19 20 21 Movie Review: ನಾಡಿನ ಜನ ನೋಡಲೇಬೇಕಾದ ಕಾಡಿನ ಮಕ್ಕಳ ಕಥೆ ಮತ್ತು ಘನತೆ
19.20.21 Movie | Mansore: ಮತ್ತೊಬ್ಬರ ನೈಜ ಬದುಕಿನಲ್ಲಿ ಇರುವ ನೋವಿನ ಕಥೆಯನ್ನು ಇಟ್ಟುಕೊಂಡು ಸಿನಿಮಾ ಮಾಡುವಾಗ ನಿರ್ದೇಶಕರಿಗೆ ಇರಬೇಕಾದ ಜವಾಬ್ದಾರಿ ಬಹಳ ದೊಡ್ಡದು. ಅದನ್ನು ಮಂಸೋರೆ ಅವರು ತುಂಬ ಸಮರ್ಥವಾಗಿ ನಿಭಾಯಿಸಿದ್ದಾರೆ.
ಚಿತ್ರ: ‘19.20.21’
ನಿರ್ಮಾಣ: ದೇವರಾಜ್ ಆರ್.
ನಿರ್ದೇಶನ: ಮಂಸೋರೆ
ಪಾತ್ರವರ್ಗ: ಶೃಂಗ ಬಿ.ವಿ., ಬಾಲಾಜಿ ಮನೋಹರ್, ಕೃಷ್ಣ ಹೆಬ್ಬಾಳೆ, ರಾಜೇಶ್ ನಟರಂಗ, ಎಂ.ಡಿ. ಪಲ್ಲವಿ, ಸಂಪತ್ ಕುಮಾರ್, ವಿಶ್ವಕರ್ಣ ಮುಂತಾದವರು.
ಸ್ಟಾರ್: 4/5
ವಿಶೇಷ ಕಥಾಹಂದರದ ಸಿನಿಮಾಗಳನ್ನು ಮಾಡುವ ಮೂಲಕ ನಿರ್ದೇಶಕ ಮಂಸೋರೆ (Mansore) ಅವರು ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ‘ಹರಿವು’, ‘ನಾತಿಚರಾಮಿ’, ‘ಆಕ್ಟ್ 1978’ ಸಿನಿಮಾಗಳಲ್ಲಿ ಅವರ ಕಸುಬುದಾರಿಕೆ ಏನೆಂಬುದು ಗೊತ್ತಾಗಿದೆ. ಈಗ ಅವರ ನಿರ್ದೇಶನದಲ್ಲಿ ‘19.20.21’ ಚಿತ್ರ (19.20.21 Movie) ಮೂಡಿಬಂದಿದೆ. ಈ ಬಾರಿ ಕೂಡ ಅವರು ಒಂದು ನೈಜ ಘಟನೆಯನ್ನು ಆಧರಿಸಿ ಸಿನಿಮಾ ಮಾಡಿದ್ದಾರೆ. ಮಲೆಕುಡಿಯ ಸಮುದಾಯದ ಕಾಡಿನ ಜನರು ಹಲವು ವರ್ಷಗಳ ಕಾಲ ಎದುರಿಸಿದ ದೌರ್ಜನ್ಯದ ಕಥೆ ಈ ಸಿನಿಮಾದಲ್ಲಿದೆ. ನೈಜತೆಗೆ ಹತ್ತಿರವಾಗಿರುವ ನಿರೂಪಣೆ, ಪ್ರತಿಭಾವಂತ ಕಲಾವಿದರ ಆಯ್ಕೆಯಿಂದಾಗಿ ‘19.20.21’ ಸಿನಿಮಾ ಅತ್ಯುತ್ತಮವಾಗಿ ಮೂಡಿಬಂದಿದೆ. ಈ ಚಿತ್ರದ ವಿಮರ್ಶೆ (19.20.21 Movie Review) ಇಲ್ಲಿದೆ..
