ಕೊರೊನಾ ವೈರಸ್ ಕಾಣಿಸಿಕೊಂಡ ನಂತರದಲ್ಲಿ ಒಟಿಟಿ ವ್ಯಾಪ್ತಿ ವಿಸ್ತರಣೆ ಆಗಿದೆ. ಅನೇಕ ಸಿನಿಮಾಗಳು ಒಟಿಟಿಯಲ್ಲಿ ರಿಲೀಸ್ ಆಗುತ್ತಿವೆ. ಚಿತ್ರಮಂದಿರಗಳಿಗೆ ಅನಿಶ್ಚಿತತೆ ಕಾಡುತ್ತಿರುವುದರಿಂದ ಸ್ಟಾರ್ ನಟರ ಚಿತ್ರಗಳೂ ಒಟಿಟಿಯತ್ತ ಮುಖ ಮಾಡುತ್ತಿವೆ. ಯಶ್ ನಟನೆಯ ಕೆಜಿಎಫ್ 2 ಚಿತ್ರಕ್ಕೂ ಕೊರೊನಾ ವೈರಸ್ ಎರಡನೇ ಅಲೆಯ ಕಾಟ ತಟ್ಟಿದ್ದು, ಸಿನಿಮಾ ರಿಲೀಸ್ ದಿನಾಂಕ ಮುಂದೂಡಲ್ಪಟ್ಟಿದೆ. ಇದರ ಲಾಭ ಪಡೆಯೋಕೆ ಒಟಿಟಿಯವರು ಪ್ರಯತ್ನಿಸಿದ್ದಾರೆ. ಅಲ್ಲದೆ, ಕೆಜಿಎಫ್ ನಿರ್ಮಾಪಕರಿಗೆ ದೊಡ್ಡ ಮೊತ್ತದ ಆಫರ್ ಕೂಡ ನೀಡಿದ್ದಾರೆ.
ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ‘ಕೆಜಿಎಫ್ 2’ ರಿಲೀಸ್ ಆಗಿ ವರ್ಷವೇ ಕಳೆದಿರುತ್ತಿತ್ತು. ಆದರೆ, ಕೊವಿಡ್ ಮೊದಲ ಅಲೆ ಕಾಣಿಸಿಕೊಂಡ ಕಾರಣ ಹಲವು ತಿಂಗಳ ಕಾಲ ಚಿತ್ರದ ಕೆಲಸಗಳು ನಿಂತವು. ಎಲ್ಲವೂ ಸರಿ ಆಯಿತು ಎನ್ನುವಾಗಲೇ ಕೊವಿಡ್ ಎರಡನೇ ಅಲೆ ಕಾಣಿಸಿಕೊಂಡಿತ್ತು. ಈ ಎಲ್ಲಾ ಕಾರಣದಿಂದ ‘ಕೆಜಿಎಫ್ 2’ ಕೆಲಸಗಳು ನಿಧಾನವಾದವು. ಜುಲೈ ತಿಂಗಳಲ್ಲಿ ಸಿನಿಮಾ ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿತ್ತಾದರೂ ಅದು ಸಾಧ್ಯವಾಗಿಲ್ಲ. ಹೊಸ ರಿಲೀಸ್ ದಿನಾಂಕ ಇನ್ನಷ್ಟೇ ಗೊತ್ತಾಗಬೇಕಿದೆ.
ಈಗ ‘ಕೆಜಿಎಫ್ 2’ಗೆ ಒಟಿಟಿ ಅವರು ನೀಡಿದ ಆಫರ್ ಬಗ್ಗೆ ಹೊಸ ವಿಚಾರವೊಂದು ಕೇಳಿ ಬಂದಿದೆ. ಚಿತ್ರಮಂದಿರಗಳಲ್ಲಿ ‘ಕೆಜಿಎಫ್ 2’ ರಿಲೀಸ್ ಮಾಡದೇ ನೇರವಾಗಿ ಒಟಿಟಿಯಲ್ಲಿ ರಿಲೀಸ್ ಮಾಡಿದರೆ 255 ಕೋಟಿ ಕೊಡುವುದಾಗಿ ಒಟಿಟಿ ಪ್ಲಾಟ್ಫಾರ್ಮ್ ಒಂದು ಬೇಡಿಕೆ ಇಟ್ಟಿದೆ ಎನ್ನಲಾಗಿದೆ.
ಆದರೆ, ಇದನ್ನು ಚಿತ್ರತಂಡ ಒಪ್ಪಿಕೊಳ್ಳೋ ಸಾಧ್ಯತೆ ತುಂಬಾನೆ ಕಡಿಮೆ. ಇದಕ್ಕೆ ಹಲವು ಕಾರಣಗಳಿವೆ. ಕೆಜಿಎಫ್ 2 ಬಗ್ಗೆ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಒಂದೊಮ್ಮೆ ಈ ಚಿತ್ರ ಚಿತ್ರಮಂದಿರಗಳಲ್ಲಿ ರಿಲೀಸ್ ಆದರೆ ಐದು ಭಾಷೆಗಳಿಂದ ಆಗುವ ಗಳಿಕೆ 255 ಕೋಟಿ ರೂಪಾಯಿಯನ್ನು ಸುಲಭವಾಗಿ ದಾಟುತ್ತದೆ. ಇನ್ನು, ಥಿಯೇಟರ್ನಲ್ಲಿ ಸಿನಿಮಾ ರಿಲೀಸ್ ಆದರೆ, ಅಭಿಮಾನಿಗಳ ಪಾಲಿಗೆ ಅದು ಹಬ್ಬವೇ ಸರಿ. ಈ ಎಲ್ಲಾ ಕಾರಣಕ್ಕೆ ಸಿನಿಮಾ ತಂಡದವರು ಚಿತ್ರವನ್ನು ಒಟಿಟಿಯಲ್ಲಿ ರಿಲೀಸ್ ಮಾಡೋ ಸಾಧ್ಯತೆ ಕಡಿಮೆ ಎನ್ನಬಹುದು. ಅಭಿಮಾನಿಗಳು ಕೂಡ ಈ ಆಫರ್ ಒಪ್ಪಬೇಡಿ ಎಂದಿದ್ದಾರೆ.
ಇದನ್ನೂ ಓದಿ: ರಾಧಿಕಾ ಪಂಡಿತ್-ಯಶ್ ನಿಶ್ಚಿತಾರ್ಥಕ್ಕೆ ಐದು ವರ್ಷ; ವಿಶೇಷ ವಿಡಿಯೋ ಹಂಚಿಕೊಂಡ ನಟಿ