ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿರುವ ‘ಪೆಂಟಗನ್’ ಚಿತ್ರದ ಟ್ರೇಲರ್ (Pentagon Movie Trailer) ರಿಲೀಸ್ ಆಗಿದೆ. ಈ ಚಿತ್ರಕ್ಕೆ ನಿರ್ಮಾಪಕನಾಗಿ ಹಾಗೂ ಕ್ರಿಯೇಟಿವ್ ಹೆಡ್ ಆಗಿ ಗುರು ದೇಶಪಾಂಡೆ (Guru Deshpande) ಕೆಲಸ ಮಾಡಿದ್ದಾರೆ. ಇದೊಂದು ಭಿನ್ನವಾದ ಪ್ರಯತ್ನ. 5 ಬೇರೆ ಬೇರೆ ಕಥೆಗಳನ್ನು ಇಟ್ಟುಕೊಂಡು ಒಂದು ಸಿನಿಮಾ ಮಾಡಲಾಗಿದೆ. ಕಥಾ ಸಂಕಲನದ ರೀತಿ ಮೂಡಿಬಂದಿರುವ ಈ ‘ಪೆಂಟಗನ್’ (Pentagon Movie) ಸಿನಿಮಾದಲ್ಲಿ 5 ಡಿಫರೆಂಟ್ ಲೋಕವೇ ಅಡಗಿದೆ ಎನ್ನಬಹುದು. ಅದರ ಝಲಕ್ ತೋರಿಸುವ ರೀತಿಯಲ್ಲಿ ಟ್ರೇಲರ್ ಬಿಡುಗಡೆ ಆಗಿದೆ. ‘ಜಂಕಾರ್ ಮ್ಯೂಸಿಕ್’ ಮೂಲಕ ಅನಾವರಣ ಆಗಿರುವ ಟ್ರೇಲರ್ಗೆ ಜನಮೆಚ್ಚುಗೆ ಸಿಗುತ್ತಿದೆ. ಸಿನಿಪ್ರಿಯರು ಪಾಸಿಟಿವ್ ಆಗಿ ಕಮೆಂಟ್ ಮಾಡುತ್ತಿದ್ದಾರೆ.
‘ಪೆಂಟಗನ್’ ಸಿನಿಮಾದಲ್ಲಿನ 5 ಕಥೆಗಳು ಕೂಡ ಒಂದಕ್ಕಿಂತ ಒಂದು ಭಿನ್ನವಾಗಿವೆ. ಎಲ್ಲವೂ ಕೂಡ ಸಖತ್ ರಾ ಶೈಲಿಯಲ್ಲಿ ಮೂಡಿಬಂದಿವೆ. ಟ್ರೇಲರ್ ನೋಡಿದ ಬಳಿಕ ಸಿನಿಪ್ರಿಯರ ನಿರೀಕ್ಷೆ ಡಬಲ್ ಆಗಿದೆ. ಜಾತಿ ತಾರತಮ್ಯ, ಸುಪಾರಿ ಕಿಲ್ಲರ್, ಹನಿ ಟ್ರ್ಯಾಪ್, ಕನ್ನಡ ಹೋರಾಟ.. ಹೀಗೆ ಹಲವು ಅಂಶಗಳನ್ನು ಒಳಗೊಂಡಿರುವ ಕಥೆಗಳು ‘ಪೆಂಟಗನ್’ ಚಿತ್ರದಲ್ಲಿವೆ ಎಂಬುದಕ್ಕೆ ಟ್ರೇಲರ್ನಲ್ಲಿ ಸುಳಿವು ಸಿಕ್ಕಿದೆ.