ವಿಠಲ್ ಮಲೆಕುಡಿಯ ಅವರ ನೈಜ ಕಥೆ:
2012ರ ಮಾರ್ಚ್ 3ರಂದು ನಕ್ಸಲ್ ನಿಗ್ರಹ ಪಡೆಯಿಂದ ಬಂಧಿತರಾದ ವಿಠಲ್ ಮಲೆಕುಡಿಯ ಹಾಗೂ ಅವರ ತಂದೆ ಲಿಂಗಣ್ಣ ಮಲೆಕುಡಿಯ ಅವರ ಕಾನೂನು ಹೋರಾಟದ ಕಥೆಯೇ ‘19.20.21’ ಸಿನಿಮಾ. ನಕ್ಸಲರೊಂದಿಗೆ ಸಂಪರ್ಕದಲ್ಲಿದ್ದಾರೆಂದು ತಂದೆ-ಮಗನನ್ನು ಬಂಧಿಸಲಾಗಿತ್ತು. ವಿಠಲ್ ಅವರು ತಮ್ಮ ಮೇಲಿನ ಆರೋಪದ ವಿರುದ್ಧ ಸತತ ಹತ್ತು ವರ್ಷಗಳ ಕಾಲ ಕಾನೂನು ಹೋರಾಟ ನಡೆಸಿದರು. 2021ರಲ್ಲಿ ಅವರು ನಿರ್ದೋಷಿ ಎಂದು ಕೋರ್ಟ್ ತೀರ್ಪು ನೀಡಿತ್ತು. ಈ ಹೋರಾಟದಲ್ಲಿ ಮಲೆಕುಡಿಯ ಸಮುದಾಯದವರು ಅನುಭವಿಸಿದ ನೋವು ಅಷ್ಟಿಷ್ಟಲ್ಲ. ಅದನ್ನು ಸಿನಿಮಾ ರೂಪದಲ್ಲಿ ಎಳೆಎಳೆಯಾಗಿ ಕಟ್ಟಿಕೊಡಲಾಗಿದೆ.
ಜವಾಬ್ದಾರಿಯುತ ನಿರೂಪಣೆ:
ಮತ್ತೊಬ್ಬರ ನೈಜ ಬದುಕಿನಲ್ಲಿ ಇರುವ ನೋವಿನ ಕಥೆಯನ್ನು ಇಟ್ಟುಕೊಂಡು ಸಿನಿಮಾ ಮಾಡುವಾಗ ನಿರ್ದೇಶಕರಿಗೆ ಇರಬೇಕಾದ ಜವಾಬ್ದಾರಿ ಬಹಳ ದೊಡ್ಡದು. ಅದನ್ನು ಮಂಸೋರೆ ಅವರು ತುಂಬ ಸಮರ್ಥವಾಗಿ ನಿಭಾಯಿಸಿದ್ದಾರೆ. ಪರರ ನೋವಿನ ಕಥೆ ಪ್ರೇಕ್ಷಕರಿಗೆ ಮನರಂಜನೆಯ ವಿಷಯ ಆಗಬಾರದು. ಆ ಎಚ್ಚರಿಕೆಯನ್ನು ಪ್ರತಿ ಹಂತದಲ್ಲೂ ನಿರ್ದೇಶಕರು ಗಮನದಲ್ಲಿ ಇಟ್ಟುಕೊಂಡೇ ‘19.20.21’ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ. ಮಲೆಕುಡಿಯರ ಹೋರಾಟವನ್ನು ಸಿನಿಮಾದ ರೂಪದಲ್ಲಿ ದಾಖಲಿಸುವ ಪ್ರಯತ್ನ ಮಾಡಲಾಗಿದೆ. ಆ ಹೋರಾಟಕ್ಕೆ ಇರುವ ಘನತೆಯನ್ನು ಕಿಂಚಿತ್ತೂ ತಗ್ಗಿಸದೇ ಸಿನಿಮಾ ಆಗಿಸುವಲ್ಲಿ ನಿರ್ದೇಶಕ ಮಂಸೋರೆ ಯಶಸ್ವಿ ಆಗಿದ್ದಾರೆ.
