ಚಾರ್ಜ್‌ಶೀಟ್ ಸಲ್ಲಿಕೆ ಆಯ್ತು ಮುಂದೇನು? ನ್ಯಾಯಾಲಯದ ನಡೆ ಏನಿರಲಿದೆ?
ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಎಲ್ಲ ಬಂಧಿತ ಆರೋಪಿಗಳ ವಿರುದ್ಧ ಆರೋಪ ಪಟ್ಟಿಯನ್ನು ಪೊಲೀಸರು ಇಂದು (ಸೆಪ್ಟೆಂಬರ್ 04) ಸಲ್ಲಿಸಿದ್ದಾರೆ. ಪ್ರಕರಣದ ಪ್ರಮುಖ ಘಟ್ಟ ಇದಾಗಿದ್ದು, ಇದರ ಬಳಿಕ ಮುಂದಿನ ನಡೆ ಏನಾಗಿರಲಿದೆ? ಇಲ್ಲಿದೆ ಮಾಹಿತಿ.
ರೇಣುಕಾ ಸ್ವಾಮಿ ಕೊಲೆ ಪ್ರಕರಣದ ತನಿಖೆಯನ್ನು ಪೊಲೀಸರು ಮುಗಿಸಿದ್ದು ಇಂದು (ಸೆಪ್ಟೆಂಬರ್ 04) ನ್ಯಾಯಾಲಯಕ್ಕೆ ಎಲ್ಲ 17 ಆರೋಪಿಗಳ ವಿರುದ್ಧ ಆರೋಪ ಪಟ್ಟಿ ಸಲ್ಲಿಕೆ ಮಾಡಿದ್ದಾರೆ. 3991 ಪುಟಗಳ ಸುಧೀರ್ಘ ಆರೋಪ ಪಟ್ಟಿಯನ್ನು ಪೊಲೀಸರು ಸಲ್ಲಿಸಿದ್ದು, ಪ್ರಕರಣದಲ್ಲಿ ದೊಡ್ಡ ಸಂಖ್ಯೆಯ ಸಾಕ್ಷಿಗಳು, ಹೇಳಿಕೆಗಳನ್ನು ದಾಖಲಿಸಿಕೊಂಡಿರುವ ಬಗ್ಗೆ ಉಲ್ಲೇಖ ಮಾಡಲಾಗಿದೆ. ಚಾರ್ಜ್ ಶೀಟ್ ಸಲ್ಲಿಕೆ ಮಾಡಿರುವುದು ಪ್ರಕರಣದ ಪ್ರಮುಖ ಘಟ್ಟವಾಗಿದ್ದು, ಇದರ ಬಳಿಕ ಪ್ರಕರಣದಲ್ಲಿ ಏನಾಗಲಿದೆ? ಪೊಲೀಸರ ನಡೆ ಏನು? ಆರೋಪಿಗಳ ನಡೆ ಏನು? ಆರೋಪಿಗಳ ಪರ ವಕೀಲರು ಏನು ಮಾಡಲಿದ್ದಾರೆ? ನ್ಯಾಯಾಲಯದ ನಡೆ ಏನಿರಲಿದೆ? ಇಲ್ಲಿದೆ ಮಾಹಿತಿ.
ನ್ಯಾಯಾಲಯಕ್ಕೆ ಇಂದು ಆರೋಪ ಪಟ್ಟಿ ಸಲ್ಲಿಸಲಾಗಿದ್ದು, ಅದನ್ನು ನ್ಯಾಯಾಧೀಶರ ಅವಗಾಹನೆಗೆ ನೀಡಲಾಗಿರುತ್ತದೆ. ಸೆಪ್ಟೆಂಬರ್ 9 ರಂದು ಅಥವಾ ಅದಕ್ಕೆ ಮುಂಚಿತವಾಗಿ ನ್ಯಾಯಾಧೀಶರು ಆರೋಪ ಪಟ್ಟಿಗೆ ಸಹಿ ಹಾಕಿದ ಬಳಿಕ ಆ ಆರೋಪ ಪಟ್ಟಿಯ ಪ್ರತಿಯನ್ನು ಆರೋಪಿಗಳಿಗೆ ಅಥವಾ ಅವರ ಪರ ವಕೀಲರಿಗೆ ನೀಡಲಾಗುತ್ತದೆ. ಈಗಿರುವ ಮಾಹಿತಿಯಂತೆ ಸೆಪ್ಟೆಂಬರ್ 10 ರ ಬಳಿಕವಷ್ಟೆ ಆರೋಪ ಪಟ್ಟಿ ಸಾರ್ವಜನಿಕ ದಾಖಲೆಯಾಗಿ ಬದಲಾಗುತ್ತದೆ. ಅಲ್ಲಿಯವರೆಗೆ ಅದು ನ್ಯಾಯಾಲಯದ ದಾಖಲೆಯಾಗಿಯೇ ಉಳಿಯಲಿದೆ.
ಆರೋಪಿಗಳ ಪರ ವಕೀಲರಿಗೆ ಆರೋಪ ಪಟ್ಟಿ ಪ್ರತಿ ನೀಡಿದ ಒಂದು ವಾರದ ಬಳಿಕ ಪ್ರಕರಣವನ್ನು ಸೆಷನ್ಸ್ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಲಾಗುತ್ತದೆ. ಜೊತೆಗೆ ಆರೋಪಿಗಳಿಗೆ ಸಮನ್ಸ್ ಸಹ ನೀಡಲಾಗಿರುತ್ತದೆ. ನ್ಯಾಯಾಲಯವು ಆರೋಪಗಳನ್ನು ನಿಗದಿಪಡಿಸಿ ಸಾಕ್ಷ್ಯಗಳ ವಿಚಾರಣೆ ಆರಂಭ ಮಾಡುತ್ತದೆ. ಆ ಮೂಲಕ ಪ್ರಕರಣದ ‘ಅಸಲಿ ವಿಚಾರಣೆ’ ಪ್ರಾರಂಭವಾಗುತ್ತದೆ.
