ಆರೋಪಿಗಳ ಮೊಬೈಲ್​ನಲ್ಲಿ ರೇಣುಕಾ ಸ್ವಾಮಿಯ ರಕ್ತ ಸಿಕ್ತ ಚಿತ್ರಗಳು

|

Updated on: Sep 04, 2024 | 3:21 PM

ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ. ಆರೋಪ ಪಟ್ಟಿಯ ಕೆಲವು ಮಹತ್ವದ ಅಂಶಗಳು ಬಹಿರಂಗವಾಗಿವೆ. ಆರೋಪಿಗಳ ಮೊಬೈಲ್​ನಲ್ಲಿದ್ದ ರೇಣುಕಾ ಸ್ವಾಮಿಯ ಚಿತ್ರಗಳನ್ನು ಪೊಲೀಸರು ರಿಟ್ರೈವ್ ಮಾಡಿದ್ದಾರೆ.

ಆರೋಪಿಗಳ ಮೊಬೈಲ್​ನಲ್ಲಿ ರೇಣುಕಾ ಸ್ವಾಮಿಯ ರಕ್ತ ಸಿಕ್ತ ಚಿತ್ರಗಳು
Follow us on

ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪ ಪಟ್ಟಿಯನ್ನು ತನಿಖಾಧಿಕಾರಿಗಳು ಇಂದು ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದ್ದಾರೆ. 3991 ಪುಟಗಳ ಸುದೀರ್ಘ ಆರೋಪ ಪಟ್ಟಿಯನ್ನು ತನಿಖಾಧಿಕಾರಿಗಳು ತಯಾರಿಸಿದ್ದು, ಪ್ರಕರಣದ ಇಂಚಿಂಚೂ ಮಾಹಿತಿಯನ್ನು ಈ ಆರೋಪ ಪಟ್ಟಿ ಒಳಗೊಂಡಿದೆ. ಇದು ಪ್ರಾಥಮಿಕ ಆರೋಪ ಪಟ್ಟಿಯಾಗಿದ್ದು ಇನ್ನೂ ಕೆಲವು ವರದಿಗಳು ಪೊಲೀಸರ ಕೈಗೆ ಸೇರಬೇಕಿದ್ದು, ಅವು ಸೇರಿದ ಬಳಿಕ ಅವನ್ನೂ ಸಹ ಆರೋಪ ಪಟ್ಟಿಗೆ ಸೇರಿಸಲಾಗುತ್ತದೆ. ಈಗ ಸಲ್ಲಿಕೆ ಮಾಡಿರುವ ಆರೋಪ ಪಟ್ಟಿಯಲ್ಲಿರುವ ಕೆಲವು ಅಂಶಗಳು ಈಗಾಗಲೇ ಬಹಿರಂಗವಾಗಿವೆ. ಅದರಲ್ಲಿ, ರೇಣುಕಾ ಸ್ವಾಮಿಯ ಚಿತ್ರಗಳು ಆರೋಪಿಗಳ ಮೊಬೈಲ್​ನಲ್ಲಿ ಪತ್ತೆಯಾಗಿರುವ ವಿಷಯವನ್ನು ಆರೋಪ ಪಟ್ಟಿಯಲ್ಲಿ ಪೊಲೀಸರು ನಮೂದಿಸಿದ್ದಾರೆ.

ಜೂನ್ 09 ರಂದು ರೇಣುಕಾ ಸ್ವಾಮಿಯನ್ನು ಅಪಹರಣ ಮಾಡಿ ಶೆಡ್​ ಕರೆತಂದು ಮನಸೋ ಇಚ್ಛೆ ಹಲ್ಲೆ ಮಾಡಿದ ಬಳಿಕ ಕೆಲವು ಆರೋಪಿಗಳು ರೇಣುಕಾ ಸ್ವಾಮಿಯ ಚಿತ್ರ ಹಾಗೂ ವಿಡಿಯೋಗಳನ್ನು ಮಾಡಿ ಮೊಬೈಲ್​ನಲ್ಲಿ ಇರಿಸಿಕೊಂಡಿದ್ದರಂತೆ. ರೇಣುಕಾ ಸ್ವಾಮಿ ನಿಧನ ಹೊಂದಿದ ಬಳಿಕ ಆ ಚಿತ್ರ ಹಾಗೂ ವಿಡಿಯೋಗಳನ್ನು ಡಿಲೀಟ್ ಮಾಡಿದ್ದರಾದರೂ ಪೊಲೀಸರು ಆರೋಪಿಗಳನ್ನು ಬಂಧಿಸಿ ಮೊಬೈಲ್​ಗಳನ್ನು ವಶಕ್ಕೆ ಪಡೆದ ಬಳಿಕ ಡಾಟಾ ರಿಟ್ರೀವ್ ಮಾಡಿ ಡಿಲೀಟ್ ಮಾಡಲಾಗಿದ್ದ ಚಿತ್ರಗಳು ಹಾಗೂ ವಿಡಿಯೋಗಳನ್ನು ಮರಳಿ ಪಡೆದುಕೊಂಡಿದ್ದಾರೆ.