ಇದನ್ನೂ ಓದಿ: ಡಿಫರೆಂಟ್ ಪಾತ್ರದಲ್ಲಿ ಪುನೀತ್; ‘ಮಿಷನ್ ಕೊಲಂಬಸ್’ ಚಿತ್ರಕ್ಕಾಗಿ ಮಂಸೋರೆ ಕಂಡಿದ್ದ ಕನಸು ಭಗ್ನ
ಶೃಂಗ ಬಿ.ವಿ. ಅಭಿನಯಕ್ಕೆ ಹ್ಯಾಟ್ಸ್ ಆಫ್:
‘19.20.21’ ಸಿನಿಮಾದಲ್ಲಿ ವಿಠಲ್ ಮಲೆಕುಡಿಯ ಅವರ ಪಾತ್ರ ಮುಖ್ಯವಾದದ್ದು. ಆ ಪಾತ್ರವನ್ನು ಪ್ರತಿಭಾವಂತ ಕಲಾವಿದ ಶೃಂಗ ಬಿ.ವಿ. ನಿಭಾಯಿಸಿದ್ದಾರೆ. ಪರಕಾಯ ಪ್ರವೇಶ ಮಾಡಿದ ರೀತಿಯಲ್ಲಿ ಅವರ ಅಭಿನಯವಿದೆ. ನೋವು, ಹತಾಶೆ, ಅಸಹಾಯಕತೆ ಮುಂತಾದ ಭಾವಗಳನ್ನು ಅವರು ಹೊಮ್ಮಿಸಿರುವ ರೀತಿ ತುಂಬ ನೈಜವಾಗಿದೆ. ಅವರ ಅಭಿನಯ ಈ ಸಿನಿಮಾದ ಪ್ಲಸ್ ಪಾಯಿಂಟ್. ನೋಡಿದವರು ಹ್ಯಾಟ್ಸ್ ಆಫ್ ಎನ್ನಲೇಬೇಕು ಎಂಬ ರೀತಿಯಲ್ಲಿ ಅವರು ಈ ಪಾತ್ರಕ್ಕೆ ಜೀವ ತುಂಬಿದ್ದಾರೆ.
ತಾಂತ್ರಿಕವಾಗಿ ‘19.20.21’ ಸಿನಿಮಾ ಹೇಗಿದೆ?
ಮೊದಲೇ ಹೇಳಿದಂತೆ, ಪ್ರೇಕ್ಷಕರನ್ನು ರಂಜಿಸಬೇಕು ಎಂಬ ಉದ್ದೇಶವನ್ನು ಇಟ್ಟುಕೊಂಡು ನಿರ್ದೇಶಕರು ಈ ಸಿನಿಮಾ ಮಾಡಿಲ್ಲ. ಅವರ ಆಶಯಕ್ಕೆ ತಕ್ಕಂತೆಯೇ ಛಾಯಾಗ್ರಹಣ ಮತ್ತು ಸಂಗೀತ ಕೆಲಸ ಮಾಡಿದೆ. ಬಿಂದು ಮಾಲಿನಿಯವರು ಎರಡು ಹಾಡುಗಳ ಮೂಲಕ ಮಲೆಕುಡಿಯರ ಬದುಕು ಮತ್ತು ಯಾತನೆಯನ್ನು ವಿವರಿಸುವ ಪ್ರಯತ್ನ ಮಾಡಿದ್ದಾರೆ. ಹಾಗೆಯೇ ರೋಣದ ಬಕ್ಕೇಶ್ ಅವರ ಹಿನ್ನೆಲೆ ಸಂಗೀತವೂ ಚಿತ್ರದ ಆಶಯಕ್ಕೆ ಪೂರಕವಾಗಿದೆ. ಛಾಯಾಗ್ರಾಹಕ ಶಿವ ಬಿ.ಕೆ. ಕುಮಾರ್ ಅವರು ಹ್ಯಾಂಡ್ ಹೆಲ್ಡ್ ಶಾಟ್ಗಳ ಮೂಲಕ ಎಲ್ಲ ದೃಶ್ಯಗಳನ್ನು ಚಿತ್ರೀಕರಿಸಿರುವುದು ‘19.20.21’ ಸಿನಿಮಾಗೆ ಬೇರೆಯದೇ ಫೀಲ್ ನೀಡಿದೆ.
ಇದನ್ನೂ ಓದಿ: Mansore: ತಮ್ಮದೇ ಕಥೆಯನ್ನು ತೆರೆ ಮೇಲೆ ನೋಡಿ ಕಣ್ಣೀರು ಹಾಕಿದ ‘19.20.21’ ಚಿತ್ರದ ನೈಜ ಪಾತ್ರಗಳು
ಇನ್ನುಳಿದ ಕಲಾವಿದರ ನಟನೆಗೂ ಮೆಚ್ಚುಗೆ:
‘19.20.21’ ಸಿನಿಮಾದಲ್ಲಿ ಶೃಂಗ ಬಿ.ವಿ. ಮಾತ್ರವಲ್ಲದೇ ಇನ್ನುಳಿದ ಪಾತ್ರಧಾರಿಗಳು ಕೂಡ ಗಮನಾರ್ಹವಾಗಿ ಅಭಿನಯಿಸಿದ್ದಾರೆ. ಎಲ್ಲಿಯೂ ನಾಟಕೀಯತೆ ಇಲ್ಲದೇ ಎಷ್ಟು ಸಾಧ್ಯವೋ ಅಷ್ಟು ನೈಜವಾಗಿ ಹಾಗೂ ಅಷ್ಟೇ ತೀವ್ರವಾಗಿ ನಟಿಸುವ ಮೂಲಕ ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಕ್ಲೈಮ್ಯಾಕ್ಸ್ ವೇಳೆಗೆ ಬಾಲಾಜಿ ಮನೋಹರ್ ಅವರು ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸುತ್ತಾರೆ. ಕೃಷ್ಣ ಹೆಬ್ಬಾಳೆ, ವಿಶ್ವ ಕರ್ಣ, ರಾಜೇಶ್ ನಟರಂಗ, ಎಂ.ಡಿ. ಪಲ್ಲವಿ, ಸಂಪತ್ ಕುಮಾರ್ ಮುಂತಾದ ಕಲಾವಿದರಿಂದಾಗಿ ಸಿನಿಮಾದ ಮೆರುಗು ಹೆಚ್ಚಿದೆ.
