AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಣ್ಣಾವ್ರ ಹುಟ್ಟುಹಬ್ಬದ ದಿನವೇ ಶೂಟಿಂಗ್​ ಮುಗಿಸಿದ ‘ದ ಜಡ್ಜ್​ಮೆಂಟ್’ ಸಿನಿಮಾ ತಂಡ

ಸರಿಯಾಗಿ ಒಂದು ವರ್ಷದ ಹಿಂದೆ ಡಾ. ರಾಜ್​ಕುಮಾರ್​ ಹುಟ್ಟುಹಬ್ಬದ ದಿನ ‘ದ ಜಡ್ಜ್​ಮೆಂಟ್’ ಸಿನಿಮಾದ ಚಿತ್ರೀಕರಣ ಆರಂಭ ಆಗಿತ್ತು. ಈ ವರ್ಷ ಅಣ್ಣಾವ್ರ ಹುಟ್ಟುಹಬ್ಬದ ದಿನವೇ ಈ ಚಿತ್ರದ ಶೂಟಿಂಗ್​ ಮುಕ್ತಾಯವಾಗಿದೆ. ಅಂದುಕೊಂಡ ಸಮಯದಲ್ಲಿ ಚಿತ್ರೀಕರಣ ಪೂರ್ಣಗೊಂಡಿದ್ದಕ್ಕೆ ಚಿತ್ರತಂಡದವರಿಗೆ ಖುಷಿ ಆಗಿದೆ. ಆ ಪ್ರಯುಕ್ತ ಸುದ್ದಿಗೋಷ್ಠಿ ನಡೆಸಿದ್ದಾರೆ.

ಅಣ್ಣಾವ್ರ ಹುಟ್ಟುಹಬ್ಬದ ದಿನವೇ ಶೂಟಿಂಗ್​ ಮುಗಿಸಿದ ‘ದ ಜಡ್ಜ್​ಮೆಂಟ್’ ಸಿನಿಮಾ ತಂಡ
‘ದ ಜಡ್ಜ್​ಮೆಂಟ್​’ ಸಿನಿಮಾ ತಂಡ
ಮದನ್​ ಕುಮಾರ್​
|

Updated on: Apr 24, 2024 | 10:51 PM

Share

ಕ್ರೇಜಿಸ್ಟಾರ್ ರವಿಚಂದ್ರನ್ (Ravichandran) ಅವರು ಮುಖ್ಯ ಪಾತ್ರದಲ್ಲಿ ಅಭಿನಯಿಸಿರುವ ‘ದ ಜಡ್ಜ್​ಮೆಂಟ್’ (The Judgement) ಸಿನಿಮಾದ ಶೂಟಿಂಗ್​ ಇಂದು (ಏಪ್ರಿಲ್​ 24) ಪೂರ್ಣಗೊಂಡಿದೆ. ‘ಜಿ9 ಕಮ್ಯುನಿಕೇಷನ್​ ಮೀಡಿಯಾ ಆ್ಯಂಡ್​ ಎಂಟರ್​ಟೇನ್ಮೆಂಟ್​’ ಸಂಸ್ಥೆಯ ಮೂಲಕ ಈ ಸಿನಿಮಾ ನಿರ್ಮಾಣ ಆಗುತ್ತಿದೆ. ರವಿಚಂದ್ರನ್ ಜೊತೆ ಧನ್ಯ ರಾಮ್​ಕುಮಾರ್, ದಿಗಂತ್, ಮೇಘನಾ ಗಾಂವ್ಕರ್, ನಾಗಾಭರಣ, ಲಕ್ಷ್ಮೀ ಗೋಪಾಲಸ್ವಾಮಿ, ಪ್ರಕಾಶ್ ಬೆಳವಾಡಿ, ರವಿಶಂಕರ್ ಗೌಡ, ರಂಗಾಯಣ ರಘು, ಸುಜಯ್ ಶಾಸ್ತ್ರಿ ರೇಖಾ ಕೂಡ್ಲಿಗಿ, ಕೃಷ್ಣ ಹೆಬ್ಬಾಳೆ ಮುಂತಾದ ಕಲಾವಿದರು ಈ ಸಿನಿಮಾದ ಪಾತ್ರವರ್ಗದಲ್ಲಿದ್ದಾರೆ. ಡಾ. ರಾಜ್​ಕುಮಾರ್​ ಅವರ ಜನ್ಮದಿನದಂದು (Dr Rajkumar Birthday) ಶೂಟಿಂಗ್​ ಪೂರ್ಣಗೊಂಡಿರುವುದು ವಿಶೇಷ. ಯಾಕೆಂದರೆ, ಕಳೆದ ವರ್ಷ ಇದೇ ದಿನ ಈ ಸಿನಿಮಾದ ಚಿತ್ರೀಕರಣ ಆರಂಭ ಆಗಿತ್ತು.