ರೇಣುಕಾ ಸ್ವಾಮಿ ಗಾಯಗೊಂಡು ರಕ್ತ ಸಿಕ್ತವಾಗಿದ್ದ ಚಿತ್ರಗಳು ಆರೋಪಿಗಳ ಮೊಬೈಲ್​ನಲ್ಲಿ ಪತ್ತೆಯಾಗಿವೆ. ರೇಣುಕಾ ಸ್ವಾಮಿ ಆರೋಪಿಗಳಿಂದ ಹೊಡೆಸಿಕೊಂಡು ಹೈರಾಣಾಗಿ ಕೈ ಮುಗಿದು ಬೇಡಿಕೊಳ್ಳುತ್ತಿರುವ ಚಿತ್ರವೂ ಇದೆ. ಇದರ ಜೊತೆಗೆ ಪ್ರಕರಣದ ಮೊದಲ ಆರೋಪಿ ಪವಿತ್ರಾ ಗೌಡರ ಕಾಲು ಹಿಡಿದುಕೊಂಡು ಕ್ಷಮೆ ಕೇಳುತ್ತಿರುವ ವಿಡಿಯೋಗಳು ಸಹ ಇವೆ ಎನ್ನಲಾಗುತ್ತಿದೆ. ವಿಡಿಯೋದಲ್ಲಿ ಪವಿತ್ರಾ ಹಾಗೂ ಇತರ ಆರೋಪಿಗಳು ರೇಣುಕಾ ಸ್ವಾಮಿಯನ್ನು ನಿಂದಿಸಿರುವುದು ಸಹ ದಾಖಲಾಗಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ:ರೇಣುಕಾ ಸ್ವಾಮಿ ಕೊಲೆ ಕೇಸ್; ದರ್ಶನ್ ವಿರುದ್ಧ ಇರೋ ಸಾಕ್ಷಿದಾರರು ಯಾರ್ಯಾರು?

ರೇಣುಕಾ ಸ್ವಾಮಿಯ ಮರಣೋತ್ತರ ಪರೀಕ್ಷಾ ವರದಿಯ ಉಲ್ಲೇಖವೂ ಸಹ ಚಾರ್ಜ್​ಶೀಟ್​ನಲ್ಲಿದ್ದು, ರೇಣುಕಾ ಸ್ವಾಮಿ ದೇಹದ ಮೂರು ಮೂಳೆಗಳು ಮುರಿದಿರುವುದು, ತಲೆ, ಬೆನ್ನು, ಹೊಟ್ಟೆ, ಮರ್ಮಾಂಗಕ್ಕೂ ಗಾಯಗಳಾಗಿರುವುದು ಗೊತ್ತಾಗಿದೆ. ದೇಹದಲ್ಲಿ ಸುಮಾರು 16 ಕಡೆಗಳಲ್ಲಿ ಗಂಭೀರ ಗಾಯಗಳು ಆಗಿವೆಯಂತೆ. ಕೆಲವು ವಸ್ತುಗಳನ್ನು ಬಳಸಿ ರೇಣುಕಾ ಸ್ವಾಮಿ ಮೇಲೆ ಹಲ್ಲೆ ನಡೆದಿರುವುದಾಗಿ ವೈದ್ಯರು ವರದಿಯಲ್ಲಿ ಉಲ್ಲೇಖಿಸಿದ್ದಾರೆ.

ಇದೀಗ ಪೊಲೀಸರು ಆರೋಪ ಪಟ್ಟಿ ಸಲ್ಲಿಸಿದ್ದು ಸೆಪ್ಟೆಂಬರ್ 9 ರಂದು ಬಂಧಿತ ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ಮುಕ್ತಾಯವಾಗಲಿದ್ದು ಅಂದು ಮತ್ತೆ ಎಲ್ಲ ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗುತ್ತದೆ. ಅದೇ ದಿನ ನ್ಯಾಯಾಧೀಶರು ಆರೋಪ ಪಟ್ಟಿಗೆ ಸಹಿ ಹಾಕಲಿದ್ದು, ಆರೋಪ ಪಟ್ಟಿಯ ಪ್ರತಿಗಳನ್ನು ವಕೀಲರುಗಳಿಗೆ ವಿತರಣೆ ಮಾಡಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