ನಾಡು ನೋಡಬೇಕಾದ ಕಾಡಿನ ಕಥೆ:
ಇದು ಎಂದೋ ನಡೆದುಹೋದ ಕಥೆ ಅಲ್ಲ. ಕೆಲವೇ ವರ್ಷಗಳ ಹಿಂದೆ ನಮ್ಮ ನಡುವೆಯೇ ನಡೆದರೂ ಬಹುತೇಕರನ್ನು ತಲುಪದೇ ಇರುವ ಘಟನೆಯ ವಿವರಗಳಿವು. ಅದನ್ನು ಸಿನಿಮಾ ಮೂಲಕ ವಿಶ್ವಕ್ಕೆ ತಲುಪಿಸುವ ಪ್ರಯತ್ನವಾಗಿ ‘19.20.21’ ಚಿತ್ರ ಮಹತ್ವ ಪಡೆದುಕೊಳ್ಳುತ್ತದೆ. ಧ್ವನಿ ಇಲ್ಲದ ಕಾಡಿನ ಜನರ ಮೇಲೆ ನಡೆದ ಅನ್ಯಾಯದ ಬಗ್ಗೆ ನಾಡಿನ ಜನರಿಗೆ ತಿಳಿಸುವ ಚಿತ್ರ ಇದಾಗಿದೆ. ಈ ಕಥೆಯನ್ನು ತೆರೆಗೆ ತರುವಾಗ ಫ್ಲ್ಯಾಶ್ ಬ್ಯಾಕ್ ಮತ್ತು ಪ್ರೆಸೆಂಟ್ ಸನ್ನಿವೇಶಗಳು ಒಂದರಹಿಂದೆ ಮತ್ತೊಂದು ಬರುವಂತೆ ದೃಶ್ಯಗಳನ್ನು ಹೆಣೆಯಲಾಗಿದೆ. ಇದು ಕೊಂಚ ಗೊಂದಲ ಮೂಡಿಸುವ ಸಾಧ್ಯತೆ ಇದೆ. ಉಳಿದಂತೆ ಇಡೀ ಸಿನಿಮಾ ಅಚ್ಚುಕಟ್ಟಾಗಿ ಮೂಡಿಬಂದಿದೆ.
ವಕೀಲರು ಬಾಲಕಿಯೊಬ್ಬಳಿಗೆ ಸಂವಿಧಾನವನ್ನು ಉಡುಗೊರೆಯಾಗಿ ನೀಡುವ ಒಂದು ದೃಶ್ಯ ಕ್ಲೈಮ್ಯಾಕ್ಸ್ನಲ್ಲಿದೆ. ಇಂಥ ಒಂದಷ್ಟು ದೃಶ್ಯಗಳ ಮೂಲಕ ನೋಡುಗರನ್ನು ಎಚ್ಚರಿಸುವ ಶಕ್ತಿ ‘19.20.21’ ಸಿನಿಮಾಗೆ ಇದೆ. ಅದರಲ್ಲೂ ಸಂವಿಧಾನದ ಬಗ್ಗೆ ತಿಳಿವಳಿಕೆ ಎಲ್ಲರಿಗೂ ಇರಬೇಕು ಎಂಬ ಸಂದೇಶವನ್ನು ಸಾರುವಲ್ಲಿ ಈ ಚಿತ್ರ ಮಹತ್ವದ ಕೆಲಸ ಮಾಡಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:28 am, Fri, 3 March 23