ದೆ. ಮಣಿಪಾಲ್ ಆಸ್ಪತ್ರೆಗೆ ನನ್ನನ್ನು ಅಡ್ಮಿಟ್ ಮಾಡಿದ್ದರು. ಅಣ್ಣಾವ್ರು ಬಂದು ತಲೆ ಮೇಲೆ ಕೈ ಇಟ್ಟು ಒಳ್ಳೆಯದಾಗಲಿ ಎಂದು ಆಶೀರ್ವಾದ ಮಾಡಿದ್ದರು. ಯಾವುದೇ ಕಾರಣಕ್ಕೂ ಅತಿಯಾದ ಆಸೆ ಬೇಡ, ಜಗತ್ತನ್ನು ಮೆಚ್ಚಿಸಿ ಬದುಕೋಕೆ ಹೋಗಬಾರದು ಎಂದು ಕಿವಿಮಾತು ಹೇಳಿದ್ದರು. ನನಗೆ ಮಾನಸಿಕವಾಗಿ ಧೈರ್ಯ ಕೊಟ್ಟಿದ್ದು ರಾಜ್ಕುಮಾರ್. ಅಣ್ಣಾವ್ರ ಆಶೀರ್ವಾದ ನಂತರ ನನ್ನ ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಹಿಟ್ ಆದವು’ ಎಂದು ರಾಜ್ಕುಮಾರ್ ಸಹಾಯ ನೆನಪಿಸಿಕೊಂಡರು ಜಗ್ಗೇಶ್.
ಇದನ್ನೂ ಓದಿ: ರಾಜ್ಕುಮಾರ್ನ ಶರ್ಟ್ಲೆಸ್ ಆಗಿ ನೋಡಬೇಕು ಎಂದು ಹಠ ಹಿಡಿದಿದ್ದ ಕಾಲೇಜು ಹುಡುಗಿಯರು
‘ನಮ್ಮ ತಂದೆ ಹಾಗು ರಾಜ್ಕುಮಾರ್ ಮೂಗು ಸೇಮ್ ಇದೆ. ನನಗೆ ರಾಜಣ್ಣ ಅಂದ್ರೆ ಪಂಚಪ್ರಾಣ. ನಾನು ಅವರಲ್ಲಿ ತಂದೆಯ ವಾತ್ಸಲ್ಯ ಕಂಡೆ. ನಾನು ಹೊಸದಾಗಿ ಮನೆ ಕಟ್ಟಿದೀನಿ ಬರಬೇಕು ಎಂದೆ. ಬೆಳಿಗ್ಗೆ 11 ಗಂಟೆಗೆ ಬಂದರು. ಮಧ್ಯಾಹ್ನ 3 ಗಂಟೆವರೆಗೂ ಕೂತು ಮಾತನಾಡಿದ್ದರು. ಅನೇಕ ನೆನಪುಗಳು, ಒಡನಾಟ ಇವೆ. ರಾಜ್ಕುಮಾರ್ ಕೊನೆಯ ಜರ್ನಿಯಲ್ಲಿ ನಾನಿದ್ದೆ. ಅವರ ಮೃತದೇಹದ ಜೊತೆಗೆ ನಾನು ಇಡೀ ದಿನ ಇದ್ದೆ’ ಎಂದು ಜಗ್ಗೇಶ್ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.