ಅನೂಪ್ ಸೀಳಿನ್ ಅವರು ‘ದ ಜಡ್ಜ್​ಮೆಂಟ್’ ಸಿನಿಮಾಗೆ ಸಂಗೀತ ನೀಡಿದ್ದಾರೆ. ಇಂದು ಶೂಟಿಂಗ್​ ಪೂರ್ಣಗೊಂಡ ಹಿನ್ನೆಲೆಯಲ್ಲಿ ಚಿತ್ರತಂಡದವರು ಸುದ್ದಿಗೋಷ್ಠಿ ನಡೆಸಿ ಕೆಲವು ವಿಚಾರಗಳನ್ನು ಹಂಚಿಕೊಂಡರು. ಈ ಸಿನಿಮಾಗೆ ಗುರುರಾಜ ಕುಲಕರ್ಣಿ ನಿರ್ದೇಶನ ಮಾಡುತ್ತಿದ್ದಾರೆ. ‘ನಮ್ಮ ಸಿನಿಮಾದ ಶೂಟಿಂಗ್​ ಇಂದು ಪೂರ್ಣಗೊಂಡಿದೆ. ಕಾಕತಾಳೀಯ ಎಂದರೆ ನಮ್ಮ ಸಿನಿಮಾ ಚಿತ್ರೀಕರಣ ಕಳೆದ ವರ್ಷ ಡಾ. ರಾಜ್​ಕುಮಾರ್ ಹುಟ್ಟುಹಬ್ಬದ ದಿನವೇ ಶುರುವಾಗಿತ್ತು. ಈ ವರ್ಷ ಅವರ ಹುಟ್ಟುಹಬ್ಬದ ದಿನವೇ ಮುಕ್ತಾಯ ಆಗಿದೆ’ ಎಂದು ಗುರುರಾಜ ಕುಲಕರ್ಣಿ ಹೇಳಿದರು.

