Breaking: ದರ್ಶನ್ ಮತ್ತೆ ಪೊಲೀಸ್ ಕಸ್ಟಡಿಗೆ, ಪವಿತ್ರಾ ಗೌಡ ಜೈಲು ಪಾಲು
ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್, ಪವಿತ್ರಾ ಸೇರಿದಂತೆ ಇತರರ ಪೊಲೀಸ್ ಕಸ್ಟಡಿ ಅವಧಿ ಮುಕ್ತಾಯವಾದ ಕಾರಣ ಇಂದು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯ್ತು. ಕೆಲವರಿಗೆ ನ್ಯಾಯಾಂಗ ಬಂಧನ ವಿಧಿಸಿದರೆ, ಕೆಲವರನ್ನು ಪೊಲೀಸ್ ಕಸ್ಟಡಿಗೆ ನೀಡಿದ್ದಾರೆ.
ರೇಣುಕಾ ಸ್ವಾಮಿ (Renuka Swamy) ಹತ್ಯೆ ಪ್ರಕರಣದ ಆರೋಪಿಗಳಾದ ದರ್ಶನ್ (Darshan), ಪವಿತ್ರಾ ಗೌಡ ಹಾಗೂ ಇನ್ನಿತರರ ಪೊಲೀಸ್ ಕಸ್ಟಡಿ ಇಂದು (ಜೂನ್ 20) ಅಂತ್ಯವಾಗಿದ್ದು, ಎಲ್ಲರನ್ನೂ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯ್ತು. ಜೂನ್ 11 ರಂದು ದರ್ಶನ್, ಪವಿತ್ರಾ ಗೌಡ ಸೇರಿದಂತೆ ಹಲವು ಆರೋಪಿಗಳನ್ನು ರೇಣುಕಾ ಸ್ವಾಮಿ ಕೊಲೆ ಆರೋಪದಲ್ಲಿ ಬಂಧಿಸಲಾಗಿತ್ತು. ದರ್ಶನ್, ಪವಿತ್ರಾ ಸೇರಿದಂತೆ ಇನ್ನೂ ಕೆಲವು ಆರೋಪಿಗಳನ್ನು ವಿಚಾರಣೆ ಕಾರಣಕ್ಕೆ ಮತ್ತೆ ತಮ್ಮ ವಶಕ್ಕೆ ನೀಡುವಂತೆ ಪೊಲೀಸರು ಮನವಿ ಸಲ್ಲಿಸಿದ್ದರು, ಆದರೆ ವಿಚಾರಣೆ ಆಲಿಸಿದ ನ್ಯಾಯಾಧೀಶರು ದರ್ಶನ್ ಸೇರಿದಂತೆ ಕೆಲವರನ್ನು ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದ್ದಾರೆ, ಪವಿತ್ರಾ ಸೇರಿದಂತೆ ಕೆಲವು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಜೂನ್ 11 ರಿಂದ ಹತ್ತು ದಿನಗಳ ಕಾಲ ದರ್ಶನ್, ಪವಿತ್ರಾ ಸೇರಿದಂತೆ ಇತರೆ ಆರೋಪಿಗಳು ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಈಗಾಗಲೇ ಪೊಲೀಸರು ದರ್ಶನ್ ಸೇರಿದಂತೆ ಇತರೆ ಆರೋಪಿಗಳನ್ನು ಬೆಂಗಳೂರು, ಮೈಸೂರು, ಚಿತ್ರದುರ್ಗ ಇನ್ನೂ ಕೆಲವು ಕಡೆ ಕರೆದೊಯ್ದು ಮಹಜರು ಮಾಡಿದ್ದಾರೆ. ಈವರೆಗೆ ಸುಮಾರು 118 ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಹಲವರ ಹೇಳಿಕೆಗಳನ್ನು ಸಹ ದಾಖಲು ಮಾಡಿಕೊಂಡಿದ್ದಾರೆ. ಆದರೆ ಇನ್ನೂ ವಿಚಾರಣೆ ಮತ್ತು ತನಿಖೆ ನಡೆಸಬೇಕಿರುವ ಕಾರಣ ಕೆಲವರನ್ನು ಪೊಲೀಸ್ ಕಸ್ಟಡಿಗೆ ನೀಡಬೇಕೆಂದು ಮನವಿ ಸಲ್ಲಿಸಿದ್ದರು.
