‘ಮನದ ಕಡಲು’ ಸಿನಿಮಾಗಾಗಿ ಅರ್ಥವಿಲ್ಲದ ಹಾಡು ಬರೆದ ಯೋಗರಾಜ್ ಭಟ್
ಸುಮುಖ, ಅಂಜಲಿ ಅನೀಶ್, ರಾಶಿಕಾ ಶೆಟ್ಟಿ, ರಂಗಾಯಣ ರಘು ಮುಂತಾದವರು ನಟಿಸಿದ ‘ಮನದ ಕಡಲು’ ಸಿನಿಮಾಗೆ ಚಿತ್ರೀಕರಣ ಮುಕ್ತಾಯ ಆಗಿದೆ. ಯೋಗರಾಜ್ ಭಟ್ ನಿರ್ದೇಶನದ, ಈ. ಕೃಷ್ಣಪ್ಪ ನಿರ್ಮಾಣದ ಈ ಸಿನಿಮಾದಿಂದ ಹೊಸ ಹಾಡನ್ನು ರಿಲೀಸ್ ಮಾಡಲಾಗಿದೆ. ವಿಚಿತ್ರವಾದ ಸಾಹಿತ್ಯವಿರುವ ಹಾಡಿನ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಚಿತ್ರತಂಡದವರು ಮಾತನಾಡಿದರು.
ಹಾಡುಗಳ ಮೂಲಕ ‘ಮನದ ಕಡಲು’ ಸಿನಿಮಾ ಸುದ್ದಿ ಆಗುತ್ತಿದೆ. ಕೆಲವೇ ದಿನಗಳ ಹಿಂದೆ ‘ಹೂ ದುಂಬಿಯ ಕಥೆ..’ ಹಾಡನ್ನು ಬಿಡುಗಡೆ ಮಾಡಲಾಗಿತ್ತು. ಯೋಗರಾಜ್ ಭಟ್ ಬರೆದ ಆ ಹಾಡಿನ ಸಾಹಿತ್ಯ ಕೇಳಿ ಪ್ರೇಮಿಗಳ ಮನಸ್ಸಿಗೆ ಖುಷಿ ಆಗಿತ್ತು. ಈಗ ಇದೇ ಸಿನಿಮಾದಿಂದ 2ನೇ ಹಾಡು ರಿಲೀಸ್ ಆಗಿದೆ. ಆದರೆ ಯಾವುದೇ ಕಾರಣಕ್ಕೂ ಈ ಹಾಡಿನ ಸಾಹಿತ್ಯ ಅರ್ಥ ಆಗುವುದಿಲ್ಲ. ಯಾಕೆಂದರೆ, ಇದು ಅರ್ಥ ಇರುವ ಹಾಡಲ್ಲ. ಬದಲಿಗೆ ಅನರ್ಥದ ಹಾಡು. ಇದನ್ನು ಕೂಡ ಯೋಗರಾಜ್ ಭಟ್ ಅವರೇ ಬರೆದಿದ್ದಾರೆ.
‘ಮುಂಗಾರುಮಳೆ’ ಸಿನಿಮಾಗೆ ಈ. ಕೃಷ್ಣಪ್ಪ ಅವರು ಬಂಡವಾಳ ಹೂಡಿದ್ದರು. ಯೋಗರಾಜ್ ಭಟ್ ನಿರ್ದೇಶನ ಮಾಡಿದ್ದರು. ಈಗ ಅವರಿಬ್ಬರ ಕಾಂಬಿನೇಷನ್ನಲ್ಲಿ ಬರುತ್ತಿರುವ ಚಿತ್ರವೇ ‘ಮನದ ಕಡಲು’. ಈಗ ಬಿಡುಗಡೆ ಆಗಿರುವ ಹಾಡಿನ ಹೆಸರು ‘ತುರ್ರಾ’. ನೆಲಮಂಗಲದ ಬಳಿ ಇರುವ ಈ. ಕೃಷ್ಣಪ್ಪ ಅವರ ತೋಟದಲ್ಲಿ ಈ ಸಾಂಗ್ ರಿಲೀಸ್ ಮಾಡಲಾಯಿತು. ಈ ಗೀತೆಗೆ ವಿ. ಹರಿಕೃಷ್ಣ ಅವರ ಸಂಗೀತವಿದೆ. ಹರಿಕೃಷ್ಣ, ಸಂಜಿತ್ ಹೆಗ್ಡೆ, ಪ್ರಾರ್ಥನಾ ಅವರ ಧ್ವನಿಯಲ್ಲಿ ‘ತುರ್ರಾ’ ಹಾಡು ಮೂಡಿಬಂದಿದೆ.
