ಸ್ಯಾಂಡಲ್ವುಡ್ (Sandalwood) ನಿರ್ದೇಶಕ ಕಿರಣ್ ಗೋವಿ (Kiran Govi) ನಿಧನ ಹೊಂದಿದ್ದಾರೆ. ಅವರಿಗೆ 50 ವರ್ಷ ವಯಸ್ಸಾಗಿತ್ತು. ಇಂದು (ಮಾರ್ಚ್ 25) ತಮ್ಮ ಕಚೇರಿಯಲ್ಲಿದ್ದಾಗ ಕಿರಣ್ ಅವರಿಗೆ ಹೃದಯಾಘಾತವುಂಟಾಗಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯ್ತಾದರೂ ಚಿಕಿತ್ಸೆಗೆ ಸ್ಪಂದಿಸದೆ ಅವರು ಕೊನೆ ಉಸಿರೆಳೆದಿದ್ದಾರೆ. ಸಂಚಾರಿ (Sanchari), ಪಯಣ (Payana), ಯಾರಿಗುಂಟು-ಯಾರಿಗಿಲ್ಲ. ಪಾರು w/o ದೇವದಾಸ್ ಇನ್ನಿತರೆ ಸಿನಿಮಾಗಳನ್ನು ನಿರ್ದೇಶಿಸಿದ್ದರು ಕಿರಣ್ ಗೋವಿ.
ನಿರ್ದೇಶಕ ಕಿರಣ್ ಗೋವಿ ನಿಧನಕ್ಕೆ ಸ್ಯಾಂಡಲ್ವುಡ್ನ ಕೆಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ಅಪಾರ ಶಿಷ್ಯ ಬಳಗವನ್ನು ಕಿರಣ್ ಗೋವಿ ಹೊಂದಿದ್ದರು. ರವಿಶಂಕರ್ ನಾಯಕ ನಟರಾಗಿ ನಟಿಸಿದ್ದ ಪಯಣ ಸಿನಿಮಾವನ್ನು ಕಿರಣ್ ಗೋವಿ ನಿರ್ದೇಶನ ಮಾಡಿದ್ದರು. ಆ ಸಿನಿಮಾ ಹಿಟ್ ಆಗಿತ್ತು. ಜೊತೆಗೆ ಒರಟ ಖ್ಯಾತಿಯ ಪ್ರಶಾಂತ್ ಜೊತೆಗೆ ಸಂಚಾರಿ ಹೆಸರಿನ ಸಿನಿಮಾವನ್ನು ಮಾಡಿದ್ದರು.
ಕಿರಣ್ ಗೋವಿ ಜನಿಸಿದ್ದು ತುಮಕೂರಿನಲ್ಲಿ ಆದರೆ ಅವರ ಶಿಕ್ಷಣ ಮಾಡಿದ್ದು ಬೆಂಗಳೂರಿನಲ್ಲಿ. ಅವರ ತಂದೆ ದೂರವಾಣಿಗೆ ಸಂಬಂಧಿಸಿದ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು ಮಾತ್ರವಲ್ಲದೆ ಕೆಲವು ಸಿನಿಮಾಗಳಲ್ಲಿ ಸಣ್ಣ-ಪುಟ್ಟ ಪಾತ್ರಗಳಲ್ಲಿಯೂ ನಟಿಸಿದ್ದರು. ಶಿಕ್ಷಣದಲ್ಲಿ ಹಿಂದುಳಿದ ಕಿರಣ್ ಎಳವೆಯಲ್ಲಿ ಗಾಯನದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದರು. ಹಾಗಾಗಿ ಆರ್ಕೆಸ್ಟ್ರಾ ಸೇರಿಕೊಂಡು ಗಾಯನ ಆರಂಭಿಸಿದರು.
ಪದವಿಗೆ ಬಂದಾಗ ಸಣ್ಣ ತಂಡ ಕಟ್ಟಿಕೊಂಡು ಸಾಂಸ್ಕೃತಿಕ ಚಟುವಟಿಕೆಗಳನ್ನು ಮಾಡಲು ಪ್ರಾರಂಭಿಸಿದರು. ಅವರ ಜ್ಯೂನಿಯರ್ ಆಗಿದ್ದ ನಟಿ ಪ್ರೇಮ ಅವರನ್ನು ಮೊದಲ ಬಾರಿಗೆ ವೇದಿಕೆ ಏರಿಸಿದ ಶ್ರೇಯ ಸಹ ಕಿರಣ್ ಗೋವಿ ಅವರಿಗೆ ಸಲ್ಲುತ್ತದೆ. ನಟಿ ಪ್ರೇಮ ಅವರಿಗೆ ತಮ್ಮ ಬ್ಯಾಂಡ್ನಲ್ಲಿ ಹಾಡುವ ಅವಕಾಶ ನೀಡಿ ಜೊತೆಗೆ ತಮ್ಮ ನಾಟಕದಲ್ಲಿ ಪಾತ್ರಗಳನ್ನು ನೀಡಿದ್ದರು ನಿರ್ದೇಶಕ ಕಿರಣ್ ಗೋವಿ ಆ ಬಳಿಕ ಪ್ರೇಮ ದೊಡ್ಡ ತಾರೆಯಾದರು.
ಪದವಿ ಬಳಿಕ ನಟನಾಗಬೇಕೆಂಬ ಹುಮ್ಮಸ್ಸಿನಿಂದ ಕೆಲವು ಜಾಹೀರಾತುಗಳಲ್ಲಿ, ಜಾಹೀರಾತುಗಳಲ್ಲಿ ತೀರ ಸಣ್ಣ ಪಾತ್ರಗಳಲ್ಲಿ ನಟಿಸುವ ಜೊತೆಗೆ ಸಹಾಯಕರಾಗಿಯೂ ದುಡಿದ ಕಿರಣ್, ಬಳಿಕ ಕೇಸರಿ ಹರವು ಅವರ ಧಾರಾವಾಹಿಯಲ್ಲಿ ಸಹಾಕನಾಗಿ ಕೆಲಸ ಮಾಡಿದರು. ಬಳಿಕ ಕೆಎಸ್ಡಿಎಲ್ ಚಂದ್ರು ಅವರಿಗೂ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದರು. ಸುನಿಲ್ ಪುರಾಣಿಕ್, ಅಕ್ರಂ, ರವಿಕಿರಣ್ ಅವರುಗಳ ಧಾರಾವಾಹಿಗಳಿಗೆ ಸಹಾಯಕರಾಗಿ ಕೆಲಸ ಮಾಡಿದ್ದರು.
Published On - 6:13 pm, Sat, 25 March 23