‘ನಮ್ಮ ಸಿನಿಮಾ ಇಷ್ಟು ಸರಾಗವಾಗಿ ಶೂಟಿಂಗ್​ ಮುಕ್ತಾಯಗೊಳಿಸಲು ರವಿಚಂದ್ರನ್ ಹಾಗೂ ಎಲ್ಲ ಕಲಾವಿದರು, ತಂತ್ರಜ್ಞರ ಸಹಕಾರವೇ ಕಾರಣ. ಅವರಿಗೆಲ್ಲ ಈ ಸಂದರ್ಭದಲ್ಲಿ ಧನ್ಯವಾದ ತಿಳಿಸುತ್ತೇನೆ. ಈ ಸಿನಿಮಾ ನನ್ನನ್ನೂ ಸೇರಿದಂತೆ ಐವರು ನಿರ್ಮಾಪಕರು ನಿರ್ಮಾಣ ಮಾಡಿದ್ದೇನೆ. ಕೋರ್ಟ್ ರೂಮ್ ಥ್ರಿಲ್ಲರ್ ಕಥಾಹಂದರ ಇರುವ ಈ ಸಿನಿಮಾವನ್ನು ಮೇ ತಿಂಗಳಲ್ಲಿ ಬಿಡುಗಡೆ ಮಾಡಲು ಪ್ರಯತ್ನಿಸುತ್ತಿದ್ದೇವೆ’ ಎಂದು ನಿರ್ದೇಶಕರು ಹೇಳಿದ್ದಾರೆ. ‘ದೊಡ್ಡ ಪಾತ್ರವರ್ಗ ಹಾಗೂ ತಂತ್ರಜ್ಞರ ತಂಡವನ್ನು ಹೊಂದಿರುವ ನಮ್ಮ ಸಿನಿಮಾ ಯಾವುದೇ ತೊಂದರೆ ಇಲ್ಲದೆ ಶೂಟಿಂಗ್​ ಪೂರ್ಣಗೊಳಿಸಲು ಸಹಕರಿಸಿದ ಪ್ರತಿಯೊಬ್ಬರಿಗೂ ಧನ್ಯವಾದ’ ಎಂದು ನಿರ್ಮಾಪಕರಾದ ರಾಮು ರಾಯಚೂರು ಹಾಗೂ ಶರದ್ ನಾಡಗೌಡ ಹೇಳಿದರು. ನಿರ್ಮಾಪಕರಾದ ವಿಶ್ವನಾಥ್ ಗುಪ್ತ ಮತ್ತು ರಾಜಶೇಖರ ಪಾಟೀಲ್ ಕೂಡ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

ಇದನ್ನೂ ಓದಿ: ರಾಜ್​ಕುಮಾರ್ ಜನ್ಮದಿನ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಕುಟುಂಬ

‘ಈ ಸಿನಿಮಾದಲ್ಲಿ ಅಭಿನಯಿಸಿರುವುದಕ್ಕೆ ಖುಷಿ ಆಗಿದೆ‌. ಈ ಚಿತ್ರತಂಡದವರು ಕಲಾವಿದರನ್ನು ನೋಡಿಕೊಂಡ ರೀತಿ ಶ್ಲಾಘನೀಯ’ ಎಂದಿದ್ದಾರೆ ಧನ್ಯಾ ರಾಮ್​ಕುಮಾರ್. ‘ಈ ಚಿತ್ರತಂಡಕ್ಕೆ ತಡವಾಗಿ ಬಂದು ಸೇರಿಕೊಂಡವಳು ನಾನೇ. ರವಿಚಂದ್ರನ್ ಅವರ ಜತೆ ನಟಿಸಿದ್ದು ಸಂತೋಷ ತಂದಿದೆ. ಡಾ. ರಾಜ್​ಕುಮಾರ್ ಅವರ ಹುಟ್ಟುಹಬ್ಬದ ದಿನ ಶುರುವಾಗಿ, ಈ ವರ್ಷ ಅವರ ಹುಟ್ಟುಹಬ್ಬದ ದಿನವೇ ಶೂಟಿಂಗ್​ ಮುಕ್ತಾಯ ಆಗಿರುವುದು ನಿಜಕ್ಕೂ ಅಚ್ಚರಿ ಆಗಿದೆ. ಅಣ್ಣಾವ್ರ ಆಶೀರ್ವಾದ ನಮ್ಮ ತಂಡದ ಮೇಲಿದೆ’ ಎಂದು ಮೇಘನಾ ಗಾಂವ್ಕರ್ ಹೇಳಿದರು. ಪೂರ್ಣಿಮಾ ರಾಮ್​ಕುಮಾರ್ ಅವರು ಚಿತ್ರತಂಡಕ್ಕೆ ಶುಭ ಕೋರಿದರು. ಗೀತರಚನಕಾರ ಪ್ರಮೋದ್ ಮರವಂತೆ, ಛಾಯಾಗ್ರಾಹಕ ಪಿ.ಕೆ.ಹೆಚ್ ದಾಸ್, ಸಂಕಲನಕಾರ ಕೆಂಪರಾಜ್ ಕೂಡ ಸುದ್ದಿಗೋಷ್ಠಿಯಲ್ಲಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More