ಸುದ್ದಿಗೋಷ್ಠಿಯಲ್ಲಿ ಯೋಗರಾಜ್ ಭಟ್ ಅವರು ‘ತುರ್ರಾ’ ಹಾಡಿನ ಬಗ್ಗೆ ಮಾಹಿತಿ ನೀಡಿದರು. ‘ನನ್ನ ಮತ್ತು ವಿ. ಹರಿಕೃಷ್ಣ ಕಾಂಬಿನೇಷನ್ನಲ್ಲಿ ಅರ್ಥ ಇರುವ ಅನೇಕ ಹಾಡುಗಳು ಹಿಟ್ ಆಗಿದೆ. ಆದರೆ ಅರ್ಥವಿಲ್ಲದ, ಅನರ್ಥದ ಸಾಂಗ್ಗಳು ಸೂಪರ್ ಹಿಟ್ ಆಗಿವೆ. ಅಂತಹ ಅನರ್ಥದ ಹಾಡುಗಳ ಪಟ್ಟಿಗೆ ತುರ್ರಾ ಸಾಂಗ್ ಕೂಡ ಸೇರ್ಪಡೆ ಆಗಿದೆ’ ಎಂದು ಯೋಗರಾಜ್ ಭಟ್ ಹೇಳಿದ್ದಾರೆ.
ತುರ್ರಾ ಸಾಂಗ್:
ಅಷ್ಟಕ್ಕೂ ಯೋಗರಾಜ್ ಭಟ್ ಅವರಿಗೆ ಇಂಥ ಸಾಂಗ್ ಬರೆಯಲು ಸ್ಫೂರ್ತಿ ಆಗಿದ್ದು ಒಬ್ಬ ಹುಚ್ಚ! ‘ನನ್ನ ಬಾಲ್ಯದಲ್ಲಿ ನಮ್ಮೂರಿನಲ್ಲಿ ಅಲಿಮಾ ಎಂಬ ಹುಚ್ಚನಿದ್ದ. ಅವನಿಗೆ ಮಕ್ಕಳೆಂದರೆ ಪ್ರೀತಿ. ಆತನ ಹಿಂದೆ ನಾವೆಲ್ಲಾ ಸುತ್ತುತ್ತಿದ್ದೆವು. ಆತ ಬಳಸುತ್ತಿದ್ದ ಪದಗಳೇ ಈ ಹಾಡು ಬರೆಯಲು ಸ್ಫೂರ್ತಿ. ಈ ಹಾಡಿಗೆ ಹರಿಕೃಷ್ಣ ಧ್ವನಿ ಸೂಕ್ತವಾಗಿದೆ. ಅವರೊಂದಿಗೆ ಸಂಜಿತ್ ಹೆಗ್ಡೆ ಮತ್ತು ಪ್ರಾರ್ಥನಾ ಕೂಡ ಹಾಡಿದ್ದಾರೆ’ ಎಂದರು ಯೋಗರಾಜ್ ಭಟ್.
ಇದನ್ನೂ ಓದಿ: ರಂಗಾಯಣ ರಘು ಪಾತ್ರಕ್ಕೆ ಹೊಸ ಭಾಷೆ ಸೃಷ್ಟಿ ಮಾಡಿದ ಯೋಗರಾಜ್ ಭಟ್
‘ನನಗೆ ಈ ಸಾಂಗ್ ಕೇಳಿದ ಕೂಡಲೇ ಇಷ್ಟ ಆಯಿತು. ಹಾಗಾಗಿ ಈ ಹಾಡು ಇರಲಿ ಎಂದು ನಿರ್ದೇಶಕರಿಗೆ ಹೇಳಿದೆ’ ಎಂದ ನಿರ್ಮಾಪಕ ಇ. ಕೃಷ್ಣಪ್ಪ ಅವರು ಚಿತ್ರತಂಡದ ಕೆಲಸವನ್ನು ಮೆಚ್ಚಿಕೊಂಡರು. ಈ ಗೀತೆಯನ್ನು ಹಾಡಲು ಬಹಳ ಸಮಯ ಬೇಕಾಯಿತು ಎಂದು ಹರಿಕೃಷ್ಣ ಹೇಳಿದರು. ಈ ಹಾಡಿನಲ್ಲಿ ನಾಯಕ ಸುಮುಖ, ನಾಯಕಿ ಅಂಜಲಿ ಅನೀಶ್, ನಟ ರಂಗಾಯಣ ರಘು ಮುಂತಾದವರು ಕಾಣಿಸಿಕೊಂಡಿದ್ದಾರೆ. ದತ್ತಣ್ಣ, ರಾಶಿಕಾ ಶೆಟ್ಟಿ, ಸಹ-ನಿರ್ಮಾಪಕ ಜಿ. ಗಂಗಾಧರ್, ಕಾರ್ಯಕಾರಿ ನಿರ್ಮಾಪಕ ಪ್ರತಾಪ್, ಛಾಯಾಗ್ರಾಹಕ ಸಂತೋಷ್ ರೈ ಪಾತಾಜೆ ಮುಂತಾದವರು ಸುದ್ದಿಗೋಷ್ಠಿಯಲ್ಲಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.