ದರ್ಶನ್, ವಿನಯ್, ಪ್ರದೋಶ್, ನಾಗರಾಜ್, ಲಕ್ಷ್ಮಣ್ ಹಾಗೂ ಧನರಾಜ್ ಅವರುಗಳನ್ನು ಮತ್ತೆ ಪೊಲೀಸ್ ಕಸ್ಟಡಿಗೆ ನೀಡಬೇಕೆಂದು ಮನವಿ ಮಾಡಿ ಪೊಲೀಸರು ರಿಮ್ಯಾಂಡ್ ಅರ್ಜಿ ಸಲ್ಲಿಸಿದ್ದರು. ಉಳಿದ ಆರೋಪಿಗಳಾದ ಪವಿತ್ರಾ ಗೌಡ, ಪವನ್, ರಾಘವೇಂದ್ರ, ನಂದೀಶ್, ಜಗದೀಶ್, ಅನುಕುಮಾರ್, ರವಿಶಂಕರ್, ದೀಪಕ್, ಕೇಶವಮೂರ್ತಿ, ನಿಖಿಲ್ ನಾಯ್ಕ್ ಇವರಿಗೆ ನ್ಯಾಯಾಂಗ ಬಂಧನಕ್ಕೆ ತಕರಾರು ಸಲ್ಲಿಸಿಲ್ಲವಾದ್ದರಿಂದ ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಇದನ್ನೂ ಓದಿ:ಪವಿತ್ರಾ ಗೌಡ ಮೊದಲ ಸಂಭಾವನೆ ಎಷ್ಟು? ಆಗ ಹೇಗಿತ್ತು ಅವರ ಲೈಫ್ ಸ್ಟೈಲ್?
ಆದರೆ ದರ್ಶನ್ ರನ್ನು ಮತ್ತೆ ಪೊಲೀಸ್ ಕಸ್ಟಡಿಗೆ ಪಡೆಯುವ ಬಗ್ಗೆ ಸಲ್ಲಿಸಲಾಗಿರುವ ರಿಮ್ಯಾಂಡ್ ಅರ್ಜಿಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ದರ್ಶನ್ ಪರ ವಕೀಲರು, ಈಗಾಗಲೇ 10 ದಿನಗಳ ಕಾಲ ವಿಚಾರಣೆ ನಡೆದಿರುವ ಬಗ್ಗೆ ಗಮನ ಸೆಳೆದರು. ಅಲ್ಲದೆ ತಮಗೆ ರಿಮ್ಯಾಂಡಿ ಅರ್ಜಿ ಸಿಗದೇ ಇರುವ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸಿದರು. ಆದರೆ ಪೊಲೀಸರ ಪರವಾಗಿ ವಾದ ಮಂಡಿಸಿದ ಪಬ್ಲಿಕ್ ಪ್ರಾಸಿಕ್ಯೂಟರ್, ‘ಆರೋಪಿ 9, 10, 14 ತನಿಖೆಗೆ ಸಹಕರಿಸುತ್ತಿಲ್ಲವೆಂದು ಹಾಗೂ ಎಫ್ಎಸ್ಎಲ್ ವರದಿಗಳನ್ನು ಆಧರಿಸಿ ತನಿಖೆ ಮಾಡುವುದು ಬಾಕಿ ಇದೆಯೆಂದು ಹೇಳಿ ಇನ್ನೂ ನಾಲ್ಕು ದಿನಗಳ ಕಾಲ ವಶಕ್ಕೆ ಕೇಳಲಾಗಿತ್ತು. ಆದರೆ ನ್ಯಾಯಾಧೀಶರು ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದ್ದಾರೆ.
ಜೂನ್ 20ರ ಐದು ಗಂಟೆಯ ಒಳಗೆ ನ್ಯಾಯಾಲಯಕ್ಕೆ ಹಾಜರುಪಡಿಸಬೇಕು ಎಂದು ಆರು ದಿನದ ಹಿಂದೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಹೇಳಿತ್ತು. ಅಂತೆಯೇ ಸುಮಾರು 3:45 ರ ವೇಳೆಗೆ ಎಲ್ಲ ಆರೋಪಿಗಳನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಕೋರ್ಟ್ ಹಾಲ್ನಲ್ಲಿ ವಕೀಲರು ಕಿಕ್ಕಿರಿದು ತುಂಬಿದ್ದರು. ಹಗ್ಗಗಳನ್ನು ಕಟ್ಟಿ ಜನರ ನಿಯಂತ್ರಣಕ್ಕೆ ವ್ಯವಸ್ಥೆ ಮಾಡಲಾಗಿತ್ತಾದರೂ ಭಾರಿ ನೂಕುನುಗ್ಗಲು ಏರ್ಪಟ್ಟಿತ್ತು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:28 pm, Thu, 20 June 24