‘ಒಲವಿನ ಉಡುಗೊರೆ ಕೊಡಲೇನು..’ ಹಾಡಿನ ಗಾಯಕ ಪಿ. ಜಯಚಂದ್ರನ್​ ನಿಧನ

|

Updated on: Jan 09, 2025 | 10:03 PM

‘ಹಿಂದೂಸ್ಥಾನವು ಎಂದೂ ಮರೆಯದ..’, ‘ಒಲವಿನ ಉಡುಗೊರೆ ಕೊಡಲೇನು..’, ‘ಮಂದಾರ ಪುಷ್ಪವು ನೀನು..’ ಸೇರಿದಂತೆ ಕನ್ನಡದ ಅನೇಕ ಸೂಪರ್ ಹಿಟ್ ಹಾಡುಗಳಿಗೆ ಧ್ವನಿಯಾಗಿದ್ದ ಖ್ಯಾತ ಗಾಯಕ ಪಿ. ಜಯಚಂದ್ರನ್ ಅವರು ಮೃತರಾಗಿದ್ದಾರೆ. ಕ್ಯಾನ್ಸರ್​ಗೆ ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು (ಜನವರಿ 9) ನಿಧನರಾಗಿದ್ದಾರೆ.

‘ಒಲವಿನ ಉಡುಗೊರೆ ಕೊಡಲೇನು..’ ಹಾಡಿನ ಗಾಯಕ ಪಿ. ಜಯಚಂದ್ರನ್​ ನಿಧನ
P Jayachandran
Follow us on

ಭಾರತೀಯ ಚಿತ್ರರಂಗದ ಖ್ಯಾತ ಹಿನ್ನೆಲೆ ಗಾಯಕ ಪಿ. ಜಯಚಂದ್ರನ್ ಅವರು ನಿಧನರಾಗಿದ್ದಾರೆ. ಕೇರಳ ಮೂಲದ ಅವರು ಹಲವು ಭಾಷೆಯಲ್ಲಿ ಹಾಡುವ ಮೂಲಕ ಜನರನ್ನು ರಂಜಿಸಿದ್ದರು. ಕನ್ನಡದಲ್ಲೂ ಹಲವು ಸೂಪರ್ ಹಿಟ್​ ಗೀತೆಗಳಿಗೆ ಪಿ. ಜಯಚಂದ್ರನ್ ಧ್ವನಿಯಾಗಿದ್ದರು. ಅವರಿಗೆ 80 ವರ್ಷ ವಯಸ್ಸಾಗಿತ್ತು. ಕ್ಯಾನ್ಸರ್​ನಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿ ಆಗದೇ ತ್ರಿಶುರ್​ನ ಆಸ್ಪತ್ರೆಯಲ್ಲಿ ಕೊನೆಯುಸಿರು ಎಳೆದಿದ್ದಾರೆ. ಪಿ. ಜಯಚಂದ್ರನ್ ನಿಧನದ ಸುದ್ದಿ ತಿಳಿದು ಅಭಿಮಾನಿಗಳು, ಸೆಲೆಬ್ರಿಟಿಗಳು ಕಂಬನಿ ಮಿಡಿದಿದ್ದಾರೆ.

ಕಳೆದ ವರ್ಷ ಪಿ. ಜಯಚಂದ್ರನ್ ಅವರ ಅನಾರೋಗ್ಯದ ಬಗ್ಗೆ ವದಂತಿ ಹಬ್ಬಿತ್ತು. ಆದರೆ ಆಗ ಕುಟುಂಬದವರು ಗಾಳಿಸುದ್ದಿಗಳನ್ನು ತಳ್ಳಿಹಾಕಿದ್ದರು. ಈಗ ಪಿ. ಜಯಚಂದ್ರನ್ ಇನ್ನಿಲ್ಲ ಎಂಬ ಸುದ್ದಿ ಕೇಳಿ ಎಲ್ಲರಿಗೂ ನೋವಾಗಿದೆ. ತಮ್ಮ ವೃತ್ತಿ ಬದುಕಿನಲ್ಲಿ ಅಂದಾಜು 16 ಸಾವಿರಕ್ಕೂ ಅಧಿಕ ಗೀತೆಗಳನ್ನು ಪಿ. ಜಯಚಂದ್ರನ್ ಅವರು ಹಾಡಿದ್ದರು. ಆ ಮೂಲಕ ಅಪಾರ ಅಭಿಮಾನಿಗಳನ್ನು ಅವರು ಹೊಂದಿದ್ದರು.

ಇಳಯರಾಜ, ಎ.ಆರ್​. ರೆಹಮಾನ್, ಎಂಎಂ ಕೀರವಾಣಿ, ವಿಜಯ ಭಾಸ್ಕರ್​, ಎಂ. ರಂಗ ರಾವ್ ಮುಂತಾದ ಲೆಜೆಂಡರಿ ಸಂಗೀತ ನಿರ್ದೇಶಕರ ಜೊತೆಗೆ ಪಿ. ಜಯಚಂದ್ರನ್ ಅವರು ಕೆಲಸ ಮಾಡಿದ್ದರು. ಮಲಯಾಳಂ, ಕನ್ನಡ, ಹಿಂದಿ, ತೆಲುಗು, ತಮಿಳು ಮುಂತಾದ ಭಾಷೆಗಳ ಸಿನಿಮಾ ಗೀತೆಗಳಿಗೆ ಅವರು ಧ್ವನಿಯಾಗಿದ್ದರು. ಅವರನ್ನು ಕಳೆದುಕೊಂಡು ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ.

ಇದನ್ನೂ ಓದಿ: ಬಾಲಿ ನಿಧನ: ರಿದಂ ಕಿಂಗ್ ಬಾಲಸುಬ್ರಹ್ಮಣ್ಯಂ ಅಗಲಿಕೆಗೆ ಕೆಎಫ್​ಎಂಎ ಸಂತಾಪ

ಕನ್ನಡದಲ್ಲಿ ಪಿ. ಜಯಚಂದ್ರನ್ ಅವರು ಹಾಡಿದ ಗೀತೆಗಳು ಇಂದಿಗೂ ಎವರ್​ಗ್ರೀನ್ ಆಗಿ ಉಳಿದುಕೊಂಡಿವೆ. ‘ಅಮೃತ ಗಳಿಗೆ’ ಸಿನಿಮಾದ ‘ಹಿಂದೂಸ್ಥಾನವು ಎಂದೂ ಮರೆಯದ..’, ಒಲವಿನ ಉಡುಗೊರೆ ಚಿತ್ರದ ‘ಒಲವಿನ ಉಡುಗೊರೆ ಕೊಡಲೇನು..’, ‘ರಂಗನಾಯಕಿ’ ಸಿನಿಮಾದ ‘ಮಂದಾರ ಪುಷ್ಪವು ನೀನು..’, ‘ಮಾನಸ ಸರೋವರ’ ಸಿನಿಮಾದ ‘ಚಂದ ಚಂದ..’, ‘ಕಿಲಾಡಿಗಳು’ ಚಿತ್ರ ‘ಕಾಲ ಮತ್ತೊಮ್ಮೆ ನಮಗಾಗಿ ಬಂತು..’ ಸೇರಿದಂತೆ ಅನೇಕ ಗೀತೆಗಳನ್ನು ಜಯಚಂದ್ರನ್ ಅವರು ಹಾಡಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಅಭಿಮಾನಿಗಳು, ಆಪ್ತರು, ಸೆಲೆಬ್ರಿಟಿಗಳು ಪ್ರಾರ್ಥಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.