ಕನ್ನಡದಲ್ಲಿ ಈ ರೀತಿಯ ಪ್ರಯೋಗಗಳು ವಿರಳ. ಆ ಕಾರಣಕ್ಕಾಗಿ ‘ಪೆಂಟಗನ್’ ಸಿನಿಮಾ ಮೇಲಿನ ನಿರೀಕ್ಷೆ ಜಾಸ್ತಿ ಆಗಿದೆ. ಸಿನಿಪ್ರಿಯರಿಗೆ ಈ ಚಿತ್ರದ ಟ್ರೇಲರ್ ಇಷ್ಟ ಆಗಿದೆ. 5 ಕಥೆಗಳನ್ನು ಕಣ್ತುಂಬಿಕೊಳ್ಳಲು ಪ್ರೇಕ್ಷಕರು ಕಾಯುತ್ತಿದ್ದಾರೆ. ಏಪ್ರಿಲ್ 7ರಂದು ‘ಪೆಂಟಗನ್’ ಸಿನಿಮಾ ಬಿಡುಗಡೆ ಆಗಲಿದೆ. ಹಾಡುಗಳು ಮತ್ತು ಟೀಸರ್ ಮೂಲಕ ಈ ಚಿತ್ರ ಗಮನ ಸೆಳೆಯುತ್ತಿದೆ. ಜೊತೆಗೆ ಟ್ರೇಲರ್ ಕೂಡ ಸಖತ್ ಸದ್ದು ಮಾಡಲು ಆರಂಭಿಸಿದೆ.
ಐವರು ನಿರ್ದೇಶಕರು ‘ಪೆಂಟಗನ್’ ಚಿತ್ರಕ್ಕೆ ಕೆಲಸ ಮಾಡಿದ್ದಾರೆ. ಗುರು ದೇಶಪಾಂಡೆ, ‘ಶಿವಾಜಿ ಸುರತ್ಕಲ್’ ಸಿನಿಮಾ ಖ್ಯಾತಿಯ ಆಕಾಶ್ ಶ್ರೀವತ್ಸ, ‘ಚೂರಿಕಟ್ಟೆ’ ಖ್ಯಾತಿಯ ರಾಘು ಶಿವಮೊಗ್ಗ, ‘ಬ್ರಹ್ಮಚಾರಿ’ ಚಿತ್ರದ ಚಂದ್ರಮೋಹನ್ ಹಾಗೂ ಹೊಸ ನಿರ್ದೇಶಕ ಕಿರಣ್ ಕುಮಾರ್ ಅವರು ತಲಾ ಒಂದು ಕಥೆಗೆ ನಿರ್ದೇಶನ ಮಾಡಿದ್ದಾರೆ. ಎಲ್ಲ ಪ್ರತಿಭಾವಂತರ ಸಂಗಮ ಈ ಸಿನಿಮಾದಲ್ಲಿ ಆಗಿದೆ.
ಇದನ್ನೂ ಓದಿ: 19 20 21 Movie Review: ನಾಡಿನ ಜನ ನೋಡಲೇಬೇಕಾದ ಕಾಡಿನ ಮಕ್ಕಳ ಕಥೆ ಮತ್ತು ಘನತೆ
‘ಪೆಂಟಗನ್’ ಚಿತ್ರದ ಪಾತ್ರವರ್ಗದಲ್ಲಿ ಸಾಕಷ್ಟು ಕಲಾವಿದರು ನಟಿಸಿದ್ದಾರೆ. ಪ್ರಕಾಶ್ ಬೆಳವಾಡಿ, ಕಿಶೋರ್, ಪಿ. ರವಿಶಂಕರ್, ತನಿಶಾ, ಪ್ರೇರಣಾ ಕಂಬಂ, ಪ್ರೀತಿಕಾ ದೇಶಪಾಂಡೆ, ರವಿ ನಾಯಕ್, ಶ್ರುತಿ ನಾಯಕ್, ವಂಶಿ ಕೃಷ್ಣ ಸೇರಿದಂತೆ ದೊಡ್ಡ ತಾರಾಗಣ ಈ ಸಿನಿಮಾದಲ್ಲಿದೆ. ಅಭಿಲಾಷ್ ಕಲ್ಲತ್ತಿ, ಗುರುಪ್ರಸಾದ್ ಎಮ್.ಜಿ. ಹಾಗೂ ಕಿರಣ್ ಹಂಪಾಪುರ ಛಾಯಾಗ್ರಹಣ ಮಾಡಿದ್ದಾರೆ. ಮಣಿಕಾಂತ್ ಕದ್ರಿ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:27 pm, Thu, 23 March 23