ರೇಣುಕಾ ಸ್ವಾಮಿ (Renuka Swamy) ಕೊಲೆ ಆರೋಪದಲ್ಲಿ ಈವರೆಗೆ ಸುಮಾರು 19 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಎಲ್ಲ ಆರೋಪಿಗಳು ರೇಣುಕಾ ಸ್ವಾಮಿ ಕೊಲೆಯಲ್ಲಿ ಒಂದಲ್ಲ ಒಂದು ರೀತಿ ಪಾತ್ರವಹಿಸಿದ್ದಾರೆ ಎಂಬುದು ಪೊಲೀಸರ ಆರೋಪ. ಇಂದು (ಜೂನ್ 20) ಎಲ್ಲ ಆರೋಪಿಗಳನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಈ ವೇಳೆ ನಡೆದ ವಾದ ವಿವಾದದಲ್ಲಿ ಮಹತ್ವದ ಅಂಶವೊಂದು ಬೆಳಕಿಗೆ ಬಂದಿದೆ. ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರತ್ಯಕ್ಷ ಸಾಕ್ಷ್ಯಗಳು ಇದ್ದಾರೆ ಎಂದು ಪೊಲೀಸರು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ.
ಜೂನ್ 20ಕ್ಕೆ ಆರೋಪಿಗಳ ಪೊಲೀಸ್ ಕಸ್ಟಡಿ ಮುಗಿದ ಕಾರಣ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದ್ದ 17 ಆರೋಪಿಗಳನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ಈ ವೇಳೆ ದರ್ಶನ್ ಸೇರಿದಂತೆ ನಾಲ್ಕು ಮಂದಿಯನ್ನು ಮತ್ತೆ ನಾಲ್ಕು ದಿನ ಪೊಲೀಸ್ ಕಸ್ಟಡಿಗೆ ನೀಡುವಂತೆ ಪೊಲೀಸರು ರಿಮ್ಯಾಂಡ್ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಕೆಲವು ಕಾರಣಗಳನ್ನು ಸಹ ನೀಡಲಾಗಿತ್ತು. ಅದರಲ್ಲಿ ಮಹತ್ವದ ಕಾರಣವೆಂದರೆ ಪ್ರಕರಣದಲ್ಲಿ ಪ್ರತ್ಯಕ್ಷ ಸಾಕ್ಷಿ ಇದ್ದಾರೆಂಬುದು.
ಈವರೆಗೆ ತಿಳಿದು ಬಂದಿದ್ದ ಅಂಶವೆಂದರೆ ಪಟ್ಟಣಗೆರೆ ಶೆಡ್ನಲ್ಲಿ ದರ್ಶನ್, ಪವಿತ್ರಾ ಮತ್ತು ಅವರ ಆಪ್ತರು ರೇಣುಕಾ ಸ್ವಾಮಿ ಹಲ್ಲೆ ಮಾಡಿದ್ದರು, ಆತನನ್ನು ಕೊಂದ ಬಳಿಕ ಕೆಲವರಿಗೆ ಹಣ ನೀಡಿ ಶವವನ್ನು ಮೋರಿಗೆ ಎಸೆಯಲಾಗಿತ್ತು. ಶೆಡ್ನ ಸಿಸಿಟಿವಿ ಕ್ಯಾಮೆರಾ ಆಫ್ ಮಾಡಿ ಕೃತ್ಯ ಎಸೆಗಲಾಗಿತ್ತು. ಯಾವುದೇ ಪ್ರತ್ಯಕ್ಷ್ಯ ಸಾಕ್ಷ್ಯಗಳು ಸಿಗದಂತೆ ಆರೋಪಿಗಳು ಎಚ್ಚರ ವಹಿಸಿದ್ದಾರೆ ಎಂಬ ಅಂಶಗಳು ತಿಳಿದು ಬಂದಿತ್ತು. ಆದರೆ ಈಗ ತಿಳಿದು ಬಂದಿರುವ ಮಾಹಿತಿಯೆಂದರೆ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರತ್ಯಕ್ಷ್ಯ ಸಾಕ್ಷ್ಯಗಳು ಇದ್ದಾರೆ ಎಂಬುದು. ಇದು ಈ ಪ್ರಕರಣಕ್ಕೆ ಅತ್ಯಂತ ಮಹತ್ವದ ತಿರುವು ನೀಡಲಿದೆ.
ಇದನ್ನೂ ಓದಿ:Breaking: ದರ್ಶನ್ ಮತ್ತೆ ಪೊಲೀಸ್ ಕಸ್ಟಡಿಗೆ, ಪವಿತ್ರಾ ಗೌಡ ಜೈಲು ಪಾಲು
ಪ್ರತ್ಯಕ್ಷ ಸಾಕ್ಷ್ಯ ಎಂಬುದು ಯಾವುದೇ ಪ್ರಕರಣದಲ್ಲಿ ಅತ್ಯಂತ ಮಹತ್ವದ ಪಾತ್ರವಹಿಸುತ್ತದೆ. ದರ್ಶನ್ ಹಾಗೂ ಗ್ಯಾಂಗ್ ಹಲ್ಲೆ ಮಾಡುವಾಗ ಯಾರೋ ಒಬ್ಬ ಅಥವಾ ಕೆಲವರು ಪ್ರತ್ಯಕ್ಷ್ಯವಾಗಿ ಅದನ್ನು ನೋಡಿದವರು ಇದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ದರ್ಶನ್ ಹಾಗೂ ಇತರರನ್ನು ಪುನಃ ಪೊಲೀಸ್ ಕಸ್ಟಡಿಗೆ ಪಡೆಯಲು ಇದನ್ನು ಪ್ರಮುಖ ಕಾರಣವನ್ನಾಗಿ ಪೊಲೀಸರು ಬಳಸಿದ್ದಾರೆ. ಯಾರು ಆ ಪ್ರತ್ಯಕ್ಷ್ಯ ದರ್ಶಿ, ಶೆಡ್ನ ನೌಕರನಾ? ಅಥವಾ ಶೆಡ್ನ ಅಕ್ಕ-ಪಕ್ಕ ಇರುವವರಾ? ಆ ವ್ಯಕ್ತಿ ಯಾವ ಘಟನೆಗೆ ಪ್ರತ್ಯಕ್ಷ ಸಾಕ್ಷಿ? ಹಲ್ಲೆಗಾ? ಅಥವಾ ಶವ ವಿಲೇವಾರಿ ಆಗಿದ್ದನ್ನು ನೋಡಿದನಾ? ಎಂಬುದು ಇನ್ನಷ್ಟೆ ಗೊತ್ತಾಗಬೇಕಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