ಇನ್ನು ಆರೋಪಿಗಳ ಪರ ವಕೀಲರುಗಳು ಆರೋಪ ಪಟ್ಟಿಯ ಪ್ರತಿ ಪಡೆದು ಅದನ್ನು ಅಧ್ಯಯನ ನಡೆಸುತ್ತಾರೆ. ವಾರದ ಬಳಿಕ ವಿಚಾರಣೆ ವೇಳೆ ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶಗಳಿರುತ್ತವೆ. ಕೆಲವರ ಆರೋಪಿ ಸಂಖ್ಯೆ ಬದಲಾವಣೆ, ಎಫ್ಐಆರ್ ರದ್ದು ಇನ್ನಿತರೆ ಅರ್ಜಿಗಳನ್ನು ಅಥವಾ ವಾದ ಮಂಡನೆಯನ್ನು ಮಾಡಬಹುದಾಗಿರುತ್ತದೆ.
ಇದನ್ನೂ ಓದಿ:ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ದರ್ಶನ್ ಪಾತ್ರವೇನು? ಚಾರ್ಜ್‌ಶೀಟ್ ವಿವರ ಇಲ್ಲಿದೆ
ಚಾರ್ಜ್ ಶೀಟ್ ಸಲ್ಲಿಸಿದ ಒಂದು ವಾರದ ಬಳಿಕ ಕೆಲವು ಆರೋಪಿಗಳು ಜಾಮೀನಿಗೆ ಅರ್ಜಿ ಸಲ್ಲಿಸುವ ಸಾಧ್ಯತೆ ದಟ್ಟವಾಗಿದೆ. ಆರೋಪ ಪಟ್ಟಿ ಸಲ್ಲಿಕೆ ಆದ ಬಳಿಕ ಜಾಮೀನು ಸಿಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಈಗಾಗಲೇ ಪವಿತ್ರಾ ಗೌಡ, ಕೇಶವಮೂರ್ತಿ, ವಿನಯ್, ಅನುಕುಮಾರ್ ಅವರುಗಳು ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು ಆದರೆ ಅವರ ಅರ್ಜಿಗಳನ್ನು ತಳ್ಳಿಹಾಕಲಾಗಿತ್ತು. ಆದರೆ ಚಾರ್ಜ್ ಶೀಟ್ ಸಲ್ಲಿಕೆ ಆದ ಬಳಿಕ ಪೊಲೀಸರ ತನಿಖೆ ಮುಗಿದಿರುತ್ತದೆಯಾದ್ದರಿಂದ ಈ ಸಮಯದಲ್ಲಿ ಅವರಿಗೆ ಜಾಮೀನು ಸಿಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ವಿಶೇಷವಾಗಿ ಪ್ರಕರಣದಲ್ಲಿ ಪ್ರಮುಖ ಅಲ್ಲದ ಆರೋಪಿಗಳು ಕೆಲವರಿಗೆ ಜಾಮೀನು ಸಿಗುವ ಸಾಧ್ಯತೆಯೂ ಇದೆ. ನಟ ದರ್ಶನ್ ಪರ ವಕೀಲರು ಸಹ ಜಾಮೀನಿಗೆ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ.
ಇನ್ನು ಈ ಪ್ರಕರಣವನ್ನು ಫಾಸ್ಟ್ ಟ್ರ್ಯಾಕ್ ಕೋರ್ಟ್ ಅಥವಾ ವಿಶೇಷ ನ್ಯಾಯಾಲಯಕ್ಕೆ ವರ್ಗಾಯಿಸುವ ಸಾಧ್ಯತೆಯೂ ಇದೆ. ಇದು ಸರ್ಕಾರ, ಹಾಗೂ ಪೊಲೀಸರ ಮನವಿ ಹಾಗೂ ಆರೋಪಿಗಳ ಪರ ವಕೀಲರ ಒಪ್ಪಿಗೆಯ ಮೇಲೆ ನಡೆಯುವ ಕಾರ್ಯವಾಗಿರುತ್ತದೆ. ಫಾಸ್ಟ್ ಟ್ರ್ಯಾಕ್ ಅಥವಾ ವಿಶೇಷ ನ್ಯಾಯಾಲಯದಲ್ಲಿ ಈ ಪ್ರಕರಣದ ವಿಚಾರಣೆ ನಡೆದಲ್ಲಿ, ಒಂದು ವರ್ಷಕ್ಕೂ ಮುಂಚೆಯೇ ತೀರ್ಪು ಹೊರಬೀಳುವ ಸಾಧ್ಯತೆ ಇರುತ್ತದೆ. ಸಾಮಾನ್ಯ ನ್ಯಾಯಾಲಯದಲ್ಲಿ ಆದರೆ ಪ್ರಕರಣದ ತೀರ್ಪು ಬರಲು ಮೂರು-ನಾಲ್ಕು ವರ್ಷಗಳೇ ಹಿಡಿಯಲಿವೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:22 pm, Wed, 4 September 24